ಸಿಂಗೂರ್ ಭೂಸ್ವಾಧೀನ ಕುರಿತ ಸುಪ್ರಿಂ ಕೋರ್ಟ್ ತೀರ್ಪು

ಸುಪ್ರಿಂ ಕೋರ್ಟ್ ಪಶ್ಚಿಮ ಬಂಗಾಲದ ಸಿಂಗೂರ್‍ನಲ್ಲಿ ಟಾಟಾ ಕಾರ್ ಯೋಜನೆಗೆಂದು ಸ್ವಾಧೀನ ಪಡಿಸಿಕೊಂಡಿದ್ದ 997 ಎಕ್ರೆ ಜಮೀನಿನ ಸ್ವಾಧೀನವನ್ನು ರದ್ದು ಪಡಿಸಿದೆ. ಈ ಕುರಿತು ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಕೆಳಗಿನ ಹೇಳಿಕೆಯನ್ನು ನೀಡಿದೆ:

ಆಗಿನ ಎಡರಂಗ ಸರಕಾರ ಈ ಯೋಜನೆಯ ಮೂಲಕ ಉದ್ದಿಮೆಯನ್ನು ಅಭಿವೃದ್ಧಿ ಪಡಿಸಿ ಆ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಆಶಯ ಹೊಂದಿತ್ತು.

ಆದರೆ ಸ್ವಾಧೀನ ಪ್ರಕ್ರಿಯೆಯನ್ನು ಆಗ ಲಭ್ಯವಿದ್ದ ಏಕೈಕ ಕಾನೂನಿನ ಸಾಧನವಾದ 1894 ರ ಭೂಸ್ವಾಧೀನ ಕಾಯ್ದೆಯ ಅಡಿಯಲ್ಲಿ ಮಾಡಬೇಕಾಗಿತ್ತು. ಇದು ರೈತರ ಹಿತಗಳನ್ನು ಸಾಕಷ್ಟು ಪ್ರಮಾಣದಲ್ಲಿ ರಕ್ಷಿಸದ ಒಂದು ಕಾಯ್ದೆಯಾಗಿತ್ತು. ಭೂಸ್ವಾಧೀನದ ಕುರಿತಂತೆ ಸಿಪಿಐ(ಎಂ) ಈ ಹಿಂದೆ ತನ್ನ ಕೇಂದ್ರ ಸಮಿತಿಯ 2011ರ ವಿಧಾನಸಭಾ ಚುನಾವಣೆಗಳನ್ನು ಕುರಿತಾದ  ಪರಾಮರ್ಶೆಯಲ್ಲಿ “ಈ ವಿಷಯದಲ್ಲಿ ಆಡಳಿತಾತ್ಮಕ ಮತ್ತು ರಾಜಕೀಯ ತಪ್ಪುಗಳು ವೆಚ್ಚದಾಯಕವಾಗಿ ಪರಿಣಮಿಸಿವೆ” ಎಂದಿತ್ತು.

ಈ ಯೋಜನೆಯನ್ನು ಕೈಬಿಟ್ಟ ನಂತರ ಟಿಎಂಸಿ ಸರಕಾರ ಭೂಮಿಯನ್ನು ಪರಿಹಾರ ಪಡೆಯಲು ನಿರಾಕರಿಸಿದವರಿಗೆ ಹಿಂದಿರುಗಿಸಲು ವಿಧಾನಸಭೆಯಲ್ಲಿ  ಒಂದು ಮಸೂದೆ ತಂದಿತ್ತು. ಆಗ ಸಿಪಿಐ(ಎಂ) ಭೂಮಿಯನ್ನು ಈ ಜಮೀನುಗಳ ಹಿಂದಿನ ಎಲ್ಲ ಒಡೆಯರುಗಳಿಗೆ ಹಿಂದಿರುಗಿಸಬೇಕು ಎಂದಿತ್ತು.  ಪರಿಹಾರ ತಗೊಂಡವರು ಮತ್ತು ತಗೊಳ್ಳದವರ ನಡುವೆ ಪಕ್ಷಪಾತ ಸಲ್ಲದು ಎಂದಿತ್ತು.

ಈಗ ಸುಪ್ರಿಂ ಕೋರ್ಟ್ ತೀರ್ಪು ಜಮೀನುಗಳ ಎಲ್ಲ ಒಡೆಯರುಗಳಿಗೆ ಅವರಿಗೆ ಸಲ್ಲಬೇಕಾದ ಪರಿಹಾರದೊಂದಿಗೆ ಹಿಂದಿರುಗಿಸಬೇಕು ಎಂದು ಆದೇಶಿಸಿದೆ.

ಹಲವು ದಶಕಗಳಿಂದ ಸಿಪಿಐ(ಎಂ) 1894ರ ಹಳಸಲಾಗಿರುವ ಕಾನೂನಿನ ಜಾಗದಲ್ಲಿ ರೈತರಿಗೆ ಸಾಕಷ್ಟು ಭದ್ರತೆ ಒದಗಿಸುವ ಕಾನೂನನ್ನು ತರಬೇಕು ಎಂದು ಆಗ್ರಹಿಸುತ್ತ ಬಂದಿದೆ. ಅಂತಿಮವಾಗಿ, 2013ರಲ್ಲಿ ಸಂಸತ್ತು ‘ಭೂಸ್ವಾಧೀನ,ಪುನರ್ವಸತಿ ಮತ್ತು ಪುನರ್‍ಇತ್ಯರ್ಥದಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಕಾಯ್ದೆ’ಯನ್ನು ಅಂಗೀಕರಿಸಿತು.

ಈ ಕಾಯ್ದೆಯನ್ನು ರೈತರ ಹಿತದಿಂದ ಮತ್ತಷ್ಟು ಉತ್ತಮಪಡಿಸುವ ತನ್ನ ಪ್ರಯತ್ನಗಳನ್ನು ಸಿಪಿಐ(ಎಂ) ಮುಂದುವರೆಸುತ್ತದೆ. ತದ್ವಿರುದ್ಧವಾಗಿ ಪ್ರಸಕ್ತ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸುಗ್ರೀವಾಜ್ಞೆಗಳ ಮೂಲಕ ಇದನ್ನು ದುರ್ಬಲಗೊಳಿಸಲು ಪ್ರಯತ್ನಿಸಿದೆ ಮತ್ತು ಈ ಕಾಯ್ದೆಯನ್ನು ಬುಡಮೇಲು ಮಾಡುತ್ತಲೇ ಇದೆ. ಸಿಪಿಐ(ಎಂ) ಈ ಕಾಯ್ದೆಯನ್ನು  ದುರ್ಬಲಗೊಳಿಸುವ ಎಲ್ಲ ಪ್ರಯತ್ನಗಳನ್ನು ವಿರೋಧಿಸುತ್ತದೆ ಮತ್ತು ಈಗ ಹಲವು ರಾಜ್ಯ ಸರಕಾರಗಳು ಈ ರೀತಿ ದುರ್ಬಲಗೊಳಿಸುವ ಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ವಿರೋಧಿಸುತ್ತದೆ.

Leave a Reply

Your email address will not be published. Required fields are marked *