ಕೋವಿಡ್ನಿಂದಾಗಿ ಕಳೆದ 2 ವರ್ಷಗಳಲ್ಲಿ ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳ ಕೆಲಸದಲ್ಲಿ ವ್ಯತ್ಯಯಗಳು ಆಗಿವೆ. ಲಾಕ್ಡೌನ್ ಅವಧಿ ನಮ್ಮ ಒಟ್ಟು ಕೆಲಸಗಳಿಗೆ ತೊಡಕುಂಟು ಮಾಡಿದೆ. ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳ ಸದಸ್ಯತ್ವ ಇಳಿಕೆಯಾಗಿದೆ. ಪಕ್ಷದ ಕೇಂದ್ರ ಸಮಿತಿಯಿಂದ ಹಿಡಿದು ಕೆಳಹಂತದವರೆಗೂ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದಾಗಿ ಪಕ್ಷ ಮತ್ತು ಜನತೆಯ ನಡುವಿನ ಕೊಂಡಿ ಹಾಗೂ ಜನರ ಜತೆಗಿನ ನಿರಂತರ ಸಂಪರ್ಕ-ಸಂಬಂಧ ಸಡಿಲಗೊಂಡಿದೆ. ಕರ್ನಾಟಕದಲ್ಲಿ ಈ ಕೊಂಡಿಯನ್ನು ಮತ್ತೆ ಜೋಡಿಸಿ ಗಟ್ಟಿಗೊಳಿಸುವುದು ಹೇಗೆಂಬ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬುರೊ ಸದಸ್ಯ ಕಾಮ್ರೇಡ್ ಪ್ರಕಾಶ್ ಕಾರಟ್ ಕರೆ ಕೊಟ್ಟರು. ಅವರು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2022ರ ಜನವರಿ 2 ರಿಂದ 4ರ ವರೆಗೆ ನಡೆದ 23ನೆಯ ರಾಜ್ಯ ಸಮ್ಮೇಳನದ ಪ್ರತಿನಿಧಿ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಷಿಕ ಮತ್ತು ಕೈಗಾರಿಕಾ ರಂಗಗಳಲ್ಲಿ 90ರ ದಶಕದಿಂದ ಜಾರಿಯಾಗುತ್ತಿರುವ ನವ-ಉದಾರವಾದಿ ನೀತಿಗಳ ಪರಿಣಾಮವಾಗಿ ಆಗುತ್ತಿರುವ ಬದಲಾವಣೆಗಳು, ಇವುಗಳಿಂದಾಗಿ ರೈತರು, ಕಾರ್ಮಿಕರು, ಕೂಲಿಕಾರರು ಮತ್ತು ಸಾಮಾನ್ಯ ಜನತೆಯ ಮೇಲೆ ಆಗಿರುವ ಪರಿಣಾಮಗಳು, ವರ್ಗ ಬಲಾಬಲಗಳಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಗುರುತಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಪಕ್ಷ ನೇಮಿಸಿದ ಅಧ್ಯಯನ ತಂಡ ಸಮೀಕ್ಷೆಯ ನಂತರ ತಯಾರಿಸಿರುವ ಎರಡು ಅಧ್ಯಯನ ವರದಿಗಳು ಇವುಗಳನ್ನು ವಿವರವಾಗಿ ತಿಳಿಸಿವೆ. ಈ ವರದಿಗಳ ಕನ್ನಡ ಅನುವಾದ ಇಂದು ಬಿಡುಗಡೆಯಾಗಿರುವುದು ಸಂತೋಷದ ವಿಷಯ. ಅದನ್ನು ಓದಿ ಈ ಬದಲಾವಣೆಗಳನ್ನು ತಿಳಿದುಕೊಂಡು ನಮ್ಮ ಹೋರಾಟಗಳಲ್ಲಿ ಹೊಸ ಘೋಷಣೆಗಳನ್ನು ಕೊಡುವುದು, ಹೊಸ ತಂತ್ರಗಳನ್ನು ಹೊಸೆಯುವುದು ಸಾಧ್ಯವಾಗಬೇಕು ಎಂದು ಕಾಮ್ರೇಡ್ ಪ್ರಕಾಶ್ ಕಾರಟ್ ಹೇಳಿದರು.
ಉದಾಹರಣೆಗೆ, ಕೃಷಿ ರಂಗದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ, ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಭೂಹೀನರು ಕೃಷಿ ಕೂಲಿಕಾರರಾಗಿದ್ದ ಪರಿಸ್ಥಿತಿ ಬದಲಾಗಿದೆ. ಕೃಷಿಯಲ್ಲಿ ಮಾತ್ರ ತೊಡಗಿರುವ ಕೃಷಿ ಕೂಲಿಕಾರರ ಸಂಖ್ಯೆ ಕಡಿಮೆಯಾಗಿದ್ದು, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೂಲಿ ಮಾಡುವ ಗ್ರಾಮೀಣ ಕೂಲಿಕಾರರರ ಹೆಚ್ಚಳ ಆಗಿದೆ. ಇವನ್ನು ಈ ವರದಿ ಗುರುತಿಸಿದೆ. ಇದನ್ನು ನಮ್ಮ ಕೃಷಿ ಕೂಲಿಕಾರರ ಸಂಘಟನೆ ಗುರುತಿಸಿ ಎಲ್ಲ ಗಾಮೀಣ ಕೂಲಿಕಾರರನ್ನು ಸಂಘಟಿಸಲು ಪ್ರಯತ್ನಿಸಬೇಕು ಎಂದು ಕಾಮ್ರೇಡ್ ಪ್ರಕಾಶ್ ಕಾರಟ್ ವಿವರಿಸಿದರು.
ಕೋವಿಡ್ ಸಮಯದಲ್ಲಿ ನೀವು ಸಕ್ರಿಯವಾಗಿ ಕೆಲಸ ಮಾಡಿದ್ದೀರಿ. ಕರ್ನಾಟಕದಲ್ಲಿ ಪಕ್ಷದ ರಾಜಕೀಯ ಸಂಘಟನಾ ವರದಿಯಲ್ಲಿ ಹಲವು ಸಂಘಟನಾ ಸಮಸ್ಯೆಗಳನ್ನು ಗುರುತಿಸಲಾಗಿತ್ತು. ಇದರಿಂದಾಗಿ ಪಕ್ಷದ ಸಾಮರ್ಥ್ಯವನ್ನು ಅದರ ಬೆಳವಣಿಗೆಗೆ ಬಳಸಿಕೊಳ್ಳಲು ಆಗಲಿಲ್ಲ. ಸಂಘಟನೆ ಮತ್ತು ಪಕ್ಷದ ಕಾರ್ಯಾಚರಣೆಯಲ್ಲಿ ಪ್ರಜಾಸತ್ತಾತ್ಮಕ ಕೇಂದ್ರವಾದವನ್ನು ಎಲ್ಲ ಹಂತಗಳಲ್ಲೂ ಜಾರಿ ಮಾಡಬೇಕೆಂದು ಕೋಲ್ಕತ್ತಾ ಪ್ಲೀನಂ ಒತ್ತಿ ಹೇಳಿದೆ. ವ್ಯಕ್ತಿಗತ ಕಾರ್ಯಾಚರಣೆಯಿಂದಾಗಿ ವ್ಯಕ್ತಿವಾದ ಬೆಳೆದು ಸಾಮೂಹಿಕ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಪ್ರಜಾಸತ್ತಾತ್ಮಕ ಕೇಂದ್ರವಾದ ತತ್ವಗಳನ್ನು ಪಾಲಿಸಬೇಕಿದೆ ಮತ್ತು ಸಾಮೂಹಿಕ ಕಾರ್ಯಾಚರಣೆಯನ್ನು ಮುಂದುವರಿಸಬೇಕಿದೆ ಎಂದು ಒತ್ತಿ ಹೇಳಿದರು.
ನಾವು ಪಕ್ಷವಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಪಶ್ಚಿಮ ಬಂಗಾಳ, ತ್ರಿಪುರಾಗಳಲ್ಲಿ ನಮ್ಮ ಪಕ್ಷದ ಮೇಲೆ ತೀವ್ರವಾದ ದಾಳಿಗಳು ನಡೆಯುತ್ತಿವೆ. ನಮ್ಮ ಪ್ರಬಲ ನೆಲೆಗಳನ್ನು ನಾಶಪಡಿಸಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಕೋಮುವಾದಿ ಶಕ್ತಿಗಳ ಈ ದಾಳಿಗಳನ್ನು ಎದುರಿಸುವುದು ಹೇಗೆ? ಕಳೆದುಕೊಂಡ ನೆಲೆಗಳನ್ನು ಪುನರ್ ಸ್ಥಾಪಿಸುವುದು ಹೇಗೆ ಎಂಬ ನಾವು ಚರ್ಚಿಸಬೇಕು. ದಕ್ಷಿಣದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಿಜೆಪಿ, ಹಿಂದುತ್ವವಾದಿ ಸಂಘಟನೆಗಳು ಪ್ರಬಲವಾಗಿ ಬೆಳೆದಿವೆ. ಇಂತಹ ಪ್ರತಿಗಾಮಿ ಶಕ್ತಿಗಳನ್ನು ಹಿಮ್ಮೆಟ್ಟಿಸುವುದು ಹೇಗೆ? ಎಂಬ ಬಗ್ಗೆ ಹಾಗೂ ಪಕ್ಷದ ಸ್ವತಂತ್ರ ಶಕ್ತಿಯನ್ನು ಬಲಗೊಳಿಸುವ ಕುರಿತು ಈ ಸಮ್ಮೇಳನದಲ್ಲಿ ಚರ್ಚೆ ನಡೆಸಬೇಕು ಎಂದು ಕಾಮ್ರೇಡ್ ಪ್ರಕಾಶ್ ಕಾರಟ್ ಕರೆ ಕೊಟ್ಟರು.