ವಿದ್ಯುತ್ ಶುಲ್ಕದೊಂದಿಗೆ ಕಸ ನಿರ್ವಹಣೆ ಶುಲ್ಕವನ್ನು ಸಂಗ್ರಹ ಮಾಡಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿರುವ ಕ್ರಮವನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ಕಛೇರಿ ಮುಂಭಾಗ ನೆರೆದ ಸಿಪಿಐ(ಎಂ) ಪಕ್ಷದ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿ ಕಾರ್ಯಕರ್ತರು ಸರ್ಕಾರ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಪ್ರತಾಪ್ ಸಿಂಹ ಮಾತನಾಡಿ, ಆಸ್ತಿ ತೆರಿಗೆದ ಜೊತೆಯಲ್ಲೇ ಮಾಲೀಕರಿಂದ ಘನತ್ಯಾಜ್ಯ ನಿರ್ವಹಣಾ ಸುಂಕ ಸಂಗ್ರಹಿಸುತ್ತಾರೆ. ಹೀಗಿರುವಾಗ ಮತ್ತೆ ಜನರ ಸಂಕಷ್ಟಗಳಿಗೆ ಮತ್ತಷ್ಟು ಹೊರೆ ನೀಡುವ ನಿಟ್ಟಿನಲ್ಲಿ ಮತ್ತೆ ನಿರ್ವಹಣಾ ಶುಲ್ಕವನ್ನು ವಿಧಿಸುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ನಡೆಯುತ್ತಿರುವ ಭಾರೀ ಪ್ರಮಾಣದ ಭ್ರಷ್ಟಾಚಾರದಿಂದಾಗಿ ನಗರಕ್ಕೆ ಗಾರ್ಬೆಜ್ ಸಿಟಿ ಎಂಬ ಅಪಖ್ಯಾತಿ ಪಡೆದುಕೊಂಡಿದೆ. ನಿರ್ವಹಣೆಯಲ್ಲಿನ ಲೋಪಗಳನ್ನು ಸರಿಪಡಿಸದ ಆಳುವ ಸರ್ಕಾರ ಜನರ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿದೆ. ಭ್ರಷ್ಟಾಚಾರಿಗಳು ಹಾಗೂ ಮಾಫಿಯಾಗಳು ಶಾಮೀಲಾಗಿ ಜನರ ತೆರಿಯ ಹಣ ದೊಡ್ಡ ಪ್ರಮಾಣದಲ್ಲಿ ಪೋಲಾಗುತ್ತಿದೆ ವಿನಃ ಸಾಮಾನ್ಯ ಜನರಿಗೆ ಅನುಕೂಲವನ್ನು ಕಲ್ಪಿಸಿಲ್ಲ ಎಂದು ತಿಳಿಸಿದರು.
ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಮಾತನಾಡಿ, ಜನರ ಜೀವನಾದಯ ಕಡಿಮೆಯಿದೆ, ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿಬಿಎಂಪಿ ಜನರ ಬದುಕನ್ನು ಉತ್ತಮ ಪಡಿಸುವ ಕ್ರಮಗಳನ್ನು ಕೈಗೊಳ್ಳುವ ಬದಲಾಗಿ ಪ್ರತಿ ಮನೆಯಿಂದ ವಿದ್ಯುತ್ ಶುಲ್ಕದೊಂದಿಗೆ ಘನತ್ಯಾಜ್ಯಕ್ಕೆ ಅನುಗುಣವಾಗಿ ಕಸ ನಿರ್ವಹಣಾ ಶುಲ್ಕ ಸಂಗ್ರಹ ಮಾಡುವುದಕ್ಕೆ ಮುಂದಾಗಿದೆ. ಅಲ್ಲದೆ, ಕಸ ನಿರ್ವಹಣೆ ಶುಲ್ಕ ಸಂಗ್ರಹಕ್ಕೆ ಬೆಸ್ಕಾಂ ನೆರವು ಕೋರಿರುವುದು ಜನ ವಿರೋಧಿ ಕ್ರಮವಾಗಿದೆ ಎಂದು ಹೇಳಿದರು.
ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿರುವಂತೆ, ಗೃಹ ತ್ಯಾಜ್ಯ ಉತ್ಪಾದಕರಿಗೆ ವಿದ್ಯುತ್ ಶುಲ್ಕ ಆಧರಿಸಿ ಅದಕ್ಕೆ ಅನುಗುಣವಾಗಿ ಕಸ ನಿರ್ವಹಣೆ ಶುಲ್ಕವನ್ನು ರೂ. 30 ರಿಂದ ರೂ. 500ರ ವರೆಗೆ ಸಂಗ್ರಹಕ್ಕೆ ಮುಂದಾಗುವ ಮೂಲಕ ಪೌರ ಕಾರ್ಮಿಕರ ವೇತನ, ಕಸ ನಿರ್ವಹಣೆಗೆ ಬಿಬಿಎಂಪಿ ಮಾಡುತ್ತಿರುವ ವೆಚ್ಚವನ್ನು ಹಂತ ಹಂತವಾಗಿ ಜನರ ಮೇಲೆ ನೇರವಾಗಿ ವರ್ಗಾಹಿಸಲು ಮುಂದಾಗಿದೆ. ಕಸ ನಿರ್ವಹಣೆಗೆ ಪ್ರತ್ಯೇಕ ಕಂಪನಿಯ ಸ್ಥಾಪನೆಯೊಂದಿಗೆ ಮುಂಬರುವ ದಿನಗಳಲ್ಲಿ ಅದನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ವಹಿಸಿ ಖಾಸಗಿಯವರು ಲಾಭ ಮಾಡಿಕೊಳ್ಳಲು ಅನುಕೂಲವಾಗುವಂತಹ ಪಾಲಿಕೆಯ ಇಂತಹ ಪ್ರಸ್ತಾವನೆಗಳು ಸಂಪೂರ್ಣವಾಗಿ ಜನ ವಿರೋಧಿಯಾಗಿವೆ ಎಂದು ವಿವರಿಸಿದರು.
ಸಿಪಿಐ(ಎಂ) ಮಡಿವಾಳ ವಲಯ ಕಾರ್ಯದರ್ಶಿ ಲಿಂಗರಾಜು ಮಾತನಾಡಿ, ನಗರದಲ್ಲಿ ರಸ್ತೆಗಳು ಗುಂಡಿಮಯವಾಗಿವೆ. ಇದರಿಂದ ಅಲ್ಲಲ್ಲಿ ಆಗುವ ಅಪಘಾತಗಳಿಂದ ಸಾವುಗಳು ಸಂಭವಿಸಿರುವುದು ಕಂಡುಬಂದಿದೆ. ನಗರದ ಹಲವು ಪ್ರದೇಶಗಳಲ್ಲಿ ಉತ್ತಮ ರಸ್ತೆಗಳು ಇಲ್ಲದೆ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ಬೃಹತ್ ನಗರವಾಗಿದೆ. ಇಲ್ಲಿನ ಸರ್ಕಾರಗಳಲ್ಲಿನ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ. ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ. ವಿವಿಧ ಕಾಮಗಾರಿಗಳಿಗಾಗಿ ಅಗೆದಿರುವ ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚದೆ ನಗರದ ರಸ್ತೆಗಳು ಹಾಳಾಗಿದೆ. ಇವುಗಳನ್ನು ಗಮನಿಸಿಯೂ ಕ್ಷಿಪ್ರಗತಿಯಲ್ಲಿ ಕಾರ್ಯಚರಣೆಗೆ ಮುಂದಾಗದ ಪಾಲಿಕೆಯು ಮೌನಕ್ಕೆ ಶರಣಾಗಿರುವುದು ಖಂಡನೀಯ ಎಂದು ತಿಳಿಸಿದರು.
ಸಿಪಿಐ(ಎಂ) ರಾಜಾಜಿನಗರ ವಲಯ ಕಾರ್ಯದರ್ಶಿ ಡಿ. ಚಂದ್ರಶೇಖರ್ ಮಾತನಾಡಿ, ಬಿಬಿಎಂಪಿಯಲ್ಲಿ ಆಡಳಿತಾಗಾರರ ದರ್ಬಾರು ಹೆಚ್ಚಾಗಿದೆ. ಒಂದೆಡೆ ಚುನಾಯಿತ ಪ್ರತಿನಿಧಿಗಳು ಇಲ್ಲದೆ, ಕೇವಲ ಆಡಳಿತಗಾರರು ಹಾಗೂ ದಲ್ಲಾಳಿಗಳ ಹಿಡಿತದಿಂದಾಗಿ ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿದೆ. ಪ್ರತಿ ಇಂಚಿಂಚೂ ಕೆಲಸಗಳು ಸಹ ಸುಗಮವಾಗಿ ನಡೆಯುತ್ತಿಲ್ಲ. ಭ್ರಷ್ಟಾಚಾರ ಎಲ್ಲೆಡೆ ವ್ಯಾಪಿಸಿದೆ. ಇತ್ತೀಚಿಗೆ ಗುತ್ತಿಗೆದಾರರೆ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿ, ಎಷ್ಟು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇತ್ತೀಚಿಗೆ ನಡೆದ ಲೋಕಾಯುಕ್ತ ಅಥವಾ ಎಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳು ಕೋಟಿಗಟ್ಟಲೆ ಅಕ್ರಮ ಸಂಪತ್ತು ಸಂಪಾದಿಸಿರುವುದು ಜಾಹೀರಾಯಿತು. ಆದರೆ, ಅವರ ಮೇಲೆ ಸರ್ಕಾರ ಗಂಭೀರ ಕ್ರಮವನ್ನು ಕೈಗೊಳ್ಳಲಿಲ್ಲ. ಭ್ರಷ್ಟಾಚಾರ ಮಾಡುವವರನ್ನು ರಕ್ಷಣೆ ಮಾಡುವ ದೊಡ್ಡ ವರ್ಗವೇ ಸರ್ಕಾರದ ಆಡಳಿತದಲ್ಲಿದ್ದಾರೆ. ಜನರಿಂದ ವಸೂಲಾಗುವ ತೆರಿಗೆ ಹಣ ಭ್ರಷ್ಟರ ಪಾಲಾಗುತ್ತಿದೆ. ಇದರಿಂದ ಜನತೆ ಬದುಕು ಸಂಕಷ್ಟಕ್ಕೆ ಒಳಗಾಗಿದೆ ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಬಿಬಿಎಂಪಿ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಆಗಮಿಸಿ ಮನವಿ ಸ್ವೀಕರಿಸಿ ನಿಮ್ಮ ಮನವಿಯ ಬಗ್ಗೆ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಪ್ರಕಾಶ್, ಕೆ.ಎನ್. ಉಮೇಶ್, ಜಿಲ್ಲಾ ಮುಖಂಡರಾದ ಟಿ. ಲೀಲಾವತಿ, ಶ್ರೀಪತಿ, ಭಾಗವಹಿಸಿದರು. ಸಿಪಿಐ(ಎಂ) ಬಸವನಗುಡಿ ವಲಯ ಕಾರ್ಯದರ್ಶಿ ಬಸಮ್ಮ ಅವರು ವಂದಾರ್ಪಣೆ ಮಾಡಿದರು.