ಶಾಸಕ ಕೆ.ಸಿ.ಕೊಂಡಯ್ಯನವರ ಜಿಂದಾಲ್ ಪರ ವಕಾಲತ್ತು: ಸಿಪಿಐಎಂ ಖಂಡನೆ

ಜಿಂದಾಲ್ ಪರ ವಕಾಲತ್ತು ವಹಿಸಿ 3667 ಎಕರೆ ಜಮೀನನ್ನು ಕೇವಲ 1.25 ಲಕ್ಷ ರೂ.ಗಳಿಗೆ ತಲಾ ಎಕರೆಗೆ ನಿಗದಿಸಿ ಮಾರಾಟ ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿರುವ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ನವರ  ರಾಜ್ಯ ಹಾಗೂ ಜನ ವಿರೋಧಿ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬಳ್ಳಾರಿ-ವಿಜಯನಗರ ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ.

ಇದು, ರಾಜ್ಯ ಸರಕಾರದ ಬೊಕ್ಕಸಕ್ಕೆ ಮತ್ತು ಅತ್ಯಂತ ಕಡಿಮೆ ಬೆಲೆಗೆ ಅಂದು ಕೇಂದ್ರ ಸರಕಾರಕ್ಕೆ ನೀಡಿದ ರೈತರಿಗೆ ಅದರಿಂದ ಎಂತಹ ನಷ್ಠವಾದರೂ ಪರವಾಗಿಲ್ಲ, ಜಿಂದಾಲ್ ಕಂಪನಿಗೆ ದಾನವಾಗಿ ಬೇಕಾದರೂ ಜಮೀನು ನೀಡಿ ಎಂಬ ಲೂಟಿಕೋರ ದಳ್ಳಾಳಿ ನಿಲುಮೆ ಇದಾಗಿದೆಯೆಂದು ಕಟುವಾಗಿ ವಿಮರ್ಶಿಸಿದೆ.

ಶಾಸಕರಾದವರು ರಾಜ್ಯದ ಸಂಪನ್ಮೂಲ ಹಾಗೂ ಬೊಕ್ಕಸ ಮತ್ತು ಜನತೆಯ ಹಿತಾಸಕ್ತಿ ಪರವಾಗಿ ಇಲ್ಲದೇ ಹೋದಲ್ಲಿ, ಶಾಸಕರಾಗಿ ಮುಂದುವರೆಯುವುದಾದರೂ ಯಾಕೆ? ರಾಜೀನಾಮೆ ನೀಡಿ, ಜಿಂದಾಲ್ ಪರವಾಗಿ ಕಾರ್ಯನಿರ್ವಹಿಸುವುದು ಒಳ್ಳೆಯದೆಂದು ಸಿಪಿಐ(ಎಂ) ಕುಟುಕಿದೆ.

ಜಿಂದಾಲ್ ಪ್ರದೇಶದಲ್ಲಿ ಕೇವಲ 30×40 ನಿವೇಶನದ ಬೆಲೆ ರೂ 5 ಲಕ್ಷದ ಮೇಲಿರುವಾಗ ತಲಾ ಎಕರೆ ಜಮೀನನ್ನು ಕೇವಲ 1.25 ಲಕ್ಷಕ್ಕೆ  ಮಾರಾಟ ಮಾಡುವಂತೆ ಒತ್ತಾಯಿಸಿದರೇ, ಜನತೆ ಶಾಸಕರ ಕುರಿತು ಏನೆಂದು ಭಾವಿಸುವರೆಂಬ ಜಾಗೃತಿಯನ್ನಾದರೂ ಕನಿಷ್ಠ ಇವರು ಹೊಂದಿರಬೇಕಿತ್ತು ಎಂದು ಠೀಕಿಸಿದೆ.

ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೆ ಜಮೀನುಗಳನ್ನು ಯಾವುದೇ ಕಂಪನಿಗಳಿಗೆ ಮಾರಾಟ ಮಾಡಬಾರದು. ಬದಲಿಗೆ ಗುತ್ತಿಗೆಯನ್ನು ಮುಂದುವರೆಸಬೇಕು ಮತ್ತು ಗುತ್ತಿಗೆಯ ದರವನ್ನು ತಲಾ ಎಕರೆಗೆ ಕನಿಷ್ಠ 25,000 ರೂ.ಗಳೆಂದು ಹೆಚ್ಚಿಸಿ, ಅದರಲ್ಲಿ ಶೇ.50 ರಷ್ಠು ಮೂಲ ರೈತ ಕುಟುಂಬಗಳಿಗೆ ದೊರಕುವಂತೆ ಕ್ರಮವಹಿಸಬೇಕೆಂದು ಮತ್ತು ಈ ಕುರಿತ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ಆರ್.ಎಸ್.ಬಸವರಾಜ, ಕಾರ್ಯದರ್ಶಿ

ಬಿ.ಮಾಳಮ್ಮ, ರಾಜ್ಯ ಸಮಿತಿ ಸದಸ್ಯರು

Leave a Reply

Your email address will not be published. Required fields are marked *