ಆರೋಗ್ಯ ದತ್ತಾಂಶಗಳನ್ನು ಕುರಿತ ಹೆಚ್.ಡಿ.ಎಂ.ಪಿ. ಮತ್ತು ಎನ್‍.ಡಿ.ಹೆಚ್.ಎಂ. ಮುಂದೂಡಬೇಕು ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಅಂತಿಮಗೊಳಿಸಬಾರದು: ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ

ಕೇಂದ್ರ ಸರಕಾರ ‘ಆರೋಗ್ಯ ದತ್ತಾಂಶ ನಿರ್ವಹಣಾ ನೀತಿ’(ಹೆಚ್.ಡಿ.ಎಂ.ಪಿ) ಮತ್ತು  ಈ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳು ಪ್ರಕಟಿಸಿರುವ ‘ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್’(ಎನ್‍.ಡಿ.ಎಚ್‍.ಎಂ.)ನ್ನು ಬೇಗನೇ ಅಂತಿಮಗೊಳಿಸಬೇಕೆಂದಿದೆ. ಆದರೆ ‘ವೈಯಕ್ತಿ ದತ್ತಾಂಶ ರಕ್ಷಣಾ’ (ಪಿಡಿಪಿ) ಮಸೂದೆ 2019 ಇನ್ನೂ ಸಂಸತ್ತಿನ ಮುಂದೆ ಚರ್ಚೆಯಲ್ಲಿರುವಾಗ  ಇದನ್ನು ಇತ್ಯರ್ಥಗೊಳಿಸದೆ ಇವೆರಡನ್ನು ಅಂತಿಮಗೊಳಿಸಬಾರದು ಎಂದು ಆಗ್ರಹಿಸಿ ಆಗಸ್ಟ್ 31ರಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅದರ ಪೂರ್ಣ ಪಾಟ ಈ ಮುಂದಿದೆ:

ಪ್ರಿಯ ಪ್ರಧಾನ ಮಂತ್ರಿಗಳೇ,

ನಾನು, ‘ಆರೋಗ್ಯ ದತ್ತಾಂಶ ನಿರ್ವಹಣಾ ನೀತಿ’(ಹೆಚ್.ಡಿ.ಎಂ.ಪಿ) ಮತ್ತು ‘ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್’(ಎನ್‍.ಡಿ.ಎಚ್‍.ಎಂ.) ಮೇಲೆ ಸೆಪ್ಟಂಬರ್ 3 , 2020ರೊಳಗೆ ಟಿಪ್ಪಣಿಗಳನ್ನು ಕೋರಿರುವ ನಿಮ್ಮ ಸರಕಾರದ ಪ್ರಕಟಣೆಯ ಬಗ್ಗೆ ನಿಮಗೆ ಬರೆಯುತ್ತಿದ್ದೇನೆ. ಇದನ್ನು ಮುಂದೂಡಬೇಕಾಗಿದೆ, ಈ ಕರಡಿನಲ್ಲಿರುವ ಗಂಭೀರ ಪರಿಣಾಮಗಳ ಬಗ್ಗೆ ಒಂದು ಸಂರಚಿತ ಚರ್ಚೆ ನಡೆಯುವ ಮೊದಲು ಯಾವುದೇ ನೀತಿಯನ್ನು ಅಂತಿಮಗೊಳಿಸಲಾಗದು.

ಹೆಚ್.ಡಿ.ಎಂ.ಪಿ, ನೀವು ಸ್ವಾತಂತ್ರ್ಯ ದಿನ 2020ರಂದು ಪ್ರಕಟಿಸಿರುವ ‘ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್’(ಎನ್‍.ಡಿ.ಎಚ್‍.ಎಂ.)ನ ಭಾಗವಾಗಿದೆಯಾದ್ದರಿಂದ ಇಂತಹ ಒಂದು ಚರ್ಚೆ ಅನಿವಾರ್ಯವಾಗಿದೆ. ವಿಚಿತ್ರವೆಂದರೆ, ಸರಕಾರ ಪ್ರತ್ಯೇಕವಾಗಿ ಹೆಚ್.ಡಿ.ಎಂ.ಪಿ ಬಗ್ಗೆ ಮಾತ್ರ ಟಿಪ್ಪಣಿಗಳನ್ನು ಕೇಳಿದೆ, ಇಡಿಯಾಗಿ ಎನ್‍.ಡಿ.ಎಚ್‍.ಎಂ. ಬಗ್ಗೆ ಕೇಳಿಲ್ಲ.

ಎನ್‍.ಡಿ.ಎಚ್‍.ಎಂ. ಎಲ್ಲ ನಾಗರಿಕರ ಸೂಕ್ಷ್ಮ ವೈಯಕ್ತಿಕ ದತ್ತಾಂಶಗಳನ್ನು ಸಂಗ್ರಹಿಸುವ ಪ್ರಸ್ತಾವವನ್ನು ಇಟ್ಟಿದೆ. ನಂತರ ಇದನ್ನು ಖಾಸಗಿ ವಿಮಾ ಕಾರ್ಪೊರೇಟ್‍ಗಳಿಗೆ ಮತ್ತು ಔಷಧಿ ಕಂಪನಿಗಳಿಗೆ ಲಭ್ಯಗೊಳಿಸಲಾಗುತ್ತದೆ. ಇದು ವೈಯಕ್ತಿಕ ದತ್ತಾಂಶದ ರಕ್ಷಣೆಯ ಒಂದು ಗಂಭೀರ ಉಲ್ಲಂಘನೆಯಾಗುತ್ತದೆ.

ದೇಶದಲ್ಲಿ ಮತ್ತು ಸಂಸತ್ತಿನಲ್ಲಿ ಸಾಕಷ್ಟು ಚರ್ಚೆಗಳ ನಂತರ, ‘ವೈಯಕ್ತಿ ದತ್ತಾಂಶ ರಕ್ಷಣಾ’ (ಪಿಡಿಪಿ) ಮಸೂದೆ 2019 ನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಅದಿನ್ನೂ ಇತ್ಯರ್ಥಗೊಂಡಿಲ್ಲ. ಈ ಪ್ರಸ್ತಾವಿತ ಹೆಚ್.ಡಿ.ಎಂ.ಪಿ. ಸಂಸತ್ತಿನ ಪರಿಶೀಲನೆಯಲ್ಲಿರುವ ಈ ಮಸೂದೆಯ ಬಗ್ಗೆ ಏನೂ ಹೇಳುವುದಿಲ್ಲ. ನಿಜಸಂಗತಿಯೆಂದರೆ, ಪ್ರಸ್ತಾವಿತ ಹೆಚ್.ಡಿ.ಎಂ.ಪಿ., ಸಂಸತ್ತಿನ ಮುಂದಿರುವ ಮಸೂದೆಯ ಸಾರವನ್ನು, ಅಂದರೆ ದತ್ತಾಂಶ ರಕ್ಷಣೆಯ ನಿರ್ವಹಣೆಯ ಕುರಿತಾದ ಪ್ರಶ್ನೆಯನ್ನು ಗಂಭೀರವಾಗಿ ದುರ್ಬಲಗೊಳಿಸುವ ಹಲವಾರು ಅಂಶಗಳನ್ನು ಹೊಂದಿದೆ.

ಇಂತಹ ಸನ್ನಿವೇಶಗಳಲ್ಲಿ, ಸಂಸತ್ತು ಪಿಡಿಪಿ ಮಸೂದೆ ಪರಿಶೀಲನೆಯನ್ನು ಮುಕ್ತಾಯಗೊಳಿಸುವ ವರೆಗೆ, ಹೆಚ್.ಡಿ.ಎಂ.ಪಿ. ಮತ್ತು ಎನ್‍.ಡಿ.ಹೆಚ್.ಎಂ. ಇವೆರಡನ್ನೂ ಅಂತಿಮಗೊಳಿಸುವುದನ್ನು ಕೇಂದ್ರ ಸರಕಾರ ಮುಂದೂಡಬೇಕು ಎಂದು ಆಗ್ರಹಿಸುತ್ತೇನೆ.

ಸಂಸತ್ತಿನ ಎರಡೂ ಸದನಗಳ ಸಭೆಗಳನ್ನು ಸೆಪ್ಟಂಬರ್‍ 14 ರಿಂದ ಕರೆಯಲಾಗಿದೆ. ಸಂಸತ್ತು ಪಿ.ಡಿ.ಪಿ. ಮಸೂದೆ 2019ನ್ನು ಪರಿಶೀಲಿಸುವಾಗ ಹೆಚ್.ಡಿ.ಎಂ.ಪಿ. ಮತ್ತು ಎನ್‍.ಡಿ.ಹೆಚ್.ಎಂ.ನ್ನು ಚರ್ಚಿಸಬೇಕು.

ಸಂಸತ್ತು ಮತ್ತು ಸ್ಥಾಯೀಸಮಿತಿ ಮುಂತಾದ ಅದರ ರಚನೆಗಳು ಈ ಪ್ರಸ್ತಾವಗಳನ್ನು ಆಳವಾಗಿ ಪರಿಶೀಲಿಸುವ ವರೆಗೆ ಯಾವುದೇ ಮಿಷನ್ನಿನ ಅನುಷ್ಠಾನವನ್ನು ಮಾಡಬಾರದು.

ಆದ್ದರಿಂದ, ಟಿಪ್ಪಣಿಗಳನ್ನು ಸಲ್ಲಿಸಲು ಅಂತಿಮ ದಿನಾಂಕ ಸೆಪ್ಟಂಬರ್ 3, 2020 ಎಂಬುದನ್ನು ಮುಂದಕ್ಕೆ ಹಾಕಬೇಕು ಎಂದು ನಾವು ತಮ್ಮನ್ನು ಆಗ್ರಹಿಸುತ್ತೇವೆ.

ತಮ್ಮ ವಿಶ್ವಾಸಿ

ಸೀತಾರಾಮ್‍ ಯೆಚುರಿ, ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *