ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಯ ರಾಜ್ಯ ಮುಖಂಡರು ಹಾಗೂ ರಾಜ್ಯದ ರೈತ ಚಳುವಳಿಯ ನಾಯಕರಾದಂತಹ ಕಾಂ. ಮಾರುತಿ ಮಾನ್ಪಡೆ ಇಂದು (20-10-2020ರಂದು) ಸೋಲ್ಲಾಪುರದ ಅಶ್ವಿನಿ ಆಸ್ಪತ್ರೆಯಲ್ಲಿ ಕೋವಿಡ್‌ನಿಂದಾಗಿ ನಿಧನರಾಗಿದ್ದಾರೆ. ಅವರಿಗೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ.
65 ವರ್ಷದ ಮಾನ್ಪಡೆಯವರು ಬಡ ಕೃಷಿಕೂಲಿಕಾರ ಕುಟುಂಬದಿಂದ ಮೂಡಿಬಂದ ಸಮರಧೀರ ಕಾರ್ಯಕರ್ತರಾಗಿ ರಾಜ್ಯದ ಚಳುವಳಿಯ ನಾಯಕರಾಗಿದ್ದಾರೆ. ಸಿಪಿಐ(ಎಂ) ಗುಲ್ಬಾರ್ಗ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಅವರು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿದ್ದರು, ಪ್ರಸ್ತುತ ರಾಜ್ಯ ಸಮಿತಿಯ ಖಾಯಂ ಆಹ್ವಾನಿತರಾಗಿದ್ದರು.
ಅಕ್ಟೋಬರ್ 04 ರಂದು ತೀವ್ರ ಜ್ವರದಿಂದ ಗುಲ್ಬರ್ಗಾ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೋಲ್ಲಾಪುರದ ಖಾಸಗಿ ಆಸ್ಪತ್ರೆಗೆ ಅಕ್ಟೋಬರ್ 05 ರಂದು ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 9.30ಕ್ಕೆ ಕೋವಿಡ್‌ನಿಂದಾಗಿ ಅವರು ಅಸುನೀಗಿದ್ದಾರೆ.
ಇತ್ತೀಚೆಗೆ ಸೆಪ್ಟೆಂಬರ್ ತಿಂಗಳಲ್ಲಿ ಪಂಚಾಯತ್ ನೌಕರರ ಬಾಕಿ ವೇತನ ಬಿಡುಗಡೆಗಾಗಿ ರಾಜ್ಯವ್ಯಾಪ್ತಿ ನಡೆದ ಪಂಚಾಯತಿ ನೌಕರರ ಹೋರಾಟಕ್ಕೆ ನೇತೃತ್ವ ನೀಡಿದ್ದರು. ಸೆಪ್ಟೆಂಬರ್ 20 ರಿಂದ ಬೆಂಗಳೂರಿನಲ್ಲಿ ನಡೆದ ರೈತ ದಲಿತ ಕಾರ್ಮಿಕರ ಐಕ್ಯ ಹೋರಾಟದ ನಾಯಕರಾಗಿದ್ದ ಅವರು ರೈತ ಚಳುವಳಿಯ ಎಲ್ಲಾ ಬಣಗಳನ್ನು ಒಂದೂಗೂಡಿಸಿ ಸೆಪ್ಟೆಂಬರ್ 25 ರ ರಾಜ್ಯವ್ಯಾಪ್ತಿ ರಸ್ತೆ ತಡೆ ಮತ್ತು 28 ರ ಕರ್ನಾಟಕ ಬಂದ್ ಯಶಸ್ವಿಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 26 ರವರೆಗೆ ಬೆಂಗಳೂರಿನಲ್ಲಿದ್ದ ಅವರು 28ರ ಬಂದ್ ಹಿನ್ನೆಲೆಯಲ್ಲಿ ಗುಲ್ಬರ್ಗಾಕ್ಕೆ ಹಿಂದಿರುಗಿ ಬಂದ್ ಯಶಸ್ವಿಗೆ ನೇತೃತ್ವ ನೀಡಿದ್ದರು. ನಂತರದ ದಿನಗಳಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹಲವು ರೈತ ಕಾರ್ಮಿಕರ ಹಾಗೂ ಜನತೆಯ ಹೋರಾಟಕ್ಕೆ ನೇತೃತ್ವ ನೀಡಿದ್ದ ಅವರು ಕಲ್ಯಾಣ ಕರ್ನಾಟಕದ ಎಡಪ್ರಗತಿಪರ ಚಳುವಳಿಯ ಮುಂಚೂಣಿ ನಾಯಕರಾಗಿದ್ದರು. ತೊಗರಿ ಮಂಡಳಿ ರಚನೆಗಾಗಿ ನಡೆದ ಹೋರಾಟ, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನೀರಾವರಿ ಹೋರಾಟ, ಪಂಚಾಯತಿ ನೌಕರರಿಗೆ ಸೇವಾ ನಿಯಮವಳಿಗಳಿಗಾಗಿ ಹೋರಾಟ ಮತ್ತು ಕನಿಷ್ಠ ವೇತನ ನಿಗದಿ ಹೋರಾಟದೊಂದಿಗೆ ಕೋಮುಸೌಹಾರ್ದತೆಗಾಗಿ ದಣಿವರಿಯದೆ ಹೋರಾಟಗಳಿಗೆ ನಾಯಕತ್ವ ನೀಡಿದ್ದ ಸಂಗಾತಿ ಕಾಂ.ಮಾನ್ಪಡೆ ಯವರ ಅಗಲಿಕೆ ರಾಜ್ಯದ ಎಡ ಪ್ರಗತಿಪರ ಚಳುವಳಿಗೆ ಅಪಾರ ನಷ್ಟವನ್ನುಂಟುಮಾಡಿದೆ. ರಾಜ್ಯದ ಅಂಗನವಾಡಿ ನೌಕರರು, ಬಿಸಿಯೂಟ ನೌಕರರ ಚಳುವಳಿ ಕಟ್ಟುವಲ್ಲಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹೋರಾಟದಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದ್ದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ಕಾರ್ಮಿಕ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆಗಳ ವಿರುದ್ಧ ಇತ್ತೀಚೆಗೆ ನಡೆದ ಹೋರಾಟಗಳಲ್ಲಿ ಅವರು ನೀಡಿದ ನೇತೃತ್ವವು ಅವಿಸ್ಮರಣಿಯವಾದದ್ದು. ಕಾಂ. ಮಾನ್ಪಡೆಯವರು ಪತ್ನಿ, ಇಬ್ಬರು ಪುತ್ರರು ಮತ್ತು ಅವರ ಕುಟುಂಬ ವರ್ಗದ ಜೊತೆ ಅಪಾರ ಸಂಖ್ಯೆಯ ಎಡ ಪ್ರಗತಿಪರ ಚಳುವಳಿಯ ಕಾರ್ಯಕರ್ತರನ್ನು ಅಗಲಿದ್ದಾರೆ.
ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಡಿ ಪ್ರಾಥಮಿಕ ಆರೋಗ್ಯ ಕಾರ್ಯಕರ್ತರಾಗಿ ನೇಮಕಗೊಂಡಿದ್ದ ಅವರು 80 ರ ದಶಕದ ಆರಂಭದಲ್ಲಿ ಸರ್ಕಾರಿ ನೌಕರಿ ತ್ಯಜಿಸಿ ರೈತ ಚಳುವಳಿಯ ಪೂರ್ಣಾವಧಿ ಕಾರ್ಯಕರ್ತರಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. 1986 ರಲ್ಲಿ ಗುಲ್ಬರ್ಗಾದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಆನಂತರದ ವಿಧಾನಸಭಾ ಚುನಾವಣೆಗಳಲ್ಲಿ ಗುಲ್ಬರ್ಗಾದ ಕಮಲಪುರ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
1996 ರಲ್ಲಿ ಬೀದರ್ ಲೋಕಸಭಾ ಕ್ಷೇತ್ರದಿಂದಲೂ ಜನತಾದಳ ಬೆಂಬಲಿತ ಸಿಪಿಐ(ಎಂ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 1995 ರಲ್ಲಿ ಬಿಜಾಪುರದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ (ಕೆ.ಪಿ.ಆರ್.ಎಸ್.) ಸಮ್ಮೇಳನದಲ್ಲಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು 2017 ರವರೆಗೆ ರಾಜ್ಯ ಅಧ್ಯಕ್ಷರಾಗಿ ಮುಂದುವರೆದಿದ್ದ ಅವರು ಸಂಘದ ಹಾಲಿ ರಾಜ್ಯ ಉಪಾಧ್ಯಕ್ಷರಾಗಿದ್ದರು. 1989 ರಿಂದಲ್ಲೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ರಾಜ್ಯ ಅಧ್ಯಕ್ಷರಾಗಿ ಇಂದಿನವರೆಗೆ ಗ್ರಾಮ ಪಂಚಾಯತ್ ನೌಕರರ ಚಳುವಳಿಯನ್ನು ಮುನ್ನಡೆಸಿದ್ದರು.
ರಾಜ್ಯವು ಮುಂಚೂಣಿ ಹೋರಾಟಗಾರರೊಬ್ಬರನ್ನು ಕಳೆದುಕೊಂಡಿದೆ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಶ್ರದ್ಧಾಂಜಲಿ ಸಲ್ಲಿಸಿದೆ.
ಯು. ಬಸವರಾಜ,
ರಾಜ್ಯ ಕಾರ್ಯದರ್ಶಿ-ಸಿಪಿಐ(ಎಂ)
20-10-2020