ಯಾವುದೇ ಮೂರ್ತ ಸ್ಪಂದನೆ ನೀಡಲು ರಾಷ್ಟ್ರೀಯ ಭದ್ರತೆಯ ಮರೆಯಲ್ಲಿ ನಿರಾಕರಿಸಲಾಗದು ಎಂದು ನ್ಯಾಯಾಲಯವು ಗಮನಿಸಿರುವುದರಿಂದ, ಪೆಗಾಸಸ್ ತಂತ್ರಾಂಶ ಬಳಕೆಯ ಬಗ್ಗೆ ಒಂದು ಖಚಿತ ಉತ್ತರವನ್ನು ನೀಡಲು ಸರ್ಕಾರವು ಬಾಧ್ಯವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಪ್ರಭುತ್ವದ ಯಾವುದಾದರೂ ಸಂಸ್ಥೆ ಪೆಗಾಸಸ್ ಗೂಢಚರ್ಯೆ ತಂತ್ರಾಂಶವನ್ನು ಬಳಸಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ಗೆ ಒಂದು ಖಚಿತವಾದ ಉತ್ತರವನ್ನು ನೀಡಲು ಸರ್ಕಾರ ನಿರಾಕರಿಸಿತ್ತು. ಈ ತಪ್ಪಿಸಿಕೊಳ್ಳುವ ನಿಲುವಿನ ಮೂಲಕವೇ ಈ ವಿಷಯದಲ್ಲಿ ಅದು ತನ್ನ ಶಾಮೀಲನ್ನು ಒಪ್ಪಿಕೊಂಡಂತಾಗಿತ್ತು. ಇದೇ ಹಟಮಾರಿತನದಿಂದಾಗಿಯೇ ಸಂಸತ್ತಿನ ಸಂಪೂರ್ಣ ಮುಂಗಾರು ಅಧಿವೇಶನ ಸ್ಥಗಿತಗೊಳ್ಳುವಂತಾಗಿದ್ದು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ನೆನಪಿಸಿದೆ.
ಸುಪ್ರೀಂ ಕೋರ್ಟ್ ಈ ವಿಷಯದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ನ ಒಬ್ಬ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸುವಲ್ಲಿ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಸಮಿತಿಯು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಂಬಂಧಪಟ್ಟ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಬೇಕು. ಈ ಗೂಢಚರ್ಯೆ ತಂತ್ರಾಂಶ ಅಂತರಾಷ್ಟ್ರೀಯ ಹರಹನ್ನೂ ಹೊಂದಿರುವುದರಿಂದಾಗಿ ವಿದೇಶಿ ತಜ್ಞರನ್ನು ಕೂಡ ಸಾಕ್ಷ್ಯ ನೀಡಲು ಆಹ್ವಾನಿಸಬೇಕು ಎಂದು ಸೂಚಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಸಮಿತಿಯು ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದೆ.