ಅಸ್ಸಾಂನಲ್ಲಿ ಪ್ರವಾಹದ ಇನ್ನಷ್ಟು ವಿಧ್ವಂಸಕಾರಿಯಾದ ಮೂರನೇ ಅಲೆ, 35 ಲಕ್ಷಕ್ಕಿಂತಲೂ ಹೆಚ್ಚು ಜನಗಳ ಜೀವ ಮತ್ತು ಜೀವನಾಧಾರಗಳನ್ನು ಗಂಭೀರವಾಗಿ ತಟ್ಟಿದೆ. ಈಗಾಗಲೇ 84 ಮಂದಿ ಪ್ರಾಣ ಕಳಕೊಂಡಿದ್ದಾರೆ. 24 ಜಿಲ್ಲೆಗಳ 3000ಕ್ಕೂ ಹೆಚ್ಚು ಹಳ್ಳಿಗಳು ಬಲಿಷ್ಟ ಬ್ರಪಪುತ್ರ , ಬರಕ್ ಮತ್ತು ಅವುಗಳ ಉಪನದಿಗಳಿಂದ ಕೊರೆತಕ್ಕೊಳಗಾಗಿ ತೊಂದರಗೀಡಾಗಿವೆ. 1.27ಲಕ್ಷ ಹೆಕ್ಟೇರ್ ಬೆಳೆ ಪ್ರದೇಶ ನಷ್ಟ ಅನುಭವಿಸಿದೆ, ಅಸಂಖ್ಯಾತ ಜಾನುವಾರುಗಳ ನಷ್ಟವಾಗಿದೆ. ಸಾವಿರಾರು ಸೇತುವೆಗಳು, ಒಡ್ಡುಗಳು, ವಾಸದ ಮನೆಗಳು ಮತ್ತು ಸಾರ್ವಜನಿಕ ಆಸ್ತಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಬಿಜೆಪಿ ನೇತೃತ್ವದ ಅಸ್ಸಾಂ ರಾಜ್ಯ ಸರಕಾರ ಈ ಎಲ್ಲ ವರ್ಷಗಳಲ್ಲಿ ಬಹಳ ಹಳೆಯದಾಗಿದ್ದ ಒಡ್ಡುಗಳನ್ನು ರಿಪೇರಿ ಮಾಡುವಲ್ಲಿ ಶೋಚನೀಯವಾಗಿ ಸೋತಿದೆ. ಈಗ ಹೆಚ್ಚಿನ ಸ್ಥಳಗಳಿಗೆ ಪರಿಹಾರ ತಲುಪಿಲ್ಲ.
ಇದುವರೆಗೂ ಕೇಂದ್ರ ಸರಕಾರ ಯಾವುದೇ ಪರಿಹಾರ ಪ್ಯಾಕೇಜನ್ನೂ ಪ್ರಕಟಿಸಿಲ್ಲ, ಎಷ್ಟು ಹಾನಿಯಾಗಿದೆ ಎಂದು ಅಂದಾಜು ಮಾಡಲು ಕೇಂದ್ರೀಯ ತಂಡವನ್ನೂ ಕಳಿಸಿಲ್ಲ.
ಪ್ರತಿಯೊಂದು ಕುಟುಂಬಕ್ಕೂ ಸಾಕಷ್ಟು ಪರಿಹಾರ ಮತ್ತು ಮರುವಸತಿ ಖಾತ್ರಿ ಪಡಿಸಬೇಕು, ಮತ್ತೆ-ಮತ್ತೆ ಕಾಡುವ ಅಸ್ಸಾಂನ ಪ್ರವಾಹ ಸಮಸ್ಯೆಯನ್ನು ಒಂದು ರಾಷ್ಟ್ರೀಯ ಸಮಸ್ಯೆ ಎಂದು ಗುರುತಿಸಿ ಈ ವಿಷಯದಲ್ಲಿ ಸಾಕಷ್ಟು ನಿಧಿಯನ್ನು ಬಿಡುಗಡೆ ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಆಗ್ರಹಿಸಿದೆ.