ಏಪ್ರಿಲ್ 20, 2016ರಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ
ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಭವಿಷ್ಯನಿಧಿ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವುದನ್ನು ಸಿಪಿಐ(ಎಂ) ರಾಜ್ಯ ಸಮಿತಿ ಖಂಡಿಸುತ್ತದೆ. ಹಾಗೂ ಹಳೆಯ ನಿಯಮಗಳನ್ನೇ ಪುನಃ ಊರ್ಜಿತಗೊಳಿಸುವಂತೆ ಒತ್ತಾಯಿಸುತ್ತಿರುವ ಹೋರಾಟನಿರತ ಕಾರ್ಮಿಕರನ್ನು ಬೆಂಬಲಿಸುತ್ತದೆ.
ಸಿದ್ಧಉಡುಪು ಕಾರ್ಮಿಕರ ಸ್ವಯಂ ಪ್ರೇರಿತ ಪ್ರತಿಭಟನೆ ಕಳೆದ ಎರಡು ದಿನಗಳಿಂದ ಬೊಮ್ಮಸಂದ್ರ ಮತ್ತು ಮದ್ದೂರು ಪ್ರದೇಶಗಳಲ್ಲಿ ನಡೆದಿದೆ. ಕೇಂದ್ರ ಸರ್ಕಾರದ ಕ್ರಮ ತಕ್ಷಣದಿಂದಲೇ ಈ ಯುವ ಮಹಿಳಾ ಕಾರ್ಮಿಕರನ್ನು ಹಾನಿಗೊಳಪಡಿಸುತ್ತದೆ. ಸಾಮಾನ್ಯವಾಗಿ ಅವರು ವಿವಾಹದ ನಂತರ ಉದ್ಯೋಗವನ್ನು ತ್ಯಜಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ತೀವ್ರವಾದ ಶೋಷಣೆಯಿಂದಾಗಿ ಅವರು ಬೇಗನೇ ಉದ್ಯೋಗ ತ್ಯಜಿಸುತ್ತಾರೆ.
ಭವಿಷ್ಯ ನಿಧಿಯಲ್ಲಿ ಮಾಲೀಕರ ದೇಣಿಗೆ ಕಾರ್ಮಿಕರಿಗೆ ಪಾವತಿಯಾಗುವುದನ್ನು ಅವರಿಗೆ ನಿವೃತ್ತಿಯ ಅಂದರೆ 58ವರ್ಷ ವಯಸ್ಸಾಗುವವರೆಗೂ ತಡೆಹಿಡಿಯುವುದು, ಈ ಕಾರ್ಮಿಕರಿಗೆ ಮಾರಕವಾಗಿ ಪರಿಣಮಿಸಲಿದೆ. ಇತರ ಕಾರ್ಮಿಕರೂ ಸಹ ಈ ಸಮಸ್ಯೆಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಹೋರಾಟದ ಅಲೆಗಳು ಬೆಂಗಳೂರಿನ ಇತರೆ ಪ್ರದೇಶಗಳಿಗೂ ವ್ಯಾಪಿಸುತ್ತಿವೆ.
ಮೋದಿ ಸರ್ಕಾರ ಕಾರ್ಮಿಕರ ಪ್ರತಿಭಟನೆಯಿಂದ ಈ ಆದೇಶವನ್ನು ತಡೆಹಿಡಿಯಬೇಕಾಗಿ ಬಂದಿದೆ. ಮಾತ್ರವಲ್ಲ ಕಾರ್ಮಿಕ ಕಾನೂನುಗಳ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಕೈಬಿಡಬೇಕಾಗಿದೆ. ಇದಕ್ಕಾಗಿ ಸಪ್ಟೆಂಬರ್ 2, 2016ರಂದು ಅಖಿಲ ಭಾರತ ಮುಷ್ಕರವನ್ನು ಅಯೋಜಿಸಲಾಗಿದೆ. ಸಿಪಿಐ(ಎಂ) ಪಕ್ಷವು ಈ ಹೋರಾಟವನ್ನು ಯಶಸ್ವಿಗೊಳಿಸಿ ದೇಶಾದಾದ್ಯಂತ ಕಾರ್ಮಿಕರಿಗೆ ಲಾಭಮಾಡಿಕೊಟ್ಟ ಬೆಂಗಳೂರಿನ ಕಾರ್ಮಿಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಕರ್ನಾಟಕ ಸರ್ಕಾರ ಈ ಹೋರಾಟದ ಗಂಭೀರತೆಯನ್ನು ಮನಗಂಡು ಕನಿಷ್ಟ ಕೂಲಿ ಸಲಹಾ ಸಮಿತಿ ಶಿಫಾರಸು ಮಾಡಿರುವ ಕನಿಷ್ಟ ಕೂಲಿಯನ್ನು ನಿಗದಿಪಡಿಸುವಲ್ಲಿ ತನ್ನ ಕಾರ್ಮಿಕ ವಿರೋಧಿ ಧೋರಣೆಯನ್ನು ಕೈಬಿಡಬೇಕು. ಹೋರಾಟಗಾರರ ಮೇಲಿನ ಪೋಲೀಸ್ ದೌರ್ಜನ್ಯವನ್ನು ಸಿಪಿಐ(ಎಂ) ಖಂಡಿಸುತ್ತದೆ. ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸದಂತೆ ಎಚ್ಚರವಹಿಸಬೇಕು ಎಂದು ಕಾರ್ಮಿಕರಿಗೆ ಕರೆ ನೀಡುತ್ತದೆ.
ಜಿ.ವಿ. ಶ್ರೀರಾಮರೆಡ್ಡಿ
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ