ಸರಕಾರ ಬಹಳ ವಿಳಂಬದ ನಂತರ ಜೂನ್ 19ರಂದು ಭಾರತ-ಚೀನಾ ವಾಸ್ತವ ಹತೊಟಿ ರೇಖೆ(ಎಲ್.ಎ.ಸಿ)ಯಲ್ಲಿನ ಬೆಳವಣಿಗೆಗಳ ಸರಣಿಯ ಬಗ್ಗೆ ಪ್ರತಿಪಕ್ಷಗಳಿಗೆ ತಿಳಿಸಲು ಒಂದು ಸರ್ವಪಕ್ಷ ಸಭೆಯನ್ನು ಕರೆಯಿತು. ಈ ಸಭೆಯನ್ನುದ್ದೇಶಿಸಿ ಮಾತಾಡುತ್ತ ಪ್ರಧಾನ ಮಂತ್ರಿಗಳು ‘ನುಸುಳಿಕೆಯಿಲ್ಲ, ಆಕ್ರಮಣ ಇಲ್ಲ ಮತ್ತು ನಮ್ಮ ನೆಲೆಗಳನ್ನು ವಶಪಡಿಸಿಕೊಂಡಿಲ್ಲ’ ಎಂದು ನಿಸ್ಸಂದಿಗ್ಧವಾಗಿ ಹೇಳಿದರು. ಹಾಗಿದ್ದರೆ ಘರ್ಷಣೆ ಏಕೆ? ನಮ್ಮ ಧೀರ ಸೈನಿಕರು ಹುತಾತ್ಮರಾದ್ದೇಕೆ?
ಇಲ್ಲಿ ಪ್ರಸಕ್ತ ಸನ್ನಿವೇಶ ಉಂಟಾಗಿರುವ ಬಗ್ಗೆ ಮತ್ತು ಯಾವಾಗದಿಂದ ಉಂಟಾಯಿತು ಎಂಬ ಪ್ರಶ್ನೆಗಳಲ್ಲದೆ ಎಲ್.ಎ.ಸಿ.ಯಲ್ಲಿ ಮುಖಾಮುಖಿ ನಿಖರವಾಗಿ ಯಾವ ಸ್ಥಳದಲ್ಲಿ ನಡೆಯಿತು ಎಂಬ ನಿರ್ದಿಷ್ಟ ಪ್ರಶ್ನೆಯೂ ಇದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯರೊ ಈ ಬಗ್ಗೆ ಪ್ರತಿಕ್ರಿಯಿಸುತ್ತ ಹೇಳಿದೆ.
ಪ್ರಧಾನ ಮಂತ್ರಿಗಳ ಈ ಮಾತು ನಮ್ಮ ಧೀರ ಸೈನಿಕರ ವೀರಕೃತ್ಯದ ನ್ಯಾಯಬದ್ಧತೆಗೆ ಒಂದು ಪ್ರಮುಖ ಹಿನ್ನಡೆ, ಅಲ್ಲದೆ ಇದು ವಿವಾದವನ್ನು ಬಗೆಹರಿಸುವ ನಮ್ಮ ರಾಜತಾಂತ್ರಿಕ ಪ್ರಯತ್ನಗಳನ್ನು ಶಿಥಿಲಗೊಳಿಸುತ್ತದೆ ಎಂದು ಅದು ಹೇಳಿದೆ.
ಪ್ರಧಾನಮಂತ್ರಿಗಳ ಟಿಪ್ಪಣಿಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವುದರಿಂದ ಸರಕಾರ ಈಗ ದೀರ್ಘ ಸ್ಪಷ್ಟೀಕರಣಗಳನ್ನು ಕೊಟ್ಟಿದೆ, ಒಂದು ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ)ಯು ಪತ್ರಿಕಾ ಮಾಹಿತಿ ಕಚೇರಿ(ಪಿಐಬಿ) ಮೂಲಕ ಬಂದಿದೆ, ಇನ್ನೊಂದು ವಿದೇಶಾಂಗ ವ್ಯವಹಾರಗಳ ಮಂತ್ರಾಲಯದ ವಕ್ತಾರರಿಂದ ಬಂದಿದೆ. ತಮ್ಮದೇ ಆದ ವೈರುಧ್ಯಗಳಿರುವ ಈ ಸ್ಪಷ್ಟೀಕರಣಗಳು ಗೊಂದಲವನ್ನು ನಿವಾರಿಸುವ ಬದಲು ಮತ್ತಷ್ಟು ಗೊಂದಲವನ್ನು ಸೇರಿಸಿವೆ.
ರಕ್ಷಣಾ ಮಂತ್ರಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಮಂತ್ರಾಲಯದ ನಿಲುವುಗಳೊಂದಿಗೆ ವೈರುಧ್ಯ ಹೊಂದಿರುವ ಪ್ರಧಾನ ಮಂತ್ರಿಗಳ ಮಾತುಗಳಿಂದ ಎದ್ದು ಬಂದಿರುವ ಪ್ರಶ್ನೆಗಳನ್ನು ‘ತುಂಟತನದ ವ್ಯಾಖ್ಯೆ’ ಎನ್ನುವುದು, ನ್ಯಾಯಯುತವಂತೂ ಖಂಡಿತಾ ಅಲ್ಲ.
ಆದ್ದರಿಂದ ಘರ್ಷಣೆ ನಡೆದ ನಿಖರವಾದ ಸ್ಥಳ ಮತ್ತು ಈ ಘರ್ಷಣೆಗೆ ಕಾರಣವಾದ ಸನ್ನಿವೇಶಗಳನ್ನು ಕುರಿತ ಪ್ರಶ್ನೆಗಳಿಗೆ ಒಂದು ದೃಢವಾದ ಉತ್ತರ ಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯರೊ ಹೇಳಿದೆ. ಇದು ಸಂದೇಹಗಳನ್ನು ನಿವಾರಿಸಲು ಮತ್ತು ಘರ್ಷಣೆಯನ್ನು ತಪ್ಪಿಸುವ ಹಾಗೂ ಲಡಾಖ್ನಲ್ಲಿ ಎಲ್.ಎ.ಸಿ. ಗುಂಟ ಶಾಂತಿ ಮತ್ತು ಪ್ರಶಾಂತತೆಯನ್ನು ಮತ್ತೆ ನೆಲೆಗೊಳಿಸುವ ಅಧಿಕೃತವಾಗಿ ಹೇಳಿರುವ ಗುರಿಯನ್ನು ಅನುಸರಿಸುವ ಪರಿಸ್ಥಿತಿಗಳನ್ನು ನಿರ್ಮಿಸಬೇಕು ಎಂದು ಅದು ಹೇಳಿದೆ.