ನೆನ್ನೆ ದಿನ ಬೆಳಗಾವಿ ವಿಧಾನ ಸಭಾ ಅಧಿವೇಶನದಲ್ಲಿ ರಾಜ್ಯ ಸರಕಾರ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕ – 2021 ನ್ನು ಮಂಡಿಸಿದೆ.
ಇದರ ಹೂರಣವು,
ಆಳುವ ವರ್ಗಗಳು ತಾವು ಬಯಸಿದಾಗಲೆಲ್ಲಾ ರಾಜ್ಯದಲ್ಲಿ ಅಶಾಂತಿಯನ್ನುಂಟು ಮಾಡಲು ಮತ್ತು ವಂಚಕ ಜಾತಿಪದ್ಧತಿಯನ್ನು ಮುನ್ನಡೆಸಲು ನೆರವಾಗುವ ದುರುದ್ದೇಶವನ್ನು ಬಯಲುಗೊಳಿಸುತ್ತದೆ.
ಕೋಮು ಹಾಗೂ ಜಾತಿ ದ್ವೇಷಗಳನ್ನು ಮುಂದುವರೆಸುವ ಮತ್ತು ದುಡಿಯುವ ಜನತೆಯನ್ನು ವಿಭಜಿಸಿ ಆಳಲು, ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ ನೆರವಾಗುವ ದುರುದ್ದೇಶದಿಂದ ರೂಪಿಸಲಾದ ವಿಧೇಯಕ ಇದಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಈ ಕೂಡಲೇ ಅದನ್ನು ವಾಪಾಸು ಪಡೆಯುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ.
ಈ ಮುಂಚೆ ಬಲವಂತದ ಮತಾಂತರವನ್ನು ತಡೆಯುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ತರಲಾಗುವುದೆಂದು ಪ್ರಚುರ ಗೊಳಿಸಲಾಗಿತ್ತು. ಸಿಪಿಐಎಂ ಪಕ್ಷ ಯಾವುದೇ ವ್ಯಕ್ತಿಯನ್ನು ಯಾವುದೆ ಮತಗಳು ಬಲವಂತವಾಗಿ, ಮತಾಂತರ ಹಾಗೂ ಮರು ಮತಾಂತರ ಮಾಡುವ ದೌರ್ಜನ್ಯ ದ ಕ್ರಮಗಳನ್ನು ಬಲವಾಗಿ ವಿರೋಧಿಸುತ್ತದೆ.
ಆದರೇ, ಈ ವಿಧೇಯಕವು ವ್ಯಕ್ತಿಯು ತನಗಿಷ್ಠವಾದ ಮತವನ್ನು ಆಚರಿಸುವುದಕ್ಕೆ ಸರಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುತ್ತದೆ. ಆ ಮೂಲಕ ವ್ಯಕ್ತಿಯು ತನಗಿಷ್ಠವಾದ ಮತವನ್ನು ಆಚರಿಸುವ ಭಾರತ ಸಂವಿಧಾನ ಕೊಡ ಮಾಡಿದ ಹಕ್ಕನ್ನು ನಗ್ನವಾಗಿ ಉಲ್ಲಂಘಿಸುತ್ತದೆ. ಅದೇ ರೀತಿ, ಮತಾಂತರದ ಧಾರ್ಮಿಕ ವಿಧಿ, ವಿಧಾನಗಳನ್ನು ಪ್ರತಿರೋಧಿಸುತ್ತದೆ
ಮಾತ್ರವಲ್ಲಾ, ಈಗಾಗಲೇ ಮತಾಂತರ ಗೊಂಡಿರುವ ವ್ಯಕ್ತಿಗಳ ಮೇಲೆ ಮತ್ತು ಅಂತಹ ಮತಾಂತರ ಗೊಂಡಿರುವ ವ್ಯಕ್ತಿಗಳಿರುವ ಧಾರ್ಮಿಕ ಸಂಸ್ಥೆಗಳು ಹಾಗೂ ಅದರ ಮುಖಂಡರ ಮೇಲೆ ಧಾಳಿ ನಡೆಸಲು ಮತಾಂಧ ಹಾಗೂ ಜಾತೀವಾದಿ ಪುಂಡರಿಗೆ ಕಲಂ – 4 ಕುಮ್ಮಕ್ಕು ನೀಡುತ್ತದೆ.
ಕುಟುಂಬದ ಸದಸ್ಯರು ಮಾತ್ರವಲ್ಲಾ, ಸಹವರ್ತಿಗಳು, ಸಹೋದ್ಯೋಗಿಗಳು ಯಾರು ಬೇಕಾದರೂ ಬಲವಂತದ ಮತಾಂತರವೆಂದು ದೂರು ನೀಡಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಮತಾಂಧ ಪುಂಡರು ದುರುಪಯೋಗ ಮಾಡಲು ಈ ಕಲಂ ಅವಕಾಶ ಮಾಡಿಕೊಟ್ಟಿದೆ. ಮಾತ್ರವಲ್ಲಾ, ಮತಾಂತರ ಮಾಡಿದವರೇ ಬಲವಂತದ ಮತಾಂತರವಲ್ಲವೆಂದು ಸಾಬೀತು ಪಡಿಸಲು ಹೇಳುತ್ತದೆ.
ಇದು ಧಾರ್ಮಿಕ ಸ್ವಾತಂತ್ರ್ಯದ ಸಂರಕ್ಷಣೆಯ ಹೆಸರಿನಲ್ಲಿ ಅಪ್ರತ್ಯಕ್ಷವಾಗಿ, ಜಾತಿ ತಾರತಮ್ಯ, ಅಸ್ಪೃಶ್ಯಾಚರಣೆ ಗಳನ್ನು ಪೋಷಿಸಲು ಮತ್ತು ವಂಚಕ ಜಾತಿ ಪದ್ದತಿಯಲ್ಲಿ ಶೋಷಿತರು ಸಿಲುಕಿ ನರಳುವಂತೆ ಮಾಡುವ ಸಂಚನ್ನು ಹೊಂದಿದೆ. ಮಾತ್ರವಲ್ಲಾ ಯುವಕ- ಯುವತಿಯರ ಅಂತರ್ಜಾತೀಯ ಮತ್ತು ಅಂತರ್ಧಮೀಯ ವೈವಾಹಿಕ ಹಕ್ಕನ್ನು ನಿರ್ಬಂಧಿಸುತ್ತದೆ.
ಇಂತಹದ್ದೊಂದು ಕಾಯ್ದೆಯ ಅಗತ್ಯವೇ ಇಲ್ಲದಿರುವಾಗ, ಸರಕಾರ ಇದಕ್ಕಾಗಿ ವಿಧಾನಸಭಾ ಕಲಾಪದ ಸಮಯವನ್ನು ಮತ್ತು ಸಾರ್ವಜನಿಕ ಹಣವನ್ನು ದುಂದು ವೆಚ್ಚ ಮಾಡುತ್ತಿದೆ. ರೈತ ವಿರೋಧಿ, ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರ ಕೃಷಿ ಕಾಯ್ದೆಗಳನ್ನು ಮತ್ತು ಬಡವರು ಹಾಗೂ ದಲಿತರ ವಿರೋಧಿಯಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ವಾಪಾಸು ಪಡೆಯುವುದನ್ನು ಮರೆಸುವ ತಂತ್ರದ ಭಾಗವಾಗಿ ಇಂತಹ ಭಾವನಾತ್ಮಕ ವಿಷಯಗಳಿಗೆ ಒತ್ತು ಕೊಡಲಾಗುತ್ತಿದೆಯೆಂದು ಸಿಪಿಐಎಂ ಠೀಕಿಸಿದೆ
ರಾಜ್ಯದಾದ್ಯಂತ ಸಂವಿಧಾನ ವಿರೋಧಿಯಾದ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಈ ದೌರ್ಜನ್ಯವನ್ನು ಪ್ರತಿರೋಧಿಸಲು ಪಕ್ಷದ ಎಲ್ಲಾ ಘಟಕಗಳಿಗೆ, ನಾಗರೀಕರಿಗೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಕರೆ ನೀಡುತ್ತದೆ.
ಯು. ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ