ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ-ಕಾರ್ಮಿಕ ಸಂಹಿತೆಗಳು ಮತ್ತು ಎನ್ಇಪಿ ವಾಪಾಸು ಪಡೆಯಲು ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳ ಒತ್ತಾಯ

ದೇಶದಾದ್ಯಂತ ಮತ್ತು ದೆಹಲಿ ಸುತ್ತ-ಮುತ್ತ ನಡೆದ ಮಿಲಿಯಾಂತರ ರೈತ ಹಾಗೂ ಕಾರ್ಮಿಕರ ಸಮರ ಶೀಲ ಮತ್ತು ಐತಿಹಾಸಿಕ ಹೋರಾಟದ ಒತ್ತಾಯಕ್ಕೆ ಮಣಿದು ಒಕ್ಕೂಟ ಸರಕಾರದ ಪ್ರಧಾನ ಮಂತ್ರಿ ಜಗತ್ತಿನ ಮುಂದೆ ಮಂಡಿಯೂರಿ ಕೈ ಮುಗಿದು ಲೂಟಿ ಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆದರು.

ಆದರೇ, ಕರ್ನಾಟಕ ಸರಕಾರ ಅವುಗಳ ಜಾರಿಗಾಗಿ ಕ್ರಮವಹಿಸಿದ ಭೂಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಹಾಗೂ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಇವುಗಳನ್ನು ವಾಪಾಸು ಪಡೆಯದೇ ಜನ ವಿರೋಧಿ ನೀತಿಗಳನ್ನು ಮುಂದುವರೆಸುತ್ತಿದೆ. ಅದೇ ರೀತಿ, ಕಾರ್ಮಿಕರು ಕಳೆದ ಒಂದು ಶತಮಾನದಿಂದ ಹೋರಾಡಿ ಗಳಿಸಿದ ಅವುಗಳ ಹಕ್ಕುಗಳನ್ನು ಮೊಟಕು ಮಾಡಿ ಕಾರ್ಪೋರೇಟ್ ಗುಲಾಮಿಕೆಗೆ ತೆರೆಯುವ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಕ್ರಮವಹಿಸುತ್ತಿದೆ.

ಅದೇ ರೀತಿ, ಬಡವರು, ದಲಿತರು ಶೂದ್ರರು ಮತ್ತು ಮಹಿಳೆಯರಿಗೆ ಶಿಕ್ಷಣ ನಿರಾಕರಿಸುವ, ಮತಾಂಧತೆಗೆ ಕುಮ್ಮಕ್ಕು ನೀಡುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವ್ಯಾಪಕವಾಗಿ ಜಾರಿಗೊಳಿಸುತ್ತಿದೆ.

ಇನ್ನೊಂದೆಡೆ, ಬಡತನ ಹಾಗೂ ನಿರುದ್ಯೋಗ ಮತ್ತು ಸಾಮಾಜಿಕ ಸಂಕಷ್ಟಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ವೆಚ್ಚವನ್ನು ಕಡಿತಗೊಳಿಸಿ, ಜನರ ಒಳಿತಿಗಾಗಿ ಹಣವನ್ನು ಬಳಸುವ ಬದಲು ಶಾಸಕರ ಹಾಗೂ ಸಚಿವರ ವೇತನಗಳನ್ನು ಅತಿಯಾಗಿ ಹೆಚ್ಚಿಸಲು ಮತ್ತು ಕೋಮುವಾದ ಹಾಗೂ ಜಾತಿವಾದಕ್ಕೆ ಕುಮ್ಮಕ್ಕು ನೀಡಲು ದುರ್ಬಳಕೆ ಮಾಡಲಾಗುತ್ತಿದೆ. ಜನತೆಯ ಮೇಲೆ ಭಾರಿ ಸಾಲದ ಹೊರೆಯನ್ನು ಬಜೆಟ್ ಮೂಲಕ ಹೇರಲಾಗಿದೆ.

ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀಕರಿಸುವ ಕೆಲಸವು ಒಂದೆಡೆ ಉದ್ಯೋಗಾವಕಾಶಗಳನ್ನು ಕಡಿತಗೊಳಿಸಿದರೇ ಸಾಮಾಜಿಕ ನ್ಯಾಯದ ಭಾಗವಾಗಿ ದಲಿತರು, ಹಿಂದುಳಿದವರು ಮಹಿಳೆಯರು ಮತ್ತಿತರೆ ಸಮುದಾಯಗಳಿಗೆ ದೊರೆಯುತ್ತಿದ್ದ ಮೀಸಲಾತಿಯನ್ನು ನಾಶ ಮಾಡಲಾಗುತ್ತಿದೆ.

ಅದು ಮಾತ್ರವೇ ಅಲ್ಲಾ! ಹಿಜಾಬ್ ವಿವಾದವನ್ನು ದೇಶದ ಇತರೆ ರಾಜ್ಯಗಳ ಅನುಭವದಂತೆ ಅದನ್ನು ಸೌಹಾರ್ಧಯುತವಾಗಿ ಪರಿಹರಿಸಿ ತಾರತಮ್ಯವಿಲ್ಲದ ಸಾರ್ವತ್ರಿಕ ಶಿಕ್ಷಣದ ಹಕ್ಕನ್ನು ಖಾತರಿಪಡಿಸದೇ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣ ಮುಂದುವರೆಸಲಾಗದಂತಹ ದುಸ್ಥಿತಿ ನಿರ್ಮಿಸಿದೆ. ಅದೇ ರೀತಿ, ಜನತೆಯನ್ನು ಧರ್ಮದ ಹಾಗೂ ಜಾತಿಯ ಆಧಾರದಲ್ಲಿ ಒಡೆದಾಳಲು ನೆರವು ನೀಡುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ವಿಧೇಯಕವನ್ನು ಜಾರಿಗೊಳಿಸಲು ಮುಂದಾಗುತ್ತಿದೆ.

ರಾಜ್ಯ ಸರಕಾರದ ಈ ಎಲ್ಲಾ ದುರ್ನಡೆಗಳನ್ನು ಎಡ ಮತ್ರು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳು ಬಲವಾಗಿ ಖಂಡಿಸುತ್ತವೆ ಮತ್ತು ಈ ಕೂಡಲೇ ಈ ಎಲ್ಲಾ ಲೂಟಿ ಕೋರ ಕಾರ್ಪೊರೇಟ್ ಕಂಪನಿಗಳ ಪರವಾದ, ಜನವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆಯುವಂತೆ ಮರಳಿ ಒತ್ತಾಯಿಸುತ್ತವೆ.

ಸಂಯುಕ್ತ ಹೋರಾಟ – ಕರ್ನಾಟಕ ಪ್ರತಿಭಟನೆ ಯಶಸ್ವಿಗೆ ಕರೆ:

ಸದರಿ ಕಾಯ್ದೆಗಳನ್ನು ವಾಪಾಸು ಪಡೆಯುವಂತೆ ಒತ್ತಾಯಿಸಿ ಮತ್ತು ರೈತರು, ಕೂಲಿಕಾರರು, ಕಾರ್ಮಿಕರು, ದಲಿತರು ಹಾಗೂ ಮಹಿಳೆಯರ ಹಿತ ರಕ್ಷಿಸುವಂತಹ ಹಕ್ಕೊತ್ತಾಯಗಳನ್ನು ಮಂಡಿಸಿ ರಾಜ್ಯ ಸರಕಾರದ ವಿರುದ್ದ ರಾಜ್ಯದ 50ಕ್ಕೂ ಅಧಿಕ ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಸಂಘ ಸಂಸ್ಥೆಗಳು ಒಗ್ಗೂಡಿ ರಚಿಸಿಕೊಂಡ ಸಂಯುಕ್ತ ಹೋರಾಟ – ಕರ್ನಾಟಕವು ಇದೆ 21.03.2022 ರಂದು ನಡೆಸಲಿರುವ ವಿಧಾನಸೌಧದ ಮುಂದಿನ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆಯನ್ನು ನಡೆಸಲು ನಿರ್ಧರಿಸಿದೆ. ಸದರಿ ಪ್ರತಿಭಟನಾ ಕಾರ್ಯಕ್ರಮವನ್ನು ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳು ಬೆಂಬಲಿಸುತ್ತವೆ ಮಾತ್ರವಲ್ಲಾ, ಅದರ ಯಶಸ್ವಿಗಾಗಿ ನಮ್ಮ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿವೆ.

ಅದೇ ರೀತಿ, ರಾಜ್ಯದ ನಾಗರೀಕರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಲು ಮತ್ತು ಜನ ವಿರೋಧಿ ನೀತಿಗಳನ್ನು ಪ್ರತಿರೋಧಿಸಲು ಕರೆ ನೀಡುತ್ತವೆ.

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)

ಸಾತಿ ಸುಂದರೇಶ್, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ

ಕೆ‌. ಉಮಾ, ರಾಜ್ಯ ಕಾರ್ಯದರ್ಶಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌)-ಎಸ್‌ಯುಸಿಐ(ಸಿ)

ಕ್ಲಿಫ್ಟನ್ ರೋಜಾರಿಯೋ, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್‌ವಾದಿ -ಲಿಬರೇಷನ್)-ಸಿಪಿಐ(ಎಂಎಲ್‌)

ಜಿ.ಆರ್. ಶಿವಶಂಕರ್, ರಾಜ್ಯ ಕಾರ್ಯದರ್ಶಿ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ

ಚಾಮರಸ ಮಾಲೀ ಪಾಟೀಲ, ರಾಜ್ಯ ಅಧ್ಯಕ್ಷರು, ಸ್ವರಾಜ್ ಇಂಡಿಯಾ

ಮೋಹನ್ ರಾಜ್, ರಾಜ್ಯ ಅಧ್ಯಕ್ಷರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐ

Leave a Reply

Your email address will not be published. Required fields are marked *