ನಗರದಲ್ಲಿ ಕೋವಿಡ್ ಸಾವಿನ ದರ ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಲ್ಲಿ 0.46 ಶೇಕಡದಿಂದ 6.10 ಶೇಕಡಕ್ಕೆ ಹೆಚ್ಚಳವಾಗಿರುವ ಕಾರಣ ಕೋವಿಡ್ ಸಾವಿನ ಆಡಿಟ್ ನಡೆಸಿ ಕಾರಣಗಳನ್ನು ಪತ್ತೆ ಹಚ್ಚಿ ಸರಿಪಡಿಸಲು ಕೂಡಲೆ ಅಗತ್ಯ ತುರ್ತು ಕ್ರಮವಹಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ.
ಈ ಸಾವುಗಳಿಗೆ ಐಸಿಯು, ವೆಂಟಿಲೇಟರ್, ಔಷಧ ಕೊರತೆ ಜೊತೆಗೆ ಕೆಲವೆಡೆ ವೆಂಟಿಲೇಟರ್ ಗುಣಮಟ್ಟವು ಸಹಾ ಕಾರಣಗಳು ಎಂಬ ದೂರುಗಳಿವೆ. ಇದರ ಜೊತೆಯಲ್ಲೇ ಕೆಲವೆಡೆ ವೆಂಟಿಲೇಟರ್ ಇದ್ದರು ಸಹಾ ಅದರ ನಿರ್ವಹಣೆಗೆ ಅಗತ್ಯ ತಂತ್ರಜ್ಞರ ಕೊರತೆ ಅವುಗಳ ಬಳಕೆಯನ್ನು ಸೀಮಿತಗೊಳಿಸಿದೆ ಎಂಬ ಅಂಶವು ಇದೆ.
ಈ ಎಲ್ಲಾ ಅಂಶಗಳ ಜೊತೆಯಲ್ಲಿ ಕೆಲವು ಕಳಪೆ ಗುಣಮಟ್ಟದ ವೆಂಟಿಲೇಟರ್‌ಗಳು ಮತ್ತು ಅವುಗಳ ಕಾರ್ಯನಿರ್ವಹಣೆ ಸಮರ್ಥವಾಗಿಲ್ಲದ ಕಾರಣ ಕೆಲವು ಸಾವುಗಳು ಸಂಭವಿಸಿವೆ ಎಂಬ ವರದಿಗಳಿವೆ.
ವೆಂಟಿಲೇಟರ್ ಮೇಲೆ ಹೋದ ಬಹುತೇಕ ರೋಗಿಗಳು ಬದುಕಿಲ್ಲ ಎಂಬ ವರದಿಗಳಿವೆ. ಪಿಎಂ ಕೇರ್ಸ್ ನಿಧಿಯಿಂದ ಎಷ್ಟು ವೆಂಟಿಲೇಟರ್ ಗಳು ಸರಬರಾಜಾಗಿವೆ, ಅವುಗಳ ಕಾರ್ಯಕ್ಷಮತೆ ಹೇಗಿದೆ ಎಂಬುದನ್ನು ಸಹಾ ಸ್ಪಷ್ಟಪಡಿಸಬೇಕಾದ ಅಗತ್ಯವಿದೆ.
ಇತ್ತೀಚೆಗೆ ಮುಂಬೈ ಹೈಕೋರ್ಟ್ ಔರಂಗಾಬಾದ್ ಪೀಠವು ಪಿಎಂ ಕೇರ್ಸ್ ನಿಧಿಯ ವೆಂಟಿಲೇಟರ್‌ಗಳ ಗುಣಮಟ್ಟ ಕಾರ್ಯಕ್ಷಮತೆ ಬಗ್ಗ ನಡೆಸಿರುವ ವಿಚಾರಣೆಯಲ್ಲಿ ಅವುಗಳ ಕಾರ್ಯಕ್ಷಮತೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎಂಬುದು ಕಂಡು ಬಂದಿದೆ. ಈ ಎಲ್ಲಾ ಕಾರಣಗಳಿಂದ ಕೋವಿಡ್ ಸಾವಿನ ಆಡಿಟ್ ಅಗತ್ಯ ಎಂದು ಸಿಪಿಐ(ಎಂ) ಒತ್ತಾಯಿಸಿದೆ.