ನಿರುದ್ಯೋಗದ ನಡುವೆ ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಎಂಬ ಗಿಮಿಕ್

ಅರ್ಥವ್ಯವಸ್ಥೆ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಕುಸಿಯುತ್ತಿರುವಾಗ, ಉದ್ಯೋಗ ನಿರ್ಮಾಣದ ಬದಲು ಉದ್ಯೋಗ ನಷ್ಟಗಳೇ ಏರುತ್ತಿರುವಾಗ ಈ ಪರಿಸ್ಥಿತಿಯನ್ನು ಎದುರಿಸಲು, ಅಂದರೆ ಉದ್ಯೋಗ ರಕ್ಷಣೆ ಮತ್ತು ನಿರ್ಮಾಣಕ್ಕೆ ಕ್ರಮಗಳನ್ನು ಯೋಚಿಸುವ ಬದಲು ಮೋದಿ ಸರಕಾರ ರಾಷ್ಟ್ರೀಯ ನೇಮಕಾತಿ ಆಯೋಗ (ನ್ಯಾಷನಲ್ ರಿಕ್ರೂಟ್‌ಮೆಂಟ್ ಏಜೆನ್ಸಿ-ಎನ್‌ಆರ್‌ಎ) ಎಂಬ ಹೊಸದೊಂದು ಸಂಸ್ಥೆಯನ್ನು ರಚಿಸಲಾಗುವುದು ಎಂದು ಪ್ರಕಟಿಸಿದೆ.

ಆದರೆ ಭಾರೀ ಉದ್ಯೋಗ ನಷ್ಟಗಳ ನಡುವೆ ಇದೊಂದು ಕೇವಲ ಗಿಮಿಕ್ ಎಂದು ಸಿಪಿಐ(ಎಂ) ಹೇಳಿದೆ. ಏಕೆಂದರೆ ಈ ವರ್ಷದ ಎಪ್ರಿಲ್‌ನಿಂದ ಜುಲೈ ಹೊತ್ತಿಗೆ ಉದ್ಯೋಗ ನಷ್ಟದ ಮೊತ್ತ ೧.೮೯ ಕೋಟಿ ತಲುಪಿದೆ ಎಂದು ಸಿಎಂಐಇ ವರದಿ ಹೇಳಿದೆ.

ಇದು ಕೇವಲ ಸಂಬಳದಾರ ಉದ್ಯೋಗಗಳ ಸಂಖ್ಯೆ. ವಾಸ್ತವವಾಗಿ ಇವು ಆರ್ಥಿಕ ಆಘಾತಗಳಿಗೆ ಅಷ್ಟೊಂದು ಪಕ್ಕಾಗುವುದಿಲ್ಲ. ಆದರೆ ಈ ವಲಯದ ಪರಿಸ್ಥಿತಿಯೇ ಹೀಗಾದರೆ ಇನ್ನು ಅನೌಪಚಾರಿಕ ಉದ್ಯೋಗ ವಲಯದ ಪಾಡೇನು ಎಂದು ಪರಿಣಿತರು ಆತಂಕ ಪಡುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಅರ್ಥವ್ಯವಸ್ಥೆಯ ಪುನರುಜ್ಜೀವನದ ಕ್ರಮಗಳ ಬದಲು ಸರಕಾರ ತನ್ನ ಎಂದಿನ ಆಟಕ್ಕೆ ಇಳಿದಂತೆ ಕಾಣುತ್ತದೆ. ಅಂದರೆ ಜನಗಳ ಗಮನವನ್ನು ನಿಜ ಸಮಸ್ಯೆಯಿಂದ ಬೇರೆಡೆಗೆ ತಿರುಗಿಸುವುದು. ಈ ಎನ್‌ ಆರ್‌ಎ  ಅಂತಹುದೇ ಒಂದು ಕ್ರಮ. ಕೇಂದ್ರ ಸರಕಾರದ ಇಲಾಖೆಗಳಲ್ಲಿ ನಾನ್‌ ಗೆಜೆಟೆಡ್ ಹುದ್ದೆಗಳಿಗೆ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಮತ್ತು ರೈಲ್ವೆ ಇಲಾಖೆಯಲ್ಲಿ  ನೇಮಕಾತಿಯನ್ನು ನೇರ್ಪುಗೊಳಿಸುವ ಹೆಸರಿನಲ್ಲಿ ಈ ಎನ್‌ಆರ್‌ ಎ ಯನ್ನು ರಚಿಸಲಾಗಿದೆ. ಇದು ಕೇಂದ್ರ ಸರಕಾರದ ಸಿಬ್ಬಂದಿ ಆಯ್ಕೆ ಆಯೋಗ(ಎಸ್‌ಎಸ್‌ಎ), ಬ್ಯಾಂಕ್ ನೇಮಕಾತಿಯ ಐಬಿಪಿಎಸ್ ಮತ್ತು ರೈಲ್ವೆ ನೇಮಕಾತಿ ಮಂಡಳಿ(ಆರ್‌ಆರ್‌ಬಿ)ಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯನ್ನು ನಡೆಸುತ್ತದೆಯಂತೆ. ಇದುವರೆಗೆ ಕೇಂದ್ರ ಸರಕಾರದ ಇಲಾಖೆಗಳು, ರೈಲ್ವೆ ಮತ್ತು ಬ್ಯಾಂಕುಗಳಲ್ಲಿ ನೋಟಿಫೈ ಆಗಿರುವ ಹುದ್ದೆಗಳು ಮತ್ತು ಬಾಕಿ ಹುದ್ದೆಗಳ ಮಾಹಿತಿ ಪ್ರತ್ಯೇಕವಾಗಿ ಸಾರ್ವಜನಿಕವಾಗಿ ಲಭ್ಯವಾಗಿರುತ್ತಿತ್ತು. ಆದರೆ ಈ ಎನ್‌ಆರ್‌ಎ ನಂತರ ಇಂತಹ ಮಾಹಿತಿಗಳು ಸಿಗುವುದಿಲ್ಲ.

ಇದರಿಂದ, ವಿಶೇಷವಾಗಿ ಅನಾನುಕೂಲಕರ ಪರಿಸ್ಥಿತಿಗಳಲ್ಲಿರುವ ವಿಭಾಗಗಳಿಗೆ ಸುಗಮ ಆಯ್ಕೆ, ಸುಗಮ  ನೇಮಕ, ಮತ್ತು ಸುಗಮ ಬದುಕಿಗೆ ಅವಕಾಶವಾಗುತ್ತದೆ ಎಂದು ಈ ಕುರಿತು ಬಹಳಷ್ಟು ಪ್ರಚಾರ ನಡೆಸಲಾಗುತ್ತಿದೆ. ಆದರೆ ಇದು ನಿರುದ್ಯೋಗದ ಕೇಂದ್ರ  ಸಮಸ್ಯೆಯನ್ನು, ಅಂದರೆ ಉದ್ಯೋಗ ನಿರ್ಮಾಣದ ಕೇಂದ್ರ ಪ್ರಶ್ನೆಯನ್ನು  ಕೈಗೆತ್ತಿಕೊಳ್ಳುವುದಿಲ್ಲ. ಅದರಲ್ಲಿ ತನ್ನ ವಿಫಲತೆಯನ್ನು ಮುಚ್ಚಿಕೊಳ್ಳಲು ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ ಎಂಬುದು ಸ್ವಯಂವೇದ್ಯ.

ಫೆಬ್ರುವರಿ ೨೦೧೯ರಲ್ಲಿ ರೈಲ್ವೆ ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿತು. ಸುಮಾರು ಒಂದು ಕೋಟಿ ಅರ್ಜಿಗಳು ಬಂದವು. ಆದರೆ ನಂತರ ಒಂದೂವರೆ ವರ್ಷವಾದರೂ ಏನೂ ಸುದ್ದಿಯಿಲ್ಲ. ಈ ನಡುವೆ ರೈಲ್ವೆ ಖಾಸಗೀಕರಣದಿಂದಾಗಿ ರೈಲ್ವೆ ಇಲಾಖೆ ತನ್ನ ಹುದ್ದೆಗಳಲ್ಲಿ ೫೦ ಶೇಕಡಾ ಹುದ್ದೆಗಳಿಗೆ ನೇಮಕಾತಿ ಮಾಡುವುದಿಲ್ಲ ಎಂದು ಪ್ರಕಟಿಸಿದೆ. ಸರಕಾರದ ಎನ್‌ಆರ್‌ಎ ಬಡಾಯಿಯ  ನಿಜ ಹೂರಣವನ್ನು ಇದು ತೋರಿಸುತ್ತದೆ.

ಎನ್‌ಆರ್‌ಎ ರಚಿಸುವ ಪ್ರಸ್ತಾವ ಬಜೆಟ್‌ನಲ್ಲಿ ಪ್ರಕಟಿಸಲಾಗಿದ್ದರೂ, ಈಗ, ಅಂದರೆ ೧.೮೯ ಕೋಟಿ ಉದ್ಯೋಗ ನಷ್ಟಗಳಾಗಿವೆ ಎಂಬ ಸುದ್ದಿಯ ಸಂದರ್ಭದಲ್ಲಿ ಅದರ ರಚನೆಯ ಅಧಿಸೂಚನೆ ಹೊರಡಿಸಿರುವುದು ಉದ್ಯೋಗ ಒದಗಿಸುವಲ್ಲಿ ತನ್ನ ಸಂಪೂರ್ಣ ವಿಫಲತೆಯನ್ನು ಮರೆಮಾಚಲು ನಡೆಸಿರುವ ಪ್ರಯತ್ನ ಎಂಬುದು ಸ್ಪಷ್ಟ.

ಈಗ ನಿರುದ್ಯೋಗಿ ಯುವಜನರು ಉದ್ಯೋಗ ಕೇಳುತ್ತಿದ್ದಾರೆ, ‘ಸುಗಮ ನೇಮಕಾತಿ ಪರೀಕ್ಷೆಗಳನ್ನು’ ಅಲ್ಲ.

ಅಲ್ಲದೆ ಭಿನ್ನ ಸ್ವರೂಪಗಳ ಈ ಮೂರು ರೀತಿಯ ಉದ್ಯೋಗಗಳಿಗೆ ನೇಮಕಾತಿಯನ್ನು ಒಂದು ಸಾಮಾನ್ಯ ಪರೀಕ್ಷೆಯಿಂದ ನಿಭಾಸುವುದು ಹೇಗೆ ಎಂಬುದೂ ತರ್ಕಕ್ಕೆ ಮೀರಿದ ಸಂಗತಿ.

ವಾಸ್ತವವಾಗಿ ಇದೊಂದು ಅರ್ಥಹೀನ, ಅಪ್ರಾಮಾಣಿಕ ಕಸರತ್ತು ಅಷ್ಟೇ.

Leave a Reply

Your email address will not be published. Required fields are marked *