ದಿಲ್ಲಿ ಹಿಂಸಾಚಾರ ಪೀಡಿತರಿಗೆ ಪರಿಹಾರದಲ್ಲಿ ತಾರತಮ್ಯ ಮಾಡಬೇಡಿ

ದಿಲ್ಲಿ ಮುಖ್ಯಮಂತ್ರಿಗಳಿಗೆ ಬೃಂದಾ ಕಾರಟ್‍ ಪತ್ರ

ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಕೋಮುವಾದಿ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟವರ ಕುಟುಂಬಗಳಿಗೆ ದಿಲ್ಲಿ ಸರಕಾರ ಪ್ರಕಟಿಸಿರುವ ಪರಿಹಾರ ಪ್ಯಾಕೇಜಿನಲ್ಲಿ ವಯಸ್ಕರು ಮತ್ತು ಅಪ್ರಾಪ್ತ ವಯಸ್ಕರೆಂದು ತಾರತಮ್ಯ ಮಾಡಲಾಗುತ್ತಿದೆ, ಇದು ನ್ಯಾಯಯುತವಲ್ಲ, ಇದನ್ನು ಸರಿಪಡಿಸಬೇಕು  ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಹಿಂಸಾಚಾರ ಪೀಡಿತರ ಕುಟುಂಬಗಳವರನ್ನು ಇತ್ತೀಚೆಗೆ ಭೇಟಿ ಮಾಡಿದಾಗ ಎರಡು ಕುಟುಂಬದವರಿಂದ ಈ ತಾರರತಮ್ಯದ ಕುರಿತು ತಿಳಿಯಿತು. ಈ ಪ್ಯಾಕೇಜಿನಲ್ಲಿ ಕೊಲ್ಲಲ್ಪಟ್ಟವರು ವಯಸ್ಕರಾದರೆ 10 ಲಕ್ಷ  ರೂ. ಪರಿಹಾರ, ಅಪ್ರಾಪ್ತ ವಯಸ್ಕರಾದರೆ 5 ಲಕ್ಷ ರೂ. ಮಾತ್ರ ಪರಿಹಾರ ಎಂದು ಹೇಳಲಾಗಿದೆ. ಬಹುಶಃ ವಯಸ್ಕರಾದರೆ ಅವರ ಸಾವಿನಿಂದ ಕುಟುಂಬ ಒಬ್ಬ ಅದಾಯ ತರುವ ಸದಸ್ಯನನ್ನು ಕಳೆದುಕೊಂಡಂತಾಗುತ್ತದೆ, ಆದರೆ ಅಪ್ರಾಪ್ತ ವಯಸ್ಕ ಸದಸ್ಯ ಸತ್ತರೆ ಹಾಗಾಗುವದಿಲ್ಲ ಎಂದು ಭಾವಿಸಿರುವಂತಿದೆ. ಅನುಕಂಪವಿಲ್ಲದ ಈ ತಿಳುವಳಿಕೆ ದೋಷಪೂರ್ಣವಾಗಿದೆ ಎಂದು ಬೃಂದಾ ಕಾರಟ್‍ ಅಭಿಪ್ರಾಯ ಪಟ್ಟಿದ್ದಾರೆ.

ದುರದೃಷ್ವಶಾತ್ ‘ಆದಾಯ ತರುವ ಸದಸ್ಯ’ ಎಂಬುದರ ನಿರ್ವಚನೆ ಬಡ ಸ್ವ-ಉದ್ಯೋಗಿ ಕುಟುಂಬಗಳ ವಾಸ್ತವ ಸ್ಥಿತಿಗೆ ಸ್ಪಂದಿಸುತ್ತಿಲ್ಲ. ಇಂತಹ ಕುಟುಂಬಗಳಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿರುವಾಗಲೇ, ಕುಟುಂಬದ ವೃತ್ತಿಯಲ್ಲಿ ನೆರವಾಗುವಲ್ಲಿ ವಯಸ್ಕರ ಹೊಣೆಗಳನ್ನು ಹೊರಬೇಕಾಗಿ ಬರುತ್ತದೆ.

ಬೃಂದಾ ಕಾರಟ್‍ ತಮ್ಮ ಪತ್ರದಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರ ಉದಾಹರಣೆಗಳನ್ನು ಮುಖ್ಯಮಂತ್ರಿ ಗಳ ಗಮನಕ್ಕೆ ತಂದಿದ್ದಾರೆ.

ಒಬ್ಬನ ಹೆಸರು ನಿತಿನ್‍ ಪಾಸ್ವಾನ್, 15 ವರ್ಷದ ಈತ ರಾಮ್‍ ಸುಗರಕ್‍ ಅವರ ಮಗ. ಇನ್ನೊಬ್ಬ 17 ವರ್ಷದ ಅಮೀನ್, ಈತ ಶಹಾಬುದ್ದೀನ್ ಎಂಬವರ ಮಗ.

ನಿತಿನ್‍ ತಂದೆ ಒಂದು ಸಾಮಾನು ಸಾಗಿಸುವ ಕೈಗಾಡಿಯ ಮಾಲಕ. ಮಗ ಶಾಲೆಯ ನಂತರ ಮತ್ತು ಶಾಲಾ ಬಿಡುವಿನ ದಿನಗಳಲ್ಲಿ ಕುಟುಂಬಕ್ಕೆ ಹಣಕಾಸು ನೆರವು ಸಂಪಾದಿಸುತ್ತಿದ್ದ. ಅಮೀನ್‍ ಒಂದು ಮೋಟಾರ್‍ ಬೈಕ್ ರಿಪೇರಿ ಅಂಗಡಿಯಲ್ಲಿ ಒಬ್ಬ ಅಪ್ರೆಂಟೀಸ್‍ ಆಗಿದ್ದ. ಕುಟುಂಬದ ಒಟ್ಟು ಆದಾಯದಲ್ಲಿ ಈತನ ಗಳಿಕೆಯೂ ಸೇರಿತ್ತು. ಆದ್ದರಿಂದ ಈ ಎರಡರಲ್ಲಿಯೂ ಕುಟುಂಬಕ್ಕೆ ಆದಾಯ ನಷ್ಟದ ತಿಳುವಳಿಕೆ ಕೂಡ ಅನ್ವಯವಾಗುತ್ತದೆ ಎಂದು ಬೃಂದಾ ಕಾರಟ್‍ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ ದಿಲ್ಲಿ ಸರಕಾರ ಒಂದು ಬೆಳೆದ ಮಗು ಭೀಕರ ಹಿಂಸಾಚಾರದಲ್ಲಿ ಪ್ರಾಣ ಕಳಕೊಂಡಾಗ ಅದರ ತಂದೆ-ತಾಯಿಗಳಿಗೆ ಆಗುವ ಅಪಾರ ಮಾನಸಿಕ ಆಘಾತ, ನಷ್ಟವನ್ನು ಕೂಡ ಪರಿಗಣಿಸಬೇಕು. ಇದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಸರಕಾರದ ಮತ್ತು ಸಮಾಜದ ಸಹಾನುಭೂತಿಯ ಅಭಿವ್ಯಕ್ತಿಯಾಗಿ ಆ ಕುಟುಂಬಕ್ಕೆ ಒಂದು ನ್ಯಾಯಯುತ ಮೊತ್ತದ ಪರಿಹಾರ ಒದಗಿಸುವುದು ಅಗತ್ಯವಾಗುತ್ತದೆ. ಮೇಲೆ ಹೇಳಿದ ಒಂದು ನಿಶ್ಚಿತ ಆದಾಯವಿಲ್ಲದ ಎರಡೂ ಕುಟುಂಬಗಳ ಸಾಮಾಜಿಕ-ಆರ್ಥಿಕ ಸ್ಥಿತಿ-ಗತಿಯನ್ನು ನೋಡಿದರೆ, 10ಲಕ್ಷರೂ.ಗಳ ಪರಿಹಾರ ಕೊಡುವುದು ನ್ಯಾಯದ ದೃಷ್ಟಿಯಿಂದ ಅಗತ್ಯ ಎಂದು ಬೃಂದಾ ಕಾರಟ್‍ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಈ ಇಬ್ಬರು ಮಕ್ಕಳ ಸಾವಿನ ಮೊದಲ ವಾರ್ಷಿಕ ಮುಂದಿನ ತಿಂಗಳ ಕೊನೆಯಲ್ಲಿ ಬರಲಿದೆ. “ಈ ನೋವಿನ ಸಂದರ್ಭದಲ್ಲಿ ಈ ಎರಡೂ ಕುಟುಂಬಗಳು ಬಾಕಿ 5 ಕ್ಷ ರೂಪಾಯಿಗಳನ್ನು ಪಡೆಯುವಂತಾದರೆ ಅದು ನಿಮ್ಮ ಸರಕಾರದಿಂದ ನ್ಯಾಯದ ಒಂದು ಮಹತ್ವದ ಸಂದೇಶವಾಗುತ್ತದೆ” ಎಂದು ಬರೆಯುತ್ತ ಬೃಂದಾ  ಕಾರಟ್‍ ಕೇಜ್ರಿವಾಲ್‍ ಸರಕಾರದಿಂದ ಈ ಕುರಿತಂತೆ ಒಂದು ಸಕಾರಾತ್ಮಕ ಸ್ಪಂದನೆಯನ್ನು ನಿರೀಕ್ಷಿಸಿದ್ದಾರೆ.

Leave a Reply

Your email address will not be published. Required fields are marked *