ರಾಜ್ಯದ ರೈತರು, ಕಾರ್ಮಿಕರ ತೀವ್ರ ವಿರೋಧ, ಪ್ರತಿಭಟನೆ ಹಾಗೂ ಬಂದ್ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಹೊರಡಿಸಿದ್ದ ಕೃಷಿ ಹಾಗೂ ಕಾರ್ಮಿಕ ಕಾನೂನುಗಳ ತಿದ್ದುಪಡಿ ಸುಗ್ರೀವಾಜ್ಞೆಗಳಿಗೆ ಸೆಪ್ಟೆಂಬರ್ ೨೬ರಂದು ಮುಕ್ತಾಯವಾದ ರಾಜ್ಯ ಶಾಸನಸಭೆಯ ಅಂಗೀಕಾರ ದೊರೆತಿಲ್ಲ. ಅಂತಹ ತಿರಸ್ಕೃತಗೊಂಡ ಮಸೂದೆಗಳನ್ನು ಮತ್ತೆ ಸುಗ್ರೀವಾಜ್ಞೆಯಾಗಿ ಹೊರಡಿಸಲು ಇಂದು ನಡೆದ ರಾಜ್ಯ ಸಚಿವ ಸಂಪುಟ ತೀರ್ಮಾನಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) – ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ತೀವ್ರವಾಗಿ ಖಂಡಿಸಿವೆ.
ಶಾಸನಸಭೆಯ ಅನುಮೋದನೆ ಪಡೆಯುವಲ್ಲಿ ಸೋತಿರುವ ಮಸೂದೆಗಳನ್ನು ಸುಗ್ರೀವಾಜ್ಞೆಯಾಗಿ ಹೊರಡಿಸುವುದು ಸಂವಿಧಾನಕ್ಕೆ ಎಸಗುವ ವಂಚನೆಯಾಗಿದೆ ಎಂದು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠವು ೨೦೧೭ರಲ್ಲಿ ಕೃಷ್ಣಕುಮಾರ್ ಸಿಂಗ್ ಮತ್ತು ಬಿಹಾರ ರಾಜ್ಯ ಪ್ರಕರಣದಲ್ಲಿ ಸ್ಪಷ್ಟ ಪಡಿಸಿದೆ. ಹಾಗಿದ್ದರೂ ಸಹಾ ರಾಜ್ಯ ಸರ್ಕಾರವು ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿರುವುದು ಬಿಜೆಪಿ ಸರ್ಕಾರದ ಸಂವಿಧಾನ ಬಾಹೀರ ಕ್ರಮವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ. ಕೂಡಲೇ ತೀರ್ಮಾನವನ್ನು ಹಿಂಪಡೆಯಬೇಕೆಂದು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕೆಂದು ರಾಜ್ಯ ಬಿಜೆಪಿ ಸರ್ಕಾರವನ್ನು ಸಿಪಿಐ(ಎಂ) ಆಗ್ರಹಿಸಿದೆ.
ಕೇಂದ್ರ ಸರ್ಕಾರದ ಒತ್ತಾಯಕ್ಕೆ ಮಣಿದು ಕಾರ್ಪೊರೇಟ್ ಧಣಿಗಳ ಸೇವೆಗೆ ಕಟಿಬದ್ಧವಾಗಿ ಶಾಸನಸಭೆಯಲ್ಲಿ ಸೋತ ಕರ್ನಾಟಕ ರಾಜ್ಯ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕ ಮತ್ತು ಕೈಗಾರಿಕಾ ವಿವಾದಗಳು ಮತ್ತು ಇತರೆ ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿಧೇಯಕಗಳನ್ನು ಮತ್ತೆ ಸುಗ್ರೀವಾಜ್ಞೆಗಳಾಗಿ ಹೊರಡಿಸಲು ಮುಂದಾಗಿರುವುದು ಬಿಜೆಪಿಯು ಕಾರ್ಪೊರೇಟ್ ಬಂಡವಾಳಗಾರರ ಹಿತಕಾಯುವ ಪಕ್ಷವಾಗಿರುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಈ ತಿದ್ದುಪಡಿ ವಿಧೇಯಕಗಳಿಂದಾಗಿ “ಉಳುವವರಿಗೆ ಭೂಮಿಯ ಬದಲು ಉಳ್ಳವರಿಗೆ ಭೂಮಿ” ಎಂಬ ಹೊಸ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಂತೆಯೇ ರೈತರ ಉತ್ಪನ್ನಗಳು ಕಾರ್ಪೊರೇಟ್ ಧಣಿಗಳ ಮುಲಾಜಿಗೆ ಬಲಿಯಾಗಲಿದೆ. ಕಾರ್ಮಿಕರ ಹಕ್ಕುಗಳು ದಮನವಾಗಿ ಬೇಕೆಂದಾಗ ಬಳಸಿ ಬೀಸಾಕುವ ಪರಿಸ್ಥಿತಿ ನಿರ್ಮಾಣವಾಗಿ ರಾಜ್ಯದಲ್ಲಿನ ನಿರುದ್ಯೋಗವು ತೀವ್ರವಾಗಿ ಹೆಚ್ಚಳವಾಗಿ ರಾಜ್ಯದ ಆರ್ಥಿಕತೆಯು ಮತ್ತಷ್ಟು ಹಿನ್ನೆಡೆಯನ್ನು ಅನುಭವಿಸಲಿದೆ. ಆದ ಕಾರಣ ಸದರಿ ತಿದ್ದುಪಡಿ ಸುಗ್ರೀವಾಜ್ಞೆಗಳಿಗೆ ರಾಜ್ಯದ ಜನತೆಯ ವ್ಯಾಪಕ ಪ್ರತಿರೋಧವು ವ್ಯಕ್ತವಾಗಿದೆ. ಇದನ್ನು ಮನಗಂಡು ರಾಜ್ಯ ಬಿಜೆಪಿ ಸರ್ಕಾರವು ತನ್ನ ಸಂಪುಟ ಸಭೆಯ ಇಂದಿನ ತೀರ್ಮಾನವನ್ನು ಹಿಂಪಡೆಯಬೇಕೆಂದು ಸಿಪಿಐ(ಎಂ) ಒತ್ತಾಸಿದೆ. ರಾಜ್ಯಪಾಲರು ಸಹಾ ಸಂಪುಟ ಸಭೆಯ ತೀರ್ಮಾನವನ್ನು ತಿರಸ್ಕರಿಸಬೇಕೆಂದು ಕೋರಿದೆ.
ಕೆ.ಎನ್. ಉಮೇಶ್, ಕಾರ್ಯದರ್ಶಿ – ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ
ಎನ್. ಪ್ರತಾಪ್ ಸಿಂಹ, ಕಾರ್ಯದರ್ಶಿ – ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಸಮಿತಿ