ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರ ಬಹಳ ಆತಂಕಕಾರಿ

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ ಕೋಮು ಹಿಂಸಾಚಾರ ಮತ್ತು ಸಂಘರ್ಷಗಳು ಭುಗಿಲೆದ್ದಿರುವ ಬಗ್ಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ.

ಬಾಂಗ್ಲಾದೇಶ ಸರಕಾರ ಹಿಂಸಾಚಾರವನ್ನು ಅಡಗಿಸಲು ಪಡೆಗಳನ್ನು ನಿಯೋಜಿಸಿದೆ ಮತ್ತು ಈ ಕೋಮು ಹಿಂಸಾಚಾರದ ಕಿಡಿ ಹಚ್ಚಲು ಹೊಣೆಗಾರರಾದವರನ್ನು ಶಿಕ್ಷಿಸಿ ನ್ಯಾಯ ಒದಗಿಸಲಾಗುವುದು ಎಂಬ ಆಶ್ವಾಸನೆ ನೀಡಿದೆ. ಪೊಲೀಸ್ ಗೋಲಿಬಾರಿನಲ್ಲಿ ಕನಿಷ್ಟ ನಾಲ್ಕು ಮಂದಿ ಪ್ರಾಣ ಕಳಕೊಂಡಿದ್ದಾರೆ ಮತ್ತು ದೇಶಾದ್ಯಂತ ನಡೆಸಿ ಕಾರ್ಯಾಚರಣೆಯಲ್ಲಿ ಹಲವರನ್ನು ಬಂಧಿಸಲಾಗಿದೆ.

ಬಂಗಾಲಿಗಳ ಶತಮಾನಗಳಿಂದ ಪೂಜಾ ಉತ್ಸವಗಳನ್ನು ಧಾರ್ಮಿಕ ನಂಬಿಕೆಗಳ ಬೇಧಭಾವಗಳಿಲ್ಲದೆ ಸಾಮರಸ್ಯದಿಂದ ಆಚರಿಸಿಕೊಂಡು ಬಂದಿದ್ದಾರೆ. ಬಾಂಗ್ಲಾದೇಶ ಈ ಪರಂಪರೆಯನ್ನು ಆಚರಿಸಿಕೊಂಡೇ ಬಂದಿದೆ. ಈ ಪರಂಪರೆಯನ್ನು ಅದು ಕಾಯ್ದುಕೊಳ್ಳುತ್ತದೆ ಮತ್ತು ಬಲಗೊಳಿಸುತ್ತದೆ ಎಂದು ಪೊಲಿಟ್‍ ಬ್ಯುರೊ ಆಶಿಸಿದೆ.

ಧಾರ್ಮಿಕ ಮೂಲಭೂತವಾದದ ಚಟುವಟಿಕೆಗಳು ಏರುತ್ತಿರುವುದು ನಮ್ಮ ಪ್ರದೇಶದ ಎಲ್ಲ ದೇಶಗಳ ಕಾಳಜಿ. ಬಾಂಗ್ಲಾದೇಶದ ಸರಕಾರ ಶಾಂತಿ, ಸಾಮಾನ್ಯ ಸ್ಥಿತಿ ಮತ್ತು ನೆಮ್ಮದಿಯನ್ನು ಮತ್ತೆ ನೆಲೆಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *