ಪಿಎಂಕೇರ್ಸ್ ನಿಧಿಯನ್ನು ಪಾರದರ್ಶಕ, ಜವಾಬುದಾರಗೊಳಿಸಬೇಕು-ತಕ್ಷಣವೇ ಅದನ್ನು ರಾಜ್ಯ ಸರಕಾರಗಳಿಗೆ ವರ್ಗಾಯಿಸಬೇಕು

ಪ್ರಧಾನ ಮಂತ್ರಿಗಳ ಕಚೇರಿ ಪಿಎಂಕೇರ್ಸ್ ನಿಧಿಯ ವಿವರಗಳನ್ನು ಬಹಿರಂಗ ಪಡಿಸಲು ಸತತವಾಗಿ ನಿರಾಕರಿಸತ್ತಲೇ ಬರುತ್ತಿರುವುದು  ಅತ್ಯಂತ ಕಳವಳಕಾರಿ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಇದು ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿರುವ, ಮತ್ತು ರಕ್ಷಣಾ, ಗೃಹ ಹಾಗೂ ಹಣಕಾಸು ಮಂತ್ರಿಗಳು ಟ್ರಸ್ಟಿಗಳಾಗಿರುವ ಒಂದು ಖಾಸಗಿ ಟ್ರಸ್ಟ್ ರಚಿಸಿರುವ ನಿಧಿ ಎಂದು ಘೋಷಿಸಲಾಗಿದೆ. ಇದು ಒಂದು ಖಾಸಗಿ ಟ್ರಸ್ಟ್ ಆಗಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪ್ರಶ್ನೆಗಳಿಗೆ ಒಳಪಡುವುದಿಲ್ಲ ,ಮತ್ತು ಯಾವುದೇ ಸರಕಾರೀ ಲೆಕ್ಕ ಪರಿಶೋಧಕರ ಪರಿಶೋಧನೆಗೂ ಒಳಪಡುವುದಿಲ್ಲ ಎಂದೂ ಹೇಳಲಾಗಿದೆ. ಒಟ್ಟಿನಲ್ಲಿ ಈ ನಿಧಿಯಲ್ಲಿ ಪಾರದರ್ಶಕತೆಯಿಲ್ಲ, ಜವಾಬುದಾರಿಕೆಯೂ ಇಲ್ಲ ಎಂಬುದು ಸ್ಪಷ್ಟ.

ಮಾರ್ಚ್ ತಿಂಗಳಲ್ಲಿ  ಸಂಸತ್ತಿನ ಅಧಿವೇಶನ ಮುಂದೂಡಲ್ಪಡುತ್ತಿದ್ದಂತೆ ಈ ನಿಧಿಯ ರಚನೆಯನ್ನು ಪ್ರಕಟಿಸಲಾಯಿತು. ಕೊವಿಡ್‍ ಮಹಾಮಾರಿಯನ್ನು ಎದುರಿಸುವ ಗುರಿಯ ಹೆಸರಿನಲ್ಲಿ ಈ ನಿಧಿಗೆ ಉದಾರ ವಂತಿಗೆಗಳನ್ನು ನೀಡಬೇಕು ಎಂದು ಸಾರ್ವಜನಿಕ ಮನವಿಯನ್ನು ಮಾಡಲಾಯಿತು. ಸರಕಾರೀ ನೌಕರರು ಮತ್ತು ವೃತ್ತಿಪರರು ಕಡ್ಡಾಯವಾಗಿ ಒಂದು ದಿನದ ಸಂಬಳವನ್ನು ವಂತಿಗೆ ಕೊಡುವಂತೆ ಮಾಡಲಾಯಿತು. ಸಂಸತ್‍ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ(ಎಂ.ಪಿ.ಎಲ್‍.ಎ.ಡಿ.) ನಿಧಿಯ ಎರಡು ವರ್ಷಗಳ ಮೊತ್ತವನ್ನು ಇದರತ್ತ ತಿರುಗಿಸಲಾಯಿತು.

ಈ ಖಾಸಗಿ ಟ್ರಸ್ಟ್ ನ ನಿಧಿಗೆ ವಂತಿಗೆಗಳನ್ನು ‘ಕಾರ್ಪೊರೇಟ್‍ ಸಾಮಾಜಿಕ ಹೊಣೆಗಾರಿಕೆ’(ಸಿ.ಎಸ್‍.ಆರ್‍.)ಗೆ ಅರ್ಹವಾದ ವಂತಿಗೆಯೆಂದು ಪರಿಗಣಿಸಲು ಸಾಧ್ಯವಾಗುವಂತೆ  ಕಂಪನಿ ಕಾಯ್ದೆ 2013ನ್ನು ತಿದ್ದುಪಡಿ ಮಾಡಲಾಯಿತು. ಈ ನಿಧಿ ರಾಷ್ಟ್ರೀಯ ಲಾಂಛನವನ್ನು, ಪ್ರಧಾನಿಗಳ ಭಾವಚಿತ್ರವನ್ನು ಉದಾರವಾಗಿ ಬಳಸುತ್ತದೆ, ಸಾರ್ವಜನಿಕ ಉದ್ದಿಮೆಗಳ ನೌಕರರು ಇದಕ್ಕೆ ವಂತಿಗೆ ನೀಡುವಂತೆ ಅಧಿಕೃತ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಈ ನಿಧಿಗೆ ವಂತಿಗೆಗಳಿಗೆ ತೆರಿಗೆ ವಿನಾಯ್ತಿಯನ್ನೂ ಒದಗಿಸಲಾಗಿದೆ.

ಈಗಾಗಲೇ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ಎಂಬೊಂದು ಪಾರದರ್ಶಕ, ಜವಾಬುದಾರ ಮತ್ತು ಸಿ.ಎ.ಜಿ. ಲೆಕ್ಕ ಪರಿಶೋಧನೆ ಮಾಡುವ ನಿಧಿ ದೇಶ ಸ್ವತಂತ್ರವಾದಾಗಿನಿಂದಲೇ ಇರುವಾಗ ಇಂತಹದೊಂದು ಪ್ರತ್ಯೇಕ ಖಾಸಗಿ ಟ್ರಸ್ಟ್ ನಿಧಿಯ ಅಗತ್ಯವಾದರೂ ಏನು ಎಂಬ ಪ್ರಶ್ನೆಗೆ ಪ್ರಧಾನ ಮಂತ್ರಿಗಳ ಕಚೇರಿ ಇನ್ನೂ ಉತ್ತರ ಕೊಟ್ಟಿಲ್ಲ.

ಈಗಾಗಲೇ ಈ ಪಿಎಂಕೇರ್ಸ್‍ ನಿಧಿಯಲ್ಲಿ ಸುಮಾರು 10,000 ಕೋಟಿ ರೂ.ಗಳು ಸಂಗ್ರಹವಾಗಿವೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇದರಲ್ಲಿ 4,000 ಕೋಟಿ ರೂ.ಗಳು ಸರಕಾರೀ ಸಂಸ್ಥೆಗಳು ಮತ್ತು ನೌಕರರಿಂದಲೇ ಬಂದಿವೆ. ಇದು ಸಾಧ್ಯವಾಗಿರುವುದು ಸರಕಾರದ ಅಧಿಕಾರ ಮತ್ತು ಮಂಜೂರಾತಿಯಿಂದಲೇ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಈ ನಿಧಿಗಳನ್ನು ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಿ ಕೊರೊನ ವೈರಸ್‍ನ ತಪಾಸಣೆಗೆ ಮೂಲರಚನೆಯಲ್ಲಿ ಕಂಡು ಬಂದಿರುವ ಕೊರತೆಗಳನ್ನು ನಿವಾರಿಸಲು ಮತ್ತು ವೈರಸ್‍ನಿಂದ  ಪೀಡಿತರಾಗಿರುವ ರೋಗಿಗಳ ಶುಶ್ರೂಷೆಗೆ ಬಿಡುಗಡೆ ಮಾಡಬೇಕು ಎಂದು ಕೇಳಿದೆ.

ಈ ನಿಧಿಯಿಂದ ಯಾವುದೇ ಬಹಿರಂಗ ಟೆಂಡರ್‍ ಪ್ರಕ್ರಿಯೆಯಿಲ್ಲದೆ ಖರೀದಿಸಿದ ವೆಂಟಿಲೇಟರುಗಳನ್ನು ಕುರಿತಂತೆ ಗಂಭೀರ ಆಪಾದನೆಗಳು ಮತ್ತು ವಿವಾದಗಳು ಬಯಲಿಗೆ ಬಂದಿವೆ. ಈ ಎಲ್ಲ ಕಾರಣಗಳಿಂದಾಗಿ ಈ ನಿಧಿಯನ್ನು ಪಾರದರ್ಶಕ ಮತ್ತು ಉತ್ತರದಾಯಿಯಾಗಿ ಮಾಡಬೇಕು ಎಂಬುದು ತನ್ನ ದೃಢ ಅಭಿಪ್ರಾಯ, ಮತ್ತು ಈ ನಿಧಿಯನ್ನು ಮಹಾಮಾರಿಯ ವಿರುದ್ಧ ಸಮರದ ಮುಂಚೂಣಿಯಲ್ಲಿರುವ ರಾಜ್ಯ ಸರಕಾರಗಳಿಗೆ ತಕ್ಷಣವೇ ವರ್ಗಾಯಿಸಬೇಕು ಎಂದಿರುವ  ಸಿಪಿಐ(ಎಂ) ಪೊಲಿಟ್‍ ಬ್ಯುರೊ, ಈ ನಿಧಿಯ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಹಾಗೂ ಇದನ್ನು ಸಾರ್ವಜನಿಕ ಪರಿಶೋಧನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.

PM CARES -SOCIAL DISTANCE

ಪಿಎಂಕೇರ್ಸ್ ಖಾಸಗಿ ನಿಧಿ-
ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಿ-
ಪ್ರಶ್ನಿಸಬೇಡಿ

ವ್ಯಂಗ್ಯಚಿತ್ರ:

ಪಂಜು ಗಂಗೊಳ್ಳಿ

Leave a Reply

Your email address will not be published. Required fields are marked *