ಪ್ರಜಾಪ್ರಭುತ್ವವಾದಿಗಳ ಬೇಟೆಗೆ ಮುಂದಾಗಿದ್ದಾರೆ ಮೋದಿ!

ನಮ್ಮ ದೇಶವು ಕರಾಳ ದಿನಗಳತ್ತ ಹೆಜ್ಜೆ ಹಾಕುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವವಾದಿ ಶಕ್ತಿಗಳ ಬೇಟೆ ಆರಂಭವಾಗಿದೆ. ನಾಗರಿಕರ ಸಂವಿಧಾನಾತ್ಮಕ ಹಕ್ಕುಗಳ ಪರವಾಗಿ ದ್ವನಿ ಎತ್ತುವವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರ ತೇಜೋವದೆ ಮಾಡಲಾಗುತ್ತದೆ. ಸರಕಾರದ ವೈಫಲ್ಯವನ್ನು ಧೈರ್ಯವಾಗಿ ಬಯಲಿಗೆಳೆಯುವ ಜನಪರ ಚಿಂತಕರನ್ನು ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಮಾಡಿದಂತೆ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಸತಯಿಸಲಾಗುತ್ತದೆ.

ಅಂತಹ ಇತ್ತೀಚಿನ ಪ್ರಕರಣ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಮತ್ತು ಇತರರನ್ನು ಸೇರಿಸಲಾದ ಪ್ರಕರಣವಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲಿಸರು ಸಲ್ಲಿಸಿದ ಪೂರಕ ಚಾರ್ಜ್‌ಶೀಟ್‌ನಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸ್ವರಾಜ್ ಅಭಿಯಾನದ ಮುಖಂಡ ಯೋಗೆಂದ್ರ ಯಾದವ್ ಅವರ ಹೆಸರುಗಳನ್ನು ಸೇರಿಸಿದ್ದಾರೆ. ಇವರಿಬ್ಬರ ಜತೆ ಖ್ಯಾತ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್, ದೆಹಲಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಮತ್ತು ಸಾಮಾಜಿಕ ಕಾರ್ಯಕರ್ತೆ ಅಪೂರ್ವಾನಂದ ಮತ್ತು ಸಾಕ್ಷಚಿತ್ರ ನಿರ್ಮಾಪಕ ರಾಹುಲ್ ರಾಯ್ ಅವರನ್ನು ಸಹ ಸಂಚುಕೋರರು ಎಂದು ಪೊಲೀಸರು ಹೆಸರಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗೆ ಇವರೆಲ್ಲರೂ ಕುಮ್ಮಕ್ಕು ನೀಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.

ಮೇಲಿನ ಆರೋಪ ಒಂದು ಅಪರಾಧವಲ್ಲ. ಶಿಕ್ಷಾರ್ಹ ಅಪರಾದವಂತೂ ಅಲ್ಲವೇ ಅಲ್ಲ. ಸರ್ಕಾರ ಜಾರಿಗೆ ತರಲು ಹೊರಟಿರುವ ಯಾವುದೇ ಕಾಯ್ದೆಯನ್ನು ಕುರಿತು ಶಾಸಕಾಂಗದ ಸಭೆಗಳಲ್ಲಿ ವಿವರವಾದ ಚರ್ಚೆಗೆ ಅವಕಾಶ ದೊರೆಯುವಂತಾಗಬೇಕು. ಮುಕ್ತ ಚರ್ಚೆ ಇಲ್ಲದೆ ಕಾಯ್ದೆಗಳನ್ನು ಅವಸರವಸರದಲ್ಲಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತರುವುದು ಪ್ರಜಾಪ್ರಭುತ್ವವನ್ನು ಬಲಹೀನಗೊಳಿಸುತ್ತದೆ. ಶಾಸನ ಸಭೆಗಳಲ್ಲಿ ವಿವರವಾದ ಚರ್ಚೆ ನಡೆದು ಅದರ ಸಾಧಕ-ಬಾಧಕಗಳನ್ನು ಅರಿಯುವ ಹಕ್ಕು ಪ್ರಜೆಗಳಿಗೆ ಇದೆ. ಪ್ರಜೆಗಳಿಗೆ ವಿವರಿಸಿ ಹೇಳುವುದು ಪ್ರಜಾಪ್ರಭುತ್ವವಾದಿಗಳ ಕರ್ತವ್ಯವೂ ಆಗಿದೆ. ಸರ್ಕಾರ ಜಾರಿಗೆ ತರಲು ಹೊರಟಿರುವ ಮಸೂದೆಗಳು ಜನಹಿತಕ್ಕೆ ವಿರುದ್ಧವಾಗಿದ್ದರೆ ಅಂತಹ ಮಸೂದೆಗಳ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಹೊರಾಡುವ ಹಕ್ಕು ಪ್ರಜೆಗಳಿಗಿದೆ ಇದೆ. ಅಂತಹ ಒಂದು ಸನ್ನಿವೇಶದಲ್ಲಿ ದೆಹಲಿ ಜನತೆ ಹೋರಾಟಕ್ಕೆ ಮುಂದಾದಾಗ ಅವರಿಗೆ ವಿಷಯದ ಬಗ್ಗೆ ಸರಿಯಾದ ವಿವರಣೆ ನೀಡುವುದು ದೇಶಪ್ರೇಮದ ಕಾಳಜಿಯಾಗಿರುತ್ತದೆ.

ಆದರೆ ದೆಹಲಿ ಪೊಲಿಸರ ನಿಷ್ಠೆ ದೆಹಲಿ ರಾಜ್ಯದ ಜನತೆಗಿಲ್ಲ. ಅವರು ಕೇಂದ್ರ ಗೃಹ ಮಂತ್ರಿಗಳ ನಿರ್ದೇಶನಕ್ಕೆ ಅನುಗುಣವಾಗಿ ಮಾತ್ರ ನಡೆಯುವರು. ಕೇಂದ್ರದ ಸೂಚನೆಗೆ ಅನುಗುಣವಾಗಿ ಅವರು ಹೋರಾಟಗಾರರನ್ನು ಸದೆಬಡಿಯುತ್ತಾರೆ. ಅವರ ಸೂಚನೆಯ ಮೇರೆಗೆ ಚಾರ್ಜ್‌ಶೀಟ್‌ನಲ್ಲಿ ತಮಗೆ ಬೇಕಾದಾಗ, ಸೇಡಿನ ಕ್ರಮವಾಗಿ ಹೆಸರುಗಳನ್ನು ಸೇರಿಸಿ ಅವರನ್ನು ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಪಡಿಸುತ್ತಾರೆ.

ದೆಹಲಿ ಗಲಭೆ ವಿಷಯದಲ್ಲಿ ಸೀತಾರಾಮ್ ಮತ್ತಿತರರು ಗಲಭೆಗೆ ಪ್ರಚೋದನೆ ನೀಡಿರಲು ಸಾಧ್ಯವಿಲ್ಲ. ಶಾಂತಯುತವಾಗಿ ನಡೆದ ಸಭೆಯಲ್ಲಿ ಅವರು ಯಥಾಪ್ರಕಾರ ಮಾತನಾಡಿರುತ್ತಾರೆ. ಅವರ ಮಾತುಗಳು ಪರಿಣಾಮಕಾರಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ದೇಶದ ಉದ್ದಗಲಕ್ಕೂ ಅವರನ್ನು ಕರೆದು ಅವರ ಭಾಷಣಗಳನ್ನು ದೇಶದ ಜನಕೇಳುತ್ತಾರೆ. ಅವರು ರಾಜ್ಯಸಭಾ ಸದಸ್ಯರಾಗಿಯೂ ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ವಿದೇಶಗಳಲ್ಲಿಯೂ ಅವರ ಭಾಷಣಗಳನ್ನು ಕೇಳುತ್ತಾರೆ. ಇದು ಮೋದಿ ಬಾಲಬಡುಕರಿಗೆ ಸಹಿಸಲಾಗುತ್ತಿಲ್ಲ. ಬಿಜೆಪಿ, ಆರೆಸ್ಸೆಸ್‌ನ ದ್ವೇಷ ರಾಜಕಾರಣವನ್ನು ನಿರ್ಭಿಡೆಯಿಂದ, ರಾಜಿಇಲ್ಲದೆ ವಿರೋಧಿಸುತ್ತಾ ಬಂದ ಹಿರಿಮೆ ಸಿಪಿಐ(ಎಂ)ಗೆ ಸಲ್ಲುತ್ತದೆ. ಕೋವಿಡ್-19 ರ ಸಂದರ್ಭದಲ್ಲೂ ಮೋದಿ ಸರ್ಕಾರದ ವೈಫಲ್ಯವನ್ನು ಸ್ವಷ್ಟವಾಗಿ ವಿರೋಧಿಸಿ ಬಡಜನರ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಸಿಪಿಐ(ಎಂ) ಕಾರ್ಯಕರ್ತರು ಹೋರಾಡಿದ್ದಾರೆ ಹಾಗೂ ಸೋಂಕಿತರಿಗೆ ನೆರವು ನೀಡಿದ್ದಾರೆ.

ಸೀತಾರಾಮ್ ಯೆಚೂರಿ ಮತ್ತು ಇತರರ ಮೇಲೆ ಸುಳ್ಳು ಆರೋಪ ಹೊರಿಸಿ ಚಾರ್ಜ್ ಶೀಟಿನಲ್ಲಿ ಅವರ ಹೆಸರನ್ನು ಸೇರಿಸಿದ ಮಾತ್ರಕ್ಕೆ ಸಿಪಿಐ(ಎಂ) ಕಾರ್ಯಕರ್ತರ ಸಮರ್ಪಣಾ ಭಾವನೆಯನ್ನು ಕುಗ್ಗಿಸಲಾಗದು. ಅವರು ಹೋರಾಡುತ್ತಾರೆ, ಪಕ್ಷಕ್ಕಾಗಿ, ಪಕ್ಷದ ಮುಖಂಡರಿಗಾಗಿ. ಅವರು ಹೋರಾಡುತ್ತಾರೆ ದೇಶಕ್ಕಾಗಿ, ದೇಶದ ಜನತೆಗಾಗಿ. ಯಾವುದೇ ಬೆದರಿಕೆಗೆ ಸೊಪ್ಪು ಹಾಕದೆ ಮುನ್ನಡೆಯುತ್ತಾರೆ.

 

Leave a Reply

Your email address will not be published. Required fields are marked *