ಅಂಡಮಾನ್ -ನಿಕೋಬಾರ್ ನಲ್ಲಿ ಗಂಭೀರ ಆರೋಗ್ಯ ತುರ್ತು ಪರಿಸ್ಥಿತಿ: ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಿ- ಪ್ರಧಾನ ಮಂತ್ರಿಗಳಿಗ ಯೆಚುರಿ ಪತ್ರ

ಅಂಡಮಾನ್‍ ಮತ್ತು ನಿಕೋಬಾರ್ ಹಲವಾರು ದ್ವೀಪಗಳಿರುವ ಪ್ರದೇಶ. ಒಂದು ದ್ವೀಪದಿಂದ ಇನ್ನೊಂದಕ್ಕೆ ಹೋಗಲು ಬಹಳ ಸಮಯ ತಗಲುತ್ತದೆ. ಕೊವಿಡ್-19 ಸೋಂಕು ತೀವ್ರವಾಗಿ ಹರಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಇದು ಇಲ್ಲಿ ಬಹಳ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಏಕೆಂದರೆ ಈ ಇಡೀ ಪ್ರದೇಶದಲ್ಲಿ ಪೋರ್ಟ್ ಬ್ಲೇರ್‍ ನಲ್ಲಿ ಮಾತ್ರವೇ ಒಂದೇ ಒಂದು ಕೊವಿಡ್‍ ತಪಾಸಣೆ ಕೇಂದ್ರ ಮತ್ತು ಆಸ್ಪತ್ರೆ ಇರುವುದು. ಯಾವುದೇ ಕೊವಿಡ್‍ ತಪಾಸಣೆಯ ಫಲಿತಾಂಶ ಬರಲು ಎಂಟು ದಿನಗಳಾಗುತ್ತವೆ. ಆ ವೇಳೆಗೆ ರೋಗಿಯ ಸ್ಥಿತಿ ಸಂಪೂರ್ಣ ಹದಗೆಟ್ಟಿರುತ್ತದೆ. ಈ ದ್ವೀಪಸಮೂಹದ ಜನಸಂಖ್ಯೆಯ ಅರ್ಧದಷ್ಟು ಉತ್ತರ ಅಂಡಮಾನಿನಲ್ಲಿದೆ. ಅಲ್ಲಿಂದ ಪೋರ್ಟ್ ಬ್ಲೇರ್‍ ಗೆ ಬರಲು ಹಲವು ದಿನಗಳೇ ಹಿಡಿಸುತ್ತವೆ. ಅಲ್ಲದೆ ಈ ಆಸ್ಪತ್ರೆಯ 18 ಡಾಕ್ಟರುಗಳಿಗೆ ಕೊವಿಡ್‍ ಸೋಂಕು ತಗಲಿದೆ ಎಂದೂ ವರದಿಯಾಗಿದೆ.

ಇದು ಕೇಂದ್ರಾಡಳಿತ ಪ್ರದೇಶವಾಗಿದ್ದು  ನೇರವಾಗಿ ಕೇಂದ್ರ ಗೃಹ ಮಂತ್ರಾಲಯದ ಆಡಳಿತ ಹತೋಟಿಯಲ್ಲಿದೆ. ಆದ್ದರಿಂದ ಅದು ಕೊವಿಡ್ ಪಿಡುಗು ಭರದಿಂದ ಹರಡುತ್ತಿರುವ ಸಮಯದಲ್ಲಿ ಜನಗಳಿಗೆ ತುರ್ತು ಪರಿಹಾರ ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ, ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಪ್ರಧಾನಮಂತ್ರಿಗಳು ಈ ದ್ವೀಪಸಮೂಹದಲ್ಲಿನ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ ಈ ದ್ವೀಪಗಳಿಗೆ ಉನ್ನತ ವೇಗದ ಬ್ರಾಡ್‍ ಬ್ಯಾಂಡ್‍ ಸಂಪರ್ಕ ನೀಡುವುದಾಗಿ ಪ್ರಕಟಿಸಿದ್ದಾರೆಂದು ವರದಿಯಾಗಿದೆ. ಇದು ಹೊಸದೇನಲ್ಲ. ಹಲವು ವರ್ಷಗಳ ಹಿಂದೆಯೇ ಭಾರತ ಸರಕಾರ ನಿರ್ಧರಿಸಿರುವ ಸಂಗತಿ. ಈಗಾಗಲೇ ಚೆನ್ನೈನಿಂದ ನೀರಿನಡಿಯಲ್ಲಿ ಕೇಬಲ್‍ಗಳನ್ನು ಹಾಕುವ ಕೆಲಸವೂ ಆರಂಭವಾಗಿದೆ ಎನ್ನಲಾಗಿದೆ. ಅದೇನೇ ಇರಲಿ, ಈ ದ್ವೀಪಗಳ ಜನಗಳ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವ ಯಾವುದೇ ಕ್ರಮ ಸ್ವಾಗತಾರ್ಹ. ಆದರೆ ಈಗ ತುರ್ತಾಗಿ ಕೇಂದ್ರ ಸರಕಾರ ಜನಗಳ ಬದುಕನ್ನು ಕಾಪಾಡಲು ಮತ್ತು ಪರಿಹಾರ ನೀಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಮ್ಮ ಪತ್ರದಲ್ಲಿ ಹೇಳಿರುವ ಯೆಚುರಿಯವರು ಕೊವಿಡ್‍ ತಪಾಸಣಾ ಕೇಂದ್ರಗಳನ್ನು ಎಷ್ಟು ಸಾದ್ಯವೋ ಅಷ್ಟು ಹೆಚ್ಚಿಸಬೇಕು, ಕೊವಿಡ್‍ ರೋಗಿಗಳ ಆರೈಕೆಗೆ ಹೆಚ್ಚು ಆರೋಗ್ಯ ಕೇಂದ್ರಗಳನ್ನು ತೆರೆಯಬೇಕು, ಮತ್ತು ಜನಗಳಿಗೆ ಪರಿಹಾರಗಳನ್ನು ಯುದ್ಧೋಪಾದಿಯಲ್ಲಿ ತಲುಪಿಸಬೇಕಾಗಿದೆ ಎಂದು ಬರೆದಿದ್ದಾರೆ.

ಈ ಕೇಂದ್ರಾಡಳಿತ ಪ್ರದೇಶದಲ್ಲಿ ಬೇರೆ ಚುನಾಯಿತ ಸಂಸ್ಥೆಗಳಿಲ್ಲ. ಆದ್ದರಿಂದ ಜನಗಳು ಕೇಂದ್ರ ಗೃಹ ಮಂತ್ರಾಲಯದತ್ತವೇ ನೋಡಬೇಕಾಗುತ್ತದೆ. ಆದ್ದರಿಂದ “ನಿಮ್ಮ ಸರಕಾರದ ನೇರ ಹತೋಟಿಗೆ ಬರುವ ಇಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು, ಮತ್ತು ಮೇಲೆ ಹೇಳಿದ ಅತ್ಯಗತ್ಯ ಕ್ರಮಗಳನ್ನಾದರೂ ಯುದ್ಧಸ್ತರದಲ್ಲಿ ಕೈಗೊಳ್ಳಬೇಕು” ಎಂದು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸೀತಾರಾಮ್‍ ಯೆಚುರಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *