ಆರೆಸ್ಸೆಸ್/ಬಿಜೆಪಿಯ ಅಸಂಬದ್ಧ, ದ್ವೇಷಪೂರ್ಣ ಪ್ರಚಾರಕ್ಕೆ ಖಂಡನೆ
ರೈತ ಸಂಘಟನೆಗಳು ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಐದು ಎಡಪಕ್ಷಗಳು- ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ, ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ-ಲೆನಿನ್ವಾದಿ), ರೆವೊಲ್ಯೂಶನರಿ ಸೋಶಲಿಸ್ಟ್ ಪಾರ್ಟಿ ಮತ್ತು ಅಖಿಲ ಭಾರತ ಫಾರ್ವರ್ಡ್ ಬ್ಲಾಕ್- ತಮ್ಮ ಸೌಹಾರ್ದ ಮತ್ತು ಬೆಂಬಲವನ್ನು ವ್ಯಕ್ತಪಡಿಸಿವೆ.
ಡಿಸೆಂಬರ್ 8ರಂದು ಭಾರತ ಬಂದ್ ಗೆ ಅವರು ನೀಡಿದ ಕರೆಗೆ ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
ಭಾರತೀಯ ಕೃಷಿಯನ್ನು ಮತ್ತು ದೇಶದ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ನಮ್ಮ ಅನ್ನದಾತರ ಹೋರಾಟದ ವಿರುದ್ಧ ಆರೆಸ್ಸೆಸ್/ಬಿಜೆಪಿ ಅಸಂಬದ್ಧ ಆಪಾದನೆಗಳ ಮೇಲೆ ದ್ವೇಷಪೂರ್ಣ ಪ್ರಚಾರ ನಡೆಸುತ್ತಿರುವುದನ್ನು ಎಡಪಕ್ಷಗಳು ಖಂಡಿಸಿವೆ.
ಮೂರು ಕೃಷಿ ಕಾಯ್ದೆಗಳನ್ನು ವಿದ್ಯುಚ್ಛಕ್ತಿ(ತಿದ್ದುಪಡಿ) ಮಸೂದೆ, 2020ನ್ನು ರದ್ದು ಮಾಡಬೇಕೆಂಬ ರೈತ ಸಂಘಟನೆಗಳ ಬೇಡಿಕೆಯನ್ನು ಎಡಪಕ್ಷಗಳು ಬೆಂಬಲಿಸಿವೆ.
ರೈತರಿಗೆ ಬೆಂಬಲವಾಗಿ ನಿಂತಿರುವ ಮತ್ತು ಈ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿರುವ ಇತರ ಎಲ್ಲ ರಾಜಕೀಯ ಪಕ್ಷಗಳು ಅವರ ಡಿಸೆಂಬರ್ 8ರ ಬಂದ್ ಕರೆಗೆ ಬೆಂಬಲ ಮತ್ತು ಸಹಕಾರವನ್ನು ನೀಡಬೇಕು ಎಂದು ಎಡಪಕ್ಷಗಳು ಮನವಿ ಮಾಡಿಕೊಂಡಿವೆ.