ಪಕ್ಷದ ಹಿರಿಯ ಮುಂದಾಳು ಮತ್ತು ತೆಲಂಗಾಣದ ಜನತಾ ಸಶಸ್ತ್ರ ಹೋರಾಟದ ಪವಾಡ ಸದೃಶ ಹೋರಾಟಗಾರ್ತಿ ಕಾಮ್ರೇಡ್ ಮಲ್ಲು ಸ್ವರಾಜ್ಯಂ ಇನ್ನಿಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಾಲಿಟ್ ಬ್ಯೂರೋ ಆಳವಾದ ದುಃಖವ್ಯಕ್ತಪಡಿಸಿದೆ. ಅವರಿಗೆ 91 ವರ್ಷವಾಗಿತ್ತು.
ಮಲ್ಲು ಸ್ವರಾಜ್ಯಂ ಚಿಕ್ಕ ವಯಸ್ಸಿನಲ್ಲೇ ನಿಜಾಮರ ಊಳಿಗಮಾನ್ಯ ದಬ್ಬಾಳಿಕೆಯ ವಿರುದ್ಧ ಚಳವಳಿಗೆ ಧುಮುಕಿದರು. ಅವರು 1946 ರಿಂದ 1951ರವರೆಗೆ ತೆಲಂಗಾಣ ಸಶಸ್ತ್ರ ಹೋರಾಟದಲ್ಲಿ ಭಾಗವಹಿಸಿದರು. ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿಯನ್ನು ಪಡೆದ ಅವರು ಹೋರಾಟದಲ್ಲಿ ಭಾಗವಹಿಸಲು ಅನೇಕ ಮಹಿಳೆಯರಿಗೆ ಸ್ಫೂರ್ತಿ ನೀಡಿದರು.
ತುಳಿತಕ್ಕೊಳಗಾದ ಜನರ ಪರವಾಗಿ ನಿಲ್ಲಲು ಅವರು ಅನೇಕ ಸಾಮಾಜಿಕ ಕಟ್ಟಳೆಗಳನ್ನು ಮುರಿದರು ಮತ್ತು ಏಳು ದಶಕಗಳಿಗೂ ಹೆಚ್ಚು ಕಾಲ ಕಮ್ಯುನಿಸ್ಟ್ ಚಳವಳಿಗೆ ಸೇವೆಯನ್ನು ಮುಂದುವರೆಸಿದರು.
ಅವರು ಸಂಯುಕ್ತ ಆಂಧ್ರಪ್ರದೇಶದ ವಿಧಾನಸಭೆಗೆ ಎರಡು ಬಾರಿ ಆಯ್ಕೆಯಾದರು. ಅವರು 2002ರಲ್ಲಿ ಪಕ್ಷದ ಕೇಂದ್ರ ಸಮಿತಿಗೆ ಆಯ್ಕೆಯಾದರು ಮತ್ತು ನಂತರ ವಿಶೇಷ ಆಹ್ವಾನಿತರಾದರು.
ಅವರ ಕ್ರಾಂತಿಕಾರಿ ಜೀವನಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತ ಪೊಲಿಟ್ ಬ್ಯೂರೋ ಅವರ ಕುಟುಂಬದ ಸದಸ್ಯರಿಗೆ ತನ್ನ ಹೃತ್ಪೂರ್ವಕ ಸಂತಾಪವನ್ನು ತಿಳಿಸಿದೆ.