ಮಂಗಳೂರು ನಗರದ ನಿವೇಶನ ರಹಿತರು ಕಳೆದ ಎರಡುವರೆ ವರ್ಷಗಳಿಂದ ನಿವೇಶನಕ್ಕಾಗಿ ಮಹಾನಗರ ಪಾಲಿಕೆ ಒದಗಿಸಬೇಕೆಂದು ಆಗ್ರಹಿಸಿ ಹೋರಾಟ ಸಮಿತಿಯ ಮೂಲಕ ಈಗಾಗಲೇ ಏಳು ಬಾರಿ ಸಾಮೂಹಿಕ ಪ್ರತಿಭಟನಾ ಕಾರ್ಯಕ್ರಮ ನಡೆಸಲಾಗಿದೆ.
ಅಕ್ಟೋಬರ್ 24ರಂದು ಮಂಗಳೂರಿನ ನಿವೇಶನರಹಿತರ ಹೋರಾಟ ಸಮಿತಿಯ ವತಿಯಿಂದ ನಡೆದ ಜಿಲ್ಲಾಧಿಕಾರಿ ಕಛೇರಿ ಚಲೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿರವರು “ಈ ದೇಶದ ನಿಜವಾದ ವಾರೀಸುದಾರರಾದ ಬಡವರಿಗೆ ವಾಸಿಸಲೂ ಭೂಮಿಯಿಲ್ಲ. ಶ್ರೀಮಂತರ ಹಾಗೂ ಭೂಮಾಫಿಯಾದ ವಶದಲ್ಲಿ ಮಂಗಳೂರು ನಗರದಲ್ಲಿ ಹೇರಳವಾದ ಭೂಮಿಯಿದೆ. ನಗರ ಪಾಲಿಕೆ ಸಿದ್ದಪಡಿಸಿದ ನಗರದ ನಿವೇಶನರಹಿತರ ಪಟ್ಟಿಯಲ್ಲಿ ಸಿಪಿಐ(ಎಂ) ನೇತೃತ್ವದ ನಿವೇಶನರಹಿತರ ಹೋರಾಟ ಸಮಿತಿ ಕ್ರಮಬದ್ದವಾಗಿ ಸಲ್ಲಿಸಿದ್ದ ಅನೇಕ ಅರ್ಜಿದಾರರ ಹೆಸರು ಕಾಣೆಯಾಗಿದೆ. ಪುರುಷ ಅರ್ಜಿದಾರರ ಹೆಸರನ್ನು ತೆಗೆದು ಹಾಕಲಾಗಿದೆ. ಇದರಿಂದಾಗಿ ಮಂಗಳೂರು ನಗರದ ಬಡ ನಿವೇಶನರಹಿತರು ಬೀದಿಗೆ ಇಳಿಯಬೇಕಾದ ಪರಿಸ್ಥಿತಿ ಬಂದಿದೆ” ಎಂದು ಹೇಳಿದರು.
ಮಂಗಳೂರು ನಗರ ಇವತ್ತು ಸ್ಮಾರ್ಟ್‍ಸಿಟಿಯಾಗುವುದರಲ್ಲಿದ್ದು, ಪ್ರಜೆಗಳಿಗೆ ಕನಿಷ್ಠ ವಸತಿಯನ್ನು ಒದಗಿಸದೆ ನಗರವನ್ನು ಸ್ಮಾರ್ಟ್‍ಸಿಟಿ ಮಾಡುವುದಕ್ಕೆ ಯಾವುದೇ ಅರ್ಥವಿಲ್ಲ. ಹಿಂದೆ ರಾಜ್ಯ ಸರ್ಕಾರಗಳಲ್ಲಿ ಬಡವರಿಗೆ ನಿವೇಶನರಹಿತರಿಗೆ ನಿವೇಶನ ನೀಡುವ ಕಾರ್ಯಕ್ರಮವಿತ್ತು. ಆದರೆ ಇದೀಗ ಕೇಂದ್ರ-ರಾಜ್ಯ ಸರ್ಕಾರಗಳ ಜಾಗತೀಕರಣದ ಅಧೀನರಾದ ಬಳಿಕ ಐಎಂಎಫ್ ಮತ್ತು ವಿಶ್ವಬ್ಯಾಂಕ್‍ಗಳ ನೀತಿಯಂತೆ ಉಚಿತವಾಗಿ ಬಡವರಿಗೆ ನೀಡುವ ಎಲ್ಲಾ ಸಬ್ಸಿಡಿಗಳನ್ನು ಕೈಬಿಡಲಾಗುತ್ತಿದೆ. ಎಲ್ಲರಿಗೂ ಜೀವನ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ಒದಗಿಸದ ಮೇರೆಗೆ ವಸತಿ ಹಕ್ಕಿಗಾಗಿ ಹೋರಾಟ ಮಾಡುವ ಬಡವರನ್ನು ಸಿಪಿಐ(ಎಂ) ಬೆಂಬಲಿಸುತ್ತಿದೆ.
ಕೇಂದ್ರ ರಾಜ್ಯ ಸರ್ಕಾರಗಳ ಭೂಸ್ವಾಧೀನ ಕಾಯಿದೆಯ ದುರ್ಬಳಕೆ ಮಾಡಿ ಉದ್ಯಮಿಗಳಿಗೆ ಕೃಷಿ ಭೂಮಿಯನ್ನು ರೈತರಿಂದ ಅಗ್ಗವಾಗಿ ಕಿತ್ತು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ನಿವೇಶನ ಭೂಮಿ ಅಥವಾ ಬಡವರು ಅಭಿವೃದ್ಧಿಗೊಳಿಸಿದ ಭೂಮಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ನವೆಂಬರ್ 18ರಂದು ರಾಜ್ಯಾದ್ಯಂತ ರೈತರು ನಡೆಸುವ ಜೈಲ್ ಭರೋ ಕಾರ್ಯಕ್ರಮದಲ್ಲಿ ನಿವೇಶನರಹಿತರು ಭಾಗವಹಿಸುವರು ಎಂಬುದಾಗಿ ವಸಂತ ಆಚಾರಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಯಾದವ ಶೆಟ್ಟಿ, ಸಿಪಿಐ(ಎಂ) ಜಿಲ್ಲಾ ನಗರ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಯಂತಿ ಬಿ.ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಡಿವೈಎಫ್‍ಐ ಮುಖಂಡ ಸಂತೋಷ್ ಬಜಾಲ್ ಮಾತನಾಡಿದರು. ನಿವೇಶನರಹಿತರ ಹೋರಾಟ ಸಮಿತಿಯ ಅಧ್ಯಕ್ಷರಾದ ಪ್ರೇಮನಾಥ ಜಲ್ಲಿಗುಡ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್ ಶಕ್ತಿನಗರ ಪ್ರಾಸ್ತವಿಕ ಮಾತನಾಡಿದರು. ಖಜಾಂಚಿ ಪ್ರಭಾವತಿ ಬೋಳಾರ ಹಾಗೂ ಇತರ ಸಮಿತಿ ಮುಖಂಡರು ಭಾಗವಹಿಸಿದರು.
ನಿವೇಶನರಹಿತರ ಪಟ್ಟಿಯಿಂದ ಕೈಬಿಡಲಾದ ಹೆಸರುಗಳನ್ನು, ಪುರುಷ ಅರ್ಜಿದಾರರ ಹೆಸರನ್ನೂ ಸೇರಿಸಬೇಕು, ಕಣ್ಣೂರಿನ ಕನ್ನಗುಡ್ಡೆಯಲ್ಲಿ 11.25 ಎಕ್ರೆ ನಿವೇಶನಕ್ಕಾಗಿ ಕಾದಿರಿಸಿದ ಜಮೀನಿನ ಸ್ಪಷ್ಟ ಮಾಹಿತಿ ನೀಡಬೇಕು. ಮಂಗಳೂರು ನಗರದಲ್ಲಿ ಆಯ್ಕೆಯಾದ 2,000 ನಿವೇಶನರಹಿತರ ಅಂತಿಮ ಪಟ್ಟಿಯನ್ನು ಬಹಿರಂಗಪಡಿಸಬೇಕು ಎಂಬ ಬೇಡಿಕೆಗಳ ಬಗ್ಗೆ ಹೋರಾಟ ಸಮಿತಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿತು.
ಪ್ರತಿಭಟನೆಗೂ ಮೊದಲು ಮಂಗಳೂರಿನ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ನಿವೇಶನರಹಿತರು ಮೆರವಣಿಗೆ ನಡೆಸಿದರು.
ವರದಿ : ಸಂತೋಷ್ ಶಕ್ತಿನಗರ