ಕೇಂದ್ರ ಸಂಪುಟ ಏಕಪಕ್ಷೀಯವಾಗಿ ಒಂದು ಹೊಸ ಶಿಕ್ಷಣ ಧೋರಣೆಯನ್ನು ಹೇರಲು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಮರುನಾಮಕರಣ ಮಾಡಲು ನಿರ್ಧರಿಸಿದೆ.
ಶಿಕ್ಷಣ ನಮ್ಮ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. ಎಲ್ಲ ಆಕ್ಷೇಪಣೆಗಳನ್ನು ಮತ್ತು ವಿವಿಧ ರಾಜ್ಯಸರಕಾರಗಳು ದಾಖಲಿಸಿರುವ ವಿರೋಧವನ್ನು ಬದಿಗೊತ್ತಿ ಒಂದು ಹೊಸ ಶಿಕ್ಷಣ ಧೋರಣೆಯನ್ನು ಹೇರುವುದು ಕೇಂದ್ರ ಸರಕಾರ ಮಾಡುತ್ತಿರುವ ಘೋರ ಉಲ್ಲಂಘನೆಯಾಗಿದೆ.
ಇಂತಹ ಸ್ವರೂಪದ ಹೊಸದೊಂದು ಧೋರಣೆಯನ್ನು ಸಂಸತ್ತಿನಲ್ಲಿ ಚರ್ಚಿಸಬೇಕಾಗಿದೆ. ಸರಕಾರ ಈ ಬಗ್ಗೆ ಭರವಸೆಯನ್ನೂ ಕೊಟ್ಟಿತ್ತು. ವಿಧಿ-ವಿಧಾನಗಳ ಪ್ರಕಾರ ಕರಡನ್ನು ಒಂದು ಕಾನೂನುಬದ್ಧ ಸಮಯ ಮಿತಿಯೊಂದಿಗೆ ಎರಡೂ ಸದನಗಳಲ್ಲಿ ಮಂಡಿಸಬೇಕು. ಈ ಸಮಯ ಮಿತಿಯೊಳಗೆ ಸಂಸತ್ ಸದಸ್ಯರು ತಿದ್ದುಪಡಿಗಳನ್ನು ಸೂಚಿಸಬಹುದು, ಇಲ್ಲವೇ ಅಭಿಪ್ರಾಯಗಳನ್ನು ಕೊಡಬಹುದು. ಇಲ್ಲಿ ಸಂಸತ್ತನ್ನು ಸಂಪೂರ್ಣವಾಗಿ ಬದಿಗೊತ್ತಲಾಗಿದೆ.
ಹೊಸ ಶಿಕ್ಷಣ ಧೋರಣೆಯ ಕರಡನ್ನು ಸಾರ್ವಜನಿಕ ಅವಗಾಹನೆಗೆ ಇಟ್ಟು ಸಂಬಂಧಪಟ್ಟ ಎಲ್ಲರಿಂದ, ಮುಖ್ಯವಾಗಿ ಶೈಕ್ಷಣಿಕ ವಲಯದಿಂದ, ಶಿಕ್ಷಕ ಸಮುದಾಯದಿಂದ ಮತ್ತು ವಿದ್ಯಾರ್ಥಿಗಳಿಂದ ಸಲಹೆ-ಸೂಚನೆಗಳನ್ನು,ಅಭಿಪ್ರಾಯಗಳನ್ನು ಕೋರಲಾಗಿತ್ತು. ಇದರ ಜೊತೆಗೆ ಹಲವು ಚಿಂತಕರೂ ತಮ್ಮ ವೀಕ್ಷಣೆಗಳನ್ನು ಕಳಿಸಿದ್ದಾರೆ. ಇವು ಯಾವುದನ್ನೂ ಪರಿಗಣನೆಗೆ ತಗೊಂಡಿಲ್ಲ.
ಭಾರತೀಯ ಶಿಕ್ಷಣದ ಹೆಚ್ಚೆಚ್ಚು ಕೇಂದ್ರೀಕರಣ, ಕೋಮುವಾದೀಕರಣ ಮತ್ತು ವ್ಯಾಪಾರೀಕರಣಕ್ಕೆ ಪ್ರಯತ್ನಿಸುವ ಒಂದು ಧೋರಣೆಯನ್ನು ತಂದು ಭಾರತೀಯ ಶಿಕ್ಷಣವನ್ನು ನಾಶಮಾಡಲಿಕ್ಕಾಗಿಯೇ ಈ ಏಕಪಕ್ಷೀಯ ಓಟ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಬಿಜೆಪಿ ಕೇಂದ್ರ ಸರಕಾರದ ಈ ನಡೆಯನ್ನು ಬಲವಾಗಿ ಪ್ರತಿಭಟಿಸಿದೆ, ಮತ್ತು ಇದರ ಜಾರಿ ಆರಂಭವಾಗುವ ಮೊದಲು ಸಂಸತ್ತಿನಲ್ಲಿ ಈ ಬಗ್ಗೆ ಆಮೂಲಾಗ್ರ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದೆ.