ಬಿಜೆಪಿ ಸರಕಾರ ಐಟಿ ಮಂತ್ರಾಲಯವನ್ನು ಪಕ್ಷಪಾತದಿಂದ ಬಳಸುವುದನ್ನು ಮತ್ತು ಟ್ವಿಟರ್ ನ ಕಚೇರಿಗಳ ಮೇಲೆ ಪೋಲೀಸ್ ದಾಳಿಗಳನ್ನು ನಡೆಸುವುದನ್ನು ಹೆದರಿಸುವ ಲಜ್ಜೆಗೆಟ್ಟ ಕೃತ್ಯಗಳು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)–ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡಿಸಿದೆ.
ಭಾರತ ಸರಕಾರ ಇತ್ತೀಚೆಗೆ ಸುರಕ್ಷಿತ ಗೋಪ್ಯತೆಯ ಉಪಬಂಧಗಳಿಗೆ ಸಂಬಂಧಪಟ್ಟ ನಿಯಮಗಳನ್ನು ಮಾರ್ಪಡಿಸಿರುವುದು ಒಂದು ಕಾವಲುಕೋರ ಪ್ರಭುತ್ವದ ಸಂರಚನೆಯನ್ನು ಗಟ್ಟಿಗೊಳಿಸುವ ಅಪಾಯಕಾರೀ ಮತ್ತು ಪ್ರತಿಗಾಮೀ ಕ್ರಮ, ನಾಗರಿಕರ ಖಾಸಗಿತ್ವದ ಹಕ್ಕನ್ನು ಉಲ್ಲಂಘಿಸುವ ಈ ಕ್ರಮವನ್ನು ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.
ಇನ್ನೊಂದೆಡೆಯಲ್ಲಿ, ಫೇಸ್ಬುಕ್ ಭಾರತದಲ್ಲಿ ತನ್ನ ‘ಬಿಸಿನೆಸ್ ಅಪ್ಲಿಕೇಷನ್’ ಗಳಲ್ಲಿ ವಾಟ್ಸ್ಆಪ್ ನ ಭದ್ರತೆಯನ್ನು ದುರ್ಬಲಗೊಳಿಸಬೇಕೆಂದಿರುವುದನ್ನು ಮರು ಪರಿಶೀಲಿಸಬೇಕು ಮತ್ತು ಹಿಂತೆಗೆದುಕೊಳ್ಳಬೇಕು ಎಂದೂ ಪೊಲಿಟ್ಬ್ಯುರೊ ಆಗ್ರಹಿಸಿದೆ.
ಸರಕಾರ ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆಯಲ್ಲಿ ಫೇಸ್ಬುಕ್, ಟ್ವಿಟರ್ ಮುಂತಾದ ಮಧ್ಯವರ್ತಿ ವೇದಿಕೆಗಳ ಸುರಕ್ಷಿತ ಗೋಪ್ಯತೆಯ ಉಪಬಂಧಗಳಿಗೆ ಸಂಬಂಧಪಟ್ಟ ನಿಯಮಗಳನ್ನು ಮಾರ್ಪಡಿಸಿದೆ. ಈ ಕುರಿತು ಫೆಬ್ರುವರಿ 25, 2021ರಂದು ಒಂದು ಅಧಿಸೂಚನೆ ಹೊರಡಿಸಿದೆ. ಇದು ಮೇ 26, 2021ರಿಂದ ಜಾರಿಗೆ ಬರಬೇಕು. ಈ ಅಧಿಸೂಚನೆಯ ಪ್ರಕಾರ ಸಂದೇಶ ಸೇವೆಗಳನ್ನು ಒದಗಿಸುವ ಎಲ್ಲ ಮಧ್ಯವರ್ತಿ ವೇದಿಕೆಗಳು ಒಂದು ಸಂದೇಶದ ಜಾಡಿನ “ಮೊದಲ ಮೂಲವ್ಯಕ್ತಿ”ಯನ್ನು ನ್ಯಾಯಾಲಯ ಅಥವ ಸರಕಾರ ಕೇಳಿದಾಗ ಗುರುತಿಸಬೇಕು.
ಇದರ ಅರ್ಥ ಈಗಿರುವ ಸಂದೇಶ ಶಿಷ್ಟಾಚಾರ ನಿಯಮಾವಳಿ(ಪ್ರೊಟೊಕೋಲ್)ಗಳ ಭದ್ರತೆಯನ್ನು ಮುರಿಯುವುದು ಎಂದಾಗುತ್ತದೆ ಎಂದು ಫೇಸ್ಬುಕ್/ವಾಟ್ಸ್ಆಪ್ ಹೇಳಿವೆ. ತಾಂತ್ರಿಕ ಪರಿಣಿತರು ಇದನ್ನು ಅನುಮೋದಿಸಿದ್ದಾರೆ. ಭದ್ರತಾ ಶಿಷ್ಟಾಚಾರ ನಿಯಮಾವಳಿಗಳನ್ನು ದುರ್ಬಲಗೊಳಿಸುವುದು ಬಳಕೆದಾರರ ಖಾಸಗಿತ್ವವನ್ನು ಉಲ್ಲಂಘಿಸುತ್ತದೆ ಮತ್ತು ಕ್ರಿಮಿನಲ್ ಉದ್ದೇಶಗಳಿಗಾಗಿ ಅವನ್ನು ಬೇಧಿಸಲು ಈಡು ಮಾಡಿಕೊಡುತ್ತದೆ ಕೂಡ.
ಫೇಸ್ಬುಕ್ ತನ್ನ ಈ ವೀಕ್ಷಣೆಗಳಿಗೆ ಅನುಗುಣವಾಗಿ ಭಾರತದಲ್ಲಿ ತನ್ನ ‘ಬಿಸಿನೆಸ್ ಅಪ್ಲಿಕೇಷನ್’ ಗಳಲ್ಲಿ ವಾಟ್ಸ್ಆಪ್ ನ ಭದ್ರತೆಯನ್ನು ದುರ್ಬಲಗೊಳಿಸಬೇಕೆಂದಿರುವುದನ್ನು ಮರು ಪರಿಶೀಲಿಸಬೇಕು ಮತ್ತು ಹಿಂತೆಗೆದುಕೊಳ್ಳಬೇಕು ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ, ಫೇಸ್ಬುಕ್ ಭಾರತದಲ್ಲಿ ವಾಟ್ಸ್ಆಪ್ ದತ್ತಾಂಶಗಳು ತನಗೆ ಲಭ್ಯವಾಗುವಂತಿರಬೇಕು ಎಂದು ಬಯಸುತ್ತದೆ, ಆದರೆ ಯುರೋಪಿಯನ್ ಒಕ್ಕೂಟದಲ್ಲಿ ಬಳಕೆದಾರರ ಖಾಸಗಿತ್ವ ಕುರಿತ ನಿರ್ದೇಶನವನ್ನು ಪಾಲಿಸುತ್ತದೆ, ಅದರಿಂದಾಗಿ ಇಂತಹ ಲಭ್ಯತೆಯನ್ನು ಒದಗಿಸುವುದಿಲ್ಲ ಎಂಬ ಸಂಗತಿಯತ್ತ ಗಮನ ಸೆಳೆದಿದೆ.
ಭಾರತ ಸರಕಾರ ಇತ್ತೀಚೆಗೆ ವಿವಿಧ ಬಿಜೆಪಿ ಮುಖಂಡರುಗಳ ಟ್ವೀಟ್ಗಳಿಗೆ ‘ಕೈಚಳಕದ ಮಾಧ್ಯಮ’ ಎಂಬ ಪಟ್ಟಿ ಹಚ್ಚಿರುವುದಕ್ಕಾಗಿ ಟ್ವಿಟರ್ ವೇದಿಕೆಯನ್ನು ಬೆದರಿಸಲು ದಿಲ್ಲಿ ಪೋಲೀಸನ್ನು ಬಳಸುತ್ತಿದೆ. ಈ ರೀತಿಯಲ್ಲಿ ಬಿಜೆಪಿ ಸರಕಾರ ಐಟಿ ಮಂತ್ರಾಲಯವನ್ನು ಪಕ್ಷಪಾತದಿಂದ ಬಳಸುವುದನ್ನು ಮತ್ತು ಟ್ವಿಟರ್ ನ ಕಚೇರಿಗಳ ಮೇಲೆ ಪೋಲೀಸ್ ದಾಳಿಗಳನ್ನು ನಡೆಸುವುದನ್ನು ಹೆದರಿಸುವ ಲಜ್ಜೆಗೆಟ್ಟ ಕೃತ್ಯಗಳು ಎಂದು ಸಿಪಿಐ(ಎಂ) ಖಂಡಿಸಿದೆ.
ಜನಗಳ ಸಂದೇಶಗಳನ್ನು ಸರಕಾರಕ್ಕೆ ಲಭ್ಯಗೊಳಿಸಲು ಭದ್ರತಾ ಪ್ರೊಟೊಕೋಲ್ಗಳನ್ನು ಶಿಥಿಲಗೊಳಿಸುವುದು ಒಂದು ಅಪಾಯಕಾರೀ ಮತ್ತು ಪ್ರತಿಗಾಮೀ ಕ್ರಮ. ಇದು ಒಂದು ಕಾವಲುಕೋರ ಪ್ರಭುತ್ವದ ಸಂರಚನೆಯನ್ನು ಗಟ್ಟಿಗೊಳಿಸುತ್ತದೆ, ಈ ಮೂಲಕ ನಾಗರಿಕರ ಖಾಸಗಿತ್ವದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಈ ಉಪಬಂಧಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.