ರಾಜ್ಯದ ಜನತೆಯನ್ನು ದುರುದ್ದೇಶದಿಂದಲೇ ಮಾರಣಾಂತಿಕ ಸಂಕಷ್ಟಕ್ಕೆ ದೂಡಿದ ರಾಜ್ಯ ಸರಕಾರ ಇಡೀ ರಾಜ್ಯದ ಜನತೆ ಆತಂಕದಲ್ಲಿರುವಾಗಲೇ ಒಳಗಿಂದೊಳಗೆ ಜನತೆಗೆ ತಿಳಿಸದೇ ಮೋಸದಿಂದ, 3,600 ಎಕರೆ ಜಮೀನುಗಳನ್ನು ಕೇವಲ ತಲಾ ಎಕರೆಗೆ 1.2 ಲಕ್ಷದಿಂದ 1.5 ಲಕ್ಷ ರೂ.ಗಳಿಗೆ ಮಾರಾಟವೂ ಸೇರಿದ ಗುತ್ತಿಗೆ ಒಪ್ಪಂದದಂತೆ ಜಿಂದಾಲ್ ಕಂಪನಿಗೆ ಮಾರಾಟ ಮಾಡಿ ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ.ಗಳ ನಷ್ಠ ಉಂಟು ಮಾಡಿರುವ ಶ್ರೀ ಬಿ.ಎಸ್.ಯಡಿಯೂರಪ್ಪನವರ ಮಂತ್ರಿ ಮಂಡಲದ ವಂಚನೆಯ ಕ್ರಮವನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಬಲವಾಗಿ ಖಂಡಿಸುತ್ತದೆ. ಮಾತ್ರವಲ್ಲಾ ತಕ್ಷಣವೇ ಈ ಮೋಸದ ಮಾರಾಟವನ್ನು ವಾಪಾಸು ಪಡೆಯಬೇಕೆಂದು ಬಲವಾಗಿ ಒತ್ತಾಯಿಸುತ್ತದೆ.
ರಾಜ್ಯ ಸರಕಾರ ನೆನ್ನೆ ಅಂದರೆ, 27.04.2021 ರಂದು ನಡೆದ ಮಂತ್ರಿ ಮಂಡಲದ ಸಭೆಯಲ್ಲಿ ಈ ಅಕ್ರಮದ ನಿರ್ಣಯ ಕೈಗೊಂಡಿದೆ. ಈ ಹಿಂದೆ ಇಂತಹದ್ದೇ ಕ್ರಮವಹಿಸಿದಾಗ ಜನತೆಯ ತೀವ್ರ ಪ್ರತಿರೋಧದಿಂದಾಗಿ ವಾಪಾಸು ಪಡೆಯಲಾಗಿತ್ತು. ಈಗ ಪುನಃ ಜನತೆಯ ಅಭಿಪ್ರಾಯಕ್ಕೆ ವಿರುದ್ಧವಾಗಿ, ಅದೇ ಅಕ್ರಮ ದರಕ್ಕೆ ಮಾರಾಟ ಮಾಡಲು ಕ್ರಮವಹಿಸಿದೆ.
ಜಿಂದಾಲ್ ಕಂಪನಿಯಿಂದ ಕೇವಲ 10 ಕಿ.ಮೀ ದೂರದಲ್ಲಿ ಲಕ್ಷ್ಮಿ ಮಿತ್ತಲ್ ಕಂಪನಿಗೆ ನೀಡಿದ ಜಮೀನುಗಳ ಬೆಲೆಯನ್ನು ಸರಕಾರವೇ ಕೆಐಎಡಿಬಿ ಮೂಲಕ 2010 ರಲ್ಲಿ ತಲಾ ಎಕರೆಗೆ 8, 10 ಹಾಗೂ 12 ಲಕ್ಷ ರೂ.ಗಳೆಂದು ನಿಗದಿಸಿ ರೈತರಿಂದ ಖರೀದಿಸಿದೆ. ಈ ಜಮೀನುಗಳ ಕೆಲ ಭಾಗಗಳನ್ನು ಕೆಐಎಡಿಬಿ ತಲಾ ಎಕರೆಗೆ 54 ಲಕ್ಷ ರೂ.ಗಳೆಂದು ನಿಗದಿಸಿ ಸಣ್ಣ ಕೈಗಾರಿಕೆಗಳಿಗೆ ಮಾರಾಟ ಮಾಡುತ್ತಿದೆ. ಸದರಿ ಜಮೀನುಗಳ ಭೂ ಬೆಲೆ, ಮೋಸದ ಬೆಲೆಯೆಂದು ಹಾಗೂ ಅದು ಅತ್ಯಂತ ಕಡಿಮೆಯೆಂದು ಜಿಲ್ಲಾ ನ್ಯಾಯಾಲಯದಲ್ಲಿ ರೈತರು ದಾವೆ ಹೂಡಿದಾಗ ಜಿಲ್ಲಾ ನ್ಯಾಯಾಲಯವು ಸದರಿ ಜಮೀನುಗಳಿಗೆ ತಲಾ ಎಕರೆಗೆ 30 ಲಕ್ಷಕ್ಕೂ ಅಧಿಕ ರೂ. ಗಳ ಬೆಲೆಯನ್ನು ನಿಗದಿಸಿದೆ. ಅದೇ ರೀತಿ, ಜಿಂದಾಲ್ ಕಂಪನಿಯ ಬಳಿಯೇ ಹಾದು ಹೋಗುವ ರಾಷ್ಡ್ರೀಯ ಹೆದ್ದಾರಿಗಾಗಿ ತಲಾ ಎಕರೆ ಜಮೀನನ್ನು 32 ಲಕ್ಷ ರೂ. ಗಳಿಗೆ ಖರೀದಿಸಲಾಗಿದೆ. ಸ್ವತಃ ಜಿಂದಾಲ್ ಕಂಪನಿಯೇ ತಲಾ ಎಕರೆಗೆ 6 ಲಕ್ಷ ರೂ. ಗಳ ಬೆಲೆಯಲ್ಲಿ ಕೆರೆ ನಿರ್ಮಾಣಕ್ಕೆಂದು ಖರೀದಿಸಿದೆ.
ಪರಿಸ್ಥಿತಿ ಹೀಗಿರುವಾಗ, ಪ್ರತಿ ಎಕರೆಗೆ ಕೇವಲ 1.2 ಮತ್ತು 1.5 ಲಕ್ಷ ರೂ.ಗಳಿಗೆ ಮಾರಾಟಕ್ಕೆ ಮುಂದಾಗಿರುವುದು ಅಕ್ಷಮ್ಯವಾಗಿದೆ. ಮಾತ್ರವಲ್ಲಾ, ಇದರಲ್ಲಿ ಭಾರಿ ಭ್ರಷ್ಠಾಚಾರ ನಡೆದಿರುವುದಕ್ಕೆ ಅವಕಾಶಗಳಿವೆ. ವಾಸ್ತವಿಕವಾಗಿ ಈ ಪ್ರದೇಶದಲ್ಲಿ ಸರಕಾರ ನಿಗದಿಸಿದ ಬೆಲೆಗೆ 30×40 ಚ.ಅಡಿ. ನಿವೇಶನದ ಜಾಗವು ದೊರೆಯುವುದಿಲ್ಲ.
ಇಡೀ ರಾಜ್ಯದ ಜನತೆ ಕೋವಿಡ್ ಸಂಕಷ್ಠದಲ್ಲಿದೆ. ಆಸ್ಪತ್ರೆ, ಬೆಡ್, ವೆಂಟಿಲೇಟರ್, ಆಮ್ಲಜನಕ, ಶೂಶೃಕರ ಭಾರೀ ಕೊರತೆಯನ್ನು ಎದುರಿಸುತ್ತಿರುವಾಗ ಮತ್ತು ಅದಕ್ಕಾಗಿ ಹೂಡಲು ಸರಕಾರದ ಬಳಿ ಬಜೆಟ್ ಕೊರತೆ ಇದೆ ಎನ್ನುವಾಗ ಈ ರೀತಿಯ ಅಕ್ರಮವು ಖಂಡಿತಾ ಅಕ್ಷಮ್ಯವಾಗಿದೆ.
ಯು. ಬಸವರಾಜ,
ರಾಜ್ಯ ಕಾರ್ಯದರ್ಶಿ