ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ನಡೆದಿರುವ ಹೋರಾಟದ ಮುಂಚೂಣಿಯಲ್ಲಿರುವ ದೇಶದ ಗಣ್ಯ ನಾಯಕರ ಮೇಲೆ ಮೊಕದ್ದಮೆ ದಾಖಲಿಸಿ, ಜೈಲಿಗೆ ಕಳುಹಿಸುವ ಮತ್ತು ಆ ಮೂಲಕ ಪ್ರಜಾಪ್ರಭುತ್ವ ಚಳುವಳಿಯನ್ನು ಹಣಿಯುವ ದುಷ್ಕೃತ್ಯವನ್ನು ಕೇಂದ್ರ ಸರಕಾರ ಮುಂದುವರೆಸಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ)ದ ರಾಜ್ಯ ಸಮಿತಿಯು ಬಲವಾಗಿ ಖಂಡಿಸುತ್ತದೆ.
ಸಿಎಎ ಹಾಗೂ ಎನ್ ಆರ್ ಸಿ ವಿರುದ್ದದ ಹೋರಾಟದ ಮೂಲಕ ಕಳೆದ ಫೆಬ್ರವರಿಯಲ್ಲಿ, ಈಶಾನ್ಯ ದೆಹಲಿಯಲ್ಲಿ ನಡೆದ ಭೀಷಣ ಕೋಮು ಗಲಬೆಗೆ ಪ್ರಚೋದನೆಯನ್ನು ನೀಡಿದ್ದಾರೆಂಬ ಹುಸಿ ಆರೋಪವನ್ನು ಹೊಸೆದು, ಕೇಂದ್ರ ಸರಕಾರದ ಗೃಹ ಮಂತ್ರಾಲಯದಡಿ ಕಾರ್ಯ ನಿರ್ವಹಿಸುವ ದೆಹಲಿ ಪೋಲೀಸರು, ದೇಶದ ಅಗ್ರಗಣ್ಯ ನಾಯಕರುಗಳು ಹಾಗೂ ಗೌರಾವಾನ್ವಿತರು, ಸಾಂಸ್ಕೃತಿಕ ವಲಯದ ವರಿಷ್ಠರುಗಳಾದ ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಗಳಾದ ಕಾಂ.ಸೀತಾರಾಂ ಎಚೂರಿ,ಪ್ರಖ್ಯಾತ ಆರ್ಥಿಕ ತಜ್ಞರಾದ ಡಾ.ಜಯತಿ ಘೋಷ್, ದೆಹಲಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ಅಪೂರ್ವಾನಂದ, ಸ್ವರಾಜ್ ಅಭಿಯಾನದ ಮುಖಂಡರಾದ ಶ್ರೀ ಯೋಗೇಂದ್ರ ಯಾದವ್, ಡಾಕ್ಯುಮೆಂಟರಿ ಚಲನಚಿತ್ರಕಾರರಾದ ಶ್ರೀ ರಾಹುಲ್ ರಾಯ್ ಮತ್ತಿತರೆ ಪ್ರಮುಖರ ಹೆಸರುಗಳನ್ನು ಒಂದು ಷಡ್ಯಂತ್ರದ ಭಾಗವಾಗಿ,ಸೇರ್ಪಡೆ ಮಾಡಿ, ಮೊಕದ್ದಮೆ ದಾಖಲಿಸಿ, ಆ ಮೂಲಕ ಈ ಗಣ್ಯರ ತೇಜೋವಧೆ ಮಾಡಲು ಯತ್ನಿಸಿರುವುದನ್ನು ಸಿಪಿಐಎಂ ಬಲವಾಗಿ ಪ್ರತಿರೋಧಿಸುತ್ತದೆ. ಇದು ಪ್ರಜಾಪ್ರಭುತ್ವವಾದಿಗಳ ವಿರುದ್ಧದ ತೀವ್ರ ಹಗೆ ಸಾಧನೆಯ ದುಷ್ಕೃತ್ಯ ಹಾಗೂ ಕೋಮುಗಲಭೆಗೆ ಕಾರಣರಾದ ನಿಜವಾದ ಅಪರಾಧಿಗಳನ್ನು ರಕ್ಷಿಸುವ ನೀಚತನವಾಗಿದೆ.
ಈ ಹಿಂದೆಯೂ, ಶ್ರೀ ಮೋದಿಯವರ ಕೇಂದ್ರ ಸರಕಾರ ತನ್ನ ಅನೇಕ ವಿರೋಧಿಗಳ ವಿರುದ್ದ ಎನ್.ಐ.ಎ, ಈ.ಡಿ, ಸಿ.ಬಿ.ಐಗಳನ್ನು ನಗ್ನವಾಗಿ ದುರ್ಬಳಕೆ ಮಾಡಲಾಗಿರುವದು ಎಲ್ಲರೂ ತಿಳಿದಿರುವ ವಿಚಾರವಾಗಿದೆ. ಅದೇ ರೀತಿ, ಎನ್ ಎಸ್ ಎ, ಯುಎಪಿಎ, ರಾಜದ್ರೋಹ ಕಾಯ್ದೆ ಎಂಬ ಕರಾಳ ಶಾಸನಗಳ ಅಂಶಗಳನ್ನು ಹೇರಿ, ಸಂವಿಧಾನದಲ್ಲಿ ಹೇಳಿರುವುದಕ್ಕೆ ವಿರುದ್ಧವಾಗಿ ಅವುಗಳನ್ನು ಬಳಸುವ, ಅಧಿಕಾರಗಳ ಇಂತಹ ನಗ್ನ ದುರುಪಯೋಗಗಳನ್ನು ಕಂಡಿದ್ದೇವೆ. ಇಂತಹ ಸಂವಿಧಾನ ವಿರೋಧಿಯಾದ ನಗ್ನ ಉಲ್ಲಂಘನೆಗಳ ವಿರುದ್ದ ಬಲವಾಗಿ ಪ್ರತಿರೋಧಿಸಿದ ಗಣ್ಯರಿಗೆ ಕಿರುಕುಳ ನೀಡಲು, ಜೈಲಿಗಟ್ಟಲು ದುರ್ಬಳಕೆ ಮಾಡಿರುವುದು ಗುಟ್ಟಾದ ವಿಚಾರವೇನಲ್ಲಾ.
ಭೀಮಾ ಕೊರೆಗಾಂವ್ ಪ್ರಕರಣದಲ್ಲಿಎನ್.ಐ.ಎ ಮನಬಂದಂತೆ ವರ್ತಿಸುತ್ತಿರುವುದು,ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವುದನ್ನು ನಾಗರೀಕರು ಗಮನಿಸಿದ್ದಾರೆ. ಈ ಎಲ್ಲವುಗಳು, ಕೇಂದ್ರ ಸರಕಾರ ಹಿಡಿದಿರುವ ಸರ್ವಾಧಿಕಾರಿ ದಾರಿಯನ್ನು ಮತ್ತು ಅದು ಅವನತಿಯೆಡೆ ಸಾಗುತ್ತಿರುವುದನ್ನು ಎತ್ತಿ ತೋರುತ್ತಿದೆ. ಈ ಎಲ್ಲ ದುಷ್ಕೃತ್ಯಗಳ ಮುಂದುವರಿಕೆಯ ಭಾಗವಾಗಿ ಇದೀಗ ಈ ಗಣ್ಯರ ಮೇಲೆ ಪ್ರಹಾರ ನಡೆಸಲು ಮುಂದಾಗಿದೆ.
ಒಟ್ಡಾರೆಯಾಗಿ,ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಒಂದು ತೀವ್ರ ದಾಳಿಯ ರೂಪವಾಗಿ ಕಂಡು ಬರುತ್ತಿದೆ. ಅದೇ ರೀತಿ, ತನ್ನ ರಾಜಕೀಯ ಯಜಮಾನರುಗಳನ್ನು ಸಂತೃಪ್ತಿ ಪಡಿಸಲು ದೆಹಲಿ ಪೋಲಿಸರು ನಡೆಸಿರುವ ಅಧಿಕಾರ ದುರುಪಯೋಗದ ದುರ್ನಡೆಯಾಗಿದೆ.
ಆದ್ದರಿಂದ ಕೇಂದ್ರ ಸರಕಾರ ಈ ಕೂಡಲೇ,
- ಶಾಂತಿಯುತ ರಾಜಕೀಯ ಪ್ರತಿಭಟನೆಗಳನ್ನು ಕ್ರಿಮಿನಲ್ ಅಪರಾಧ ಎಂದು ಬಿಂಬಿಸುವ ಸಂವಿಧಾನ ವಿರೋಧಿಯಾದ ದುಷ್ಕೃತ್ಯವನ್ನು ಕೂಡಲೇ ನಿಲ್ಲಿಸಬೇಕು. ಅಧಿಕಾರ ದುರುಪಯೋಗಗಳನ್ನು ತಡೆಯಬೇಕು. ಗಣ್ಯರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಕೂಡಲೇ ವಾಪಾಸು ಪಡೆಯ ಬೇಕು.
- ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ಕಳುಹಿಸಲಾಗಿರುವ ಎಲ್ಲಾ ರಾಜಕೀಯ ಕೈದಿಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು.
ಎಂದು ಸಿಪಿಐಎಂ ರಾಜ್ಯ ಸಮಿತಿ ಕೇಂದ್ರ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ.
ಅದೇ ರೀತಿ, ಕೇಂದ್ರ ಸರಕಾರದ ಸಂವಿಧಾನ ವಿರೋದಿಯಾದ ಈ ದಬ್ಬಾಳಿಕೆಗಳನ್ನು ಮತ್ತು ದುರ್ನಡೆಗಳನ್ನು ನಾಳಿನ ದಿನ ರಾಜ್ಯದ ನಾಗರೀಕರು ರಾಜ್ಯದಾದ್ಯಂತ ತೀವ್ರ ವಾಗಿ ಪ್ರತಿರೋಧಿಸುವಂತೆ ಸಿಪಿಐಎಂ ಕರೆ ನೀಡುತ್ತದೆ.
ಯು.ಬಸವರಾಜ, ಕಾರ್ಯದರ್ಶಿ