ಕೊರೋನಾ ವೈರಸ್ ನೆಪವನ್ನು ಮುಂದಿಟ್ಟು ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ, ದಲಿತ ಅಲ್ಪಸಂಖ್ಯಾತ ಮಹಿಳಾ ವಿರೋಧಿ ನೀತಿಗಳನ್ನು ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಜಾರಿಗೆ ತರುತ್ತಿದ್ದು, ಅದರ ವಿರುದ್ಧ ಆಗಸ್ಟ್ ತಿಂಗಳ ಅಂತ್ಯದಲ್ಲಿ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ ನಡೆಸಲು ಸಿಪಿಐ(ಎಂ) ಕೇಂದ್ರ ಸಮಿತಿ ಕರೆ ಕೊಟ್ಟಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ ೨೩ ರಿಂದ ೨೯ರವರೆಗೆ ವ್ಯಾಪಕ ಪ್ರತಿಭಟನಾ ಪ್ರದರ್ಶನ ನಡೆಸಲು ಪಕ್ಷದ ಜಿಲ್ಲಾ ಸಮಿತಿ ಆಯೋಜಿಸಿದ ಮೇರೆಗೆ ಎಲ್ಲಾ ತಾಲೂಕುಗಳಲ್ಲೂ ಪ್ರತಿ ದಿನವೂ ಒಂದಲ್ಲ ಒಂದು ಕಡೆ ಪ್ರದರ್ಶನಗಳು ನಡೆದಿವೆ.
ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ಮತ್ತು ಉತ್ತರ ಸಮಿತಿಗಳು ಆಗಸ್ಟ್ ೨೩ ರಂದು ಕೊಂಚಾಡಿಯಲ್ಲಿ, ೨೪ರಂದು ಪಕ್ಕಲಡ್ಕ, ಉರ್ವಸ್ಟೋರ್ಗಳಲ್ಲಿ, ೨೭ ರಂದು ಸ್ಟೇಟ್ಬ್ಯಾಂಕ್ ಬಳಿ, ೨೮ ರಂದು ಪಂಜಿನಮೊಗರಿನಲ್ಲಿ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದೆ. ಅಲ್ಲದೆ ೨೯ ರಂದು ಲೇಡಿಗೋಷನ್ ಬಳಿ, ೩೦ ರಂದು ಶಕ್ತಿನಗರ, ಕುಲಶೇಖರ, ಜಪ್ಪಿನಮೊಗರು ಮತ್ತು ತಣ್ಣೀರುಬಾವಿಗಳಲ್ಲಿ ಪ್ರತಿಭಟನಾ ಪ್ರದರ್ಶನ ನಡೆದಿವೆ. ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಉತ್ತರ ಸಮಿತಿ ಕಾರ್ಯದರ್ಶಿ ದಯಾನಂದ ಶೆಟ್ಟಿ ತಮ್ಮ ವಲಯದ ವ್ಯಾಪ್ತಿಯಲ್ಲಿ ಮಂಗಳೂರು ನಗರದ ಪ್ರತಿಭಟನೆಗಳಿಗೆ ನೇತೃತ್ವ ನೀಡಿದ್ದರು.
ಉಳ್ಳಾಲ ವಲಯದಲ್ಲಿ ಆಗಸ್ಟ್ ೨೩ ರಂದು ಕುತ್ತಾರು ತೇವುಲದಲ್ಲಿ ಪ್ರಥಮ ಪ್ರತಿಭಟನಾ ಪ್ರದರ್ಶನ ನಡೆಯಿತು. ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ, ಜಯಂತ ನಾಯಕ್ ಹಾಗೂ ಉಳ್ಳಾಲ ವಲಯ ಸಮಿತಿ ಸದಸ್ಯರು ಪ್ರತಿಭಟನಾ ಪ್ರದರ್ಶನಗಳನ್ನು ಆಯೋಜಿಸಿದ್ದರು. ವಲಯದ ಪ್ರಮುಖ ಪೇಟೆಗಳಾದ ದೇರಳಕಟ್ಟೆ, ಮುಡಿಪು, ಕೋಟೆಕಾರ್-ಬೀರಿ ಹಾಗೂ ತೊಕ್ಕೊಟ್ಟಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿಗರು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಅಸೈಗೋಳಿ, ಪಿಲಾರು-ಲಕ್ಷ್ಮಿಗುಡ್ಡೆ, ಕುಂಪಲ, ಚೆಂಬುಗುಡ್ಡೆ, ಪಜೀರ್, ಕುತ್ತಾರ್ ಪದವು, ಪಜೀರು ಜಂಕ್ಷನ್, ಪಿಲಾರುಗಳಂಥ ಊರುಗಳಲ್ಲೂ ಪ್ರತಿಭಟನಾ ಪ್ರದರ್ಶನ ನಡೆಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ ಪಕ್ಷದ ಸದಸ್ಯತ್ವ ಕಡಿಮೆ ಇದ್ದರೂ ಅಲ್ಲಿನ ಅಕ್ಷರ ದಾಸೋಹ ನೌಕರರ ನೇತೃತ್ವದಲ್ಲಿ ಆಗಸ್ಟ್ ೨೪ ರಂದು ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಯಿತು. ಪಕ್ಷದ ದ.ಕ. ಜಿಲ್ಲಾ ಸಮಿತಿ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ರಾಮಣ್ಣ ವಿಟ್ಲ, ಶಿವಕುಮಾರ್ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗುರುಪುರ ವಲಯದಲ್ಲಿ ವಲಯ ಕಾರ್ಯದರ್ಶಿ ಸದಾಶಿವ ದಾಸ್ ಮತ್ತು ವಲಯ ಸಮಿತಿ ಸದಸ್ಯರು ಹಲವೆಡೆ ಪ್ರತಿಭಟನೆಗಳ ವ್ಯವಸ್ಥೆ ಮಾಡಿದ್ದರು. ಆಗಸ್ಟ್ ೨೪ ರಂದು ಗುರುಪುರ-ಕೈಕಂಭ ಪೇಟೆಯಲ್ಲಿ, ಬಳಿಕ ಕುಪ್ಪೆಪದವಿನಲ್ಲಿ, ಇರುವೈಲು, ಮಳಲಿ, ವಾಮಂಜೂರುಗಳಲ್ಲಿಯೂ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ.
ಬಂಟ್ಬಾಳ ತಾಲೂಕು ಸಮಿತಿಯ ವತಿಯಿಂದ ಆಗಸ್ಟ್ ೨೫ ರಂದು ಅಲ್ಲಿನ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಅಲ್ಲಿನ ತಾಲೂಕು ಸಮಿತಿ ಕಾರ್ಯದರ್ಶಿ ರಾಮಣ್ಣ ವಿಟ್ಲ, ಪಕ್ಷದ ಜಿಲ್ಲಾ ಸಮಿತಿ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ ಹಾಗೂ ಪಕ್ಷದ ತಾಲೂಕು ಸಮಿತಿ ಮುಖಂಡರು, ಯುವಜನ ರಂಗದ ಮುಖಂಡರು ಭಾಗವಹಿಸಿದ್ದರು.
ಮೂಡಬಿದ್ರಿ ತಾಲೂಕಿನಲ್ಲಿ ಆಗಸ್ಟ್ ೨೬ ರಂದು ಪ್ರತಿಭಟನಾ ಪ್ರದರ್ಶನಗಳು ಆರಂಭಗೊಂಡವು. ಪಕ್ಷದ ದ.ಕ. ಜಿಲ್ಲಾ ಸಮಿತಿ ಮುಖಂಡರಾದ ಯಾದವ ಶೆಟ್ಟಿ, ರಮಣಿ ಮೂಡಬಿದ್ರಿ ಹಾಗೂ ವಲಯ ಸದಸ್ಯರು ಪ್ರತಿಭಟನೆಗಳನ್ನು ಆಯೋಜಿಸಿರುತ್ತಾರೆ. ಮೂಡಬಿದ್ರಿ ತಾಲೂಕಿನ ವಿವಿಧೆಡೆ ಪ್ರತಿಭಟನೆಗಳ ವ್ಯವಸ್ಥೆ ಮಾಡಲಾಗಿದೆ. ಶಿರ್ತಾಡಿಯಲ್ಲಿ ಮತ್ತು ಬೆಳ್ವಾಯಲ್ಲಿ ಆಗಸ್ಟ್ ೨೬ ರಂದೇ ಪ್ರದರ್ಶನ ನಡೆಸಲಾಗಿದೆ. ೨೭ ರಂದು ಮೂಡಬಿದ್ರಿ ನಗರದಲ್ಲಿ ಪ್ರತಿಭಟನಾ ಪ್ರದರ್ಶನ ನಡೆದಿದೆ.