ಬೃಂದಾ ಕಾರಟ್
ನಮ್ಮ ಭವ್ಯ ಸ್ವಾತಂತ್ರ್ಯ ಹೋರಾಟದ 75ನೇ ವಾರ್ಷಿಕೋತ್ಸವದ ಆಚರಣೆಗಳನ್ನು ಆರಂಭಿಸುತ್ತಿರುವ ಸಂದರ್ಭದ ಪ್ರಧಾನಮಂತ್ರಿಗಳ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಒಂದು ಮೇಲು-ಮೇಲಿನ ಉಲ್ಲೇಖ ಮಾತ್ರ ಇತ್ತು. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾನತೆ, ಐಕ್ಯತೆ, ಬಹುತ್ವ, ನ್ಯಾಯ, ಕಾರ್ಮಿಕರು, ನಿರುದ್ಯೋಗ, ಹಣದುಬ್ಬರ ಈ ಪದಗಳನ್ನು ಒಮ್ಮೆಯೂ ಉಚ್ಛರಿಸಲಿಲ್ಲ. ಗೆಳೆತನ, ಶಾಂತಿ, ಉತ್ತಮ ಸಂಬಂಧಗಳು ಎಂಬ ಪದಗಳನ್ನು ಕೂಡ. ಈ ಸಂದರ್ಭದಲ್ಲಿ ನಮ್ಮ ದೇಶದ ಪ್ರಸ್ತುತ ಸರಕಾರ ಭಾರತಕ್ಕೆ ಸ್ವಾತಂತ್ರ್ಯವನ್ನು ಗೆದ್ದು ಕೊಟ್ಟ ಮೌಲ್ಯಗಳಿಗೆ ತದ್ವಿರುದ್ಧವಾದ ಸೈದ್ಧಾಂತಿಕ ನೆಲೆಯ ಪೂರ್ವಿಕರನ್ನು ಹೊಂದಿರುವ ಮುಖಂಡರಿಂದ ಕೂಡಿದೆ ಎಂಬುದು ಭಾರತದ ದುರಂತ. ಪ್ರಧಾನ ಮಂತ್ರಿಗಳ ಭಾಷಣ ಈ ವಾಸ್ತವತೆಯನ್ನು ಬಿಂಬಿಸಿದೆ.
ಒಂದು ಸ್ವಾತಂತ್ರ್ಯ ದಿನದ ಭಾಷಣ, ಅದರಲ್ಲೂ ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಆರಂಭವಾಗುವ ವರ್ಷದ ಭಾಷಣ, ಖಂಡಿತವಾಗಿಯೂ ನಮಗೆ ಈ ಸ್ವಾತಂತ್ರ್ಯವನ್ನು ಗೆದ್ದು ಕೊಟ್ಟಿರುವ ಮೌಲ್ಯಗಳನ್ನು ಪುನರುಚ್ಛರಿಸುವಂತದ್ದು ಆಗಿರಬೇಕಿತ್ತು. ಆದರೆ ಪ್ರಧಾನ ಮಂತ್ರಿ ಮೋದಿಯವರಿಗೆ ಹಾಗಿಲ್ಲ. 88 ನಿಮಿಷಗಳ ತನ್ನ ಭಾಷಣದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತು ಆ ಹೋರಾಟದ ವೀರರುಗಳ ಬಗ್ಗೆ ಒಂದು ಮೇಲು-ಮೇಲಿನ ಉಲ್ಲೇಖ ಮಾತ್ರ ಇತ್ತು. ಪ್ರಧಾನ ಮಂತ್ರಿಗಳಿಗೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ಎಷ್ಟೊಂದು ಅಪರಿಚಿತ ಎಂದರೆ, ಬಂಗಾಲದ ಸ್ವಾತಂತ್ರ್ಯ ಹೋರಾಟದ ವೀರ ಮಹಿಳೆ ಮಾತಂಗಿನಿ ಹಾಜ್ರಾ ರವರು ಅಸ್ಸಾಂನವರು ಎಂದು ಉಲ್ಲೇಖಿಸಿದರು.
ಕಾಣೆಯಾದ ಪದಗಳು
ಪ್ರಧಾನ ಮಂತ್ರಿಗಳು ಹೇಳದೇ ಇದ್ದುದರ ದನಿಯೇ ಗಟ್ಟಿಯಾಗಿತ್ತು, ಸ್ಪಷ್ಟವಾಗಿತ್ತು. ಭಾಷಣದ ಆರಂಭದಲ್ಲಿ “ಭಾರತವನ್ನು ಮತ್ತು ಪ್ರಜಾಪ್ರಭುತ್ವವನ್ನು ಪ್ರೀತಿಸುವವರಿಗೆ”ಶುಭಾಶಯಗಳನ್ನು ಕೋರಿರುವುದನ್ನು ಬಿಟ್ಟರೆ, ಅವರ ಭಾಷಣದ ಉಳಿದ ಭಾಗದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾನತೆ, ಐಕ್ಯತೆ, ಬಹುತ್ವ, ನ್ಯಾಯ, ಕಾರ್ಮಿಕರು, ನಿರುದ್ಯೋಗ, ಹಣದುಬ್ಬರ ಈ ಪದಗಳ ಗೈರುಹಾಜರಿಯೇ ಎದ್ದು ಕಾಣುತ್ತಿತ್ತು. ಒಂದು ಬಾರಿಯೂ ಈ ಪದಗಳನ್ನು ಉಚ್ಛರಿಸಲಿಲ್ಲ. ಗೆಳೆತನ, ಶಾಂತಿ, ಉತ್ತಮ ಸಂಬಂಧಗಳು ಎಂಬ ಪದಗಳನ್ನೂ ಕೂಡ.
ಈ ಪದಗಳು ಕಾಣೆಯಾಗಿರುವುದು, ರಾಷ್ಟ್ರಪತಿ ರಾಮ್ನಾಥ ಕೋವಿಂದ್ರವರು ಮಾಡಿದ ಸ್ವಾತಂತ್ರ್ಯದ ಮುನ್ನಾದಿನದ ಸಂಕ್ಷಿಪ್ತ ಭಾಷಣಕ್ಕೆ ಹೋಲಿಸಿದಾಗ ಇನ್ನಷ್ಟು ಗೋಚರವಾಗುತ್ತವೆ. ಅವರು ಈ ಕೆಲವು ಪರಿಕಲ್ಪನೆಗಳನ್ನು ಉಲ್ಲೇಖಿಸಿದರು: “ಭಾರತ-ಬಹುತ್ವದ ಪರಂಪರೆಗಳ ನೆಲೆವೀಡು-ಅತ್ಯಂತ ದೊಡ್ಡ ಮತ್ತು ಅತ್ಯಂತ ಚೈತನ್ಯಶಾಲಿ ಪ್ರಜಾಪ್ರಭುತ್ವ-ನಮಗೆ ಸ್ವಾತಂತ್ರ್ಯವನ್ನು ಗೆದ್ದುಕೊಟ್ಟವರ ಕನಸುಗಳನ್ನು ಸಾಕಾರಗೊಳಿಸಲು ನಾವು ಇನ್ನೂ ಬಹಳ ದೂರ ಸಾಗಬೇಕು ಎಂದು ನಾವು ಒಪ್ಪಿಕೊಳ್ಳುತ್ತೇವೆ…. ನಮ್ಮ ಸಂವಿಧಾನ ಆ ಕನಸುಗಳ ಸಾರಾಂಶವನ್ನು ನಾಲ್ಕು ಪದಗಳಲ್ಲಿ ನೀಟಾಗಿ ಕೊಡುತ್ತದೆ- ಅವೆಂದರೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವ. ನಾವು ಒಂದು ಅಸಮಾನ ಜಗತ್ತಿನಲ್ಲಿ ಹೆಚ್ಚಿನ ಸಮಾನತೆಗಾಗಿ, ಅನ್ಯಾಯಯುತ ಸನ್ನಿವೇಶಗಳಲ್ಲಿ ಹೆಚ್ಚಿನ ನ್ಯಾಯಕ್ಕಾಗಿ ಶ್ರಮಿಸಬೇಕಾಗಿದೆ… “ವೈವಿಧ್ಯತೆಯಲ್ಲಿ ಏಕತೆ”ಯ ಹುರುಪಿನಲ್ಲಿ, ನಾವು ಒಂದು ದೇಶವಾಗಿ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆ..”
ರಾಷ್ಟ್ರಪತಿಗಳು, “ಜಾಗತಿಕ ಬಂಧುಗಳು” ಮಹಾಸೋಂಕಿನ ಎರಡನೇ ಅಲೆಯ ವೇಳೆಯಲ್ಲಿ ಭಾರತಕ್ಕೆ ಒದಗಿಸಿದ ಸೇವೆಗೆ ಧನ್ಯವಾದ ಅರ್ಪಿಸಿದರು. ಮೋದಿಯವರು ಸೌಜನ್ಯಹೀನರಾಗಿ ಉಪೇಕ್ಷಿಸಿರುವ ಅಂಶವಿದು.
ಈ ಎರಡು ಭಾಷಣಗಳ ಧ್ವನಿಯಲ್ಲಿ ಎದ್ದು ಕಾಣುತ್ತಿರುವ ಈ ವ್ಯತ್ಯಾಸಗಳು ಪ್ರಸಕ್ತ ಸರಕಾರದ ಸರ್ವಾಧಿಕಾರಶಾಹೀ ಲಕ್ಷಣದಿಂದಾಗಿ ಹೆಚ್ಚೇನೂ ರಾಜಕೀಯ ಪರಿಣಾಮಗಳನ್ನು ಹೊಂದಿರಲಿಕ್ಕಿಲ್ಲ. ಆದರೆ, ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ಹೋರಾಟದ ಆದರ್ಶಗಳಿಗೆ ಮತ್ತು ಸ್ವತಂತ್ರ ಭಾರತ ತನ್ನ ದುಡಿಯುವ ಜನಗಳಿಗೆ ಈಡೇರಿಸದೇ ಉಳಿದಿರುವ ಆಶ್ವಾಸನೆಗಳಿಗೆ ಎಷ್ಟೊಂದು ಪರಕೀಯರಾಗಿದ್ದಾರೆ, ಅವೆಲ್ಲವುಗಳಿಂದ ಎಷ್ಟೊಂದು ದೂರದಲ್ಲಿ ಇದ್ದಾರೆ ಎಂಬುದನ್ನು ಅವು ಖಂಡಿತವಾಗಿಯೂ ತೋರಿಸುತ್ತವೆ.
ಕೋಮು ವಿಭಜನೆಯ ಸ್ಮರಣಾರ್ಥ?
ಇದು “ಭಾರತ ಆಗಸ್ಟ್ 14ನ್ನು ‘ವಿಭಜನೆಯ ಭೀಷಣತೆಗಳ ಸ್ವರಣೆಯ ದಿನ’ ಎಂದು ವಿಭಜನೆಗೆ ಬಲಿಯಾದ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತದೆ ಎಂಬ ಅವರ ಪ್ರಕಟಣೆಯಲ್ಲಿ ಎದ್ದು ಕಾಣುತ್ತದೆ. ದೇಶ ವಿಭಜನೆಯು ಬ್ರಿಟಿಷರು, ಧರ್ಮದ ಹೆಸರಿನಲ್ಲಿ, ಅದು ಮುಸ್ಲಿಮ್ ಇರಬಹುದು, ಅಥವ ಹಿಂದೂ ಇರಬಹುದು, ಕಾರ್ಯಾಚರಿಸುವ ಕೋಮುವಾದಿ ಶಕ್ತಿಗಳೊಡಗೂಡಿ ಭಾರತದ ವಿರುದ್ಧ ಎಸಗಿದ ದೊಡ್ಡ ದುರಂತಗಳಲ್ಲಿ ಒಂದು. ಅದು ಒಂದು ದಶಲಕ್ಷಕ್ಕೂ ಹೆಚ್ಚು ಪ್ರಾಣಗಳು ಹೋದ ಭೀಕರ ದುರಂತ ಎಂಬುದರಲ್ಲಿ ಸಂದೇಹವಿಲ್ಲ. ಒಂದು ದೇಶದ ಬದುಕಿನಲ್ಲಿ ಇಂತಹ ಒಂದು ದುರಂತವನ್ನು ನೆನಪಿಸಿಕೊಳ್ಳುವುದು ಎಂದರೆ, ಖಂಡಿತವಾಗಿಯೂ, ದೇಶ ವಿಭಜನೆಯ ವೇಳೆಯಲ್ಲಿ ಹಿಂಸಾಚಾರಕ್ಕೆ ಕಾರಣವಾದವುಗಳು, ಕೋಮುವಾದದ ಮತ್ತು “ಆ ಬೇರೆಯವರ” ಬಗ್ಗೆ ದ್ವೇಷದ ಮೇಲೆ ಕಟ್ಟಿದ ಸಂಕುಚಿತ ಧಾರ್ಮಿಕ ಅಸ್ಮಿತೆಗಳಿಗೆ ಪ್ರೋತ್ಸಾಹದ ರಾಜಕೀಯ, ಮತ್ತೆಂದೂ ತಲೆ ಎತ್ತಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಗೈಯುವುದೇ ಆಗಬೇಕು.
ಆದರೆ ಇದಂತೂ ನಿಜವಾದ ಉದ್ದೇಶ ಅಲ್ಲ ಎಂಬುದು ಬಿಜೆಪಿಯ ಅಧ್ಯಕ್ಷರಿಂದ ಹಿಡಿದು ಪ್ರಧಾನ ಕಾರ್ಯದರ್ಶಿ ಮತ್ತು ಆರೆಸ್ಸೆಸ್ ಪ್ರಚಾರಕ ಸಂತೋಷ್ ಮುಂತಾದ ಬಿಜೆಪಿ ಮುಖಂಡರಿಂದ “ತುಷ್ಟೀಕರಣದ” ರಾಜಕೀಯವೇ ಕಾರಣ ಎಂಬಂತಹ ಹೇಳಿಕೆಗಳ ಸುರಿಮಳೆಯೇ ಸಾಕಷ್ಟು ಸ್ಪಷ್ಟಪಡಿಸುತ್ತದೆ. ಈ ತುಷ್ಟೀಕರಣ ಎಂಬುದು ಅಲ್ಪಸಂಖ್ಯಾತರನ್ನು ಕುರಿತ ಬಿಜೆಪಿ ಸಂಕೇತ ಪದ. ಭಾರತದ ವಿಭಜನೆಗೆ ಕಾರಣವಾದ ವಿಭಜನೆ ಮತ್ತು ದ್ವೇಷ-ಆಧಾರಿತ ರಾಜಕಾರಣದ ಮರುಸೃಷ್ಟಿಗಾಗಿಯೇ ಈ ಸ್ಮರಣೆಯ ಕರೆ ಎಂಬುದು ಸ್ಪಷ್ಟ.
ಎಲ್ಲರಿಗೂ ತಿಳಿದಿರುವಂತೆ, ಆರೆಸ್ಸೆಸ್ ಸ್ಥಾಪನೆಯಾದಂದಿನಿಂದಲೂ, ಒಡೆದು ಆಳುವ ಬ್ರಿಟಿಶ್ ಕಾರ್ಯತಂತ್ರವನ್ನು ಬಲಪಡಿಸುವ ಕೆಲಸ ಮಾಡಿದೆ. ಹಿಂದುತ್ವದ, ಹಿಂದೂರಾಷ್ಟ್ರದ ಮತ್ತು ಹಿಂದೂಗಳು ಮತ್ತು ಮುಸ್ಲಿಮರು ಎರಡು ಭಿನ್ನ ರಾಷ್ಟ್ರೀಯತೆಗಳು ಎಂದು ಧರ್ಮದ ಆಧಾರದಲ್ಲಿ ರಾಷ್ಟ್ರೀಯತ್ವದ ಪರಿಕಲ್ಪನೆಯನ್ನು ಬೆಳೆಸಿದ ವಿ ಡಿ ಸಾವರ್ಕರ್ ಬಿಜೆಪಿಯ ಉತ್ಸವಮೂರ್ತಿ ಮತ್ತು ಗೌರವಾನ್ವಿತ ಸಿದ್ಧಾಂತಿ. 1937ರಲ್ಲಿ ಹಿಂದೂ ಮಹಾಸಭಾದ ಅಹಮದಾಬಾದ್ ಅಧಿವೇಶನದ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಅವರು “ಭಾರತವನ್ನು ಇಂದು ಒಂದು ಏಕಘಟಕ ಮತ್ತು ಸಮರೂಪದ ರಾಷ್ಟ್ರ ಎಂದು ಪರಿಗಣಿಸಲು ಆಗುವುದಿಲ್ಲ. ತದ್ವಿರುದ್ಧವಾಗಿ, ಭಾರತದಲ್ಲಿ ಮುಖ್ಯವಾಗಿ ಎರಡು ರಾಷ್ಟ್ರಗಳಿವೆ: ಹಿಂದೂಗಳು ಮತ್ತು ಮುಸ್ಲಿಮರು” ಎಂದರು.
1940ರಲ್ಲಿ ಲಾಹೋರ್ ಅಧಿವೇಶನದಲ್ಲಿ ಜಿನ್ನಾ ಧರ್ಮದ ಆಧಾರದಲ್ಲಿ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಪುನರುಚ್ಛರಿಸುತ್ತ ಭಾರತದ ವಿಭಜನೆಯನ್ನು ಪ್ರತಿಪಾದಿಸಿದರು.
ಸಾವರ್ಕರ್ ಮತ್ತು ಜಿನ್ನಾರ ನಿಲುವುಗಳಲ್ಲಿ ಸಾಮ್ಯತೆಯನ್ನು ಕಂಡವರು ಡಾ. ಅಂಬೇಡ್ಕರ್. “ವಿಚಿತ್ರವಾಗಿ ಕಾಣಬುದು, ಆದರೆ ಮಿ. ಸಾವರ್ಕರ್ ಮತ್ತು ಮಿ.ಜಿನ್ನಾ ಒಂದು ರಾಷ್ಟ್ರವೋ ಎರಡು ರಾಷ್ಟ್ರಗಳೋ ಎಂಬ ಪ್ರಶ್ನೆಯಲ್ಲಿ ಪರಸ್ಪರ ಎದುರುಬದುರಾಗಿರುವ ಬದಲು ಇಬ್ಬರಿಗೂ ಆ ವಿಷಯದಲ್ಲಿ ಸಂಪೂರ್ಣ ಒಮ್ಮತ ಇದೆ. ಇಬ್ಬರೂ ಭಾರತದಲ್ಲಿ ಎರಡು ರಾಷ್ಟ್ರಗಳಿವೆ, ಒಂದು ಹಿಂದೂ ರಾಷ್ಟ್ರ ಮತ್ತು ಇನ್ನೊಂದು ಮುಸ್ಲಿಂ ರಾಷ್ಟ್ರ ಎಂಬುದನ್ನು ಒಪ್ಪುತ್ತಾರೆ, ಮಾತ್ರವಲ್ಲ, ಹಾಗೆಂದು ಆಗ್ರಹಪೂರ್ವಕವಾಗಿ ಹೇಳುತ್ತಾರೆ” ಎಂದು ಅವರು 1940ರಲ್ಲೇ ಬರೆದಿದ್ದರು.
ಆಗ ಬ್ರಿಟಿಷರಿಗೆ ಭಾರತವನ್ನು ವಿಭಜಿಸಲು ಅನುವು ಮಾಡಿಕೊಟ್ಟ ಅದೇ ರೀತಿಯ ರಾಜಕಾರಣವನ್ನು ಪ್ರೋತ್ಸಾಹಿಸುವ ಆಳುವ ಪಕ್ಷ ಇಂದು ಆ ದುರಂತವನ್ನು ಸ್ಮರಿಸಿಕೊಳ್ಳ ಬಯಸುತ್ತಿದೆ ಎಂಬುದು ದೇಶವಿಭಜನೆ ಸಂಬಂಧಿತ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟವರ. ಅತ್ಯಾಚಾರಗಳಿಗೆ ಒಳಗಾದವರ, ಅನಾಥರಾದವರ, ನಿರ್ವಸಿತರಾದವರ, ದರಿದ್ರರಾಗಿ ಬಿಟ್ಟವರ ನೆನಪಿಗೆ ಬಗೆಯುವ ಒಂದು ಅಪಚಾರವೇ ಸರಿ.
ಕಾಶ್ಮೀರ: ಗಾಯದ ಮೇಲೆ ಉಪ್ಪು
ದೇಶ ವಿಭಜನೆಯಾದಾಗ, ಮುಸ್ಲಿಂ ಬಹುಮತದ ಕಾಶ್ಮೀರವು ಪಾಕಿಸ್ತಾನದ ಬದಲು, ಭಾರತವನ್ನು ಸೇರಲು ನಿರ್ಧರಿಸಿದ್ದು, ಜಾತ್ಯತೀತ ಭಾರತದ ಒಂದು ಸಂಕೇತ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊಟ್ಟ ಕಲಮು 370ನ್ನು ಸಂಸತ್ತಿನಲ್ಲಿರುವ ತನ್ನ ಹಿಂಸ್ರ ಬಹುಮತವನ್ನು ಬಳಸಿಕೊಂಡು ನಿರ್ಮೂಲಗೊಳಿಸಿದ ಮೇಲೆ ಪ್ರಧಾನ ಮಂತ್ರಿಗಳು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಆ ಗಾಯಕ್ಕೆ ಉಪ್ಪು ಸವರುವುದೇ ಸರಿಯೆಂದು ಭಾವಿಸಿದ್ದಾರೆ. ಈ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ “ಕ್ಷೇತ್ರ ಮರುವಿಂಗಡಣೆ”ಯ ಉಲ್ಲೇಖ ಮಾಡಿದ್ದಾರೆ. ಇದು ಮುಸ್ಲಿಮೇತರರು ಹೆಚ್ಚಿರುವ ಕ್ಷೇತ್ರಗಳು ಮತ್ತು ಪ್ರತಿನಿಧಿಗಳ ಸಂಖ್ಯೆಯನ್ನು ಹೆಚ್ಚಿಸುವ, ಆಮೂಲಕ ಈ ರಾಜ್ಯದ ಜನಸಂಖ್ಯಾ ಸಂಯೋಜನೆಯನ್ನು ಬದಲಿಸುವ ಒಂದು ವಿಧಾನ.
ಜನಗಳ ನೋವುಗಳಿಗೆ ತಿರಸ್ಕಾರ
ಈ ಭಾಷಣದಲ್ಲಿ ಜನಗಳ ಹಿತಗಳು ಮತ್ತು ಕಲ್ಯಾಣವನ್ನು ಕುರಿತಂತೆ ಬಿಂಬಿತವಾದ ಪ್ರಧಾನ ಮಂತ್ರಿಗಳ ಕಣ್ಣೊಟವಾದರೂ ಏನು? ಪ್ರತಿಯೊಂದು ಪ್ರಶ್ನೆಯ ಮೇಲೂ ಅವರು ವಾಸ್ತವವನ್ನು ಉಪೇಕ್ಷಿಸಿ, ಅತ್ಯಂತ ವಿಸ್ಮಯಕಾರೀ ದಾವೆಗಳನ್ನು ಮುಂದಿಟ್ಟಿದ್ದಾರೆ, ಈ ಮೂಲಕ ಕೋವಿಡ್ ಕಾಲದಲ್ಲಿ ಉಲ್ಬಣಗೊಂಡ ಜನಗಳ ಸಂಕಟಗಳ ಬಗ್ಗೆ ಉಪೇಕ್ಷಯನ್ನೇ ಪ್ರದರ್ಶಿಸಿದ್ದಾರೆ. ಉದಾಹರಣೆಗೆ, “ಸಮಾಜದ ಅಭಿವೃದ್ಧಿ ಪ್ರಯಾಣದಲ್ಲಿ ಯಾವ ವ್ಯಕ್ತಿಯನ್ನೂ, ಯಾವ ವರ್ಗವನ್ನೂ ಹಿಂದಕ್ಕೆ ಬಿಡದಂತೆ ನಾವು ಖಾತ್ರಿಗೊಳಿಸುತ್ತಿದ್ದೇವೆ”ಎಂದು ಅವರು ಹೇಳಿದರು-ಇದು ಅಸಮಾನತೆಯೆಂಬುದು ಹೊಲಸು ಮಟ್ಟಕ್ಕೆ ತಲುಪಿರುವಾಗ ಮತ್ತು ಕೋವಿಡ್ ಕಾಲದಲ್ಲಿ ಅದು ಮತ್ತಷ್ಟು ತೀಕ್ಷ್ಣಗೊಂಡಿರುವಾಗ! ಆಕ್ಸ್ಫಾಮ್ನ “ಅಸಮಾನತೆಯ ವೈರಾಣು ವರದಿ” ತೋರಿಸುವಂತೆ “ಮಾರ್ಚ್ 2020 ರಿಂದ ಭಾರತದ 100 ಬಿಲಿಯಾಧಿಪತಿಗಳು ತಮ್ಮ ಸಂಪತ್ತುಗಳಲ್ಲಿ ರೂ. 12,97,822 ಕೋಟಿ ಹೆಚ್ಚಳ ಕಂಡಿದ್ದಾರೆ. ಇದು 138 ಕೋಟಿ ಜನ ಅತ್ಯಂತ ಬಡ ಭಾರತೀಯರಿಗೆ ಪ್ರತಿಯೊಬ್ಬರಿಗೂ ರೂ. 94,045 ಚೆಕ್ ಅನ್ನು ಕೊಡಲು ಸಾಕಾಗುತ್ತದೆ”.
ಭಾರತದ ದುಡಿಯುವ ಜನಗಳು ಹೊತ್ತುಕೊಂಡಿರುವ ಅಪಾರ ಹೊರೆಯ ಬಗ್ಗೆ ಪ್ರಧಾನ ಮಂತ್ರಿಗಳು ಎಷ್ಟೊಂದು ಸ್ಪಂದನಾಶೂನ್ಯರಾಗಿದ್ದಾರೆ ಎಂಬುದು ಅವರ ಪ್ರಿಯ ಘೋಷಣೆಯಾದ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್”ಗೆ “ಸಬ್ ಕಾ ಪ್ರಯಾಸ್”(ಎಲ್ಲರ ಪ್ರಯತ್ನ)ವನ್ನು ಸೇರಿಸುವ ಆಡಂಬರದ ಮಾತಿನಲ್ಲಿ ವ್ಯಕ್ತವಾಗುತ್ತದೆ. ಪ್ರಧಾನ ಮಂತ್ರಿಗಳು ದೇಶದ ಅಭಿವೃದ್ಧಿಗೆ ಬಾಧಕವಾಗಿರುವುದು ‘ಪ್ರಯಾಸ’ದ ಅಂದರೆ ‘ಪ್ರಯತ್ನ’ದ ಕೊರತೆ ಎಂದು ಭಾವಿಸುವ ಧೈರ್ಯ ತೋರುವಷ್ಟು ಅವರಿಗೆ ವಿಶಾಲ ಜನಸ್ತೋಮದ ಬದುಕಿನ ವಾಸ್ತವತೆಗಳ ಬಗ್ಗೆ ಮರೆವು ಉಂಟಾಗಿದೆಯೇ? ಪ್ರಧಾನ ಮಂತ್ರಿಗಳು ಎಂದಾದರೂ ಒಂದು ಮನರೇಗ ಕೆಲಸದ ಜಾಗಕ್ಕೆ ಭೇಟಿ ನೀಡಿದ್ದಾರೆಯೇ? ಮಣ್ಣಿನ ಕೆಲಸದ ಒಂದು ಪ್ರಾಜೆಕ್ಟಿನಲ್ಲಿ ಕನಿಷ್ಟ ಕೂಲಿ ಗಳಿಸಲು, ಕ್ರೂರ ಎನ್ನುವಷ್ಟು ಹೆಚ್ಚಿನ ಉತ್ಪಾದಕತಾ ನಿಯಮಾವಳಿ ಮತ್ತು ಪೀಸ್ ರೇಟ್ ಕೂಲಿಯಿಂದಾಗಿ ಒಬ್ಬ ಮಹಿಳಾ ಕೆಲಸಗಾರಳು ದಿನವೊಂದಕ್ಕೆ ಸರಾಸರಿ 2000 ಕೆಜಿಯಷ್ಟು ಮಣ್ಣು ಎತ್ತಬೇಕಾಗಿದೆ. ಭಾರತದ ಕೆಲಸಗಾರರಲ್ಲಿ ಸುಮಾರು 43ಶೇ. ದಷ್ಟು ಕೃಷಿಯ ದೈಹಿಕ ಕೆಲಸಗಳಲ್ಲಿ ತೊಡಗಿದ್ದಾರೆ. ಕೂಲಿಕಾರ ಅಥವ ಕಾರ್ಮಿಕ ಎಂಬ ಪದ ಪ್ರಧಾನ ಮಂತ್ರಿಗಳ ಶಬ್ದಕೋಶದಿಂದಲೇ ಹೊರ ಹೋಗಿರುವಂತೆ ಕಾಣುತ್ತದೆ. ಆದರೂ ಅವರು “ಸಂಪತ್ತಿನ ಸೃಷ್ಟಿಕರ್ತರ” ಬಗ್ಗೆ ಮಾತಾಡಿದರು. ಸಂಪತ್ತಿನ ಸೃಷ್ಟಿಕರ್ತರು ಭಾರತದ ಕಾರ್ಮಿಕರು, ಆದರೆ ಪ್ರಧಾನಿಗಳ ಭಾಷಣದಲ್ಲಿ ಅವರ ಪ್ರಸ್ತಾಪವೇ ಕಾಣಲಿಲ್ಲ.
ಪ್ರಧಾನಿಗಳ ಹೊಸ ಶೋಧನೆ
ಮೂರು ರೈತ-ವಿರೋಧಿ ಕಾಯ್ದೆಗಳ ರದ್ದತಿಗಾಗಿ ಐತಿಹಾಸಿಕ ರೈತ ಹೋರಾಟದ ರೈತ ಮುಖಂಡರು “ಸಣ್ಣ ರೈತರ” ಬಗ್ಗೆ ಪ್ರಧಾನಿಗಳಲ್ಲಿ ಹೊಸದಾಗಿ ಕಂಡಿರುವ ಕಾಳಜಿಯನ್ನು ಖಂಡಿತವಾಗಿಯೂ ಗಮನಿಸಿರುತ್ತಾರೆ. ಭಾರತದಲ್ಲಿ 80 ಶೇ. ದಷ್ಟು ರೈತರ ಬಳಿ ಎರಡು ಹೆಕ್ಟೇರುಗಳಿಗಿಂತ ಕಡಿಮೆ ಭೂಮಿ ಇದೆ ಎಂಬೊಂದು ಹೊಸ ಶೋಧನೆಯನ್ನು ಪ್ರಧಾನಿಗಳು ಮಾಡಿ, “ಈಗ ಸಣ್ಣ ರೈತರು ನಮ್ಮ ದೃಢ ನಿರ್ಧಾರ ನಮಗೆ ಮಂತ್ರ. ಸಣ್ಣ ರೈತರು ದೇಶದ ಗೌರವ ಆಗುತ್ತಾರೆ” ಎಂಬ ಘೋಷಣೆಯನ್ನು ಕೊಟ್ಟಿದ್ದಾರೆ. ವಾಸ್ತವವಾಗಿ, ಮೋದಿ ಆಳ್ವಿಕೆ ಆಕ್ರಾಮಕ ರೀತಿಯಲ್ಲಿ ಪ್ರೋತ್ಸಾಹಿಸುತ್ತಿರುವ ಧೋರಣೆಗಳ ಮೂಲಕ ಕೃಷಿಯ ಕಾರ್ಪೊರೇಟೀಕರಣದ ಅತ್ಯಂತ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾದವರು ಸಣ್ಣ ರೈತರೇ. ರೈತರ ಹೋರಾಟ ಆಗ್ರಹಿಸುತ್ತಿರುವ ಕನಿಷ್ಟ ಬೆಂಬಲ ಬೆಲೆಗಳನ್ನು ಖಾತ್ರಿ ಪಡಿಸುವ ಕಾಯ್ದೆಯಿಂದ ಹೆಚ್ಚು ಪ್ರಯೋಜನವಾಗುವುದು ಕೂಡ ಸಣ್ಣ ರೈತರಿಗೇ. ಏಕೆಂದರೆ ಹೆಚ್ಚಾಗಿ ಅವರೇ ಕಡಿಮೆ ಬೆಲೆಗಳಲ್ಲಿ ಹತಾಶ ಮಾರಾಟಕ್ಕೆ ಇಳಿಯಬೇಕಾದ ಒತ್ತಡಕ್ಕೆ ಒಳಗಾಗುವವರು. ಆದರೆ ಪ್ರಧಾನಿಗಳ ಭಾಷಣದಲ್ಲಿ ಬಿಂಬಿತವಾಗಿರುವ ಕೇಂದ್ರ ಸರಕಾರದ ಪ್ರಯತ್ನವೆಂದರೆ ಕೃಷಿ ಕಾಯ್ದೆಗಳ ವಿರುದ್ಧ ಐಕ್ಯ ಹೋರಾಟದಲ್ಲಿ ರೈತರ ನಡುವೆ ಒಡಕು ಸೃಷ್ಟಿಸುವುದು.
ಮಹಿಳೆಯರ ವಿರುದ್ಧ ಹಿಂಸಾಚಾರದ ಬಗ್ಗೆ ಮೌನ
ಮಹಿಳೆಯರ ಬಗ್ಗೆ ಉಲ್ಲೇಖಗಳಿದ್ದವು. ಆದರೆ ಅವರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ, ಇಂತಹ ಕ್ರಿಮಿನಲ್ಗಳನ್ನು ಅವರದ್ದೇ ಪಕ್ಷದ ನೇತೃತ್ವದ ಸರಕಾರಗಳು ಬೆಂಬಲಿಸುತ್ತಿರುವ ಭೀಕರ ಪ್ರಕರಣಗಳ ಬಗ್ಗೆ, ಈ ಹಿಂದೆ ಹಾಥ್ರಸ್ನಲ್ಲಿ, ಇತ್ತೀಚೆಗೆ ದೇಶದ ರಾಜಧಾನಿಯಲ್ಲೇ ಪೋಲೀಸರು ಹಿಂಸಾಚಾರಕ್ಕೆ ಒಳಗಾದ ದಲಿತ ಮಗುವಿನ ತಂದೆ -ತಾಯಿಯನ್ನು ಅವರು ತಮ್ಮ ದೂರನ್ನು ಹಿಂದಕ್ಕೆ ಪಡೆಯುವಂತೆ ಬಲವಂತಪಡಿಸಲು ಲಾಕಪ್ಪಿನಲ್ಲಿ ಇಟ್ಟಂತಹ ಪ್ರಕರಣಗಳ ಬಗ್ಗೆ, ಒಂದೇ ಒಂದು ಮಾತಿಲ್ಲ. ಇದು ಮಹಿಳೆಯರ ವಿರುದ್ಧ ಹಿಂಸಾಚಾರವನ್ನು ಬಲವಾಗಿ ಖಂಡಿಸುವ ಮತ್ತು ಮಹಿಳೆಯರಿಗೆ ನ್ಯಾಯವನ್ನು ಖಾತ್ರಿಪಡಿಸುವ ಬಗ್ಗೆ ಹೇಳಬೇಕಾದ ಸಂದರ್ಭವಾಗಿತ್ತು. ಆದರೆ ಪ್ರಧಾನಿಗಳು ಮೌನವಾಗುಳಿದರು.
ಸ್ಕೀಮುಗಳ ಮರುಬಳಕೆ
ಆಶ್ವಾಸನೆಗಳ ಸ್ವರೂಪದಲ್ಲಿ ಅವರು ಹೇಳಿದ್ದು ಹೆಚ್ಚು ಕಡಿಮೆ 2019 ಮತ್ತು 2020ರಲ್ಲಿ ಹೇಳಿದ್ದುದರ ಮರುಬಳಕೆಯೇ ಆಗಿತ್ತು.
ಕೆಲವು ಉದಾಹರಣೆಗಳು ಇಲ್ಲಿವೆ:
ʻಪ್ರಧಾನ ಮಂತ್ರಿ ಗತಿ ಶಕ್ತಿ’ ಎಂಬ ಹೆಸರಿನ 100 ಲಕ್ಷ ಕೋಟಿ ರೂ. ಗಳ ಮೂಲರಚನೆ ಹೂಡಿಕೆ ಪರಿಯೋಜನೆಯ ಆಡಂಬರ ಪೂರ್ಣ ಪ್ರಕಟಣೆ. ಇದೇ ಮೊತ್ತದ, ಇದೇ ಪರಿಯೋಜನೆಯನ್ನು 2019ರ ಮತ್ತು 2020ರ ಸ್ವಾತಂತ್ರ್ಯ ದಿನದ ಭಾಷಣಗಳಲ್ಲೂ ಪ್ರಕಟಿಸಲಾಗಿತ್ತು.
ಪ್ರಧಾನಿಗಳು “ಇಂದು ಹಂಚಿಕೊಳ್ಳುವ ಒಳ್ಳೆಯ ಸುದ್ದಿ”ಯಾಗಿ ರಕ್ಷಣಾ ಇಲಾಖೆ ನಡೆಸುವ ಸೈನಿಕ ಶಾಲೆಗಳು ಇನ್ನು ಮುಂದೆ ಹೆಣ್ಣು ಮಕ್ಕಳನ್ನೂ ಸೇರಿಸಿಕೊಳ್ಳುತ್ತವೆ ಎಂದು ಹೇಳಿದರು. ನಿಜ ಸಂಗತಿಯೆಂದರೆ, ಅಕ್ಟೋಬರ್ 2019ರಲ್ಲೇ 2021-22ರಿಂದ ಎಲ್ಲ ಸೈನಿಕ ಶಾಲೆಗಳಲ್ಲಿ ಸಹ-ಶಿಕ್ಷಣ ಜಾರಿಗೆ ತರಲಾಗುವುದು ಎಂಬ ಪ್ರಕಟಣೆಯನ್ನು ರಕ್ಷಣಾ ಮಂತ್ರಾಲಯ ಮಾಡಿತ್ತು.
“ನಾನಿಂದು ಈ ತ್ರಿವರ್ಣದ ಸಾಕ್ಷಿಯಾಗಿ ರಾಷ್ಟ್ರೀಯ ಜಲಜನಕ ಮಿಷನ್ ಪ್ರಕಟಿಸುತ್ತಿದ್ದೇನೆ” ಎಂದರು ಪ್ರಧಾನ ಮಂತ್ರಿಗಳು. ಆದರೆ ಫೆಬ್ರುವರಿಯಲ್ಲೇ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಇದನ್ನು ತಮ್ಮ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದರು.
ಪ್ರಧಾನಿಗಳು ಪ್ರಕಟಿಸಿದ, ಅಕ್ಕಿಯನ್ನು ರೇಷನ್ ಅಂಗಡಿಗಳಿಗೆ ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕಾಗಿ ವಿತರಿಸುವ ಮೊದಲು ಕಬ್ಬಿಣಾಂಶ ಮತ್ತು ವಿಟಮಿನ್ಗಳಿಂದ ಗಟ್ಟಿಗೊಳಿಸುವ ಯೋಜನೆ ಕೂಡ 2019ರಲ್ಲಿ ಆಗ ಆಹಾರ ಮಂತ್ರಿಗಳಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಪ್ರಕಟಿಸಿದ್ದ ಯೋಜನೆಯೇ. ಇದು ಕಳೆದ ಒಂದು ವರ್ಷದಿಂದ ಒಂದು ಪ್ರಾಯೋಗಿಕ ಪರಿಯೋಜನೆಯಾಗಿ ನಡೆಯುತ್ತಿದೆ.
ಪೆಗಸಸ್ -ಎಂತಹ ಅದ್ಭುತ ಬೂಟಾಟಿಕೆ!
ಆದರೆ, ಬಹುಶಃ ಅತ್ಯಂತ ದೊಡ್ಡ ವಿಡಂಬನೆ ಅಥವ ನಾಚಿಕೆಗೆಟ್ಟದ್ದು ಎನ್ನಬಹುದಾದ ಹೇಳಿಕೆಯೆಂದರೆ ಪ್ರಧಾನ ಮಂತ್ರಿಗಳು ಆಳ್ವಿಕೆಯ ಬಗ್ಗೆ ಹೇಳಿದ್ದು. “ನಾವು ಸರಕಾರಗಳು ನಾಗರಿಕರ ಬದುಕುಗಳಲ್ಲಿ ಹಸ್ತಕ್ಷೇಪ ಮಾಡದ ಒಂದು ಭಾರತವನ್ನು ಬಯಸುತ್ತೇವೆ… ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಜನಗಳ ಬದುಕುಗಳಲ್ಲಿ ಸರಕಾರದ ಮತ್ತು ಸರಕಾರೀ ವಿಧಿ-ವಿಧಾನಗಳ ಅನಗತ್ಯ ಹಸ್ತಕ್ಷೇಪವನ್ನು ಕೊನೆಗೊಳಿಸುವುದು ಅಗತ್ಯವಾಗಿದೆ” ಎಂದು ಅವರು ಹೇಳಿದರು. ಹಾಗಿದ್ದರೆ ಪೆಗಸಸ್ ಕತೆಯೇನು ಪ್ರಧಾನ ಮಂತ್ರಿಗಳೇ? ನಿಮ್ಮ ವಿರೋಧಿಗಳ ವಿರುದ್ಧ ಕೇಡುಕಾರಕ ಮಿಲಿಟರಿ ದರ್ಜೆಯ ಗೂಢಚರ್ಯೆ ತಂತ್ರಾಶದ ಬಳಕೆಯೇನು? ಈ ಸರಕಾರ ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಮತ್ತು ಪ್ರತಿಪಕ್ಷಗಳ ರಾಜಕಾರಣಿಗಳು ಸೇರಿದಂತೆ 161 ವ್ಯಕ್ತಿಗಳನ್ನು ಗೂಢಚರ್ಯೆಗೆ ಗುರಿಪಡಿಸಿದೆ. ಸರಕಾರದ ಯಾವುದಾದರು ಸಂಸ್ಥೆ ಪೆಗಸಸ್ ನ್ನು ಖರೀದಿಸಿದೆಯೇ ಮತ್ತು ಬಳಸಿದೆಯೇ ಎಂಬ ಸರಳ ಪ್ರಶ್ನೆಗೆ ಉತ್ತರ ನೀಡಲು ಪಟ್ಟುಹಿಡಿದು ನಿರಾಕರಿಸಿದ್ದರಿಂದ ಒಂದಿಡೀ ಸಂಸತ್ತು ಅಧಿವೇಶನ ಕೊಚ್ಚಿಕೊಂಡು ಹೋಯಿತು. ಆದರೂ ಪ್ರಧಾನ ಮಂತ್ರಿಗಳು ತಮ್ಮ ಭಾಷಣದಲ್ಲಿ “ಅನಗತ್ಯ ಹಸ್ತಕ್ಷೇಪ”ವನ್ನು ನಿಲ್ಲಿಸುವ ಬಗ್ಗೆ ಮಾತಾಡುತ್ತಾರೆ. ಎಂತಹ ಅದ್ಭುತ ಬೂಟಾಟಿಕೆ!
ನಮ್ಮ ಭವ್ಯ ಸ್ವಾತಂತ್ರ್ಯ ಹೋರಾಟದ ವಜ್ರಮಹೋತ್ಸವದ ಆಚರಣೆಗಳನ್ನು ಆರಂಭಿಸುತ್ತಿರುವಾಗ, ನಮ್ಮ ಸರಕಾರ ಭಾರತಕ್ಕೆ ಈ ಸ್ವಾತಂತ್ರ್ಯವನ್ನು ಗೆದ್ದುಕೊಟ್ಟ ಮೌಲ್ಯಗಳಿಗೆ, ಐಕ್ಯತೆ, ಬಹುತ್ವ, ಜಾತ್ಯಾತೀತತೆ ಮತ್ತು ಆರ್ಥಿಕ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದ ಮೌಲ್ಯಗಳಿಗೆ, ತದ್ವಿರುದ್ಧವಾದ ಸೈದ್ಧಾಂತಿಕ ನೆಲೆಯ ಪೂರ್ವಿಕರನ್ನು ಹೊಂದಿರುವ ಮುಖಂಡರಿಂದ ಕೂಡಿದೆ ಎಂಬುದು ಭಾರತದ ದುರಂತ. ಪ್ರಧಾನ ಮಂತ್ರಿಗಳ ಭಾಷಣ ಈ ವಾಸ್ತವತೆಯನ್ನು ಬಿಂಬಿಸಿದೆ.