ಕೇಂದ್ರ ಸರಕಾರ ಎನ್ಡಿಟಿವಿ ಇಂಡಿಯಾ ವಾಹಿನಿ ಪಟಾಣಕೋಟ್ ಉಗ್ರಗಾಮಿ ದಾಳಿಯ ಸಂದರ್ಭದಲ್ಲಿ ದೇಶದ ಭದ್ರತೆಗೆ ಕುಂದು ತರುವ ಕಾರ್ಯಕ್ರಮ ಪ್ರಸಾರ ಮಾಡಿದೆ ಎಂದು ಆಪಾದಿಸಿ ಅದು ಒಂದು ದಿನ, ನವಂಬರ್ 9ರಂದು ಪ್ರಸಾರ ಮಾಡುವಂತಿಲ್ಲ ಎಂಬ ನಿಷೇಧ ಹಾಕಿತು. ಇದು ಮಾಧ್ಯಮ ಸ್ವಾತಂತ್ರ್ಯದ ನಗ್ನ ದಾಳಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಷೇಧಿಸುವ ಕ್ರಮ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ.
ಮೋದಿ ಸರಕಾರದ ಹೆಚ್ಚುತ್ತಿರುವ ಸರ್ವಾಧಿಕಾರಿ ಪ್ರವೃತ್ತಿಯನ್ನು ಇದು ಪ್ರದರ್ಶಿಸುತ್ತಿದೆ ಎಂದು ಅದು ಹೇಳಿದೆ. ಈ ನಿಷೇಧವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಮತ್ತು ಇನ್ನು ಮುಂದೆ ಇಂತಹ ಸ್ವೇಚ್ಛಾಚಾರದ ಕ್ರಮಗಳನ್ನು ಕೈಗೊಳ್ಳುವದಿಲ್ಲ ಎಂಬ ಭರವಸೆ ನೀಡಬೇಕು ಎಂದು ಆಗ್ರಹಿಸಿದೆ.
ಕೇಂದ್ರ ಸರಕಾರದ ಈಕ್ರಮಕ್ಕೆ ಎಲ್ಲಡೆಗಳಿಂದ ತೀವ್ರ ಪ್ರತಿಭಟನೆ ಬಂದಿದೆ. ಸಂಪಾದಕರುಗಳ ಸಂಘಟನೆ ಎಡಿಟರ್ಸ್ ಗಿಲ್ಡ್ ಇದು ಪತ್ರಿಕಾ ಸ್ವಾತಂತ್ರ್ಯದ ನೇರ ಉಲ್ಲಂಘನೆ ಎಂದು ಖಂಡಿಸುತ್ತ ಇದನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತು.
ಸರಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳು ಪ್ರಯತ್ನಿಸಿದರೂ, ವ್ಯಾಪಕ ಪ್ರತಿಭಟನೆ ಕಂಡು ಈ ಕ್ರಮವನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿ ಹೇಳಿದೆ.