ಕಳೆದ ಆರು ದಿನಗಳಲ್ಲಿ ಐದು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ಗೆ ಈಗ ರೂ. 3.75 ಹೆಚ್ಚು ಬೆಲೆ ತೆರಬೇಕಾಗಿದೆ. ಇದರೊಂದಿಗೆ ಅಡುಗೆ ಅನಿಲ ಮತ್ತು ಇತರೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೂ ಏರಿಕೆಯಾಗಿದೆ. ಇದು ಈಗಾಗಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಬಡತನ ಮತ್ತು ಹಸಿವಿನಿಂದ ಬಳಲುತ್ತಿರುವ ಜನರ ಜೀವನೋಪಾಯದ ಮೇಲೆ ಅಸಹನೀಯ ಹೊರೆಗಳನ್ನು ಹೇರುತ್ತಿದೆ.
ಮೋದಿ ಸರ್ಕಾರವು ತನಗೆ ಅಸಾಧಾರಣ ಕೇಂದ್ರೀಯ ಆದಾಯಗಳನ್ನು ತಂದು ಕೊಡುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಭಾರೀ ಸೆಸ್/ಸರ್ಚಾರ್ಜ್ಗಳನ್ನು ತಕ್ಷಣವೇ ರದ್ದುಪಡಿಸಬೇಕು ಮತ್ತು ಜನರಿಗೆ ಪರಿಹಾರವನ್ನು ಒದಗಿಸಲು ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಒತ್ತಾಯಿಸಿದೆ.
ಏಪ್ರಿಲ್ 2, 2022ರಂದು ಈ ಅಸಹನೀಯ ಬೆಲೆ ಏರಿಕೆಗಳ ವಿರುದ್ಧ ಪ್ರತಿಭಟನಾ ಕಾರ್ಯಾಚರಣೆಗಳನ್ನು ಸಂಘಟಿಸಬೇಕು ಎಂದು ಪಕ್ಷದ ಎಲ್ಲಾ ಘಟಕಗಳಿಗೆ ನವದೆಹಲಿಯಲ್ಲಿ ಮಾರ್ಚ್ 25 ಮತ್ತು 26ರಂದು ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿಯು ಕರೆ ನೀಡಿದೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಕೋಮು ಧ್ರುವೀಕರಣವನ್ನು ಬಡಿದೆಬ್ಬಿಸಲು ಬಳಸಲಾಗುತ್ತಿದೆ
1990ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಉಗ್ರಗಾಮಿಗಳ ಕೊಲೆಗಡುಕ ಪ್ರಹಾರಗಳನ್ನು ಸಿಪಿಐ(ಎಂ) ಸತತವಾಗಿ ಬಲವಾಗಿ ಖಂಡಿಸಿತ್ತು. ಇಂತಹ ಉಗ್ರಗಾಮಿ ದಾಳಿಗಳನ್ನು ಆರಂಭದಲ್ಲೇ ಎದುರಿಸಿದವರಲ್ಲಿ ಒಬ್ಬರಾದ ಸಿಪಿಐ(ಎಂ) ಮುಖಂಡ ಮೊಹಮ್ಮದ್ ಯೂಸುಫ್ ತಾರಿಗಾಮಿ 1989ರ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಇದನ್ನು ಎದುರಿಸಿದ್ದರು. ಕಾಶ್ಮೀರಿ ಪಂಡಿತರು ಪಟ್ಟ ಪಾಡುಗಳೊಂದಿಗೆ ಸೌಹಾರ್ದ ವ್ಯಕ್ತಪಡಿಸಿರುವ ಸಿಪಿಐ(ಎಂ) ಈ ಹಿಂದೆ ಮತ್ತು ನಂತರವೂ ಅವರ ಕಲ್ಯಾಣ ಮತ್ತು ಪುನರ್ವಸತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೈಗೆತ್ತಿಕೊಂಡಿತ್ತು.
ಆದಾಗ್ಯೂ, ಈ ಸಂಕಟವನ್ನು ಬಿಂಬಿಸುವ ಚಲನಚಿತ್ರವನ್ನು ಕೋಮು ಧ್ರುವೀಕರಣವನ್ನು ಬಡಿದೆಬ್ಬಿಸಲು ಬಳಸಲಾಗುತ್ತಿದೆ, ಇದು ಅನಿವಾರ್ಯವಾಗಿಯೇ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಮತ್ತು ಹಿಂಸಾಚಾರದ ವಾತಾವರಣ ಹೆಚ್ಚುತ್ತ ಹೋಗಲು ಕಾರಣವಾಗುತ್ತದೆ. ಇದು ಭಾರತದ ಐಕ್ಯತೆ ಮತ್ತು ಸಮಗ್ರತೆ ಮತ್ತು ಜನರ ಕಲ್ಯಾಣದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.. ಇದು ಈಗಾಗಲೇ ತೀಕ್ಷ್ಣಗೊಳ್ಳುತ್ತಿರುವ ಕೋಮು ವಿಭಜನೆಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.
ಉಗ್ರವಾದದ ವಿರುದ್ಧದ ಹೋರಾಟವು ಎಲ್ಲಾ ಭಾರತೀಯರ ಒಗ್ಗಟ್ಟಿನ ಹೋರಾಟವಾಗಿದೆ ಎಂದು ಪುನರುಚ್ಚರಿಸುತ್ತ ಸಿಪಿಐ(ಎಂ) ಕೇಂದ್ರಸಮಿತಿಯು, ಉಗ್ರಗಾಮಿ ಶಕ್ತಿಗಳು ನಡೆಸಿದ ದೌರ್ಜನ್ಯಗಳಿಂದ ಎಲ್ಲ ಸಮುದಾಯಗಳು ಸಂಕಟಪಟ್ಟಿವೆ ಎನ್ನುತ್ತ ಉಗ್ರಗಾಮಿ ಹಿಂಸಾಚಾರದ ವಿರುದ್ಧದ ಈ ಹೋರಾಟದಲ್ಲಿ ಒಗ್ಗೂಡುವುದು ಅಗತ್ಯವಾಗಿದೆಯೇ ಹೊರತು ವಿಭಜನೆಗೊಳ್ಳುವದಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಪಶ್ಚಿಮ ಬಂಗಾಳ: ಖಾಸಗಿ ಕಲ್ಲಿದ್ದಲು ಗಣಿ ಪ್ರಸ್ತಾಪವನ್ನು ರದ್ದು ಮಾಡಬೇಕು
ಬೀರ್ಭೂಮ್ ಜಿಲ್ಲೆಯ ದೇವೊಚಾ ಪಚಮೈಯಲ್ಲಿ ಟಿಎಂಸಿ ರಾಜ್ಯ ಸರ್ಕಾರವು ಬಹಳಷ್ಟು ದೊಡ್ಡ ಬುಡಕಟ್ಟು ಜನಸಂಖ್ಯೆಯನ್ನು ಒಳಗೊಂಡಂತೆ ಸ್ಥಳೀಯ ಸಮುದಾಯಗಳನ್ನು ಖಾಸಗಿ ಓಪನ್ ಕಾಸ್ಟ್ ಕಲ್ಲಿದ್ದಲು ಗಣಿಗಾಗಿ ಅವರ ಮನೆಮಾರುಗಳಿಂದ ಸ್ಥಳಾಂತರಿಸಲು ಪ್ರಯತ್ನಿಸುತ್ತಿದೆ. ಇದಕ್ಕೂ ಮುನ್ನ ಕೋಲ್ ಇಂಡಿಯಾ ಲಿಮಿಟೆಡ್ ಈ ಪರಿಯೋಜನೆಯು ಕಾರ್ಯವಾಸಿಯಲ್ಲ ಎಂದು ಘೋಷಿಸಿತ್ತು. ಇದು ಉದ್ಯೋಗದ ವಿಷಯದಲ್ಲಿ ಅಥವಾ ಪ್ರದೇಶದ ಒಟ್ಟಾರೆ ಅಭಿವೃದ್ಧಿಗಾಗಲೀ ಯಾವುದೇ ಪ್ರಯೋಜನವನ್ನು ತರುವುದಿಲ್ಲ. ಬದಲಾಗಿ, ಇದು ಪರಿಸರ ಮತ್ತು ವಾಸಸ್ಥಳಗಳನ್ನು ನಾಶಪಡಿಸುತ್ತದೆ. ಈ ನಡೆಯು ಸರ್ಕಾರದ ಯೋಜನೆಯ ವಿರುದ್ಧ ಒಂದು ಅತ್ಯಂತ ವಿಶಾಲವಾದ ನೆಲೆಯ ಐಕ್ಯ ಚಳುವಳಿ ಎದ್ದು ಬರುವಂತೆ ಮಾಡಿದೆ. ಪ್ರಜಾಪ್ರಭುತ್ವವಾದಿ ಶಕ್ತಿಗಳು ಈ ಪರಿಯೋಜನೆಯನ್ನು ನಿಸ್ಸಂದಿಗ್ಧವಾಗಿ ಕೈಬಿಡಬೇಕು ಎಂದು ಆಗ್ರಹಿಸುತ್ತಿವೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.
ಘೋರ ಬೀರ್ಭೂಮ್ ಹತ್ಯೆಗಳು
ಅಕ್ರಮ ಮರಳು ಗಣಿಗಾರಿಕೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳ ನಡುವಿನ ನಂಟು ಸ್ಥಳೀಯ ಟಿಎಂಸಿ ಅಧಿಕಾರ-ಶ್ರೇಣಿ ಮತ್ತು ಪೊಲೀಸ್ ಆಡಳಿತದಲ್ಲಿ ಮಾಫಿಯಾವನ್ನು ಗಟ್ಟಿಗೊಳಿಸಿದೆ. ರಾಂಪುರ್ ಹಾಟ್ ಬ್ಲಾಕ್ನ ಬೊಗ್ತುಯಿ ಗ್ರಾಮದಲ್ಲಿ ಹಲವಾರು ಗುಡಿಸಲುಗಳನ್ನು ಸುಟ್ಟುಹಾಕಿದ ಮತ್ತು ಹತ್ತು ಜನರನ್ನು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳನ್ನು, ಸುಟ್ಟುಹಾಕಿದ ಹೀನಕೃತ್ಯದಲ್ಲಿ ಇದು ಬಯಲಾಗಿದೆ.. ಪಂಚಾಯತ್ನ ಸ್ಥಳೀಯ ಟಿಎಂಸಿ ಉಪಮುಖ್ಯಸ್ಥನ ಸಾವು ಮತ್ತು ಈ ಕೊಲೆಗಡುಕ ಪ್ರತೀಕಾರವು ಟಿಎಂಸಿ ಇದರಲ್ಲಿ ಎಷ್ಟು ಆಳವಾಗಿ ತೊಡಗಿಕೊಂಡಿದೆ ಮತ್ತು ಹೇಗೆ ಪೊಲೀಸರು ಈ ಬಗ್ಗೆ ಕಣ್ಣುಮುಚ್ಚಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.
ಅನೀಸ್ ಖಾನ್ ಕೊಲೆ-ತಕ್ಷಣವೇ ನ್ಯಾಯ ಒದಗಿಸಬೇಕು
ಹೌರಾ ಜಿಲ್ಲೆಯ ಅಮ್ತಾ ಬ್ಲಾಕ್ನ ಶಾರದಾ ಗ್ರಾಮದಲ್ಲಿ ಪೋಲೀಸರಿಂದ ಅಲಿಯಾ ವಿಶ್ವವಿದ್ಯಾಲಯದ ಅನೀಸ್ ಖಾನ್ ಎಂಬ ವಿದ್ಯಾರ್ಥಿ ಹೋರಾಟಗಾರನ ಹತ್ಯೆ ಯಾಗಿರುವುದನ್ನು ಖಂಡಿಸಿದ ಕೇಂದ್ರ ಸಮಿತಿಯು ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ತಕ್ಷಣವೇ ನ್ಯಾಯವನ್ನು ನೀಡಬೇಕು ಎಂದು ಆಗ್ರಹ ಪಡಿಸಿತು.
ಸಿಪಿಐ(ಎಂ)ನ 23ನೇ ಮಹಾಧಿವೇಶನ
ಏಪ್ರಿಲ್ 6 ರಿಂದ 10, 2022ರ ವರೆಗೆ ಕೇರಳದ ಕಣ್ಣೂರಿನಲ್ಲಿ ನಡೆಯಲಿರುವ ಪಕ್ಷದ 23 ನೇ ಮಹಾಧಿವೇಶನದ ಪರಿಗಣನೆಗೆ ಮಂಡಿಸಬೇಕಾದ ಕರಡು ರಾಜಕೀಯ-ಸಂಘಟನಾ ವರದಿಯನ್ನು ಕೇಂದ್ರ ಸಮಿತಿಯು ಅಂಗೀಕರಿಸಿತು.