ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರಾದ ಗೋಪಾಲ ಪೂಜಾರಿಯವರು ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ಸಮಿತಿಯ ಸದಸ್ಯರಿಗೆ ಅಕ್ರಮವಾಗಿ ಭೂಮಿ ಹಂಚಿಕೆಯಾಗಿದೆಯೆಂದು ಕುಂದಾಪುರ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಆಗ್ರಹಿಸಿದೆ.
ಸಾಮಾನ್ಯ ರೈತರು ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಕುಮ್ಕಿ ಮತ್ತಿತರೆ ಜಮೀನಿನ ಕುರಿತು ಅಕ್ರಮ-ಸಕ್ರಮ ಸಮಿತಿ ವಿವೇಚನೆಯಿಂದ ಸಕ್ರಮಗೊಳಿಸುವ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹಲವಾರು ವರ್ಷಗಳ ನಂತರವೂ ಕ್ರಮತೆಗೆದುಕೊಂಡಿಲ್ಲ.
ಆದರೆ ಅಕ್ರಮ-ಸಕ್ರಮ ಸಮಿತಿಯ ಸದಸ್ಯರೊಬ್ಬರು ತನ್ನ ಹೆಂಡತಿಯ ಹೆಸರಿಗೆ ಭೂಮಿ ಮಂಜೂರು ಮಾಡಿಸಿಕೊಂಡಿರುವುದು ಮಾತ್ರವಲ್ಲದೇ ಆ ಭೂಮಿಯಲ್ಲಿ ಕೆಂಪು ಕಲ್ಲುಕೋರೆ ನಡೆಸುತ್ತಿರುವುದಾಗಿ ವರದಿಯಾಗಿದೆ. ಇದು ಸತ್ಯವಾಗಿದ್ದಲ್ಲಿ, ಖಂಡಿತಾ ಇದು ಶಾಸಕರ ಗಮನದಲ್ಲಿದೆ. ಆದ್ದರಿಂದ ಪಾರದರ್ಶಕವಾಗಿ ತನಿಖೆ ನಡೆಸಲು ಅನುವಾಗುವಂತೆ ಶಾಸಕರು ರಾಜೀನಾಮೆ ನೀಡಬೇಕೆಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿರವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿಂದೆ ಹೆಮ್ಮಾಡಿಯ ಜನತಾ ಹೈಸ್ಕೂಲಿಗೆ ಸೇರಿದ ಜಾಗದ ವಿಚಾರದಲ್ಲಿಯೂ ಶಾಸಕರ ಮೇಲೆ ಆಪಾದನೆಗಳು ಬಂದಿತ್ತು ಎಂಬುದನ್ನು ಗಮನಿಸಬೇಕು.