ಕಾವೇರಿ ವಿವಾದ: ಹಿಂಸಾಚಾರ ಬಿಡಿ, ಸಾಮಾನ್ಯ ಸ್ಥಿತಿ ಕಾಪಾಡಿ

ಕರ್ನಾಟಕ ಮತ್ತು ತಮಿಳುನಾಡಿನ ಕೆಲಭಾಗಗಳಲ್ಲಿ ಹಿಂಸಾಚಾರ ಮತ್ತು ದೊಂಬಿಯ ವರದಿಗಳಿಂದ ಆಘಾತ ಮತ್ತು ದಿಗಿಲಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಎರಡೂ ರಾಜ್ಯಗಳ ಜನರು ಕಾವೇರಿ ನದಿ ನೀರು ಹಂಚಿಕೊಳ್ಳುವ ಬಗ್ಗೆ ಸುಪ್ರಿಂ ಕೋರ್ಟಿನ ನಿರ್ಧಾರದ ಬಗ್ಗೆ ಶಾಂತಿ-ಸಮಾಧಾನವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿರುವ ಪೊಲಿಟ್‍ಬ್ಯುರೊ ಜನಗಳ ಜೀವ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳಿಗೆ ಕರೆ ನೀಡಿದೆ.

ಕಾವೇರಿ ನದಿ ನೀರನ್ನು ಹಂಚಿಕೊಳ್ಳುವ ಬಗ್ಗೆ ವಿವಾದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಒಂದು ದೀರ್ಘಕಾಲದ ವಿವಾದ. ಇಂತಹ ವಿವಾದಗಳನ್ನು ಮಾತುಕತೆಗಳು ಮತ್ತು ಈ ನೀರನ್ನು ಹೇಗೆ ಹಂಚಿಕೊಳ್ಳಬೇಕು ಎಂಬ ಬಗ್ಗೆ ಪರಸ್ಪರ ಒಪ್ಪಂದಿಂದ ಮಾತ್ರ ಪರಿಹರಿಸಲು ಸಾಧ್ಯ. ಇಂತಹ ವಿವಾದಗಳನ್ನು ಎರಡೂ ರಾಜ್ಯಗಳ ಜನಗಳ ಭಾವನೆಗಳನ್ನು ಬಡಿದೆಬ್ಬಿಸುವ ಮೂಲಕ ಅಥವ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುವುದರಿಂದ ಬಗೆಹರಿಸಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಕಾವೇರಿ ನೀರು ಕುರಿತ ಟ್ರಿಬ್ಯೂನಲ್‍ನ ಅವಾರ್ಡ್‍ನ ಜಾರಿಗೆ ತಮಿಳುನಾಡು ಸರಕಾರ ಸಲ್ಲಿಸಿದ ಕೇಸ್‍ನಲ್ಲಿ ಸುಪ್ರಿಂ ಕೋರ್ಟ್ ಹತ್ತು ದಿನಗಳ ಕಾಲ ಪ್ರತಿದಿನ 15000 ಕ್ಯುಸೆಕ್ ನೀರು ಬಿಡುಗಡೆ ಮಾಡಲು ಆದೇಶಿಸಿತ್ತು. ಈ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಕರ್ನಾಟಕ ಸರಕಾರ ನೀರನ್ನು ಬಿಡುಗಡೆ ಮಾಡಿದೆ ಎಂದು ಗಮನಿಸಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸಂಬಂಧಪಟ್ಟ ಎಲ್ಲರೂ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ನೀರು ಹಂಚಿಕೊಳ್ಳುವ ವಿವಾದಗಳನ್ನು ಮಾತುಕತೆಗಳು ಮತ್ತು ಪರಸ್ಪರ ಒಪ್ಪಂದದ ಮೂಲಕ ಬಗೆಹರಿಯುವಂತೆ ನೋಡಿಕೊಳ್ಳಬೇಕು ಎಂದು ಕಳಕಳಿಯಿಂದ ಆಗ್ರಹಿಸಿದೆ.

 

Leave a Reply

Your email address will not be published. Required fields are marked *