ಆಹಾರದ ಹಕ್ಕುಗಳ ರಕ್ಷಣೆ ಹಾಗೂ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆ ಏರಿಕೆಯ ಕುರಿತು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) 23ನೇ ಕರ್ನಾಟಕ ರಾಜ್ಯ ಸಮ್ಮೇಳನವು ನಿರ್ಣಯವನ್ನು ಅಂಗೀಕರಿಸಿದೆ.
ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆ ಏರಿಕೆಯ ಕುರಿತು ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನ ಆಳವಾದ ಆತಂಕವನ್ನು ವ್ಯಕ್ತಪಡಿಸುತ್ತದೆ. ಅಗತ್ಯ ವಸ್ತುಗಳ ಬೆಲೆಗಳಲ್ಲಿ ನಿರಂತರ ಏರಿಕೆಯಾಗಿದೆ. ಅಕ್ಕಿ, ಗೋಧಿ, ಖಾದ್ಯ ತೈಲ, ಉಪ್ಪಿನ ಬೆಲೆ ಶೇ.20 ರಿಂದ ಶೇ.200 ರಷ್ಟು ಏರಿಕೆಯಾಗಿದ್ದು. ಕೆಲವು ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಬೇಳೆಕಾಳುಗಳ ಬೆಲೆ ದ್ವಿಗುಣಗೊಂಡಿದ್ದು, ತೊಗರಿ ಬೇಳೆ ಬೆಲೆ ಈಗ ಕಿಲೋಗೆ 130 ರೂ. ಗಿಂತ ಹೆಚ್ಚಾಗಿದೆ. ಸಕ್ಕರೆ ಗ್ರಾಹಕರಿಗೆ ಕಹಿಯಾಗಿದೆ. ಭಾರತದಲ್ಲಿನ ಕನಿಷ್ಠ 246 ಜಿಲ್ಲೆಗಳಲ್ಲಿ ಕೋಟಿಗಟ್ಟಲೆ ಗ್ರಾಮೀಣ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದ ಬರಗಾಲ/ನೆರೆಹಾವಳಿ ಮತ್ತು ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾರೋಗದ ಕಾರಣದಿಂದ ತೊಂದರೆಗೊಳಗಾದ ಜನರ ಮೇಲೆ ಇನ್ನಷ್ಟು ಬರೆ ಎಳೆಯಲಾಗಿದೆ. ಭಾರತವು ಪ್ರಪಂಚದ ಯಾವುದೇ ದೇಶಗಳಿಗಿಂತ ಹೆಚ್ಚು ಆಹಾರದಿಂದ ವಂಚಿತ ಮತ್ತು ಅಪೌಷ್ಟಿಕತೆಯನ್ನು ಹೊಂದಿರುವ ಜನರನ್ನು ಹೊಂದಿದೆ ಮತ್ತು ವಿಶ್ವಸಂಸ್ಥೆಯು ಸಂಗ್ರಹಿಸಿದ 2021 ರ ವಿಶ್ವ ಹಸಿವಿನ ಸೂಚ್ಯಂಕಕ್ಕೆ ಸಂಬಂಧಿಸಿದಂತೆ 116 ದೇಶಗಳ ಪೈಕಿ 101ನೇ ಸ್ಥಾನದಲ್ಲಿದೆ. ಆಹಾರದ ಬೆಲೆಯಲ್ಲಿನ ಪ್ರಸ್ತುತ ಏರಿಕೆಯು, ಮುಖ್ಯವಾಗಿ ಬಹುಪಾಲು ದುಡಿಯುವ ಜನರನ್ನು ವಿಶೇಷವಾಗಿ ಬಡ ಮಹಿಳೆಯರು ಮತ್ತು ಮಕ್ಕಳನ್ನು ವ್ಯಾಪಕವಾಗಿ ಆಹಾರದ ಹಕ್ಕಿನ ಅವಕಾಶ ದಿಂದ ಹೊರಹಾಕುತ್ತದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ.
ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣವೆಂದು ಈ ಸಮ್ಮೇಳನ ಖಚಿತವಾಗಿ ಅಭಿಪ್ರಾಯ ಪಡುತ್ತದೆ. ಪೆಟ್ರೋಲಿಯಂ ವಸ್ತುಗಳ ಮೇಲಿನ ಸುಂಕ/ತೆರಿಗೆಯನ್ನು ನಿರಂತರವಾಗಿ ಕೇಂದ್ರ ಸರಕಾರ ಏರಿಸುತ್ತಿರುವುದು; ಅಗತ್ಯ ಸರಕುಗಳಲ್ಲಿನ ಮುಂಗಡ- ವ್ಯಾಪಾರವನ್ನು ನಿಷೇಧಿಸಲು ಒಪ್ಪದಿರುವುದು; ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿರುವುದು ಮತ್ತು ಕಳೆದ ಎರಡು ವರ್ಷಗಳಲ್ಲಿ ರಾಜ್ಯಗಳಿಗೆ ಎಪಿಎಲ್ ವಿಭಾಗಗಳಿಗೆ ಆಹಾರ ಧಾನ್ಯದ ಹಂಚಿಕೆಯಲ್ಲಿ ಶೇಕಡಾ 73 ರಷ್ಟು ಕಡಿತಗೊಳಿಸಿದ್ದು; ಕಾರ್ಪೋರೇಟ್ ಲಾಬಿಗಳ ಒತ್ತಡದಲ್ಲಿ, ಆಹಾರಧಾನ್ಯ ಮತ್ತು ಸಕ್ಕರೆ ವ್ಯಾಪಕ ರಪ್ತಿಗೆ ಅನುಮತಿ ನೀಡಿದ್ದು, ಇದರಿಂದಾಗಿ ಕೊರತೆಯಾಗಿ ಬೆಲೆಗಳು ಹೆಚ್ಚಿವೆ.
ಮೂಲಸೌಕರ್ಯದಲ್ಲಿ ಸಾರ್ವಜನಿಕ ಹೂಡಿಕೆ, ಕೈಗೆಟುಕುವ ಸಾಲ, ಬೀಜಗಳು, ಲಾಗವಾಡುಗಳ ಲಭ್ಯತೆ ಮತ್ತು ವಿಸ್ತರಣಾ ಸೇವೆಗಳು ಮತ್ತು ರೈತರಿಗೆ ಲಾಭದಾಯಕ ಬೆಂಬಲ ಬೆಲೆಗಳ ಖಚಿತ ಪಡಿಸುವ ಮೂಲಕ – ಧಾನ್ಯಗಳು, ಕಬ್ಬು, ಬೇಳೆಕಾಳುಗಳು ಮತ್ತು ತೈಲ ಸೇರಿದಂತೆ ವಿವಿಧ ಬೆಳೆಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳಲು ಸರಕಾರದ ನೀತಿಗಳು ವಿಫಲವಾಗಿದೆ. ಇದರಿಂದಾಗಿ ಕೊರತೆ ಹೆಚ್ಚಿ, ಆಮದುಗಳ ಮೇಲೆ ಅವಲಂಬನೆಯನ್ನು ಉಂಟುಮಾಡುತ್ತದೆ.
ಈ ನೀತಿಗಳಲ್ಲಿ ಬದಲಾವಣೆ ಅಗತ್ಯವೆಂದು ಸಮ್ಮೇಳನ ಒತ್ತಾಯಿಸುತ್ತದೆ.
ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ‘ಕುಟುಂಬದ ಆಹಾರ ಭದ್ರತೆ’ಯ ವ್ಯಾಖ್ಯಾನವನ್ನು ಪೂರೈಸುವಂತೆ ಆಹಾರ ಭದ್ರತಾ ಶಾಸನಕ್ಕೆ ತಿದ್ದುಪಡಿ ಮಾಡಬೇಕಾಗಿದೆ. ಅದು: “ಸಕ್ರಿಯ, ಆರೋಗ್ಯಕರ ಜೀವನಕ್ಕಾಗಿ ಸಾಕಷ್ಟು ಆಹಾರವನ್ನು ಕೈಗೆಟಕುವ ಬೆಲೆಯಲ್ಲಿ ಎಲ್ಲಾ ಸಮಯದಲ್ಲೂ ಪ್ರತಿ ಕುಟುಂಬದ ಎಲ್ಲಾ ಸದಸ್ಯರು ಪಡೆಯುವುದನ್ನು ಖಚಿತ ಪಡಿಸುತ್ತದೆ.
ಯೋಜನಾ ಆಯೋಗ/ ನೀತಿ ಆಯೋಗವು ಕಾಲಕಾಲಕ್ಕೆ ಮಾಡಿದ ಬಡತನದ ತಪ್ಪು ಅಂದಾಜುಗಳೊಂದಿಗೆ ಆಹಾರ ಭದ್ರತೆಯನ್ನು ಖಚಿತಪಡಿಸಲಾಗುವುದಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಬಡವರ ದೊಡ್ಡ ವರ್ಗಗಳನ್ನು ಹೊರಗಿಟ್ಟಿದ್ದು ಘೋರ ಅನ್ಯಾಯವಾಗಿದೆ. ಗುರಿ ನಿಗದಿತ ಯೋಜನೆಯ ಹೆಸರಿನಲ್ಲಿ ಮತ್ತು ನೇರ ನಗದು ವರ್ಗಾವಣೆಯನ್ನು ಸರ್ಕಾರ ಜಾರಿ ಮಾಡುತ್ತಿರುವುದರಿಂದ ಆಹಾರ ಲಭ್ಯತೆ ಪ್ರಮಾಣವೂ ಕಡಿಮೆಯಾಗಲಿದೆ.
ಅಕ್ಕಿ ಮತ್ತು ಗೋಧಿಗೆ ಕಾನೂನುಬದ್ಧ ಅರ್ಹತೆಯನ್ನು ಸೀಮಿತಪಡಿಸಿ ಮತ್ತು ಸಕ್ಕರೆ, ಬೇಳೆಕಾಳುಗಳು, ಖಾದ್ಯ ತೈಲ ಮತ್ತು ಸೀಮೆಎಣ್ಣೆಯಂತಹ ಇತರ ಅಗತ್ಯ ಸರಕುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಹೊರಗಿಡಲಾಗಿದೆ. ಆದರೆ ಅನೇಕ ರಾಜ್ಯಗಳು, ಉದಾಹರಣೆಗೆ, ಕೇರಳ, ಇತರ ಅಗತ್ಯ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡಿದೆ. ಈಗಿರುವ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ದಾಸ್ತಾನು ಮಳಿಗೆಗಳಿಂದ ರೇಷನ್ ಬಂದಾಗ ಮಾತ್ರ ತೆರೆದಿಡುವ ಉಳಿದ ವೇಳೆ ಈ ನ್ಯಾಯಬೆಲೆ ಅಂಗಡಿಗಳು ಮುಚ್ಚಿರುವ ಪರಿಸ್ಥಿತಿ ಇದೆ. ಆದರೆ ಈ ನ್ಯಾಯಬೆಲೆ ಅಂಗಡಿಗಳು ನಿರಂತರವಾಗಿ ತೆರೆದಿಡುವಂತೆ ಮಾಡಲು ಸಾಧ್ಯವಾಗಬೇಕು. ಒಂದೇ ಛಾವಣಿಯ ಅಡಿಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಲಭ್ಯವಿರುವ, ಜನಜೀವನಕ್ಕೆ ಬೇಕಾಗುವ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಗೆ ಪೂರೈಸಲು ಸಾಧ್ಯವಾದರೆ ಉದ್ಯೋಗ ಸೃಷ್ಟಿಯೂ, ಸಹಕಾರಿ ರಂಗದ ಬಲವರ್ಧನೆಯೂ ಸಾಧ್ಯವಿದೆ. ಅದಕ್ಕಾಗಿ ಕೇರಳ ಮಾದರಿಯನ್ನು ಅನುಸರಿಸಲು ಈ ಸಮ್ಮೇಳನವು ಸರ್ಕಾರಕ್ಕೆ ಆಗ್ರಹಿಸುತ್ತದೆ. ರಾಜ್ಯದಲ್ಲಿ ಆಹಾರದ ಹಕ್ಕನ್ನು ಸಾರ್ವತ್ರಿಕ ಹಕ್ಕು ಎಂದು ಗುರುತಿಸಬೇಕು ಎಂದು ಈ ಸಮ್ಮೇಳನ ಒತ್ತಾಯಿಸುತ್ತದೆ.
ಯಾವುದೇ ಆಹಾರ ಭದ್ರತಾ ಶಾಸನವು ವಿಸ್ತರಿತ ಸಾರ್ವಜನಿಕ ಸಂಗ್ರಹಣೆ ಮತ್ತು ಭಾರತೀಯ ರೈತರಿಗೆ ನ್ಯಾಯಯುತ ಬೆಲೆಗಳನ್ನು ಖಚಿತಪಡಿಸುವುದು ಅತ್ಯಗತ್ಯ. ಗೋಧಿ, ಅಕ್ಕಿ, ರಾಗಿ, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಕಬ್ಬು ಸೇರಿದಂತೆ ಬೆಳೆಗಳು, ಗ್ರಾಮೀಣ ಮೂಲಸೌಕರ್ಯ ಮತ್ತು ವಿಸ್ತರಣಾ ಸೇವೆಗಳ ಅಭಿವೃದ್ಧಿಗಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದು ಮತ್ತು ನಿಯಂತ್ರಿತ ಬೆಲೆಗಳಲ್ಲಿ ಲಾಗವಾಡುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ.,
ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಗುರಿ ನಿಗದಿ ಮತ್ತು ಕಡಿಮೆ ಹಂಚಿಕೆಗಳ ನೆಪದಲ್ಲಿ 5 ಲಕ್ಷ ನ್ಯಾಯಬೆಲೆ ಅಂಗಡಿಗಳನ್ನು ರದ್ದುಗೊಳಿಸಿದೆ. ಕಳೆದ ವರ್ಷ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ಅದು ಯಥಾವತ್ ಜಾರಿಯಾಗುವುದರಿಂದ ಬಹುದೊಡ್ಡ ಪ್ರಮಾಣದಲ್ಲಿ ಜೀವನಾವಶ್ಯಕ ವಸ್ತುಗಳನೂ ಒಳಗೊಂಡು ಆಹಾರ ಧಾನ್ಯ ವಸ್ತುಗಳು ಬಡವರಿಗೆ ಕೈಗೆಟುಕುವಂತಿರದು.
ಹಾಗಾಗಿ, ಸಾರ್ವಜನಿಕ ವಿತರಣೆ ವ್ಯವಸ್ಥೆ ಪಿಡಿಎಸ್ ಅನ್ನು ಬಲಪಡಿಸಲು ಮತ್ತು ಸುವ್ಯವಸ್ಥಿತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಭ್ರಷ್ಟಾಚಾರವನ್ನು ಬೇರು ಸಮೇತ ನಿರ್ಮೂಲನೆ ಮಾಡಲು ಮತ್ತು ಮೇಲ್ವಿಚಾರಣೆ ಮತ್ತು ಜಾಗೃತ ಸಮಿತಿಗಳ ಮೂಲಕ ಜನರ ಅಗತ್ಯತೆಗಳಿಗೆ ವ್ಯವಸ್ಥೆಯನ್ನು ಹೆಚ್ಚು ಹೊಣೆಗಾರರನ್ನಾಗಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸರ್ಕಾರವು ಮಧ್ಯಾಹ್ನದ ಊಟ ಯೋಜನೆ ಮತ್ತು ಐಸಿಡಿಎಸ್ ಪೌಷ್ಟಿಕಾಂಶ ಕಾರ್ಯಕ್ರಮದಂತಹ ಇತರ ಆಹಾರ ಯೋಜನೆಗಳನ್ನು ಶಾಸನದಲ್ಲಿ ಸೇರಿಸಬೇಕು.
ಈ ಸಮ್ಮೇಳನವು ಆಹಾರ ಭದ್ರತೆಗೆ ಸಂಬಂಧಿಸಿದ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡುತ್ತದೆ:
ಬೆಲೆ ಏರಿಕೆ ವಿರುದ್ಧ ಆಹಾರ ಭದ್ರತೆಗಾಗಿ ಸಮ್ಮೇಳನವು ಒತ್ತಾಯಿಸುವ ಬೇಡಿಕೆಗಳು:
- ಅಗತ್ಯ ವಸ್ತುಗಳ ಎಲ್ಲಾ ಮುಂಗಡ ವ್ಯಾಪಾರವನ್ನು ನಿಷೇಧಿಸಿ.
- ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಿ. ವಿಸ್ತರಣೆಯನ್ನು ಖಾತ್ರಿಪಡಿಸಿ ಮತ್ತು ಕಾಳ ಧನಿಕರ ಮತ್ತು ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ.
- ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಹಿಂಪಡೆಯಿರಿ.
- ಬರ/ನೆರೆಹಾವಳಿ ಪೀಡಿತ ಪ್ರದೇಶಗಳಲ್ಲಿನ ಮತ್ತು ಕೋವಿಡ್-ಸಾಂಕ್ರಾಮಿಕ ರೋಗದ ಕಾರಣ ಉದ್ಯೋಗ/ಆದಾಯ ಕಳೆದುಕೊಂಡ ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ತುರ್ತು ಆಧಾರದ ಮೇಲೆ ಉಚಿತ ಆಹಾರ ಧಾನ್ಯ ವಿತರಣೆಯನ್ನು ಖಚಿತಪಡಿಸಿ.
- ನೈಜ ಆದಾಯವನ್ನು ಖಚಿತಪಡಿಸಲು ವ್ಯಾಪಕವಾದ ಉದ್ಯೋಗ ಖಾತರಿ ಯೋಜನೆಗಳನ್ನು ಪ್ರಾರಂಭಿಸಲು ಸಂಪನ್ಮೂಲಗಳ ತುರ್ತು ಹಂಚಿಕೆಯ ಮೂಲಕ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಿ. 100 ದಿನಗಳ ಮಿತಿಯನ್ನು ತೆಗೆದುಹಾಕಿ ಮತ್ತು ಬೇಡಿಕೆಯ ಮೇರೆಗೆ ಕೆಲಸ ನೀಡಿ. ಅಗತ್ಯವಿರುವಲ್ಲಿ ಆಹಾರ ಧಾನ್ಯವನ್ನು ನಗದು ಜೊತೆಗೆ ಭಾಗ ಪಾವತಿಯಾಗಿಯೂ ಬಳಸಬಹುದು.
- ಕೇಂದ್ರ ಸರ್ಕಾರದ ಎಲ್ಲಾ ಆಹಾರ ಮತ್ತು ಪೌಷ್ಟಿಕಾಂಶ ಯೋಜನೆಗಳಾದ ಮಧ್ಯಾಹ್ನದ ಊಟ ಯೋಜನೆ ಮತ್ತು ಐಸಿಡಿಎಸ್ ಪೌಷ್ಟಿಕಾಂಶ ಕಾರ್ಯಕ್ರಮವನ್ನು ಆಹಾರದ ಹಕ್ಕು ಶಾಸನದಲ್ಲಿ ಅಳವಡಿಸಿ.
- ಸಾರ್ವಜನಿಕ ಹೂಡಿಕೆಯ ಮೂಲಕ ಆಹಾರ ಧಾನ್ಯ, ಬೇಳೆಕಾಳುಗಳು, ಕಬ್ಬು ಮತ್ತು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ರಾಷ್ಟ್ರೀಯ ಸ್ವಾವಲಂಬನೆಯನ್ನು ಉತ್ತೇಜಿಸುವುದು, ವಿಸ್ತರಣಾ ಸೇವೆಗಳನ್ನು ಒದಗಿಸುವುದು ಮತ್ತು ರೈತರಿಗೆ ಖಾತರಿಯ ನ್ಯಾಯಯುತ ಬೆಲೆಯೊಂದಿಗೆ ಸೂಕ್ತವಾದ ಭೂ ಬಳಕೆಯ ನೀತಿಗಳು ಮತ್ತು ವಿಸ್ತೃತ ಸಾರ್ವಜನಿಕ ಸಂಗ್ರಹಣೆ, ಭೂ ಸುಧಾರಣೆಗಳನ್ನು ಜಾರಿಗೊಳಿಸಿ.
- ನ್ಯಾಯಬೆಲೆ ಅಂಗಡಿಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಿ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿ.
ಸರ್ಕಾರದ ಆಹಾರ ವಿರೋಧಿ ನೀತಿ ಬದಲಾವಣೆಗೆ ಒತ್ತಾಯಿಸಿ ಜನರಿಗೆ ಒಂದಿಷ್ಟು ನೆಮ್ಮದಿ ತರುವ ಗುರಿ ಸಾಧಿಸಲು ಗಂಗಾವತಿಯಲ್ಲಿ ನಡೆಯುತ್ತಿರುವ ಸಿಪಿಐ(ಎಂ) ಕರ್ನಾಟಕ ರಾಜ್ಯ 23ನೇ ಸಮ್ಮೇಳನ ಮೇಲಿನ ಬೇಡಿಕೆಗಳ ಮೇಲೆ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡುತ್ತದೆ.