ತುಮಕೂರು ಜಿಲ್ಲೆಯ ಕರಿಕೆರೆ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಆಗಸ್ಟ್ 15 ರಂದು ರಾಷ್ಟ್ರಧ್ವಜ ಹಾರಿಸುವುದಕ್ಕಾಗಿ ಕಂಬವನ್ನು ನಿಲ್ಲಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ 16 ವರ್ಷದ ಬಾಲಕ ಚಂದನ್ ಮೃತಪಟ್ಟಿದ್ದು ಶಶಾಂಕ ಮತ್ತು ಪವನ್ ಎಂಬ ಇನ್ನಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುದ್ದಿ ಪ್ರಸಾರವಾದ ದಾರುಣ ಘಟನೆ ಮತ್ತೊಮ್ಮೆ ಮಕ್ಕಳ ಪಾಲಕರನ್ನು ತೀರ್ವ ಅತಂಕಕ್ಕೆ ತಳ್ಳಿದೆ.
ಈಗ 2 ವರ್ಷಗಳ ಹಿಂದೆ ಕೊಪ್ಪಳದ ಬನ್ನಿ ಕಟ್ಟೆಯಲ್ಲಿರುವ ವಿದ್ಯಾರ್ಥಿ ನಿಲಯವೊಂದರಲ್ಲಿ ಇದೇ ರೀತಿ ರಾಷ್ಟ್ರಧ್ವಜವನ್ನು ಕೆಳಗೆ ಇಳಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿದ್ಯುತ್ ಸಂಪರ್ಕಕ್ಕೆ ಒಳಗಾಗಿ ಸಾವನ್ನಪ್ಪಿದರು. ಇಂತಹ ದುರ್ಘಟನೆಗಳು ಮತ್ತೆ ಮರುಕಳಿಸಲಿಕ್ಕಿಲ್ಲ ಎಂದು ಅಂದು ಸಮಾಧಾನ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಪಾಲಕರು ಮತ್ತೆ ತಲ್ಲಣಕ್ಕೊಳಗಾಗಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ಎಂಬ ಆತಂಕ ಅವರನ್ನು ತೀವ್ರವಾಗಿ ಕಾಡತೊಡಗಿದೆ. ಅವರು ಬಡವರಿರಬಹುದು. ಆದರೆ ತಮ್ಮ ಮಕ್ಕಳಲ್ಲಿ ಅವರು ಹತ್ತು ಹಲವು ಕನಸುಗಳನ್ನು ಕಾಣುತ್ತಿರುತ್ತಾರೆ. ಅವರ ಇದೇ ಮಕ್ಕಳು ಇಂತಹ ಅಕಾಲಿಕ ಸಾವಿಗೆ ಬಲಿಯಾದಾಗ ಆ ತಂದೆ ತಾಯಿಯರ ಪಾಲಿಗೆ ಆಕಾಶವೇ ಅವರ ಮೇಲೆ ಕಳಚಿಬಿದ್ದ ಅನುಭವವಾದರೆ ಆಶ್ಚರ್ಯವಿಲ್ಲ. ಏನು ಕೊಟ್ಟರು ಯಾರು ತಮ್ಮ ಮಕ್ಕಳ ಜೀವವನ್ನು ಮರಳಿ ಕೊಡಲಾರರು ಎಂಬ ಕಟು ಸತ್ಯ ಅವರನ್ನು ಹತಾಶರಾಗಿಸುತ್ತಿದೆ.
ತುಮಕೂರಿನ ಹೃದಯ ವಿದ್ರಾವಕ ಘಟನೆಯಲ್ಲಿ ನಮ್ಮ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಮಧ್ಯಪ್ರವೇಶ ಮಾಡಿದ್ದು ಹೆಮ್ಮೆಯ ವಿಷಯ. ಈ ಸಂಬಂಧ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ. ನೂತನ ಮಂತ್ರಿಗಳು, ಜಿಲ್ಲಾ ಉಸ್ತುವಾರಿಗಳು ಇತ್ತ ತಮ್ಮ ಚಿತ್ತವನ್ನು ತಿರುಗಿಸುವ ಮೊದಲೇ ರಾಜ್ಯದ ಉಚ್ಛ ನ್ಯಾಯಾಲಯ ಮೃತಪಟ್ಟ ಬಾಲಕನ ಪೋಷಕರಿಗೆ ಕೂಡಲೇ ಸೂಕ್ತ ಪರಿಹಾರವನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ವಿದ್ಯಾರ್ಥಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿದೆಯೇ ಎಂಬುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಸರಿಯಾದ ಚಿಕಿತ್ಸೆ ದೊರೆಯುವಂತೆ ತುಮಕೂರು ಜಿಲ್ಲಾ ಜಿಲ್ಲಾಧಿಕಾರಿ ನೋಡಿಕೊಳ್ಳಬೇಕು. ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ, ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಸದಸ್ಯರಾಗಿರುವ ವಿಭಾಗೀಯ ಪೀಠ ಹೇಳಿತು. ಅಲ್ಲದೆ ಘಟನೆಯ ಕುರಿತು ಒಂದು ವರದಿಯನ್ನು ಸಲ್ಲಿಸುವಂತೆಯೂ ಆದೇಶ ನೀಡಿ ಪ್ರಕರಣದ ವಿಚಾರಣೆಯನ್ನು ಸೆಪ್ಟಂಬರ್ 6 ಕ್ಕೆ ಮುಂದೂಡಿತು.
ಪ್ರಕರಣದಲ್ಲಿ ರಾಜ್ಯ ಹೈಕೋರ್ಟಿನ ಮಧ್ಯಪ್ರವೇಶದಿಂದಾಗಿ ಪ್ರಶ್ನೆಯೊಂದು ತಲೆಎತ್ತುವಂತಾಗಿದೆ. ವಿದ್ಯಾರ್ಥಿಗಳ ಇಂತಹ ಕರುಣಾಜನಕ ಸಾವುಗಳಿಗೆ ಯಾರು ಹೊಣೆ? ಹೊಣೆ ಸರ್ಕಾರದಲ್ಲದೆ ಇನ್ನು ಯಾರದ್ದು? ನಮ್ಮ ಕೇಂದ್ರ/ ರಾಜ್ಯ ಸರ್ಕಾರಗಳು ಇಂತಹ ವಿಷಯಗಳಲ್ಲೂ ಹೊಣೆಗೇಡಿಯಾಗಿ ವರ್ತಿಸುತ್ತಾ ಬಂದಿವೆ.
ನಮ್ಮ ಮಕ್ಕಳು ಶಾಲೆಗೆ ಹೋಗುವಾಗ ದಾರಿಯಲ್ಲಿ, ಶಾಲೆಯಲ್ಲಿ ಇರುವಾಗ, ಶಾಲೆಯಿಂದ ಮನೆಗೆ ತೆರಳುವಾಗ ಅನೇಕ ರೀತಿಯ ಅನಾಹುತಗಳಿಗೆ ತುತ್ತಾಗುತ್ತಿರುತ್ತಾರೆ. ಅನೇಕ ಆಕಸ್ಮಿಕ, ಅನಿರೀಕ್ಷಿತ ದುರ್ಘಟನೆಗಳು ಸಂಭಸುತ್ತಿರುತ್ತವೆ. ರಸ್ತೆ ಅಪಘಾತಗಳು, ಪ್ರವಾಹಕ್ಕೆ ಸಿಕ್ಕಿಕೊಂಡು, ಅತ್ಯಾಚಾರಿಗಳ ಮತ್ತು ಕೊಲೆಗಾರರ ಕೈಗೆ ಸಿಲುಕಿಕೊಂಡು, ವಿಷದ ಹಾವು ಕಚ್ಚಿ, ಸಿಡಿಲು ಬಡಿದು, ಶಾಲೆಯ ಗೋಡೆ ಕುಸಿದು, ಮಕ್ಕಳ ಮೇಲೆ ಬಿದ್ದಾಗ ನಮ್ಮ ಮಕ್ಕಳು ಅನಿರೀಕ್ಷಿತ ಸಾವುಗಳಿಗೆ ಬಲಿಯಾಗುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ಸಹಾಯದ ಹಸ್ತ ಚಾಚಲು ಹಿಂಜರಿಯಬಾರದು. ಸರ್ಕಾರಕ್ಕೆ ತಮ್ಮ ಮಕ್ಕಳು, ಪರರ ಮಕ್ಕಳು ಎಂಬ ತಾರತಮ್ಯದ ಕಣ್ಣುಗಳು ಇರಬಾರದು. ಎಲ್ಲಾ ಮಕ್ಕಳೂ ದೇಶದ ಮಕ್ಕಳು ಎಂದುಕೊಳ್ಳಬೇಕು ನಾವು ಮತ್ತು ನಮ್ಮ ಸರ್ಕಾರ, ನೊಂದ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡಲು ಸರ್ಕಾರ ವಿಳಂಬ ಮಾಡಬಾರದು. ಸಂಭವಿಸಬಹುದಾದ ಅಪಘಾತಗಳಿಗೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಂಡಿರಬೇಕು. ಉದಾಹರಣೆಗೆ ರಾಷ್ಟ್ರಧ್ವಜ ಆರಿಸುವಾಗ ಅಥವ ಇಳಿಸುವಾಗ ಹತ್ತಿರದಲ್ಲಿ ವಿದ್ಯುತ್ ತಂತಿಗಳಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ ಇದ್ದಂತೆ. ಇಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಸಾಧ್ಯವೇನಲ್ಲ. ಕಠಿಣವಾದ ನಿಯಮಗಳನ್ನು ರೂಪಿಸಿ ಜಾರಿಗೆ ತರಬೇಕು. ಅಪಾಯ ಇರುವ ಸ್ಥಳದಲ್ಲಿ ಧ್ವಜಾರೋಹಣ ಜರಗಿಸುವುದನ್ನೇ ನಿಷೇಧಿಸಬಹುದು.
ಶಿಥಿಲಗೊಂಡ ಕಟ್ಟಡಗಳಲ್ಲಿ ಶಾಲೆಗಳನ್ನು ನಡೆಸಬೇಕಾದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಕೂಡಲೇ ನಿವಾರಿಸಿಕೊಳ್ಳಬೇಕು. ಮಕ್ಕಳನ್ನು ಹೊರಗಡೆ ಮಣ್ಣಲ್ಲಿ, ಬಿಸಿಲಿನಲ್ಲಿ ಕೂಡಿಸಿ ಪಾಠ ನಡೆಸುವುದನ್ನು ನಿಲ್ಲಿಸಬೇಕು. ವಿದ್ಯುತ್ ಪ್ರಸರಣವನ್ನು ನಿಯಂತ್ರಿಸಲು ಸರ್ಕಾರ ಶಾಲೆಗೆ ಅಗತ್ಯ ನುರಿತ ಸಿಬ್ಬಂದಿಗಳನ್ನು ನೇಮಿಸಬೇಕು. ಪ್ರತಿಯೊಂದು ಶಾಲೆಯಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯವನ್ನು ಕಾಯ್ದಿಡಬೇಕು. ಶಾಲೆಯ ಪರಿಸರ ಆರೋಗ್ಯಕರವಾಗಿರಬೇಕು. ಶಾಲೆಯನ್ನು, ಹಾಗೂ ಶಾಲೆಯ ವಠಾರವನ್ನು ಮಲಿನಗೊಳಿಸುವುದನ್ನು ತಡೆಯಲು ಬಿಗಿಯಾದ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಅವಘಡಗಳು ಸಂಭವಿಸಿದಾಗ ಚಿಕಿತ್ಸೆಗಾಗಿ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ತುರ್ತು ವ್ಯವಸ್ಥೆ ಮಾಡಿಕೊಳ್ಳಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಗಮನ ನೀಡಲು ಸಾರ್ವಜನಿಕ ಸಮಿತಿಯನ್ನು ರಚಿಸಬೇಕು.
ಕೋವಿಡ್ ವಿಷಯದಲ್ಲೂ ಸರಕಾರದ ವೈಫಲ್ಯದಿಂದಾಗಿ ಮಕ್ಕಳ ಸಾವುಗಳು ಸಂಭವಿಸಿವೆ. ಮಕ್ಕಳನ್ನು ಬೆದರಿಸುವ ಅಗತ್ಯವಿಲ್ಲ. ಮಾಧ್ಯಮಗಳಲ್ಲಿ ಭಯ ಹುಟ್ಟಿಸುವುದಕ್ಕೆ ಪೈಪೋಟಿ ನಡೆಸುತ್ತಿದ್ದಂತೆ ಕಾಣುತ್ತದೆ. ಯಾವುದೇ ರೋಗಿ ವೈದ್ಯರ ಒಳ್ಳೆಯ ಮಾತುಗಳಿಂದ, ಸಿಬ್ಬಂದಿಗಳ ಮಾನವೀಯ ಮುಖದ ಸೇವೆಯಿಂದ 50% ರಷ್ಟು ಗುಣ ಆಗಿರುತ್ತಾರೆ. ಅವರು ಚಿಕಿತ್ಸೆಯನ್ನು ವಿಶ್ವಾಸದಿಂದ ಸ್ವೀಕರಿಸುತ್ತಾರೆ, ಗುಣಮುಖರಾಗುತ್ತಾರೆ.
ನಮ್ಮ ಎಲ್ಲಾ ಮಕ್ಕಳು ದೇಶದ ಆಸ್ತಿ. ಅವರೆಲ್ಲರಿಗೆ ಯಾವುದೇ ತಾರತಮ್ಯವಿಲ್ಲದೆ ಸಮಾನ ಸೌಲಭ್ಯಗಳು ಸಿಗುವಂತಾಗಬೇಕು. ಇಂದಿನ ಮಕ್ಕಳು ನಾಳೆಯ ನಾಗರಿಕರು. ಅವರ ನಾಳೆಗಳು ಒಳ್ಳೆಯದವುಗಳಾಗಬೇಕಾದರೆ ಇಂದು ಅವರ ಬಗ್ಗೆ ನಮ್ಮ ಹಾಗೂ ನಮ್ಮ ಸರ್ಕಾರದ ಕಾಳಜಿ ಹೆಚ್ಚಾಗಬೇಕು. ಅವರಿಗಾಗಿ ಈಗ ಖರ್ಚು ಮಾಡುವ ಹಣ ವ್ಯರ್ಥವಲ್ಲ. ಮುಂದಿನ ಸುಂದರ ಬದುಕಿಗೆ, ಮುಂದಿನ ಸಮೃದ್ಧ ದೇಶಕ್ಕಾಗಿ ಹೂಡಲಾದ ಬಂಡವಾಳ.