೧೯೫೭ರಲ್ಲಿ ದೊರೆತ ವಿಜಯವು ಕಮ್ಯುನಿಸ್ಟರಿಗೆ ಕೇರಳದಲ್ಲಿ ಒಂದು ಅವಕಾಶ ಒದಗಿಸಿತು, ಹಿಂದೆಂದೂ ಅಂತಹ ಅವಕಾಶಗಳು ಸಿಕ್ಕ ಉದಾಹರಣೆಗಳು ಇಲ್ಲ. ಸಂವಿಧಾನದ ಮಿತಿಗಳ ನಿರ್ಬಂಧಗಳಿಂದಾಗಿ, ಇಂತಹ ಸಂವಿಧಾನದ ಪರಿಮಿತಿಯಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ತನ್ನ ಅಸಹಾಯಕತೆಯನ್ನು ಕಮ್ಯುನಿಸ್ಟ್ ಪಕ್ಷವು ವ್ಯಕ್ತಪಡಿಸಲಿಲ್ಲ ಅಥವಾ ಸಂವಿಧಾನದ ಮೂಲಕವೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹುಡುಕಲು ಸಾಧ್ಯ ಎಂಬ ತಪ್ಪು ಕಲ್ಪನೆಯನ್ನೂ ಇಟ್ಟುಕೊಂಡಿರಲಿಲ್ಲ. ಅದರ ಬದಲು, ಸಂವಿಧಾನಿಕ ಸಾಧನಗಳಿಂದ ಎಲ್ಲಿ ಸಾಧ್ಯವೋ ಅದನ್ನು ಬಳಸಿ ಆ ಮೂಲಕ ಜನರ ಬದುಕನ್ನು ಉತ್ತಮಪಡಿಸಲು ಅದು ಕೆಲಸ ಮಾಡಿತು ಮತ್ತು ಜನರ ಹೋರಾಟಗಳೊಂದಿಗೆ ಗಟ್ಟಿಯಾಗಿ ನಿಂತಿತು.
ಕಮ್ಯುನಿಸ್ಟರ ಮುನ್ನಡೆಯನ್ನು ತಡೆಯಲು ಅಸಮರ್ಥವಾದ ಕೇಂದ್ರ ಸರ್ಕಾರವು ೩೫೬ನೇ ವಿಧಿ ಬಳಸಿತು ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ೧೯೫೯ರಲ್ಲಿ ವಜಾ ಮಾಡಿತು. ಅದು ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ಕರಾಳ ದಿನವಾಗಿತ್ತು.
ಕೇರಳದಲ್ಲಿ ಏಪ್ರಿಲ್ ೫, ೧೯೫೭ರಂದು ಕಮ್ಯುನಿಸ್ಟ್ ಸರ್ಕಾರದ ರಚನೆಯಾದಾಗ ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಒಂದು ಹೊಸ ಪ್ರಯೋಗವೆಂದು ಪ್ರಶಂಸಿಸಲಾಯಿತು. ಇದಕ್ಕೂ ಮುಂಚೆ, ಕಮ್ಯುನಿಸ್ಟ್ ಪಕ್ಷವೊಂದು ಜಗತ್ತಿನಲ್ಲಿ ಎಲ್ಲಿಯೂ ಮುಕ್ತ ಹಾಗೂ ನ್ಯಾಯಯುತ ಚುನಾವಣೆಯಲ್ಲಿ ಗೆಲುವನ್ನು ಪಡೆದಿರಲಿಲ್ಲ. ಹೊಸದಾಗಿ ರಚನೆಯಾದ ಕೇರಳ ರಾಜ್ಯದ ಮೊಟ್ಟ ಮೊದಲ ಚುನಾವಣೆಯಲ್ಲಿ ಆಗಿನ ವಿಧಾನಸಭೆಯ ಒಟ್ಟು ೧೨೭ ಸ್ಥಾನಗಳಲ್ಲಿ ಕಮ್ಯುನಿಸ್ಟ್ ಪಕ್ಷವು ೬೫ ಸ್ಥಾನಗಳಲ್ಲಿ ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ೩೪ ಕ್ಷೇತ್ರಗಳಲ್ಲಿ ಅದು ಶೇಕಡಾ ೫೦ಕ್ಕಿಂತಲೂ ಹೆಚ್ಚು ಮತಗಳನ್ನು, ೮ ಕ್ಷೇತ್ರಗಳಲ್ಲಿ ೪೮% ರಿಂದ ೫೦% ಮತಗಳನ್ನು ಪಡೆಯಿತು. ಅದು ಪಕ್ಷ ಮತ್ತು ಅದರ ನೀತಿಗಳ ಮೇಲೆ ವಿಶ್ವಾಸವಿಟ್ಟು ಜನರು ಕಮ್ಯುನಿಸ್ಟ್ ಪಕ್ಷಕ್ಕೆ ನೀಡಿದ ಸಕಾರಾತ್ಮಕ ಮತವಾಗಿತ್ತು.
ಕಮ್ಯುನಿಸ್ಟ್ ಸರ್ಕಾರದ ಉದ್ಘಾಟನೆಯಾದ ಒಂದು ವಾರದೊಳಗೇ, ಅದು ರೈತರ ಪರವಾಗಿ ಒಂದು ಶಾಸನವನ್ನು ಅಂಗೀಕರಿಸಿತು. ಏಪ್ರಿಲ್ ೫ ರಂದು, ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತು ಮತ್ತು ಏಪ್ರಿಲ್ ೧೧ ರಂದು ಒಕ್ಕಲೆಬ್ಬಿಸುವುದನ್ನು ನಿಷೇಧ ಮಾಡಿ, ಯಾವ ಗೇಣಿದಾರನನ್ನು, ಒಳ-ಗೇಣಿದಾರನನ್ನೂ, ನಿವೇಶನಗಳಲ್ಲಿ ವಾಸಿಸುತ್ತಿರುವವರನ್ನು, ಸಮಯಕ್ಕೆ ಸರಿಯಾಗಿ ಗೇಣಿ ಕೊಟ್ಟಿಲ್ಲ ಎಂಬ ಕಾರಣವನ್ನೂ ಒಳಗೊಂಡಂತೆ ಯಾವುದೇ ಕಾರಣದಿಂದಲೂ ಒಕ್ಕಲೆಬ್ಬಿಸುವಂತಿಲ್ಲ ಎಂಬ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿತು. ಇನ್ನೂ ಮುಂದುವರಿದು, ಗೇಣಿದಾರರ, ಒಳ-ಗೇಣಿದಾರರ ಅಥವಾ ಮನೆ ನಿವೇಶನಗಳಲ್ಲಿ ವಾಸಿಸುತ್ತಿರುವವರ ವಿರುದ್ಧ ಜಮೀನ್ದಾರರು ಕೋರ್ಟುಗಳಲ್ಲಿ ಹೂಡಿದ್ದ ಪ್ರಕರಣಗಳಿಗೆ ತಡೆ ನೀಡಲಾಯಿತು. ರಾಜ್ಯದ ಗ್ರಾಮೀಣ ಬಡವರು ಜಮೀನ್ದಾರರ ದಾಳಿ ದಬ್ಬಾಳಿಕೆಗಳಿಂದ ಇಷ್ಟು ವ್ಯಾಪಕವಾದ ಪರಿಹಾರವನ್ನು ಹಿಂದೆಂದೂ ಗಳಿಸಿರಲಿಲ್ಲ.
ಈ ತುರ್ತು ಶಾಸನವು ಮುಂದಿನ ಶಾಶ್ವತ ಶಾಸನಕ್ಕೆ ನಾಂದಿಯಾಗಿತ್ತು; ಹೊಸ ರಾಜ್ಯದ ಮೂರು ಅಂಗಗಳಾಗಿದ್ದ ಮಲಬಾರ್, ಕೊಚಿನ್ ಮತ್ತು ತಿರುವಾಂಕೂರ್ ಪ್ರತಿಯೊಂದು ಕೂಡ ಹೊಂದಿದ್ದ ಜಮೀನ್ದಾರ-ಗೇಣಿದಾರ ಸಂಬಂಧಗಳ ಕಾನೂನುಗಳನ್ನು ಒಟ್ಟುಗೂಡಿಸಿ ಭೂಒಡೆತನದ ಹೊಸ ಕಾನೂನನ್ನು ಸಿದ್ಧಪಡಿಸಲಾಗುತ್ತಿತ್ತು. ಇಡೀ ರಾಜ್ಯಕ್ಕೆ ಒಂದು ಸಮಾನವಾದ ಭೂಕಾನೂನನ್ನು ರಚಿಸುವ ಸಲುವಾಗಿ ಹೀಗೆ ಒಟ್ಟುಗೂಡಿಸುವಾಗ, ಹಿಂದಿನ ಎರಡು ದಶಕಗಳಿಂದ ಕೃಷಿ ಕೂಲಿಕಾರರ ಸಂಘಟನೆಗಳನ್ನೂ ಒಳಗೊಂಡಂತೆ ಕಿಸಾನ್ ಸಭಾ ಹಾಗೂ ಗ್ರಾಮೀಣ ಬಡವರು ಹೋರಾಡುತ್ತಿದ್ದ ತಕ್ಷಣದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿತ್ತು.
ಪಕ್ಷದ ರಾಜ್ಯ ಸಮಿತಿ, ಪಕ್ಷದ ಶಾಸಕರ ಗುಂಪು ಮತ್ತು ರಾಜ್ಯ ಮಟ್ಟದಿಂದ ಹಿಡಿದು ಗ್ರಾಮ ಮಟ್ಟದವರೆಗಿನ ಕಿಸಾನ್ ಸಭಾ ಸಮಿತಿಗಳು ಸಮಾಲೋಚನೆ, ತಿಕ್ಕಾಟ ಮತ್ತು ಮರುಹೊಂದಾಣಿಕೆಗಳ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದವು. ಜಾತಿ, ಕೋಮು ಹಾಗೂ ರಾಜಕೀಯ ಕಾರಣಗಳನ್ನು ಪರಿಗಣಿಸದೆ ಒಟ್ಟಾರೆ ಗ್ರಾಮೀಣ ಬಡವರಿಗೆ ಎಷ್ಟು ಸಾಧ್ಯವೋ ಅಷ್ಟು ಗರಿಷ್ಠ ಪರಿಹಾರವನ್ನು ಕೃಷಿ ಸಂಬಂಧಗಳ ಮಸೂದೆಯು ಒದಗಿಸಿತ್ತು. ಸುಗ್ರೀವಾಜ್ಞೆಯಲ್ಲಿ ಒಳಗೊಂಡಿದ್ದ ಒಕ್ಕಲೆಬ್ಬಿಸುವುದರ ನಿಷೇಧ ಮತ್ತು ಗೇಣಿ ವಸೂಲಿಗೆ ತಡೆಯ ಮೂಲಕ ಲಕ್ಷಾಂತರ ರೈತರು, ಕೃಷಿ ಕೂಲಿಕಾರರು ಮತ್ತು ಇತರ ಗ್ರಾಮೀಣ ಬಡವಿಭಾಗಗಳು ಪಡೆದ ಬಹು ದೊಡ್ಡ ಜೀವನೋಪಾಯ ಬೆಂಬಲವನ್ನು ಪಡೆದ ಒಂದು ಪ್ರಕ್ರಿಯೆಯ ಆರಂಭವಾಗಿತ್ತು. ಆದ್ದರಿಂದ ಏಪ್ರಿಲ್ ೧೧, ೧೯೫೭ರ ಆ ದಿನವು ಕೇರಳದ ಗ್ರಾಮೀಣ ಬಡ ಸಮುದಾಯಕ್ಕೆ ಕೆಂಪು ಅಕ್ಷರಗಳಲ್ಲಿ ಬರೆದ ದಿನವಾಗಿತ್ತು. ಆ ಸುಗ್ರೀವಾಜ್ಞೆ ಮತ್ತು ಜೂನ್ ೧೯೫೯ರ ಆರಂಭದಲ್ಲಿ ಅಂಗೀಕರಿಸಿದ್ದ ಅಂತಿಮ ಮಸೂದೆಯು ಕೇರಳದ ಜನರ ಆರ್ಥಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಬದುಕಿನಲ್ಲಿ ಹೊಸ ಘಟ್ಟವಾಗಿ ಪರಿಣಮಿಸಿತ್ತು. ಕೇವಲ ತೀರ ಅಲ್ಪಸಂಖ್ಯೆಯ ಮೇಲ್ಜಾತಿ ಜಮೀನ್ದಾರರು ಗ್ರಾಮೀಣ ಬಡ ಸಮುದಾಯದ ಮೇಲೆ ನಡೆಸುತ್ತಿದ್ದ ಆರ್ಥಿಕ ದಬ್ಬಾಳಿಕೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಪ್ರಾಬಲ್ಯವನ್ನು ಅದು ಕೊನೆಗೊಳಿಸಿತ್ತು.
ಕೃಷಿ ಸಂಬಂಧಗಳ ಮಸೂದೆಯ ನಂತರ ಅತ್ಯಂತ ಪ್ರಮುಖವಾದದ್ದು, ಪೋಲಿಸರು ಮತ್ತು ಜನರ ನಡುವಿನ ಸಂಬಂಧಗಳ ಕುರಿತ ಧೋರಣೆಯ ಹೇಳಿಕೆಯಾಗಿತ್ತು. ಕೃಷಿ ಸಂಬಂಧಗಳ ಮಸೂದೆಗೆ ಆದಂತೆ ಸರ್ಕಾರದ ಪೋಲಿಸ್ ನೀತಿಗಳು ಸಾಮಾನ್ಯ ಜನರನ್ನು ಹುರಿದುಂಬಿಸಿದವು. ಅದೇ ಸಮಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ತೀವ್ರವಾಗಿ ಟೀಕೆ ಮಾಡಿದರು.
ಸರ್ಕಾರದ ಪೋಲಿಸ್ ನೀತಿ ಹಿಂದಿನ ನೀತಿಗಿಂತ ಎರಡು ಪ್ರಧಾನ ಹೊಸ ತಿದ್ದುಪಡಿಗಳನ್ನು ಮಾಡಿತ್ತು. ಮೊದಲನೆಯದು, ಅದು ಮೂರನೇ-ದರ್ಜೆಯ ವಿಚಾರಣಾ ವಿಧಾನಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿತ್ತು ಮತ್ತು ದಸ್ತಗಿರಿಯಾದ ಜನರನ್ನು ಹಿಂಸಿಸಬಾರದು ಎಂಬ ನಾಡಿನ ಕಾನೂನಿನ ಅನುಸಾರ ವಿಚಾರಣೆಗಳನ್ನು ನಡೆಸಬೇಕೆಂದು ಒತ್ತಾಯಿಸಿತು. ಎರಡನೆಯದು, ಸಾಮೂಹಿಕ ಹೋರಾಟಗಳು ಮತ್ತು ಅದಕ್ಕೆ ನಾಯಕತ್ವ ನೀಡುವ ಸಂಘಟನೆಗಳಿಗೆ ಸಂಬಂಧಪಟ್ಟಂತೆ, ಜಮೀನುದಾರರಾಗಲೀ ಮತ್ತು ಬಂಡವಾಳಿಗರಾಗಲೀ ಮುಷ್ಕರ ಹಾಗೂ ರೈತರ ಮತ್ತಿತರ ಜನವಿಭಾಗಗಳ ಹೋರಾಟಗಳನ್ನು ದಮನ ಮಾಡಲು ಪೋಲಿಸರನ್ನು ಬಳಸಲು ಅವಕಾಶ ನೀಡಬಾರದೆಂಬುದು ಹೊಸ ನೀತಿಯ ಪ್ರಮುಖ ಅಂಶ. ಮಾಲೀಕರು ಮತ್ತು ನೌಕರರ ನಡುವಿನ ವಿವಾದಗಳನ್ನು ಕಾರ್ಮಿಕ ಇಲಾಖೆಯನ್ನು ಬಳಸಿ ಸಂಧಾನಗಳ ಮೂಲಕ ಪರಿಹರಿಸಲಾಗುವುದು ಎನ್ನಲಾಯಿತು.
ಭಾರತದ ಆಳುವ ಪಕ್ಷವಾದಂದಿನಿಂದಲೂ ಕಾಂಗ್ರೆಸ್ ಸರ್ಕಾರವು ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದ ವಿಚಾರಣೆಯಿಲ್ಲದೇ ಬಂಧಿಸುವ ಅಸ್ತ್ರವನ್ನು ಮತ್ತು ಜನ ಚಳುವಳಿಯಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ಬಳಸುವ ಅವಕಾಶವನ್ನು ತೆಗೆದುಹಾಕಲಾಯಿತು. ಉದ್ಯೋಗಕ್ಕೆ ಅರ್ಜಿ ಸಲ್ಲಿಸಿರುವ ಅರ್ಹತೆ ಪಡೆದಿರುವ ಅಭ್ಯರ್ಥಿಯ ನಡತೆ ನಡವಳಿಕೆಗಳನ್ನು ಪೋಲಿಸರು ಪರಿಶೀಲಿಸಬೇಕೆಂಬ ಕೇಂದ್ರ ಸರ್ಕಾರದ ಶಾಸನವನ್ನು ಬಳಸಬಾರದೆಂದು ಕೂಡ ಸರ್ಕಾರವು ಘೋಷಿಸಿತು.
ಕಮ್ಯುನಿಸ್ಟ್ ಸರ್ಕಾರವು ಬದಲಾಯಿಸಲು ಶ್ರಮಿಸಿದ ಮತ್ತೊಂದು ವಲಯವೆಂದರೆ ರಾಜ್ಯ ಮಟ್ಟದಿಂದ ಅತ್ಯಂತ ಕೆಳಗಿನ ಮಟ್ಟದವರೆಗೂ, ಅಂದರೆ ಪಂಚಾಯತ್ ಮಟ್ಟದವರೆಗೂ ಅಧಿಕಾರವನ್ನು ವಿಕೇಂದ್ರೀಕರಣ ಮಾಡಿರುವುದು. ಬಹು ಮುಖ್ಯ ಅಂಶವಾದ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣವನ್ನು ಒಳಗೊಂಡಿರುವ ಆಡಳಿತಾತ್ಮಕ ಸುಧಾರಣೆಯ ಇಡೀ ಸಮಸ್ಯೆಯನ್ನು ಪರಿಶೀಲಿಸಲು ಒಂದು ಸಮಿತಿಯನ್ನು ಸರ್ಕಾರವು ನೇಮಿಸಿತು. ಅದು ಒಂದು ವರ್ಷಕ್ಕೂ ಹೆಚ್ಚಿನ ಕಾಲ ಕಾರ್ಯ ನಿರ್ವಹಿಸಿ ಒಂದು ವರದಿಯನ್ನು ಸಲ್ಲಿಸಿತು. ಅದರ ಶಿಫಾರಸಿಗೆ ಅನುಗುಣವಾಗಿ, ವಿಧಾನಸಭೆಯಲ್ಲಿ ಮಂಡಿಸಲು ಸರ್ಕಾರವು ಎರಡು ಮಸೂದೆಗಳನ್ನು ಸಿದ್ಧಪಡಿಸಿತು. ಮೊದಲನೆಯದು, ಗ್ರಾಮ ಮಟ್ಟದಲ್ಲಿ ಕಂದಾಯ ಮತ್ತು ಇತರ ಇಲಾಖೆಗಳು ನಿರ್ವಹಿಸುತ್ತಿದ್ದ ಕೆಲಸಗಳನ್ನು ಚುನಾಯಿತ ಪಂಚಾಯತುಗಳಿಗೆ ವಹಿಸಿಕೊಟ್ಟಿತು. ಎರಡನೆಯದು, ಜಿಲ್ಲಾ ಸಿಬ್ಬಂದಿಗಳು ಮಾಡುತ್ತಿದ್ದ ಕೆಲಸಗಳನ್ನು ಚುನಾಯಿತ ಜಿಲ್ಲಾ ಪರಿಷತ್ತಿಗೆ, ಒಬ್ಬ ಚುನಾಯಿತ ಅಧ್ಯಕ್ಷ ಹಾಗೂ ಮತ್ತೊಬ್ಬ ಜಿಲ್ಲಾಧಿಕಾರಿಯ ಸ್ಥಾನಮಾನದ ಒಬ್ಬ ಶಾಶ್ವತ ಅಧಿಕಾರಿಗೆ ವರ್ಗಾವಣೆ ಮಾಡಿತು.
ಕೇರಳ ಸರ್ಕಾರವು ಪೂರ್ಣ ಐದು ವರ್ಷಗಳ ಕಾಲ ಮುಂದುವರಿದಿದ್ದರೆ, ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯು ಆ ರಾಜ್ಯದಲ್ಲಿ ಗಟ್ಟಿಯಾಗಿ ಬೇರೂರಿರುತ್ತಿತ್ತು.
ಅತ್ಯಂತ ತೀವ್ರವಾದ ವಿವಾದವನ್ನು ಹುಟ್ಟಿಸಿದ ಕಮ್ಯುನಿಸ್ಟ್ ಸರ್ಕಾರದ ಕ್ರಮವೆಂದರೆ ಶಿಕ್ಷಣ ಮಸೂದೆ. ಬಂಡವಾಳಶಾಹಿ-ಭೂಮಾಲಕ ಆಳುವ ವರ್ಗಗಳ ಕೋಪಕ್ಕೆ ತುತ್ತಾಗಿದ್ದ ಕೃಷಿ ಸಂಬಂಧಗಳ ಮಸೂದೆ ಮತ್ತು ಪೋಲಿಸ್ ನೀತಿಗಳ ರೀತಿಯಲ್ಲಿ ಶಿಕ್ಷಣ ಮಸೂದೆಯೂ ಅದೇ ವರ್ಗದವರ, ಮುಖ್ಯವಾಗಿ ಕ್ರಿಶ್ಚಿಯನ್ ಸಮುದಾಯದಲ್ಲಿ ಆ ವರ್ಗಗಳಿಗೆ ಸೇರಿದವರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮಸೂದೆ ಶಿಕ್ಷಣ ಸಂಸ್ಥೆಗಳ ಮಾಲೀಕತ್ವ ಮತ್ತು ಆಡಳಿತಕ್ಕೆ ಸಂಬಂಧಿಸಿತ್ತು. ಇದರಲ್ಲಿ ಒಂದು ಸಮುದಾಯವಾಗಿ ಕ್ರಿಶ್ಚಿಯನ್ನರ ಭಾಗ ದೊಡ್ಡದಿತ್ತು. ಈ ಸಮುದಾಯದ ನಾಯಕತ್ವಕ್ಕೆ ತಮ್ಮ ಧರ್ಮವು ಅಪಾಯದಲ್ಲಿದೆ ಎಂಬ ಭಯವನ್ನು ಅವರ ಜನಸಮೂಹಗಳ ಮನದಲ್ಲಿ ಹುಟ್ಟಿಸಲು ಸಾಧ್ಯವಾಯಿತು.
ಶಿಕ್ಷಣ ಸಂಸ್ಥೆಗಳ ಮೇಲಿನ ಖಾಸಗಿ ಆಡಳಿತದ ವ್ಯವಸ್ಥೆಯನ್ನು ರದ್ದುಮಾಡುವ ಉದ್ದೇಶವೇನೂ ಆ ಮಸೂದೆಯಲ್ಲಿರಲಿಲ್ಲ, ಹೆಚ್ಚು ಮಿತವಾದ ಕ್ರಮವಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಶಿಕ್ಷಕರಿಗೆ ಸಂಬಳವನ್ನು ಯಾವುದೇ ಕಡಿತ ಮಾಡದೆ ಆಡಳಿತವು ನೇರವಾಗಿ ಸಂದಾಯ ಮಾಡಬೇಕೆನ್ನುವ ಪ್ರಾಥಮಿಕ ಉದ್ದೇಶವನ್ನು ಅದು ಹೊಂದಿತ್ತು; ಶಿಕ್ಷಕರನ್ನು ಕೆಲಸದಿಂದ ಅಮಾನತುಗೊಳಿಸುವ ಅಥವಾ ವಜಾಗೊಳಿಸುವ ಅಧಿಕಾರದಿಂದ ವ್ಯವಸ್ಥಾಪಕರನ್ನು ನಿರ್ಬಂಧಿಸುವುದು, ಶಿಕ್ಷಕರನ್ನು ನೇಮಿಸಿಕೊಳ್ಳುವ ವಿಧಾನವನ್ನು ನಿರ್ದೇಶಿಸುವುದು ಮುಂತಾದವುಗಳನ್ನು ಅದರಲ್ಲಿ ಅಳವಡಿಸಲಾಗಿತ್ತು. ಸರ್ಕಾರಿ ಸಂಸ್ಥೆಗಳಲ್ಲಿನ ಶಿಕ್ಷಕರಿಗೆ ಸಿಗುತ್ತಿದ್ದ ಸಂಬಳವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇರುವವರೂ ಪಡೆಯಬೇಕೆನ್ನುವುದು ಅದರ ಮೂಲ ಆಶಯವಾಗಿತ್ತು. ಬೇರೆ ಪದಗಳಲ್ಲಿ ಹೇಳಬೇಕೆಂದರೆ, ಶಿಕ್ಷಣ ಸಂಸ್ಥೆಗಳ ಮಾಲೀಕತ್ವ ಹಾಗೂ ನಿರ್ವಹಣೆಗಳ ಮೇಲಿನ ಖಾಸಗಿ ಆಡಳಿತ ವರ್ಗದವರ ಹಕ್ಕನ್ನು ಅದು ನಿಯಂತ್ರಿಸುವುದಾಗಿತ್ತು, ರದ್ದು ಮಾಡುವುದಾಗಿರಲಿಲ್ಲ.
ಶಿಕ್ಷಣ ಸಂಸ್ಥೆಗಳ ಮೇಲಿನ ಮಾಲೀಕತ್ವ ಮತ್ತು ವ್ಯವಸ್ಥಾಪಕರೆಂಬ ತಮ್ಮ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಈ ಮಸೂದೆಯನ್ನು ಬಿಂಬಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಎರಡು ಪ್ರಧಾನ ಕಾರ್ಪೊರೇಟ್ ಆಡಳಿತಗಳಾದ ಕ್ರಿಶ್ಚಿಯನ್ ಚರ್ಚುಗಳು ಮತ್ತು ನಾಯರ್ ಸರ್ವಿಸ್ ಸೊಸೈಟಿ ನೇತೃತ್ವದಲ್ಲಿ ಸುಳ್ಳುಗಳ ವ್ಯಾಪಕ ಪ್ರಚಾರವನ್ನು ಹರಿಬಿಡಲಾಯಿತು; ಆ ಮಸೂದೆಯು ತಮ್ಮ ಆಸ್ತಿ ಹಕ್ಕುಗಳ ಮೇಲಿನ ದಾಳಿ ಮತ್ತು ಅದು ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡುವ ಕ್ರಮವಾಗಿದೆ ಎಂಬ ದೊಡ್ಡ ಗುಲ್ಲೆಬ್ಬಿಸಿದವು.
ಕೃಷಿ ಸಂಬಂಧದ ಮಸೂದೆ ಮತ್ತು ಶಿಕ್ಷಣ ಮಸೂದೆಯ ವಿರೋಧಿಗಳು ಈ ಕಾಳಗವನ್ನು ಕೇಂದ್ರ ಸರ್ಕಾರಕ್ಕೆ ಕೊಂಡೊಯ್ದರು ಮತ್ತು ಆ ಮಸೂದೆಗಳಿಗೆ ಸಮ್ಮತಿ ನೀಡುವುದನ್ನು ತಡೆಹಿಡಿಯಬೇಕೆಂದು ಮನವಿ ಮಾಡಿದರು. ಕಮ್ಯುನಿಸ್ಟ್ ವಿರೋಧಿ ಧೋರಣೆಯ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅವರ ಮನವಿಗೆ ಮಣಿದು ಆ ಎರಡು ಮಸೂದೆಗಳನ್ನು ವಿಧಾನಸಭೆಗೆ ಹಿಂತಿರುಗಿಸಿತು.
ಕಾಂಗ್ರೆಸ್, ಮುಸ್ಲಿಂ ಲೀಗ್, ಪಿಎಸ್ಪಿ, ಕ್ಯಾಥೊಲಿಕ್ ಚರ್ಚ್ ಮತ್ತು ನಾಯರ್ ಸರ್ವಿಸ್ ಸೊಸೈಟಿಗಳ ಪ್ರತಿನಿಧಿಗಳನ್ನು ಒಳಗೊಂಡ ಒಂದು ಕಮ್ಯುನಿಸ್ಟ್-ವಿರೋಧಿ ರಂಗವನ್ನು ರಚಿಸಲಾಯಿತು. ಅವರು ವಿಮೋಚನಾ ಸಮರಂ ಶುರುಮಾಡಿದರು. ಹಿಂಸಾತ್ಮಕ ರೂಪಕ್ಕೆ ತಿರುಗಿದ ಈ ಚಳುವಳಿಯಿಂದಾಗಿ ಸರ್ಕಾರಿ ಕಛೇರಿಗಳು ಮತ್ತು ಪೋಲಿಸ್ ಠಾಣೆಗಳ ಮೇಲೆ ದಾಳಿಗಳು ನಡೆದವು. ಸರ್ಕಾರದ ಕಾರ್ಯ ನಿರ್ವಹಣೆಯನ್ನು ನಿಶ್ಯಕ್ತಗೊಳಿಸುವುದು ಅದರ ಒಟ್ಟು ಉದ್ದೇಶವಾಗಿತ್ತು ಮತ್ತು ಆ ನೆಪ ಮಾಡಿ ಕೇಂದ್ರ ಸರ್ಕಾರದ ಮಧ್ಯಪ್ರವೇಶವನ್ನು ಅದು ಬಯಸಿತ್ತು. ಅಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಇಂದಿರಾ ಗಾಂಧಿಯವರ ಒತ್ತಡಕ್ಕೆ ಮಣಿದು ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನದ ೩೫೬ನೇ ವಿಧಿಯನ್ನು ಬಳಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಿತು. ಕಮ್ಯುನಿಸ್ಟ್ ಸರ್ಕಾರವನ್ನು ಉರುಳಿಸುವ ಸಲುವಾಗಿ ಚಳುವಳಿ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಅಮೆರಿಕದ ಬೇಹುಗಾರ ಸಂಸ್ಥೆ ಸಿಐಎ ಹಣ ಪೂರೈಕೆ ಮಾಡಿತ್ತು ಎನ್ನುವುದು, ಆ ನಂತರದಲ್ಲಿ ತಿಳಿದು ಬಂದ ಸಂಗತಿಯಾಗಿತ್ತು, ಅದನ್ನು ಭಾರತದಲ್ಲಿನ ಅಂದಿನ ಅಮೆರಿಕಾ ರಾಯಭಾರಿ ಎಲ್ಸ್ವರ್ತ್ ಬಂಕರ್ ಒಪ್ಪಿಕೊಂಡಿದ್ದರು.
ಶತ-ಶತಮಾನಗಳ ಕಾಲ ಜಾತಿಯಾಧಾರದಲ್ಲಿ ದಮನಕ್ಕೊಳಗಾಗಿದ್ದ ದಲಿತರು ಮತ್ತು ಇತರ ಹಿಂದುಳಿದ ವರ್ಗಗಳ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಕೇರಳದ ಕಮ್ಯುನಿಸ್ಟ್ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿತು. ಶಿಕ್ಷಣ ಸಂಸ್ಥೆಗಳಲ್ಲಿ, ಸರ್ಕಾರಿ ಸೇವೆಗಳಿಗೆ ಪ್ರವೇಶ ಪಡೆಯುವಾಗ ಮೀಸಲಾತಿಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು ಮತ್ತು ಹಿಂದುಳಿದ ವರ್ಗಗಳ ಸದಸ್ಯರಿಗೆ ಇನ್ನಿತರ ರೀತಿಯಲ್ಲಿ ಸಹಾಯ ಆಗಬಹುದಾದಂಥವುಗಳನ್ನು ಕೂಡ ಯೋಜಿಸಲಾಯಿತು. ಮುಂದುವರಿದ ಜಾತಿಗಳು ಎಂದು ಕರೆದುಕೊಳ್ಳುವ ಜಾತಿ ಹಾಗೂ ಕೋಮುವಾದಿ ಮುಖಂಡರು ಸಹಜವಾಗಿಯೇ ಇದನ್ನು ಕಮ್ಯುನಿಸ್ಟ್ ಪಕ್ಷ ಹಾಗೂ ಸರ್ಕಾರದ ವಿರುದ್ಧ ಆ ಜಾತಿಗಳ ಜನಸಮುದಾಯವನ್ನು ಎತ್ತಿಕಟ್ಟುವ ಅವಕಾಶವನ್ನಾಗಿ ಬಳಸಿಕೊಂಡರು.
ಕಮ್ಯುನಿಸ್ಟ್ ಸರ್ಕಾರದ ಮತ್ತೊಂದು ಆರಂಭಿಕ ಕೊಡುಗೆಯೆಂದರೆ ದೃಢವಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸ್ಥಾಪನೆ. ರಾಜ್ಯದೊಳಗಡೆ ಪಡೆದ ಮತ್ತು ಹೊರಗಡೆಯಿಂದ ಸಂಗ್ರಹಿಸಿದ ಅಕ್ಕಿಯನ್ನು ನ್ಯಾಯಯುತವಾಗಿ ವಿತರಿಸುವುದನ್ನು ಖಾತ್ರಿಪಡಿಸಲು ಪ್ರಬಲವಾದ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ನ್ಯಾಯಬೆಲೆ ಅಂಗಡಿಗಳನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಯಿತು, ಮುಂಚೆ ಇದ್ದ ೧೦೦೦ ಅಂಗಡಿಗಳನ್ನು ೬೦೦೦ ಕ್ಕೆ ಹೆಚ್ಚಿಸಲಾಯಿತು.
ಜನರಿಗೆ ಅಕ್ಕಿ ಮತ್ತಿತರ ಅಗತ್ಯ ವಸ್ತುಗಳನ್ನು ನ್ಯಾಯಯುತವಾಗಿ ಪೂರೈಸುವುದನ್ನು ಖಾತ್ರಿಪಡಿಸುವ ಸಲುವಾಗಿ ಜನರ ಆಹಾರ ಸಮಿತಿಗಳನ್ನು ರಚಿಸಲು ಸರ್ಕಾರವು ಮುತುವರ್ಜಿ ವಹಿಸಿತು. ಈ ಸಮಿತಿಗಳು ಎಲ್ಲಾ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡು, ಯಾವ್ಯಾವ ಪ್ರದೇಶಗಳಲ್ಲಿ ಎಷ್ಟು ನ್ಯಾಯ ಬೆಲೆ ಅಂಗಡಿಗಳ ಅಗತ್ಯವಿದೆ, ಯಾವ ಸ್ಥಳದಲ್ಲಿ ಅದನ್ನು ಸ್ಥಾಪಿಸಬೇಕು ಮತ್ತು ಅವುಗಳನ್ನು ನಡೆಸುವವರು ಯಾರು ಮುಂತಾದವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಬೇಕಾಗಿತ್ತು. ಕಡಿಮೆ ಆದಾಯದ ಕುಟುಂಬಗಳನ್ನು ಗುರುತಿಸಿ ಅವರಿಗೆ ಪೂರೈಕೆ ಮಾಡುವುದು ಮತ್ತು ಅವರಿಗೆ ಗುರುತಿನ ಚೀಟಿಯನ್ನು ನೀಡುವುದು ಹಾಗೂ ಭ್ರಷ್ಟಾಚಾರವನ್ನು ನಿಲ್ಲಿಸುವ ಕೆಲಸವನ್ನು ಈ ಸಮಿತಿಗಳಿಗೆ ವಹಿಸಲಾಯಿತು. ಈ ಸಮಿತಿಗಳನ್ನು ಪಂಚಾಯತ್, ತಾಲೂಕು ಹಾಗೂ ಸ್ಥಳೀಯ ಮಟ್ಟದಲ್ಲಿ ರಚಿಸಲಾಯಿತು. ರಾಜ್ಯ ಮಟ್ಟದಲ್ಲಿ ಎಲ್ಲಾ ಪಕ್ಷಗಳ ಒಂದು ರಾಜ್ಯ ಆಹಾರ ಸಲಹಾ ಸಮಿತಿ ರಚಿಸಲಾಯಿತು. ಈ ಇಡೀ ವ್ಯವಸ್ಥೆಯನ್ನು ನಡೆಸುವಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಗುರುತಿಸಲು ಹಾಗೂ ಅವುಗಳನ್ನು ಪರಿಹರಿಸಲು ಸಲಹೆ ನೀಡುವ ಕಾರ್ಯಭಾರವನ್ನು ರಾಜ್ಯ ಮಟ್ಟದ ಸಮಿತಿಗೆ ವಹಿಸಲಾಯಿತು.
೧೯೫೭ರಲ್ಲಿ ದೊರೆತ ವಿಜಯವು ಕಮ್ಯುನಿಸ್ಟರಿಗೆ ಕೇರಳದಲ್ಲಿ ಒಂದು ಅವಕಾಶ ಒದಗಿಸಿತು, ಹಿಂದೆಂದೂ ಅಂತಹ ಅವಕಾಶಗಳು ಸಿಕ್ಕ ಉದಾಹರಣೆಗಳು ಇಲ್ಲ. ಸಂವಿಧಾನದ ಮಿತಿಗಳ ನಿರ್ಬಂಧಗಳಿಂದಾಗಿ, ಇಂತಹ ಸಂವಿಧಾನದ ಪರಿಮಿತಿಯಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ತನ್ನ ಅಸಹಾಯಕತೆಯನ್ನು ಕಮ್ಯುನಿಸ್ಟ್ ಪಕ್ಷವು ವ್ಯಕ್ತಪಡಿಸಲಿಲ್ಲ, ಅಥವಾ ಸಂವಿಧಾನದ ಮೂಲಕವೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹುಡುಕಲು ಸಾಧ್ಯ ಎಂಬ ತಪ್ಪು ಕಲ್ಪನೆಯನ್ನೂ ಇಟ್ಟುಕೊಂಡಿರಲಿಲ್ಲ. ಅದರ ಬದಲು, ಸಂವಿಧಾನಿಕ ಸಾಧನಗಳಿಂದ ಎಲ್ಲಿ ಸಾಧ್ಯವೋ ಅದನ್ನು ಬಳಸಿ ಆ ಮೂಲಕ ಜನರ ಬದುಕನ್ನು ಉತ್ತಮಪಡಿಸಲು ಅದು ಕೆಲಸ ಮಾಡಿತು ಮತ್ತು ಜನರ ಹೋರಾಟಗಳೊಂದಿಗೆ ಗಟ್ಟಿಯಾಗಿ ನಿಂತಿತು.
ಕಮ್ಯುನಿಸ್ಟರ ಮುನ್ನಡೆಯನ್ನು ತಡೆಯಲು ಅಸಮರ್ಥವಾದ ಕೇಂದ್ರ ಸರ್ಕಾರವು ೩೫೬ನೇ ವಿಧಿ ಬಳಸಿತು ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ೧೯೫೯ರಲ್ಲಿ ವಜಾ ಮಾಡಿತು. ಅದು ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ಕರಾಳ ದಿನವಾಗಿತ್ತು. ಕೇರಳ ಸರ್ಕಾರವನ್ನು ವಜಾ ಮಾಡಿದ್ದರ ವಿರುದ್ಧ ಆಗಸ್ಟ್ ೩ ರಂದು ದೇಶಾದ್ಯಂತ ಪಕ್ಷವು ಪ್ರತಿಭಟನೆಗಳನ್ನು ಸಂಘಟಿಸಿತು. ಅಂದು, ದೆಹಲಿಯ ಸಂಸತ್ ಭವನದ ಎದುರು ೩೦,೦೦೦ ಜನ ಮೆರವಣಿಗೆ ನಡೆಸಿದರು.
ಕನ್ನಡಕ್ಕೆ: ಟಿ. ಸುರೇಂದ್ರ ರಾವ್