ಮೋದಿ ಸರಕಾರ ಮಹಾಮಾರಿ ಮತ್ತು ಆಯೋಜಿತ, ಏಕಪಕ್ಷೀಯವಾಗಿ ಪ್ರಕಟಿಸಿದ ಹಾಗೂ ಸಂಪೂರ್ಣ ಅವ್ಯವಸ್ಥೆಯಿಂದ ನಿರ್ವಹಿಸಿದ ಲಾಕ್ ಡೌನ್ ಇವೆರಡರಿಂದಲೂ ಈಗಾಗಲೇ ಹೊಡೆತಗಳಿಗೆ ಒಳಗಾಗಿರುವ ಜನಗಳ ಜೀವನಾಧಾರಗಳನ್ನು ನಿರ್ದಯವಾಗಿ ಧ್ವಂಸ ಮಾಡ ಹೊರಟಿದೆ.
ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕಳೆದ ಹದಿನೈದು ದಿನಗಳಲ್ಲಿ ಪ್ರತಿದಿನ ಏರಿಸಲಾಗಿದೆ. ಇದರಿಂದಾಗಿ ಪೆಟ್ರೋಲ್ ಬೆಲೆಯಲ್ಲಿ ೭.೯೭ರೂ. ಏರಿಕೆಯಾಗಿದೆ, ಡೀಸೆಲ್ ನಲ್ಲಿ ೮.೮೮ ರೂ. ಏರಿಕೆಯಾಗಿದೆ. ಇದು ಕೋಟ್ಯಂತರ ಜನಗಳ ಬದುಕುಗಳನ್ನು ಕುಂಟಿತಗೊಳಿಸಿದೆ ಎಂದಿರುವ ಎಡಪಕ್ಷಗಳು ಕೇಂದ್ರ ಸರಕಾರ ಜನಗಳಿಗೆ ಪರಿಹಾರ ಒದಗಿಸಲು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತನ್ನ ಅಬಕಾರಿ ಸುಂಕಗಳನ್ನು ತೀವ್ರವಾಗಿ ಇಳಿಸಬೇಕು, ಏಕೆಂದರೆ ಇಂದು ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಆಗ್ರಹಿಸಿವೆ.
ತೈಲ ಮಾರುವ ಕಂಪನಿಗಳು ಜನಗಳ ಖರ್ಚಿನಲ್ಲಿ ಅತಿ ಲಾಭ ಮಾಡಿಕೊಳ್ಳುತ್ತಿವೆ. ಅದೇ ವೇಳೆಯಲ್ಲಿ ಕೇಂದ್ರ ಸರಕಾರ ಭಾರೀ ಆದಾಯಗಳನ್ನು ಗಳಿಸುತ್ತಿದೆ. ಇದು ಕ್ರಿಮಿನಲ್ ಕ್ರತ್ಯ.
ಜನಗಳು ಬದುಕುಳಿಯುವ ಸಮಸ್ಯೆಗಳನ್ನು ಎತ್ತಿಕೊಳ್ಳುವ ಬದಲು, ಮೋದಿ ಸರ್ಕಾರ ಮತ್ತಷ್ಟು ಹೊಡೆತಗಳನ್ನೇ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಐದು ಎಡಪಕ್ಷಗಳು ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್), ಆರ್ ಎಸ್ ಪಿ ಮತ್ತು ಎ ಐ ಎಫ್ ಬಿ ಒಂದು ಅಖಿಲ ಭಾರತ ಪ್ರತಿಭಟನೆಯನ್ನು ಸಂಘಟಿಸಲು ನಿರ್ಧರಿಸಿವೆ. ಈ ಕೆಳಗಿನ ಬೇಡಿಕೆಗಳ ಮೇಲೆ ಇದನ್ನು ನಡೆಸಲಾಗುವುದು ಎಂದು ಅವು ಹೇಳಿವೆ:
- ತಕ್ಷಣವೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕಗಳನ್ನು ಕಡಿತ ಮಾಡಬೇಕು ಮತ್ತು ಬೆಲೆಗಳನ್ನು ಇಳಿಸಬೇಕು.
- ತಕ್ಷಣವೇ ತಿಂಗಳಿಗೆ ರೂ.೭೫೦೦ ನ್ನು ಮುಂದಿನ ಆರು ತಿಂಗಳು ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೆ ವರ್ಗಾಯಿಸಬೇಕು.
- ಅಗತ್ಯವಿರುವ ಎಲ್ಲರಿಗೂ ೧೦ ಕೆಜಿ ಆಹಾರಧಾನ್ಯಗಳನ್ನು ಉಚಿತವಾಗಿ ಹಂಚಬೇಕು.
ಕಲ್ಲಿದ್ದಲು ಕಾರ್ಮಿಕರು ಮೋದಿ ಸರಕಾರ ಕಲ್ಲಿದ್ದಲು ಗಣಿಗಳನ್ನು ಖಾಸಗೀಕರಿಸಲು ನಿರ್ಧರಿಸಿರುವುದರ ವಿರುದ್ಧ ನೀಡಿರುವ ಜುಲೈ ೨ ರಿಂದ ೪ರ ವರೆಗಿನ ಮುಷ್ಕರದ ಕರೆಗೆ ಎಡ ಪಕ್ಷಗಳು ಬೆಂಬಲ ವ್ಯಕ್ತ ಪಡಿಸಿವೆ.
ಜುಲೈ ೩ ರಂದು ತಮ್ಮ ಬೇಡಿಕೆಗಳ ಮೇಲೆ ಅಖಿಲ ಭಾರತ ಪ್ರತಿಭಟನೆಗೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನೀಡಿರುವ ಕರೆಗೆ ಸಂಪೂರ್ಣ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತ ಪಡಿಸಿರುವ ಎಡ ಪಕ್ಷಗಳು ಅಖಿಲ ಭಾರತ ಪ್ರತಿಭಟನೆಯ ದಿನಾಂಕವನ್ನು ಇತರ ಜಾತ್ಯತೀತ ಪಕ್ಷಗಳೊಂದಿಗೆ ಸಮಾಲೋಚಿಸಿ ಪ್ರಕಟಿಸುವುದಾಗಿ ಹೇಳಿವೆ.