ದೇಶವನ್ನು ಅಡಿಯಾಳು ಮಿಲಿಟರಿ ಮಿತ್ರನಾಗಿಸಿದ್ದಕ್ಕೆ ಒಂದು ಪ್ರಶಸ್ತಿ!

KaratA copy
ಪ್ರಕಾಶ್‌ ಕಾರಟ್

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ “ಲೀಜನ್ ಆಫ್ ಮೆರಿಟ್” ಪ್ರಶಸ್ತಿಯನ್ನು ದಯಪಾಲಿಸಿರುವುದು ಕುತೂಹಲಕಾರಿಯಾಗಿದೆ. “ಲೀಜನ್ ಆಫ್ ಮೆರಿಟ್”ಮೂಲತಃ ಅಮೆರಿಕಾದ ಅಧ್ಯಕ್ಷರು ಪ್ರದಾನ ಮಾಡುವ ಒಂದು ಸೈನಿಕ ಮರ್ಯಾದೆ. ಈ ಹಿಂದೆ ಮುಖ್ಯವಾಗಿ ಇತರೆ ದೇಶಗಳ ಸಶಸ್ತ್ರ ಪಡೆಗಳ ಮುಖ್ಯಸ್ಥರಿಗೆ, ಜನರಲ್‌ಗಳಿಗೆ, ಸೇನಾಧಿಪತಿಗಳಿಗೆ ನೀಡುತ್ತಿದ್ದ ಕಮ್ಯಾಂಡರ್ ಇನ್ ಚೀಫ್(ಸೇನಾಧಿಪತಿ) ವಿಧದ ಪ್ರಶಸ್ತಿಯದು. ಕೇವಲ ಕೈಬೆರಳೆಣಿಕೆಯಷ್ಟು ದೇಶಗಳ ನಾಯಕರಿಗೆ ಅಥವಾ ಸರ್ಕಾರದ ಮುಖ್ಯಸ್ಥರಿಗೆ ಮತ್ತು ಅಮೆರಿಕಾದೊಂದಿಗೆ ಅತ್ಯಂತ ಆಪ್ತ ಮಿಲಿಟರಿ ಮಿತ್ರತ್ವ ಹೊಂದಿದ್ದವರಿಗೆ ಮಾತ್ರ ಅದನ್ನು ನೀಡಲಾಗಿದೆ.

ಕಳೆದ 29 ವರ್ಷಗಳಲ್ಲಿ ಅಮೆರಿಕಾದ ಹೊರಗಿನ ಯಾರಿಗೂ “ಲೀಜನ್ ಆಫ್ ಮೆರಿಟ್”ಪ್ರಧಾನ ಮಾಡಿಲ್ಲ. ನಿಜ ಹೇಳಬೇಕೆಂದರೆ, ಅಮೆರಿಕಾದ ಅತ್ಯಂತ ಉನ್ನತ ನಾಗರಿಕ ಮರ್ಯಾದೆ, 1963ರಲ್ಲಿ ಸ್ಥಾಪಿಸಲ್ಪಟ್ಟ ʻʻಪ್ರಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಂʼʼ(ಅಧ್ಯಕೀಯ ಸ್ವಾತಂತ್ರ್ಯದ ಪದಕ) ಪ್ರಶಸ್ತಿಯನ್ನು ಪಾರಂಪರಿಕವಾಗಿ ಎಲ್ಲಾ ಅಧ್ಯಕ್ಷರುಗಳು ವಿದೇಶಿ ರಾಜಕೀಯ ಮುತ್ಸದ್ದಿಗಳಿಗೆ ಮತ್ತು ಅಸಾಧಾರಣ ವ್ಯಕ್ತಿಗಳಿಗೆ ಕೊಡಲಾಗುತ್ತಿದೆ. ಪ್ರಾಸಂಗಿಕವಾಗಿ, ಏಕೈಕ ಭಾರತೀಯ ಪ್ರಜೆ, ಮದರ್ ಥೆರೇಸಾ ಅವರಿಗೆ 1985ರಲ್ಲಿ ಈ ಪ್ರಶಸ್ತಿ ದೊರಕಿದೆ.

ಆದರೆ ಟ್ರಂಪ್ ಅವರು ಮೋದಿಯವರಿಗೆ ಮುಖ್ಯವಾಗಿ ಸೇನಾ ಮರ್ಯಾದೆಯೆಂದು ಕರೆಸಿಕೊಳ್ಳುವ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಅವರು “ಜಾಗತಿಕ ಸವಾಲುಗಳನ್ನು ಎದುರಿಸಲು ಅಮೆರಿಕಾ ಮತ್ತು ಭಾರತದ ನಡುವೆ ಸಾಮರಿಕ ಪಾಲುದಾರಿಕೆಯನ್ನು ಮೇಲಕ್ಕೇರಿಸಿದ್ದಕ್ಕೆ” ಎಂದು ಪ್ರಶಸ್ತಿಪತ್ರದಲ್ಲಿ ನಮೂದಾಗಿದೆ. ಇದು ಅವರು ಅಮೆರಿಕಾದ ಮಿಲಿಟರಿ ಮಿತ್ರನೆಂದು ಅವರು ಪಡೆದಿರುವ ನೂತನ ಪಾತ್ರ ವಹಿಸಿಕೊಂಡಿರುವುದಕ್ಕೆ ಒಂದು ಉಪಕಾರ ಸ್ಮರಣೆಯಾಗಿದೆ.

ಆ ಪ್ರಶಸ್ತಿಪತ್ರದ ಪ್ರಕಾರ, ಮೋದಿಯವರು ಭಾರತದ ಪ್ರಧಾನಮಂತ್ರಿಯಾಗಿ ಬಹುಮಾನಯೋಗ್ಯ ಸೇವೆ ಸಲ್ಲಿಸಿದ್ದಾರೆ; ಈ ಸೇವೆಯಲ್ಲಿ, ಅಮೆರಿಕಾದ ಪ್ರಕಾರ ‘ಸೇನಾ ಸಾಗಾಣಿಕೆ ಪೂರೈಕೆ ಒಪ್ಪಂದ’(ಎಲ್.ಇ.ಎಂ.ಒ.ಎ.) ಹಾಗೂ ಆನಂತರ ಇನ್ನೆರಡು ತಳಹದಿಯ ಒಪ್ಪಂದಗಳಿಗೆ ಸಹಿ ಮಾಡುವ ಮೂಲಕ ಭಾರತವನ್ನು ಅಮೆರಿಕಾದ ಮಿಲಿಟರಿ ಮಿತ್ರನಾಗಿ ಪರಿವರ್ತನೆ ಮಾಡುವಲ್ಲಿ ಕೈಗೊಂಡ ನಿರ್ಣಾಯಕ ಕ್ರಮಗಳು ಸೇರಿವೆ.

ಟ್ರಂಪ್ ಈ ಪ್ರಶಸ್ತಿಯನ್ನು ಅದೇ ಸಮಯದಲ್ಲಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಹಾಗೂ ಇತ್ತೀಚಿನವರೆಗೂ ಜಪಾನಿನ ಪ್ರಧಾನಮಂತ್ರಿಯಾಗಿದ್ದ ಶಿಂಜೋ ಅಬೆಯವರಿಗೂ ನೀಡಿದ್ದಾರೆ. ಈ ಮೂವರೂ ಅಮೆರಿಕಾ ನೇತೃತ್ವದ ಚತುಷ್ಕೋನ ಮೈತ್ರಿಕೂಟ(ಕ್ವಾಡ್)ದಲ್ಲಿ ತಮ್ಮ ದೇಶಗಳನ್ನು ತಂದು ನಿಲ್ಲಿಸಲು ಸಾಧನವಾದವರು. ಅಮೆರಿಕಾದ ಸೈನಿಕ ವ್ಯವಸ್ಥೆಯಾದ ಪೆಂಟಗನ್ ಇದನ್ನು ಒಂದು ಮಿಲಿಟರಿ ಮೈತ್ರಿಕೂಟವಾಗಿ ನಿರೀಕ್ಷಿಸಿತ್ತು.

ಈ ಮೂವರಿಗೆ ಲೀಜನ್ ಪ್ರಶಸ್ತಿಯನ್ನು ಟ್ರಂಪಿನೊಂದಿಗೆ ಮಿಲಿಟರಿ ಪಾಲುದಾರಿಕೆ ರಚಿಸಿಕೊಂಡ ಕಾರಣಕ್ಕಾಗಿ ನೀಡಿದ್ದಷ್ಟೇ ಅಲ್ಲ, ಅದಕ್ಕೂ ಹೆಚ್ಚಿನದ್ದು ಇನ್ನೂ ಇದೆ. ಈ ಮೂವರೂ ಬಲಪಂಥೀಯ ನಾಯಕರಾಗಿದ್ದು ಟ್ರಂಪ್‌ರೊಂದಿಗೆ ಅವರು ಆಪ್ತ ರಾಜಕೀಯ ಅನ್ಯೋನ್ಯತೆಯನ್ನು ಪ್ರಕಟಪಡಿಸಿರುವವರು.

ಟ್ರಂಪ್ ಶ್ವೇತಭವನದಲ್ಲಿನ ತನ್ನ ಕೊನೆಯ ದಿನಗಳಲ್ಲಿ, ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಮಾಜಿ ಜತೆಗಾರರಿಗೆ  ಕ್ಷಮಾದಾನವನ್ನು ನೀಡಿದ್ದಾರೆ. ತನ್ನ ಹಲವಾರು ಅನುಚರರನ್ನು ಒಳ್ಳೆಯ ಸಂಬಳದ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದಾರೆ ಮತ್ತು ಪರದೇಶಗಳ ತನ್ನ ಆತ್ಮೀಯ ಗೆಳೆಯರನ್ನೂ ಅವರು ಮರೆತಿಲ್ಲ! ಮೋದಿಯವರು ಗೌರವದ ಸಂಭ್ರಮ, ಸಡಗರದಲ್ಲಿ ಇರಬಹುದಾದರೂ,  ದುರದೃಷ್ಟದ ಸಂಗತಿಯೆಂದರೆ,  ಈ ಪ್ರಶಸ್ತಿಯು ಭಾರತವು ಅಮೆರಿಕದ ಅಡಿಯಾಳು ಮಿಲಿಟರಿ ಮಿತ್ರನಾಗಿ ಬಿಟ್ಟಿರುವುದಕ್ಕೆ ಸಂದಿರುವ ಒಂದು ಸ್ವೀಕೃತಿ ರಸೀದಿ!

Us_legion_of_merit
ಲೀಜನ್ ಆಫ್ ಮೆರಿಟ್ ಅಂದರೆ ‘ಯೋಗ್ಯ ತುಕಡಿ’!

ಸೆಪ್ಟೆಂಬರ್ 29ರಂದು ಹೂಸ್ಟನ್ ರ‍್ಯಾಲಿಯಲ್ಲಿ ಮೋದಿಯವರು ಟ್ರಂಪ್ ಅವರನ್ನು ಅನುಮೋದಿಸಿದ್ದರೆ, ಮಾರಿಸನ್ ಓಹಿಯೋದ ವಪಕೊನೆಟಾದಲ್ಲಿ ಅದೇ ತಿಂಗಳು ಟ್ರಂಪ್ ಅವರ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಹೂಸ್ಟನ್‌ನಲ್ಲಿ ಮೋದಿಯವರು “ಅಬ್ ಕಿ ಬಾರ್ ಟ್ರಂಪ್ ಸರ್ಕಾರ್” ಎಂದು ಮತ್ತೆ ಮತ್ತೆ ಹೇಳುತ್ತಲೇ ಇದ್ದರೆ, ಅತ್ತ ಮಾರಿಸನ್ ಜಾಗರೂಕರಾಗಿದ್ದು “ನಾವು ಬಹಳಷ್ಟು ಸಮಾನ ಅಭಿಪ್ರಾಯಗಳನ್ನು ಹೊಂದಿದ್ದೇವೆ” ಎಂದು ಟ್ರಂಪ್ ಬಗ್ಗೆ ಕೇಳಿದಾಗ ಹೇಳಿದರು. ಇನ್ನು ಶಿಂಜೋ ಅಬೆಯವರು ಟ್ರಂಪ್ ಜತೆ ತೀರ ಆಪ್ತ ಸಂಬಂಧಗಳನ್ನು ಹೊಂದಿದ್ದರು ಮತ್ತು ಗೋಲ್ಫ್ ಆಟದ ಗೆಳೆಯರಾಗಿದ್ದರು.

ತನ್ನ ಸೈದ್ಧಾಂತಿಕ ಗಾಢಸ್ನೇಹಿತರಾದ ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮಿನ್ ನೆತಾನ್ಯಾಹು ಮತ್ತು ಬ್ರೆಜಿಲಿನ ಅಧ್ಯಕ್ಷ ಜೈರ್ ಬೊಲ್ಸನಾರೊ ಅವರಿಗೆ ಈ ಪ್ರಶಸ್ತಿಯನ್ನು ನೀಡದೇ ಇರುವುದು, ಅದು ಪ್ರಾಸಂಗಿಕವಾಗಿ ಪೆಂಟಗನ್-ಆಧಾರಿತ ನಿರ್ಧಾರವೆಂಬುದು ಸಾಬೀತಾಗುತ್ತದೆ. ನೂತನ ಹಾಗೂ ಮಹತ್ವದ ಮಿಲಿಟರಿ ಮೈತ್ರಿಕೂಟದವರಿಗೆ ಮಾತ್ರ ಪ್ರಶಸ್ತಿ ನೀಡುವುದು ಟ್ರಂಪಿನ ಸ್ಪಷ್ಟ ಉದ್ದೇಶವಾಗಿದೆ.

ಟ್ರಂಪ್ ಶ್ವೇತಭವನದಲ್ಲಿನ ತನ್ನ ಕೊನೆಯ ದಿನಗಳಲ್ಲಿ, ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ತಮ್ಮ ಮಾಜಿ ಸಲಹೆಗಾರ ಮೈಕೇಲ್ ಫ್ಲಿನ್ ನಂತಹ ಜತೆಗಾರರಿಗೆ ತಬ್ಬಿಬ್ಬುಗೊಳಿಸುವಂಥಾ ಕ್ಷಮಾದಾನವನ್ನು ನೀಡಿದ್ದಾರೆ. ತನ್ನ ಹಲವಾರು ಅನುಚರರನ್ನು ಒಳ್ಳೆಯ ಸಂಬಳದ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದಾರೆ ಮತ್ತು ಪರದೇಶದ ತನ್ನ ಆತ್ಮೀಯ ಗೆಳೆಯರನ್ನೂ ಅವರು ಮರೆತಿಲ್ಲ.

ಅಧ್ಯಕ್ಷ ಟ್ರಂಪ್ ಅವರು ಪ್ರದಾನ ಮಾಡಿದ ಪ್ರಶಸ್ತಿಯಿಂದ ತಾನು “ಗಾಢವಾಗಿ ಗೌರವಿಸಲ್ಪಟ್ಟಿದ್ದೇನೆ” ಎಂದು ಹೇಳಿದ ಮೋದಿಯವರು ಭಾರತ-ಅಮೆರಿಕಾ ಬಾಂಧವ್ಯವನ್ನು ಇನ್ನೂ ಬಲಪಡಿಸಲು ಅಮೆರಿಕಾ ಸರ್ಕಾರದೊಂದಿಗೆ ಮುಂದೆಯೂ ಕೆಲಸ ಮಾಡುವುದಾಗಿ ಭಾರತದ 130 ಕೋಟಿ ಜನರ ಪರವಾಗಿ ಪ್ರತಿಜ್ಞೆ ಮಾಡಿದ್ದಾರೆ. ಆದರೆ ಮೋದಿಯವರು ಪ್ರಾಯಶಃ ಅಮೆರಿಕದ ಪ್ರಶಸ್ತಿಯ ಹಿನ್ನೆಲೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದಂತಿಲ್ಲ. ಈ ಮುಂಚೆ ಈ ಪ್ರಶಸ್ತಿಯನ್ನು ಪಡೆದ ಕೇವಲ ಇಬ್ಬರು ಭಾರತೀಯರೆಂದರೆ 1950ರಲ್ಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮತ್ತು 1955 ರಲ್ಲಿ ಎಸ್.ಎಂ.ಶ್ರೀನಾಗೇಶ್. ಇಬ್ಬರೂ ಸೇನಾ ದಂಡನಾಯಕರಾಗಿ ಬ್ರಿಟಿಷ್ ಸೇನೆಯ ಅಧಿಕಾರಿಗಳಾಗಿ ಎರಡನೇ ಮಹಾಯುದ್ಧದಲ್ಲಿ ಕಾದಾಡಿದ್ದರು. ಆಗಿನ ದಿನಗಳಲ್ಲಿ, ಈ ಲೀಜನ್ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ಹಲವಾರು ಸೇನಾ ಮುಖ್ಯಸ್ಥರಿಗೆ ಪ್ರದಾನ ಮಾಡಲಾಗಿದೆ. ಅಂತಹ ಪ್ರಶಸ್ತಿ ಪುರಸ್ಕೃತರಲ್ಲಿ ನೇಪಾಳದ ಸೇನಾ ಮುಖ್ಯಸ್ಥರೂ ಒಬ್ಬರು.

ಮೂರು ದಶಕಗಳಲ್ಲಿ, ಈ ಪ್ರಶಸ್ತಿಯನ್ನು ಯಾರಿಗೂ ನೀಡಿರಲಿಲ್ಲ. ಈಗ ಟ್ರಂಪ್ ಅವರು ಹಠಾತ್ತಾಗಿ ಅದನ್ನು ಮತ್ತೆ ಅಸ್ತಿತ್ವಕ್ಕೆ ತಂದು ವಿದೇಶಿ ನಾಯಕರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಪ್ರಶಸ್ತಿಯನ್ನು ಕುವೈತ್‌ನ ದಿವಂಗತ ಅಮೀರ್ ಅವರಿಗೆ ದಯಪಾಲಿಸಿದ್ದಾರೆ. ಚೀನಾ ವಿರುದ್ಧದ ತಮ್ಮ ಹೋರಾಟದಲ್ಲಿ ಜತೆಯಾಗಿ ನಿಂತವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ತಮ್ಮ ಅಧಿಕಾರಾವಧಿಯ ಕೊನೆ ದಿನಗಳಲ್ಲಿ ಟ್ರಂಪ್ ಇಂತಹ ಪ್ರಶಸ್ತಿಯನ್ನು ಹಂಚುತ್ತಿದಾರೆ. ಪೆಂಟಗನ್ ಮಿಲಿಟರಿ ಮೈತ್ರಿಕೂಟ ಬಲಪಡಿಸುವಲ್ಲಿ ಬಹಳವಾಗಿ ಕೂಲಿ ಸೈನಿಕ ಉದ್ದೇಶವನ್ನು  ಹೊಂದಿದೆ.

ಮೋದಿಯವರು ಗೌರವದ ಸಂಭ್ರಮ, ಸಡಗರದಲ್ಲಿರಬಹುದಾದರೂ, ದುರದೃಷ್ಟದ ಸಂಗತಿಯೆಂದರೆ, ಈ ಪ್ರಶಸ್ತಿಯು ಭಾರತವು ಅಮೆರಿಕದ ಅಡಿಯಾಳು ಮಿಲಿಟರಿ ಮಿತ್ರನಾಗಿ ಬಿಟ್ಟಿರುವುದಕ್ಕೆ ಕೊಟ್ಟಿರುವ ಒಂದು ಸ್ವೀಕೃತಿ ರಸೀದಿಯಷ್ಟೆ.

ಅನು: ಟಿ. ಸುರೇಂದ್ರ ರಾವ್

Leave a Reply

Your email address will not be published. Required fields are marked *