ರೈತ ಚಳುವಳಿ ಎರಡನೇ ಸ್ವಾತಂತ್ರ್ಯ ಆಂದೋಲನ: ಯು ಬಸವರಾಜ್
ಕೇಂದ್ರ ಸರ್ಕಾರದ ರೈತ-ವಿರೋಧಿ ಕೃಷಿ ಕಾಯಿದೆ ಮತ್ತು ಕಾರ್ಮಿಕ-ವಿರೋಧಿ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ‘ಸಂಯುಕ್ತ ಹೋರಾಟ ಕರ್ನಾಟಕ’ ಮಾರ್ಚ್ 22ರಂದು ಬೆಂಗಳೂರಿನಲ್ಲಿ ಸಂಘಟಿಸಿದ್ದ ‘ವಿಧಾನಸೌಧ ಚಲೋ’ ರಾಜಧಾನಿಯಲ್ಲಿ ರೈತ ಕಹಳೆಯನ್ನು ಮೊಳಗಿಸಿತು. ಅದರ ಭಾಗವಾಗಿ ಬೆಂಗಳೂರಿನ ಸಾತಂತ್ರ್ಯ ಉದ್ಯಾನದಲ್ಲಿ ನಡೆದ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ ರೈತ-ಕಾರ್ಮಿಕರ ಭಾರೀ ಮೆರವಣಿಗೆಯನ್ನು ಸಹ ಸಂಘಟಿಸಲಾಯಿತು.
ಶಿವಮೊಗ್ಗ ಮತ್ತು ಹಾವೇರಿಯಲ್ಲಿ ಸಂಘಟಿಸಲಾದ ರೈತ ಮಹಾಪಂಚಾಯತ್ ಗಳು ಮತ್ತು ಬೆಂಗಳೂರಿನ ಯಶಸ್ವಿ ವಿಧಾನಸೌಧ ಚಲೋ, ರೈತ ಚಳುವಳಿಯು ಇಡೀ ದೇಶದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ತೀವ್ರಗೊಳ್ಳುತ್ತಿರುವ ಸ್ಪಷ್ಟ ಲಕ್ಷಣದ ಭಾಗ. ಇಲ್ಲಿದೆ ಈ ಚಾರಿತ್ರಿಕ ಚಳುವಳಿಯ ವರದಿ.
ಬೆಂಗಳೂರು: ಈಗ ದೇಶವ್ಯಾಪಿಯಾಗಿ ನಡೆಯುತ್ತಿರುವ ರೈತರ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಆಂದೋಲನ ಎಂದು ಕರೆದ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು ಬಸವರಾಜ ಅವರು, ರೈತರು ಜಮೀನ್ದಾರಿ, ಜಾಗೀರದಾರಿ ಕಪಿಮುಷ್ಠಿಯಿಂದ ಭೂಮಿಯನ್ನು ಬಿಡುಗಡೆಗೊಳಿಸಲು ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರೆ, ಇಂದು ಕಾರ್ಪೊರೇಟ್ ಕುಳಗಳಿಂದ ಭೂಮಿಯನ್ನು ರಕ್ಷಿಸಲು ಎರಡನೆಯ ಸ್ವಾತಂತ್ರ್ಯ ಆಂದೋಲನ ಆರಂಭಿಸಿದ್ದಾರೆ ಎಂದು ಹೇಳಿದರು.
ಅವರು ಮಾರ್ಚ್ 22ರಂದು ‘ಸಂಯುಕ್ತ ಹೋರಾಟ ಕರ್ನಾಟಕ’ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋದ ಭಾಗವಾಗಿ ಬೆಂಗಳೂರಿನ ಸಾತಂತ್ರ್ಯ ಉದ್ಯಾನದಲ್ಲಿ ನಡೆದ ರೈತ-ಕಾರ್ಮಿಕರ ಭಾರೀ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರದ ರೈತ-ವಿರೋಧಿ ಕೃಷಿ ಕಾಯಿದೆ ಮತ್ತು ಕಾರ್ಮಿಕ-ವಿರೋಧಿ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ‘ಸಂಯುಕ್ತ ಹೋರಾಟ ಕರ್ನಾಟಕ’ ಸಂಘಟಿಸಿದ್ದ ‘ವಿಧಾನಸೌಧ ಚಲೋ’ ರಾಜಧಾನಿಯಲ್ಲಿ ರೈತ ಕಹಳೆ ಮೊಳಗಿಸಿತು.
1793ರ ಮತ್ತು 2020ರ ರೈತ-ವಿರೋಧಿ ಕಾನೂನುಗಳು
ಮೊದಲನೆಯ ಸ್ವಾತಂತ್ರ್ಯ ಹೋರಾಟದ ಬೀಜವನ್ನು ಬ್ರಿಟಿಷರು 1793ರಲ್ಲಿ ತಂದ ಒಂದು ರೈತ-ವಿರೋಧಿ ಕಾನೂನು ಬಿತ್ತಿದ್ದರು. ಬಂಗಾಳದಲ್ಲಿ ಮೊದಲು ತಂದು ಆ ಮೇಲೆ ಬ್ರಿಟಿಷ್ ಭಾರತದ ಉದ್ದಗಲಕ್ಕೂ ಜಾರಿಯಾಗಿದ್ದ ಈ ಕಾನೂನು ಭೂಮಿಯ ಮೇಲೆ ರೈತರ ಹಕ್ಕುಗಳನ್ನು ಕಿತ್ತುಕೊಂಡು ಬ್ರಿಟಿಷ್ ಸರಕಾರಕ್ಕೆ ತೆರಿಗೆ ಸಂಗ್ರಹ ಮಾಡುವ ಜವಾಬ್ದಾರಿಯೊಂದಿಗೆ ಪೂರ್ಣ ಭೂಒಡೆತನವನ್ನು ಆಯ್ದ ವ್ಯಕ್ತಿಗಳಿಗೆ (ಹೆಚ್ಚಾಗಿ ಈಗಾಗಲೇ ದೊಡ್ಡ ಭೂಮಾಲಕರು ಅಥವಾ ಜಮೀನುದಾರರಾಗಿದ್ದ) ಕೊಡುವ ಕಾನೂನು ಅದಾಗಿತ್ತು. ಇದು ಹೊಸ ಜಮೀನುದಾರಿ ವ್ಯವಸ್ಥೆಯನ್ನು ಸ್ಥಾಪಿಸಿತ್ತು. ಇದರಿಂದ ತೀವ್ರ ಸಂಕಷ್ಟಕ್ಕೊಳಗಾಗಿ ಬಳಲಿದ ರೈತರು ಈ ವ್ಯವಸ್ಥೆ ವಿರುದ್ದ ಬಂಡೇಳುತ್ತಾ ಬಂದರು. ಬ್ರಿಟಿಷ್ ಸರಕಾರವನ್ನು ಕಿತ್ತೊಗೆಯದೆ ಜಮೀನುದಾರಿ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕ್ರಮೇಣ ಅರಿತ ರೈತರು ಸ್ವಾತಂತ್ರ್ಯ ಚಳುವಳಿಯಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ‘ಉಳುವವನೇ ಹೊಲದೊಡೆಯ’ ಎಂಬ ಕನಸನ್ನು ನನಸು ಮಾಡುವ ಸಂಕಲ್ಪದೊಂದಿಗೆ ಭಾಗವಹಿಸಿದರು, ಎಂದು ಎರಡು ಸ್ವಾತಂತ್ರ್ಯ ಚಳುವಳಿಗಳನ್ನು ಹೋಲಿಸುತ್ತಾ ಯು.ಬಸವರಾಜ್ ಅವರು ಹೇಳಿದರು.
ಭೂಮಿ ಮತ್ತು ಕೃಷಿಯನ್ನು ದೈತ್ಯ (ದೇಶೀಯ ಮತ್ತು ಬಹುರಾಷ್ಟ್ರೀಯ) ಕಾರ್ಪೊರೇಟ್ ಗಳಿಗೆ ತೆರೆಯುವ ಪ್ರಕ್ರಿಯೆಯು 1994ರ ಗ್ಯಾಟ್ ಕೃಷಿ ಒಪ್ಪಂದದ ಮೂಲಕ ಆರಂಭವಾಗಿತ್ತು. ಈ ಮೂರು ಕರಾಳ ಕಾನೂನುಗಳೊಂದಿಗೆ ಮೋದಿ ಸರಕಾರವು ರೈತರ ಭೂಮಿಯನ್ನು ಕಿತ್ತುಕೊಳುವ, ರೈತ ಕೃಷಿಯನ್ನು ನಾಶ ಮಾಡುವ, ಕೃಷಿ ಭೂಮಿ ಮತ್ತು ಕೃಷಿಯ ಎಲ್ಲಾ ಆಯಾಮಗಳನ್ನು ಪೂರ್ಣವಾಗಿ ಕಾರ್ಪೊರೇಟ್ ಗಳಿಗೆ ಒಪ್ಪಿಸಿಬಿಡಲು ಹೊರಟಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಕಾರ್ಪೋರೇಟ್ ಗುಲಾಮರಾಗಿ ಕೆಲಸ ಮಾಡುತ್ತಿದೆ. ರೈತ ಕೃಷಿಯನ್ನು ಉಳಿಸಿಕೊಳ್ಳಲು ಇದರ ವಿರುದ್ಧ ರೈತ-ಕಾರ್ಮಿಕರ ಹೋರಾಟವನ್ನು ಎರಡನೇ ಸ್ವಾತಂತ್ರದ ಹೋರಾಟವೆಂದು ಮಾತ್ರವಲ್ಲ, 2020-21 ಸಾಲಿನ ಜಗತ್ತಿನ ಅತಿ ದೊಡ್ಡ ಹೋರಾಟದ ಅಲೆಯೆಂದು ಪರಿಗಣಿಸಲಾಗಿದೆ. ಇದನ್ನು ಕರ್ನಾಟಕದಲ್ಲಿ ಮುಂದೊಯ್ಯೋಣ ಎಂದು ಯು.ಬಸವರಾಜ್ ಕರೆ ನೀಡಿದರು.
ರ್ಯಾಲಿಗಿಂತ ಮೊದಲು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಹತ್ತು ಸಾವಿರಕ್ಕಿಂತಲೂ ಹೆಚ್ಚು ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳೆಯರು ಮೆರೆವಣಿಗೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಲಾಯಿತು. ರೈತ ಗೀತೆ “ಉಳುವಾ ಯೋಗಿಯ ನೋಡಲ್ಲಿ” ಗೀತೆ ರೈತರಿಗೆ ಮತ್ತಷ್ಟು ಉತ್ಸಾಹವನ್ನು ತುಂಬಿತು.
ಕರ್ನಾಟಕದಲ್ಲಿ ತೀವ್ರಗೊಳ್ಳುತ್ತಿರುವ ರೈತ ಚಳುವಳಿ ರ್ಯಾಲಿಯಲ್ಲಿ ಭಾಗವಹಿಸಿದ ಪ್ರತಿಭಟನೆಕಾರರು ಹಲವು ಗಂಟೆಗಳ ಕಾಲ ಕೃಷಿಕಾಯ್ದೆ ಹಾಗೂ ಕಾರ್ಮಿಕ ಸಂಹಿತೆಗಳ ಅಪಾಯಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಗಮನವಿಟ್ಟು ಆಲಿಸಿದರು. ಇದಕ್ಕೂ ಮೊದಲು ಹುತಾತ್ಮ ರೈತರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ಕೃಷಿ ಕಾಯ್ದೆಯ ಅಪಾಯಗಳನ್ನು ವಿವರಿಸುವ ಮೂರು ಮಹತ್ವದ ಪುಸ್ತಕಗಳು ಬಿಡುಗಡೆಯಾದವು. ಕರ್ನಾಟಕ ಪ್ರಾಂತ ರೈತ ಸಂಘಟನೆ ಪ್ರಕಟಿಸಿರುವ, ರೈತ ಸಂಕುಲ ನಾಶ ಮಾಡುವ ಕೃಷಿ ಕಾಯ್ದೆಗಳು, ಪ್ರಾಂತ ರೈತ ಸಂಘದ ರಾಜ್ಯ ಮುಖಂಡ ನವೀನ್ ಕುಮಾರ್ ಬರೆದಿರುವ, ಕ್ರಿಯಾ ಮಾಧ್ಯಮ ಪ್ರಕಟಿಸಿರುವ ದೆಹಲಿ ಹೋರಾಟದ ಕುರಿತಾದ ಪುಸ್ತಕ `ಕದನ ಕಣ’ ಗೌರಿ ಮೀಡಿಯಾ ಪ್ರಕಟಿಸಿರುವ `ನಿರಂಕುಶ ಪ್ರಭುತ್ವ ಮತ್ತು ರೈತ ಹೋರಾಟ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಇದನ್ನು ಸಂಘಟಿಸಿದ ಸಂಯುಕ್ತ ಹೋರಾಟ ರಾಜ್ಯದ ಕಾರ್ಮಿಕ ಸಂಘಟನೆಗಳ ಜಂಟಿ ಸಂಘಟನೆ ಜೆಸಿಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಇತ್ಯಾದಿ ಹೆಚ್ಚು ಕಡಿಮೆ ಎಲ್ಲ ರೈತ ಸಂಘಟನೆಗಳು, ದಲಿತ, ಪ್ರಗತಿಪರ ವಿದ್ಯಾರ್ಥಿ, ಯುವಜನ, ಮಹಿಳೆಯರ ಸಂಘಟನೆಗಳ ಜಂಟಿ ವೇದಿಕೆಯಾಗಿದೆ.
ಈ ಕಾರ್ಯಕ್ರಮದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರ ನಾಯಕರಾದ ರಾಕೇಶ್ ಸಿಂಗ್ ಟಿಕಾಯತ್, ಯುದ್ಧವೀರ ಸಿಂಗ್, ಡಾ.ದರ್ಶನ್ ಪಾಲ್ ಭಾಗವಹಿಸಿ ಮಾತನಾಡಿದರು. ಈ ಮೂವರು ನಾಯಕರು ಇದಕ್ಕಿಂತ ಮೊದಲು ತಮ್ಮ ಕರ್ನಾಟಕದ ಭೇಟಿಯಲ್ಲಿ ಶಿವಮೊಗ್ಗ ಮತ್ತು ಹಾವೇರಿಯಲ್ಲಿ ಸಂಘಟಿಸಲಾದ ರೈತ ಮಹಾಪಂಚಾಯತ್ ನಲ್ಲೂ ಭಾಗವಹಿಸಿ ಬಂದಿದ್ದರು. ಬೆಂಗಳೂರಿನ ಯಶಸ್ವಿ ವಿಧಾನಸೌಧ ಚಲೋದ ಜತೆಗೆ ಅವು ರೈತ ಚಳುವಳಿಯು ಇಡೀ ದೇಶದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ತೀವ್ರಗೊಳ್ಳುತ್ತಿರುವ ಸ್ಪಷ್ಟ ಲಕ್ಷಣದ ಭಾಗ.
ಹೋರಾಟ ಮುಂದುವರೆಸೋಣ : ಯುದ್ಧವೀರ್ ಸಿಂಗ್
ರೈತ ನಾಯಕ ಯುದ್ಧವೀರ್ ಸಿಂಗ್ ಮಾತನಾಡಿ, ಈ ಆಂದೋಲನ ಸುದೀರ್ಘ ಆಂದೋಲನ, ನಮ್ಮ ಬೇಡಿಕೆಗಳನ್ನೂ ಸರ್ಕಾರ ಈಡೇರಿಸವರೆಗೂ ಈ ಹೋರಾಟ ನಿಲ್ಲುವುದಿಲ್ಲ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟದಂತೆ ಬೆಂಗಳೂರನ್ನೇ ದೆಹಲಿಯಾಗಿ ಮಾಡಿ ಹೋರಾಟವನ್ನು ಮುಂದುವರೆಸೋಣ. ಕರ್ನಾಟಕದಲ್ಲಿ ನಡೆಯುವ ಈ ಹೋರಾಟಕ್ಕೆ ಧೈರ್ಯ ತುಂಬಬೇಕು ಎಂದರು. ‘ಶ್ರೀರಾಮ ಯಾರಪ್ಪನ ಸ್ವತ್ತೂ ಅಲ್ಲ. ರೈತರು, ಕಾರ್ಮಿಕರ ಕಣ ಕಣದಲ್ಲಿ, ದುಡಿಮೆಯಲ್ಲಿ ರಾಮ ಇದ್ದಾನೆ. ರಾಮನನ್ನು ಹುಡುಕಿಕೊಂಡು ಮಂದಿರಗಳಿಗೆ ಹೋಗುವ ಅಗತ್ಯವಿಲ್ಲ’ ಎಂದು ಅವರು ಘೋಷಿಸಿದರು. ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊಸ ನಾಟಕ ಶುರು ಮಾಡಿದೆ. ಒಂದು ಮುಷ್ಟಿ ಅಕ್ಕಿ ಕೊಡಿ ಎಂದು ಕೇಳುತ್ತಿದ್ದಾರೆ. ಅಕ್ಕಿಯನ್ನು ಧರ್ಮಕ್ಕೂ, ಧರ್ಮವನ್ನು ಮತಕ್ಕೂ ಜೋಡಣೆ ಮಾಡಲಾಗುತ್ತಿದೆ. ಒಂದು ಮುಷ್ಟಿ ಅಕ್ಕಿ ಕೊಡಲು ನಾವು ಸಿದ್ಧರಿದ್ದೇವೆ, ಆ ಅಕ್ಕಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ರೂಪಿಸಿ’ ಎಂದು ಯುದ್ಧವೀರ ಸಿಂಗ್ ಆಗ್ರಹಿಸಿದರು.
‘ವಿಧಾನಸೌಧದಲ್ಲಿ ಫಸಲು ಮಾರಿ’: ಟಿಕಾಯತ್
ಸರ್ಕಾರ ಎಪಿಎಂಸಿಗಳನ್ನು ಮುಚ್ಚಲು ಕಾನೂನು ತಂದಿರುವ ಕಾರಣ ‘ರೈತರು ತಾವು ಬೆಳೆದ ಫಸಲನ್ನು ವಿಧಾನಸೌಧಕ್ಕೆ ತಂದು ಮಾರಾಟ ಮಾಡಿ’ಎಂದು ರಾಕೇಶ್ ಟಿಕಾಯತ್ ರೈತರಿಗೆ ಕರೆ ನೀಡಿದರು. ‘ಪೊಲೀಸರು ನಿಮ್ಮನ್ನು ತಡೆದರೆ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಪ್ರಕಾರ ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂದಿಲ್ಲ. ಎಲ್ಲಿ ಬೇಕಿದ್ದರೂ ಮಾರಾಟ ಮಾಡಿದರೂ ಎಂ.ಎಸ್.ಪಿ ದೊರೆಯುತ್ತದೆ ಎಂದು ಪ್ರಧಾನಿ ಅವರು ಅಪ್ಪಣೆ ಕೊಡಿಸಿದ್ದಾರೆ ಎಂದು ಉತ್ತರವನ್ನು ನೀಡಿ. ಪೋಲಿಸರು ನಿಮ್ಮನ್ನು ಬಂಧಿಸಿದರೆ ಪೊಲೀಸ್ ಠಾಣೆಗಳನ್ನೇ ಮಾರುಕಟ್ಟೆಗಳನ್ನಾಗಿ ಮಾಡಿಕೊಳ್ಳಿ. ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಬ್ಬು ಮತ್ತು ಭತ್ತ ಮಾರಾಟ ಮಾಡುವ ಹೋರಾಟ ಆರಂಭಿಸಲಾಗಿದೆ’ ಎಂದು ಉದಾಹರಣೆ ಸಮೇತ ವಿವರಿಸಿದರು.
‘ಕರ್ನಾಟಕದ ರೈತರು ದೆಹಲಿಯ ಪ್ರತಿಭಟನೆಗೆ ದೆಹಲಿಗೆ ಬರುವುದು ಕಷ್ಟ. ಬೆಂಗಳೂರನ್ನೇ ದೆಹಲಿಯಾಗಿ ಪರಿವರ್ತಿಸಿ. ಇಲ್ಲೂ ದೆಹಲಿಯಂತೆ ರಾಜಧಾನಿಗೆ ಬರುವ ಹೆದ್ದಾರಿಗಳನ್ನು ತಡೆದು ಸುತ್ತುವರೆಯಿರಿ’ ಎಂದು ಪ್ರತಿಭಟನಾಕಾರರಿಗೆ ಕರೆ ನೀಡಿದರು.
‘ರೈತರಿಗೆ 1 ಲಕ್ಷ ಕೋಟಿ ರೂ. ನಷ್ಟ’: ಕೋಡಿಹಳ್ಳಿ
ಹಸಿರು ಸೇನೆಯ ಕರ್ನಾಟಕ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ ಕೃಷಿ ಮಾರುಕಟ್ಟೆ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಭೂ ಸುಧಾರಣೆ ಕಾಯ್ದೆಯನ್ನು ತಂದು ಕೇಂದ್ರದ ನಾಯಕರನ್ನು ಮೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆಪಾದಿಸಿದರು. ಕೃಷಿ ಮಾಡುವ ರೈತನ ಪಾದ ಮುಟ್ಟಬೇಕೆಂದು ಬಸವಣ್ಣನವರು ಹೇಳುತ್ತಾರೆ. ಎಲ್ಲ 13 ಕೃಷಿ ಉತ್ಪನ್ನಗಳು ಜೊತೆಯಾಗಿ ಈ ನಾಡಿನ ಎಲ್ಲಾ ಕೃಷ್ಟಿ ಉತ್ಪನಗಳಿಗೆ ಬಂದ ಬೆಲೆಯನ್ನು ಎಂ.ಎಸ್.ಸ್ವಾಮಿನಾಥನ್ ವರದಿಯ ಶಿಫಾರಸ್ಸಿನ ಪ್ರಕಾರ ಕೊಡಬೇಕಾದ ಬೆಲೆಗೆ ಹೋಲಿಸಿದರೆ, ಒಂದು ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿ ರೈತನಿಗೆ ನಷ್ಟವಾಗುತ್ತಿದೆ. ರೈತರು ಈ ಹಗಲು ದರೋಡೆ ತಂತ್ರವನ್ನು ಅರ್ಥ ಮಾಡಿಕೊಳ್ಳಬೇಕು. ಈ 1 ಲಕ್ಷ ಕೋಟಿ ರೈತರ ಎಲ್ಲರ ಜೋಬಿನಲ್ಲಿ ಇದ್ರೆ ರೈತರು ಬಡವಾಗುತ್ತಿರಲಿಲ್ಲ. ಆದ್ದರಿಂದ ಸ್ವಾಮಿನಾಥನ್ ವರದಿಯ ಶಿಫಾರಸ್ಸಿನ ಪ್ರಕಾರ ಬೆಲೆ ಖಾತ್ರಿ ಮಾಡುವ ಕಾನೂನು ತನ್ನಿ ಎಂದು ಅವರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಅವರು ಮಾತನಾಡಿ ಪ್ರಧಾನಿ ಮೋದಿ ಪಂಚೇಂದ್ರಿಯಗಳಿಲ್ಲದ ಹೃದಯಹೀನ ಮನುಷ್ಯ. ದೆಹಲಿ ಹೋರಾಟದಲ್ಲಿ ನೂರಾರು ರೈತರು ಹುತಾತ್ಮರಾದರೂ ಅವರಿಗೆ ಕನಿಷ್ಟ ಗೌರವ ಸೂಚಿಸಲಿಲ್ಲ. ಸಾವಿನ ಚೀಟಿಯನ್ನು ಜೇಬಿನಲ್ಲೇ ಇಟ್ಟುಕೊಂಡಿದ್ದೇವೆ, ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಾಣವನ್ನು ಕೊಡಲು ಸಿದ್ಧರಿದ್ದೇವೆ ಎಂದರು. ಕೃಷಿ ಕಾಯ್ದೆಗಳ ಕುರಿತಾಗಿ ಸರ್ಕಾರ ಜನತೆಗೆ ಸುಳ್ಳು ಹೇಳುತ್ತಿದೆ, ಯುಪಿಎ ಸರ್ಕಾರ ಇದ್ದಾಗ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿದ್ದ ಬಿಜೆಪಿ, ಇದೀಗ ಈ ಕಾಯ್ದೆಗಳನ್ನು ಬಲವಾಗಿ ಪ್ರತಿಪಾದಿಸುತ್ತಿದೆ, ಈ ಮೂಲಕ ರೈತರ ಕಿವಿಗೆ ಹೂ ಮುಡಿಸಲು ಹೊರಟಿದೆ, ಈ ಆಟ ನಡೆಯದು. ಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಲಕ್ಷ ರೈತರ ಮಹಾ ಪಂಚಾಯತ್ ನಡೆಸಲು ನಿರ್ಧರಿಸಿದ್ದೇವೆ ಎಂದರು.
ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡುತ್ತಾ, ದೆಹಲಿಯಲ್ಲಿ ಯಾವುದೇ ಚಳಿ ಗಾಳಿ ಎನ್ನದೇ 60-70ರ ವಯಸ್ಸಿನ ಹಿರಿಯರು ಸೇರಿದಂತೆ ಅನೇಕ ಯುವಕರು ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಏಕೆಂದರೆ ಈ ಮೂರು ಕರಾಳ ಕಾನೂನುಗಳ ತಿರುಳು ಅವರಿಗೆ ಅರ್ಥವಾಗಿದೆ. ಅಪಪ್ರಚಾರ ಮಾಡುವುದರ ಮೂಲಕ, ರೈತ ಹೋರಾಟವನ್ನು ನಿಲ್ಲಿಸುವ ತಂತ್ರವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಈಗಾಗಲೇ 310 ಜನ ರೈತರು ಹುತಾತ್ಮರಾಗಿದ್ದಾರೆ. ಕಾನೂನಿನ ಈ ಹೋರಾಟವನ್ನು ಹಳ್ಳಿಹಳ್ಳಿಗೆ ತಲುಪಿಸೋಣ, ಈ ಹೋರಾಟದ ಬಲವನ್ನು ಮತ್ತಷ್ಟು ಹೆಚ್ಚಿಸೋಣ ಎಂದರು.
‘ಮೂರು ಪಕ್ಷಗಳ ಜಂಡಾ ಬೇರೆ, ಅಜೆಂಡಾ ಒಂದೇ’: ಚೇತನ್
ಚಿತ್ರನಟ ಚೇತನ್ ರೈತ ಆಂದೋಲನದ ವಿಧಾನಸೌಧ ಚಲೋಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು, ಅವರು ಮಾತನಾಡುತ್ತಾ, ಅನ್ನದಾತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದರೆ ಅವರನ್ನು ಭಯೋತ್ಪಾದಕರು, ಖಲೀಸ್ತಾನಿಗಳು, ದೇಶದ್ರೋಹಿ ಎಂದು ಬಿಂಬಿಸಿದರು. ರೈತರು ಅಂಬೇಡ್ಕರ್, ಗಾಂಧಿಯವರ ಹಾದಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ಅವರು ಹಿಂಸೆ ಮಾಡಲಿಲ್ಲ. ಆದರೆ ರೈತರ ಮೇಲೆ ಹಿಂಸೆ ಮಾಡುತ್ತಿರುವವರು ಭಯೋತ್ಪಾದಕರು, ರೈತರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ, ಅವರೇ ದೇಶದ್ರೋಹಿಗಳು. ಕರ್ನಾಟಕದ ಮೂರೂ ಪ್ರಧಾನ ಪಕ್ಷಗಳ ಜಂಡಾ ಬೇರೆಯಿರಬಹುದು. ಆದರೆ ಅವರ ರೈತ-ವಿರೋಧಿ ಅಜೆಂಡಾ ಒಂದೇ. ಮುಖ್ಯಮಂತ್ರಿಗಳು ಹಸಿರು ಶಾಲು ಹಾಕುತ್ತಾರೆ. ಆದರೆ ರೈತರ ಪರವಾಗಿಲ್ಲ. ತಾವು ಮಣ್ಣಿನ ಮಕ್ಕಳು ಎಂದವರು ರೈತರ ವಿರೋಧಿಯಾಗಿದ್ದಾರೆ. ಕಾಂಗ್ರೆಸ್ ಎಪಿಎಂಸಿ ಮುಚ್ಚುವ ಕಾನೂನು ತರಲು ಹೊರಟಿತ್ತು. ಉತ್ತಮ ಸಮಾಜ ಕಟ್ಟಲು ಕುವೆಂಪು, ಅಂಬೇಡ್ಕರ್, ಗಾಂಧಿ, ಬಸವ ಅವರ ಹಾದಿಯಲ್ಲಿ ನಡೆಯೋಣ ಈ ಹೋರಾಟವನ್ನು ಮತ್ತಷ್ಟು ಹೆಚ್ಚಿಸೋಣ ಎಂದರು.
ಕೃಷಿ ಕೂಲಿಕಾರರ ಸಂಘದ ನಿತ್ಯಾನಂದಸ್ವಾಮಿ, ಆರ್.ಕೆ.ಎಸ್ನ ದಿವಾಕರ್, ರೈತ ಮುಖಂಡ ಶಿವಪ್ರಕಾಶ, ದಲಿತ ಮುಖಂಡ ಗುರುಪ್ರಸಾದ್ ಕೆರೆಗೋಡು, ಆಂದ್ರ-ತೆಲಂಗಾಣದ ರೈತ ಮುಖಂಡ ಚಂದ್ರಶೇಖರ್ ಮುಂತಾದವರು ಮಾತನಾಡಿದರು. ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ಹಿರಿಯ ಸಾಮಾಜಿಕ ಕಾರ್ಯಕರ್ತ ಎಸ್.ಎಸ್.ಹಿರೇಮಠ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇದ್ದ ಅಧ್ಯಕ್ಷೀಯ ಮಂಡಳಿಯು ಕಾರ್ಯಕ್ರಮವನ್ನು ನಡೆಸಿತು.
ಪ್ರತಿಭಟನಾ ಜಾಗಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ಆಗಮಿಸಿ ಮನವಿಯನ್ನು ರಾಜ್ಯ ಸರಕಾರದ ಪರವಾಗಿ ಸ್ವೀಕರಿಸಿದರು. ಅವರು ವೇದಿಕೆ ಏರುತ್ತಿದ್ದಂತೆ ರೈತರನ್ನು ಅವಮಾನಿಸಿದ ಬಿ.ಸಿ.ಪಾಟೀಲ್ ಗೆ ಧಿಕ್ಕಾರ, ಅವರು ಅದಕ್ಕಾಗಿ ಕ್ಷಮೆ ಕೇಳಬೇಕು ಎಂದು ಪ್ರತಿಭಟನೆಕಾರರು ಘೋಷಣೆಗಳನ್ನು ಕೂಗಿದ ಘಟನೆ ನಡೆಯಿತು. ಮನವಿಯನ್ನು ಸಂಯುಕ್ತ ಕಿಸಾನ್ ಮೋರ್ಚಾದ ಮೂವರು ನಾಯಕರು, ಅಧ್ಯಕ್ಷೀಯ ಮಂಡಳಿಯ ಪರವಾಗಿ ಎಸ್.ವರಲಕ್ಷ್ಮಿ, ಬಿ.ಸಿ. ಪಾಟೀಲ್ ಮನವಿಯನ್ನು ಸ್ವೀಕರಿಸಿ, ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಮಾತನಾಡಿ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಮನ ನೀಡಲಾಗುವುದು ಎಂದು ಭರವಸೆ ನೀಡಿದರು. ಕೃಷಿ ಕಾಯ್ದೆಗಳನ್ನು ರದ್ದುಮಾಡಿ ಎಂದು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಹೇಳುವಂತಾಗಬೇಕು ಎಂದು ಸಭಿಕರು ಆಗ್ರಹ ಮಾಡಿದರು.
ಮಾರ್ಚ್ 26 ರಂದು ಕೃಷಿ ಕಾಯ್ದೆ ಹಾಗೂ ಕಾರ್ಮಿಕ ಸಂಹಿತೆ ರದ್ದತಿಗಾಗಿ ಆಗ್ರಹಿಸಿ ಭಾರತ್ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೆ ಕರೆ ನೀಡಿದೆ. ಕರ್ನಾಟಕದಲ್ಲೂ ಬಂದ್ ನಡೆಸುವಂತೆ ರ್ಯಾಲಿಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ಹಿರಿಯ ರೈತ ಮುಖಂಡ ಚಾಮರಸ ಪಾಟೀಲ್ ಸ್ವಾಗತಿಸಿ ಮಾತನಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ಟಿ. ಯಶವಂತ್, ಕರ್ನಾಟಕ ಜನಶಕ್ತಿ ಮಲ್ಲಿಗೆ ಸಿರಿಮನೆ ಕಾರ್ಯಕ್ರಮ ನಿರೂಪಿಸಿದರು. ವೀರಸಂಗಯ್ಯ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಚಾಮರಸ್ ಪಾಟೀಲ್, ಅಣ್ಣಯ್ಯ, ಜ್ಯೋತಿ, ಅನುಸೂಯಮ್ಮ, ಮಾವಳ್ಳಿ ಶಂಕರ್ ಡಾ.ಕೆ.ಪ್ರಕಾಶ್, ಅಪ್ಪಣ, ಶಾಮಣ್ಣರೆಡ್ಡಿ, ಸತ್ಯಾನಂದ, ಸೋಮಶೇಖರ್, ನಾಡಗೌಡ, ಶಿವಶಂಕರ್, ಕಾಳಪ್ಪ, ಜಯರಾಮ, ಮರಿಯಪ್ಪ, ದೇವಿ, ಪೃತ್ವಿರೆಡ್ಡಿ, ವಿ.ಗಾಯಿತ್ರಿ, ರಾಮಸ್ವಾಮಿ, ಜಯಣ್ಣ, ವಾಸುದೇವರೆಡ್ಡಿ, ನಾಗಪ್ಪಪಾಟೀಲ್, ಸೇರಿದಂತೆ ಹಲವು ಸಂಘಟನೆಗಳ ಪ್ರಮುಖ ಮುಖಂಡರುಗಳು ಭಾಗವಹಿಸಿದ್ದರು.
ಮನವಿ ಪತ್ರದ ಮುಖ್ಯಾಂಶಗಳು
- ಕೇಂದ್ರದ ಮೂರು ಕೃಷಿ ಕಾಯ್ದೆಗಳು ಹಾಗು ರಾಜ್ಯದ ಮೂರು ಕೃಷಿ ಸಂಬಂಧಿತ ಕಾಯ್ದೆಗಳನ್ನು ಬೇಷರತ್ ವಾಪಸ್ಸು ಪಡೆಯಬೇಕು.
- ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಕನಿಷ್ಟ ಬೆಂಬಲ ಬೆಲೆ ಕಾಯ್ದೆಯನ್ನು ರೂಪಿಸಬೇಕು.
- ಬಗರ್ ಹುಕುಂ ಸಾಗುವಳಿದಾರರ ಭೂಮಿಯನ್ನು ಕಬಳಿಸುವ ಹುನ್ನಾರ ಕೈಬಿಡಬೇಕು, ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕು.
- ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಕೈಬಿಟ್ಟು, ಕಾರ್ಮಿಕ ಕಾನೂನುಗಳನ್ನು ಬಲಪಡಿಸಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಪ್ರಕ್ರಿಯೆ ನಿಲ್ಲಿಸಬೇಕು.