ಮೋದಿ ಸರಕಾರದ ವಿದೇಶಾಂಗ ಧೋರಣೆ ಗೊಂದಲಕ್ಕೆ ಬಿದ್ದಿದೆ, ಅದರ ಅಮೆರಿಕ-ಪರ ನಿಲುವು ದೇಶವನ್ನು ಮುಂದೆ ಸಾಮರಿಕವಾಗಿ ಮುಂದಿನ ದಾರಿಗಾಣದ ಪರಿಸ್ಥಿತಿಗೆ ತಂದಿಟ್ಟಿದೆ ಎಂಬುದನ್ನು ಗಂಭೀರವಾಗಿ ನೆನಪಿಸುವುದರೊಂದಿಗೆ ಹೊಸ ವರ್ಷ ಆರಂಭವಾಗಿದೆ.
ಅಧಿಕಾರದಿಂದ ಹೊರಹೋಗುತ್ತಿರುವ ಅಮೆರಿಕಾ ಸಂಯುಕ್ತ ಸಂಸ್ಥಾನ(ಅ.ಸಂ.ಸಂ.)ಗಳ ರಾಯಭಾರಿ ಕೆನೆಥ್ ಜಸ್ಟರ್ ತನ್ನ ಬೀಳ್ಕೊಡಿಗೆ ಭಾಷಣದಲ್ಲಿ ಮೋದಿ ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಭಾರತವನ್ನು ಸರಣಿ-ಸರಣಿಯಾಗಿ ಮಿಲಿಟರಿ ಒಪ್ಪಂದಗಳ ಮೂಲಕ ಕಟ್ಟಿ ಹಾಕಿದ ನಂತರ, ದೇಶ ಯಾವುದೇ ರೀತಿಯಲ್ಲಿ ವ್ಯೂಹಾತ್ಮಕ ಸ್ವಾಯತ್ತತೆಯನ್ನು ತೋರಿಸುವುದು ಅಮೆರಿಕಾಕ್ಕೆ ಸರಿಬರದು. “ಈ ಭದ್ರತಾ ಪರಿಸರದಲ್ಲಿ, ಹೇಗೆ ಒಂದು ಸಲಕರಣೆ ಒಂದು ಸರಿಯಾದ ವ್ಯವಸ್ಥೆ ಮತ್ತು ಕಾರ್ಯವ್ಯೂಹದೊಳಕ್ಕೆ ಪರಿಣಾಮಕಾರಿಯಾಗಿ ಸಮಗ್ರಗೊಳ್ಳುತ್ತದೆ, ಮತ್ತು ಇಂದು ಖರೀದಿಸಿದ ಉತ್ಪನ್ನ ಭವಿಷ್ಯದಲ್ಲಿ ಮೇಲ್ಮಟ್ಟದ ತಂತ್ರಜ್ಞಾನದ ಉತ್ಪನ್ನಕ್ಕೆ ದಾರಿ ಮಾಡಿಕೊಡುತ್ತದೆ ಅಥವ ಅದನ್ನು ಪಡೆಯದಂತೆ ಮಾಡುತ್ತದೆ ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು” ಎಂದು ರಾಜತಾಂತ್ರಿಕ ಭಾಷೆಯಲ್ಲಿ ಜಸ್ಟರ್ ಸಾಧ್ಯವಾದಷ್ಟು ನೇರವಾಗಿಯೇ ಈ ವಿಷಯವನ್ನು ಮುಂದಿಟ್ಟರು.
BECA, COMCASA ಮತ್ತು ಕೈಗಾರಿಕಾ ಸಂಕೀರ್ಣ ಇವೆಕ್ಕೆಲ್ಲ ಸಹಿ ಮಾಡಿಯಾಗಿದೆ. ಇವೆಲ್ಲವೂ ಅಂತರ-ನಿರ್ವಹಣೆಯನ್ನು ಮತ್ತು ಷರತ್ತುಬದ್ಧ ತಂತ್ರಜ್ಞಾನವನ್ನು ಖಾತ್ರಿಗೊಳಿಸುವಂತವುಗಳು. ಇವಕ್ಕೆ ಸಹಿ ಮಾಡಿದ ಮೇಲೆ ಭಾರತ ಯಾವ ಶಸ್ತ್ರ ವ್ಯವಸ್ಥೆಯನ್ನು ಮತ್ತು ತಂತ್ರಜ್ಞಾನವನ್ನು ಪಡೆಯಬೇಕು ಎಂಬುದನ್ನು ಅ.ಸಂ.ಸಂ. ನಿರ್ದೇಶಿಸುತ್ತದೆ. ಮೋದಿ ಸರಕಾರ ಭಾರತವನ್ನು ಒಂದು ಬಲೆಯಲ್ಲಿ ಸಿಲುಕಿಸಿದೆ.
ಭಾರತವು ರಷ್ಯಾದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಮತ್ತು ಈಗಾಗಲೇ ಮುಂಗಡ ಮೊತ್ತವನ್ನೂ ಪಾವತಿ ಮಾಡಿದೆ. ಅ.ಸಂ.ಸಂ. ತನ್ನ ಸಿ.ಎ.ಎ.ಟಿ.ಎಸ್.ಎ. (ನಿರ್ಬಂಧಗಳ ಮೂಲಕ ಅಮೆರಿಕಾದ ಎದುರಾಳಿಗಳನ್ನು ಎದುರಿಸುವ ಕಾಯ್ದೆ) ಅಡಿಯಲ್ಲಿ ರಷ್ಯಾದಿಂದ ಮಿಲಿಟರಿ ಸಲಕರಣೆಗಳನ್ನು ಖರೀದಿಸುವ ಯಾವುದೇ ದೇಶದ ಮೇಲೆ ನಿರ್ಬಂಧ ಹೇರಲು ಸಾಧ್ಯವಿದೆ. ಈಗಾಗಲೇ ಎಸ್-400 ಕ್ಷಿಪಣಿಗಳನ್ನು ಖರೀದಿಸಿದ್ದಕ್ಕಾಗಿ ಅದು ತನ್ನ ನಾಟೋ ಮಿತ್ರದೇಶವಾದ ಟರ್ಕಿಯಲ್ಲಿನ ಘಟಕಗಳಿಗೆ ನಿರ್ಬಂಧ ಹಾಕಿದೆ.
- 2020 ಮುಗಿಯುತ್ತಿದ್ದಂತೆ ಅಮೆರಿಕಾದ ಮಿಲಿಟರಿ ಮಿತ್ರನಾದುದಕ್ಕೆ ತೆರಬೇಕಾಗಿರುವ ಬೆಲೆಯೇನು ಎಂಬುದನ್ನು ಭಾರತ ಕಲಿಯುತ್ತಿದೆ. ಅಧಿಕಾರ ಬಿಡುತ್ತಿರುವ ಅಮೆರಿಕನ್ ರಾಯಭಾರಿ ತನ್ನ ಬೀಳ್ಕೊಡಿಗೆ ಭಾಷಣದಲ್ಲಿ ‘ಮೇಕ್ ಇನ್ ಇಂಡಿಯ’ ಮತ್ತು ‘ಆತ್ಮನಿರ್ಭರ’ಧೋರಣೆಗಳು ಸರಿಯಿಲ್ಲ ಎಂದು ಹೇಳಲು ಹಿಂದೆ-ಮುಂದೆ ನೋಡಲಿಲ್ಲ. ಆತ ನೀಡಿದ ಎಚ್ಚರಿಕೆ ಸ್ಪಷ್ಟವಾಗಿತ್ತು- ನೀವು ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಹಣಕಾಸು ಬಂಡವಾಳದ ಹಿತಾಸಕ್ತಿಗಳನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು, ಇಲ್ಲವಾದರೆ, ವ್ಯಾಪಾರ ಒಪ್ಪಂದ ಇರುವುದಿಲ್ಲ.
- ಬಿಡೆನ್ ಆಡಳಿತ ಮೂಡಿಬರುತ್ತಿರುವುದು ಸರಕಾರಕ್ಕೆ ತನ್ನ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಬಲಪಡಿಸುವಂತೆ ಅಮೆರಿಕಾದೊಂದಿಗೆ ತನ್ನ ಸಂಬಂಧಗಳನ್ನು ಪುನರ್ರೂಪಿಸಿಕೊಳ್ಳಲು ಅವಕಾಶ ಕೊಡುತ್ತಿದೆ. ಅದನ್ನು ಮಾಡದಿದ್ದರೆ, 2021 ಕೂಡ ಮೋದಿ ಸರಕಾರದ ಕಣ್ಣುಪಟ್ಟಿ ಕಟ್ಟಿಕೊಂಡ ವಿದೇಶಾಂಗ ಧೋರಣೆಯ ಶೋಚನೀಯ ಪರಿಣಾಮಗಳು ಅನಾವರಣಗೊಳ್ಳುವುದು ಮುಂದುವರೆಯುತ್ತದೆ.
ಜಸ್ಟರ್ ಮಾತುಗಳಲ್ಲಿ ಹೇಳುವುದಾದರೆ, “ವ್ಯವಸ್ಥೆಗಳ ತಂತ್ರಜ್ಞಾನ ಹೆಚ್ಚೆಚ್ಚು ಮೇಲ್ಮಟ್ಟಗಳಿಗೆ ಹೋದಂತೆ, ದೇಶ ‘ಎ’ಗೆ ದೇಶ ‘ಬಿ’ಯೊಂದಿಗೆ ಸರಿಬರದಿದ್ದರೆ, ದೇಶ ‘ಬಿ’ಗೆ ಸಂದೇಹಾಸ್ಪದವಾಗಬಹುದಾದ ತಂತ್ರಜ್ಞಾನವನ್ನು ಮಾರುವ ಇಚ್ಛೆ ಕಡಿಮೆಯಾಗುತ್ತದೆ.” ಮುಂದುವರೆದು ಅವರು “ನಾವಿನ್ನೂ ಅಲ್ಲಿಯವರೆಗೆ ಹೋಗಿಲ್ಲ, ಆದರೆ ಭವಿಷ್ಯದಲ್ಲಿ ಅದು ಬರಬಹುದು… ತನ್ನ ತಂತ್ರಜ್ಞಾನದೊಳಗೆ ಮತ್ತು ಮಿತ್ರಶಕ್ತಿಗಳೊಂದಿಗೆ ಅಂತರ-ನಿರ್ವಹಣೆ ಸಾಧ್ಯವಿರುವ ಹೆಚ್ಚು ಮುಂದುವರೆದ ತಂತ್ರಜ್ಞಾನವನ್ನು ಪಡೆಯಲು ಎಷ್ಟರ ಮಟ್ಟಿಗೆ ಕೊಡು-ಕೊಳ್ಳು ಮಾಡಬೇಕಾಗಬಹುದು ಎಂದು ಭಾರತ ನಿರ್ಧರಿಸಬೇಕಾಗುತ್ತದೆ” ಎಂದು ಅವರು ಹೇಳಿದರು.
ಅಮೆರಿಕ ಸಂಯುಕ್ತ ಸಂಸ್ಥಾನ ಈಗ ರಷ್ಯಾದಿಂದ ಭವಿಷ್ಯದಲ್ಲಿ ಭಾರತದ ಶಸ್ತ್ರ ಖರೀದಿಗಳನ್ನೆಲ್ಲ ಮುಚ್ಚಿಸಿ ಬಿಡುವುದರಲ್ಲಿ ನಿರತವಾಗಿದೆ. ಅಮೆರಿಕಾದ ಮಿಲಿಟರಿ ಮಿತ್ರನಾದುದಕ್ಕೆ ತೆರಬೇಕಾಗಿರುವ ಬೆಲೆಯೇನು ಎಂಬುದನ್ನು ಭಾರತ ಕಲಿಯುತ್ತಿದೆ.
ಈ ರಾಯಭಾರಿ ಸರಕಾರದ ‘ಮೇಕ್ ಇನ್ ಇಂಡಿಯ’ ಮತ್ತು ‘ಆತ್ಮನಿರ್ಭರ’ ಧೋರಣೆಗಳು ಸರಿಯಿಲ್ಲ ಎಂದು ಹೇಳಲು ಹಿಂದೆ-ಮುಂದೆ ನೋಡಲಿಲ್ಲ. ಆತ ನೀಡಿದ ಎಚ್ಚರಿಕೆ ಸ್ಪಷ್ಟವಾಗಿತ್ತು- ನೀವು ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಹಣಕಾಸು ಬಂಡವಾಳದ ಹಿತಾಸಕ್ತಿಗಳನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು, ಇಲ್ಲವಾದರೆ, ವ್ಯಾಪಾರ ಒಪ್ಪಂದ ಇರುವುದಿಲ್ಲ.
ರಷ್ಯಾದಿಂದ ಖರೀದಿಯ ಬಗ್ಗೆ ಕಟು ನಿಲುವು ಬಿಡೆನ್ ಆಡಳಿತ ವಹಿಸಿಕೊಂಡ ಮೇಲೆ ಬದಲಾಗಲಿಕ್ಕಿಲ್ಲ. ಏಕೆಂದರೆ ಈ ಆಡಳಿತವೂ ರಷ್ಯಾವನ್ನು ವೈರಪೂರ್ಣ ಎದುರಾಳಿ ಎಂದೇ ಪರಿಗಣಿಸುತ್ತದೆ. ಮೋದಿ ಸರಕಾರ ಅಮೆರಿಕಾದ ಸಿ.ಎ.ಎ.ಟಿ.ಎಸ್.ಎ. ಕಾಯ್ದೆಯಿಂದ ಬಚಾವಾಗಬೇಕಾದರೆ ಅಮೆರಿಕನ್ನರಿಗೆ ಹೆಚ್ಚಿನ ರಿಯಾಯ್ತಿಗಳನ್ನು ಕೊಡಬೇಕಾಗುತ್ತದೆ, ನಿರ್ದಿಷ್ಟವಾಗಿ ಅವರಿಂದ ಹೆಚ್ಚು ವೆಚ್ಚದಾಯಕ ಶಸ್ತ್ರಾಸ್ತ್ರಗಳನ್ನು ಖರೀದಿಸಬೇಕಾಗುತ್ತದೆ.
ಈ ರೀತಿ ಅಮೆರಿಕಾದೊಂದಿಗೆ ಸಾಲುಗಟ್ಟಿ ನಿಂತಿರುವುದು ಭಾರತದ ಪಾರಂಪರಿಕ ಸಂಬಂಧಗಳು ಮತ್ತು ಮಿತ್ರತ್ವಗಳನ್ನು ಪ್ರತಿಕೂಲವಾಗಿ ಬಾಧಿಸಬಹುದು ಎಂದು ಬೇರೆ ಹೇಳಬೇಕಾಗಿಲ್ಲ. ರಷ್ಯಾದ ವಿದೇಶಾಂಗ ಮಂತ್ರಿ ಸರ್ಗೆ ಲಾವ್ರೊವ್ ಕಳೆದ ತಿಂಗಳು ಭಾರತ-ಶಾಂತಿಸಾಗರ ಕಾರ್ಯವ್ಯೂಹವನ್ನು ಮತ್ತು ಕ್ವಾಡ್ ನ್ನು ಭಾರತವನ್ನು ಚೀನಾ-ವಿರೋಧಿ ಆಟಗಳಲ್ಲಿ ತೊಡಗಿಸುವ ಮತ್ತು “ಭಾರತದೊಡನೆ ನಮ್ಮ ನಿಕಟ ಭಾಗೀದಾರಿಕೆ ಹಾಗೂ ವಿಶೇಷ ಸಂಬಂಧಗಳನ್ನು ಶಿಥಿಲಗೊಳಿಸುವ” ಪಾಶ್ಚಿಮಾತ್ಯ ದೇಶಗಳ “ಆಕ್ರಮಣಕಾರಿ ಮತ್ತು ಕಪಟ” ಧೋರಣೆ ಎಂದು ವರ್ಣಿಸಿದರು.
ಬೇರೆ ದೇಶಗಳು ಮತ್ತು ಪ್ರಮುಖ ಕೇಂದ್ರಗಳು ಚೀನಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಗಟ್ಟಗೊಳಿಸುತ್ತಿರುವಾಗ, ಭಾರತ ತನ್ನನ್ನು ಚೀನಾದ ವಿರುದ್ಧ ಟ್ರಂಪ್-ಪೊಂಪಿಯೊ ಬಂಡಿಗೆ ತಗುಲಿಸಿಕೊಂಡು, ಒಂದು ಗೂಡಿನಲ್ಲಿ ಸಿಲುಕಿರುವಂತಾಗಿದೆ. ಡಿಸೆಂಬರ್ 30 ರಂದು, ಯುರೋಪಿಯನ್ ಒಕ್ಕೂಟ ಮತ್ತು ಚೀನಾ, ದೀರ್ಘ ಮಾತುಕತೆಗಳ ನಂತರ ಒಂದು ‘ಸಮಗ್ರ ಹೂಡಿಕೆ ಒಪ್ಪಂದ’(ಸಿಎಐ) ಮಾಡಿಕೊಂಡಿವೆ.
“ಭೌಗೋಳಿಕ-ರಾಜಕೀಯ ದೃಷ್ಟಿಯಿಂದ ಹೇಳುವುದಾದರೆ, ಸಿ.ಎ.ಐ. ಯುರೋಪ್ ವ್ಯೂಹಾತ್ಮಕವಾಗಿ ಸ್ವತಂತ್ರವಾಗಿರ ಬಯಸುತ್ತದೆ ಎಂಬುದನ್ನು ಸೂಚಿಸುತ್ತದೆ. ಇದು ಚೀನಾವನ್ನು ತಡೆದಿಡುವ ಅಮೆರಿಕ ನೇತೃತ್ವದ ‘ಭಾರತ- ಶಾಂತಸಾಗರ’ ವ್ಯೂಹವನ್ನು ಸೇರಲು ಯುರೋಪ್ ಸಿದ್ಧಗೊಳ್ಳುತ್ತಿದೆ ಎಂಬ ಭಾರತದ ವಿದೇಶಾಂಗ ಧೋರಣೆಯನ್ನು ಪುಡಿಗುಟ್ಟಿದೆ.”
-ಒಬ್ಬ ಸಾಮರಿಕ ವಿಷಯಗಳ ವಿಶ್ಲೇಷಕರು
ಒಬ್ಬ ಸಾಮರಿಕ ವಿಷಯಗಳ ಟಿಪ್ಪಣಿಗಾರರು ಹೇಳಿರುವಂತೆ, “ಭೌಗೋಳಿಕ-ರಾಜಕೀಯ ದೃಷ್ಟಿಯಿಂದ ಹೇಳುವುದಾದರೆ, ಸಿ.ಎ.ಐ. ಯುರೋಪ್ ವ್ಯೂಹಾತ್ಮಕವಾಗಿ ಸ್ವತಂತ್ರವಾಗಿರಬಯಸುತ್ತದೆ ಎಂಬುದನ್ನು ಸೂಚಿಸುತ್ತದೆ. ಇದು ಚೀನಾವನ್ನು ತಡೆದಿಡುವ ಅಮೆರಿಕ ನೇತೃತ್ವದ ‘ಭಾರತ- ಶಾಂತಸಾಗರ’ ವ್ಯೂಹವನ್ನು ಸೇರಲು ಸಿದ್ಧಗೊಳ್ಳುತ್ತಿದೆ ಎಂಬ ಭಾರತದ ವಿದೇಶಾಂಗ ಧೋರಣೆಯನ್ನು ಪುಡಿಗುಟ್ಟಿದೆ. ಅಮೆರಿಕಾದ ಯುಗಳ ಜಗತ್ತಿನ ಪರಿಯೋಜನೆಯಿಂದ ಯುರೋಪು ಹಿಂದೆ ಸರಿಯುತ್ತಿದೆ ಎಂಬುದು ಇಲ್ಲಿನ ಕೇಂದ್ರ ವಿಷಯ.”
ಈ ಮೊದಲು ಏಷ್ಯಾ-ಶಾಂತಸಾಗರ ದೇಶಗಳು ಸಹಿ ಹಾಕಿರುವ ಆರ್.ಸಿ.ಇ.ಪಿ.(ಪ್ರಾದೇಶಿಕ ಸಮಗ್ರ ಆರ್ಥಿಕ ಕಾರ್ಯಕ್ರಮ)ಯೊಂದಿಗೆ ಚೀನಾ ಜಗತ್ತಿನ ಅತ್ಯಂತ ದೊಡ್ಡ ಮುಕ್ತ-ವ್ಯಾಪಾರ ಒಪ್ಪಂದದ ಭಾಗವಾಗಿ ಬಿಟ್ಟಿದೆ. ಚೀನಾ 2020ನ್ನು ಧನಾತ್ಮಕ ಬೆಳವಣಿಗೆ ದರದೊಂದಿಗೆ ಮುಗಿಸಿರುವ ಏಕೈಕ ಪ್ರಧಾನ ದೇಶವಾಗಿದೆ ಮತ್ತು ಒ.ಇ.ಸಿ.ಡಿ.ಪ್ರಕಾರ 2021ರ ಆರ್ಥಿಕ ಪುನಶ್ಚೇತನದ ಸುಮಾರು ಮೂರನೇ ಒಂದು ಭಾಗ ಚೀನಾದ್ದಾಗಿರುತ್ತದೆ.
ಭಾರತವು ಚೀನೀ ಹೂಡಿಕೆಗಳನ್ನು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಕಡಿತ ಮಾಡುವ ಪ್ರಯತ್ನಗಳಿಂದಾಗಿ ಅಂಚಿನಲ್ಲಿ ಉಳಿಯಬೇಕಾಗಿ ಬಂದಿದೆ.
ಅಮೆರಿಕ ಸಂಯುಕ್ತ ಸಂಸ್ಥಾನಗಳ ವಿದೇಶಾಂಗ ಕಾರ್ಯದರ್ಶಿಯಾಗಿ ತನ್ನ ಕೊನೆಯ ದಿನಗಳಲ್ಲಿ ಪೊಂಪಿಯೊ ಒಂದಷ್ಟು ಆದೇಶಗಳನ್ನು ಹೊರಡಿಸಿದ್ದಾರೆ. ಅವುಗಳಲ್ಲಿ ಇರಾನಿನೊಂದಿಗೆ ವ್ಯಾಪಾರ ಮಾಡುವ ಕಂಪನಿಗಳ ಮೇಲೆ ಹೆಚ್ಚು ನಿರ್ಬಂಧಗಳು; ಕ್ಯೂಬಾಕ್ಕೆ ಮತ್ತೆ ‘ಭಯೋತ್ಪಾದನೆಯ ಪ್ರಾಯೋಜಕ’ ಸ್ಥಾನಮಾನ; ವೆನೆಜುವೆಲಾದ ರಾಷ್ಟ್ರೀಯ ಅಸೆಂಬ್ಲಿಗೆ ಚುನಾವಣೆಯ ನಂತರ ಸಮಾನಾಂತರ ಅಧ್ಯಕ್ಷರಿಗೆ ಬೆಂಬಲದ ಪುನರುಚ್ಚಾರ; ಮೂವರು ಪತ್ರಕರ್ತರರಿಗೆ ಶಿಕ್ಷೆ ವಿಧಿಸಿದ್ದಕ್ಕೆ ವಿಯೆಟ್ನಾಂನ ಖಂಡನೆ ಮತ್ತು ತೈವಾನಿನೊಂದಿಗೆ ಅಮೆರಿಕನ್ ಅಧಿಕಾರಿಗಳ ಸಂಪರ್ಕಗಳ ಮೇಲಿನ ಎಲ್ಲ ಮಿತಿಗಳನ್ನು ತೆಗೆದು ಹಾಕುವುದು ಸೇರಿದೆ.
ಇಂತಹ ಒಬ್ಬ ಅಸಹ್ಯ ವ್ಯಕ್ತಿಯೊಂದಿಗೆ ವಿದೇಶಾಂಗ ಮಂತ್ರಿ ಎಸ್ ಜೈಶಂಕರ್ ಭ್ರಾಮಕ ಭಾರತ-ಶಾಂತಸಾಗರ ಪ್ರದೇಶವನ್ನು ಅಮೆರಿಕ ಸಂಯುಕ್ತ ಸಂಸ್ಥಾನ ತನ್ನ ಆಧಿಪತ್ಯವನ್ನು ನಡೆಸಲಿಕ್ಕಾಗಿ “ಮುಕ್ತವಾಗಿಡಲು ಮತ್ತು ತೆರೆದಿಡಲು” ಹೊಂದಾಣಿಕೆಯಿಂದ ಜತೆ-ಜತೆಗೆ ಕೆಲಸ ಮಾಡಿದ್ದು.
ಈ ಏಕ-ಆಯಾಮದ ವಿದೇಶಾಂಗ ಧೋರಣೆಯಿಂದಾಗಿ, ತೈಲ ಖರೀದಿ ಕುರಿತಂತೆ ಅಮೆರಿಕಾದ ಆದೇಶಗಳನ್ನು ಸ್ವೀಕರಿಸಿ ಒಂದು ಪಾರಂಪರಿಕ ಮಿತ್ರದೇಶವಾದ ಇರಾನಿನೊಂದಿಗೆ ಸಂಬಂಧಗಳಲ್ಲಿ ಕ್ಲೇಶ ಉಂಟಾಗುವಂತಾಯಿತು; ತನ್ನ ದಕ್ಷಿಣ ಏಷ್ಯಾ ನೆರೆ ದೇಶಗಳೊಂದಿಗೆ ಚೀನಾದ ಬೆಳೆಯುತ್ತಿರುವ ಸಂಬಂಧಗಳನ್ನು ತಡೆಯುವ ನಿರರ್ಥಕ ಪ್ರಯತ್ನಗಳು ಮತ್ತು ಪ್ರಕ್ರಿಯೆಯಲ್ಲಿ ಅವುಗಳಿಗೆ ಕಿರಿಕಿರಿ ಉಂಟುಮಾಡುವಂತಾಯಿತು; ಮತ್ತು ಅಮೆರಿಕಾದೊಂದಿಗೆ ವ್ಯೂಹಾತ್ಮಕ ಮೈತ್ರಿ ಅಲಿಪ್ತ ದೇಶಗಳ ಪೈಕಿ ಭಾರತವನ್ನು ಸೌದಿ ಅರೇಬಿಯಾದ ಸ್ಥಾನಕ್ಕೆ ಇಳಿಸುವಂತಾಯಿತು.
ಬಿಡೆನ್ ಆಡಳಿತ ಮೂಡಿಬರುತ್ತಿರುವುದು ಸರಕಾರಕ್ಕೆ ತನ್ನ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಬಲಪಡಿಸಲು ಅಮೆರಿಕಾದೊಂದಿಗೆ ತನ್ನ ಸಂಬಂಧಗಳನ್ನು ಪುನರ್ರೂಪಿಸಿಕೊಳ್ಳಲು ಅವಕಾಶ ಕೊಡುತ್ತಿದೆ. ಅದನ್ನು ಮಾಡದಿದ್ದರೆ, 2021 ಕೂಡ ಮೋದಿ ಸರಕಾರದ ಕಣ್ಣುಪಟ್ಟಿ ಕಟ್ಟಿಕೊಂಡ ವಿದೇಶಾಂಗ ಧೋರಣೆ ಮತ್ತು ಸಾಮರಿಕ ನಿಲುವಿನ ಶೋಚನೀಯ ಪರಿಣಾಮಗಳು ಅನಾವರಣಗೊಳ್ಳುವುದು ಮುಂದುವರೆಯುತ್ತದೆ.