ಬಲಿಪೀಠವಾದ ಭ್ರಷ್ಟ ಸರ್ಕಾರ

ಸರಕಾರ ಅಭಿವೃದ್ಧಿ ಯೋಜನೆಗಳ ಜಾರಿಯಲ್ಲಿ ಸಾರ್ವಜನಿಕ ಕಾಮಗಾರಿಗಳನ್ನು ಗುತ್ತಿಗೆ ನೀಡುವುದು ಪ್ರಮುಖ ವಿಧಾನವಾಗಿದೆ. ಸಾವಿರಾರು ಕೋಟಿ ರೂ.ಗಳ ‘ಆದಾಯ’ ತರುವ ಲೋಕೋಪಯೋಗಿ, ಪಂಚಾಯತ್ ಮುಂತಾದ ಇಲಾಖೆಗಳನ್ನು ಪಡೆಯಲು ಸಚಿವಾಕಾಂಕ್ಷಿಗಳಲ್ಲಿ ವಿಪರೀತ ಸ್ಪರ್ಧೆ ಮತ್ತು ಪಕ್ಷಪಾತ ಇದ್ದೇ ಇರುತ್ತದೆ. ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳನ್ನು ತಮ್ಮವರಿಗೇ ಗುತ್ತಿಗೆ ಕೊಡಲು ಬಯಸುತ್ತಾರೆ. ಸರಕಾರದಲ್ಲಿ ಯಾವುದೇ ಕಾಮಗಾರಿಗಳನ್ನು ಗುತ್ತಿಗೆ ಕೊಡುವಾಗ ಖಚಿತವಾದ ಹಲವಾರು ರೀತಿ ನೀತಿ ನಿಯಮಗಳೇನೋ ಇವೆ. ಆದರೆ ವಾಸ್ತವದಲ್ಲಿ ಲಿಖಿತ ಆದೇಶ ಇಲ್ಲದಿದ್ದರೂ ಕಾಮಗಾರಿಗಳನ್ನು ನಡೆಸುವುದು ನಂತರದಲ್ಲಿ ಅದರ ಬಿಲ್ ಮೊತ್ತವನ್ನು ಪಡೆಯುವ ಪದ್ಧತಿ  ಇರುವುದನ್ನು ಎಲ್ಲಾ ಸರಕಾರಗಳಲ್ಲಿದ್ದ ಸಚಿವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಒಂದೆಡೆ, ಮುಖ್ಯವಾಗಿ, ಇಲಾಖಾ ಮಂತ್ರಿ, ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಅಲಿಖಿತವಾದ ಒಪ್ಪಂದಗಳು ಇರುತ್ತವೆ. ಕಾಮಗಾರಿಗಳ ಹಣವನ್ನು ಪಡೆಯಲು ಒಂದು ಒಳ ತಿಳುವಳಿಕೆಯನ್ನು ಕಾಯ್ದುಕೊಳ್ಳುವುದು ಅವರಿಗೆ ಅನಿವಾರ್ಯವಾಗಿರುತ್ತದೆ. ಹೀಗಾಗಿ ಸಚಿವರು, ಅವರ ಆಪ್ತರುಗಳೇ ಇಂತಹ ಗುತ್ತಿಗೆಗಳನ್ನು ಪಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಅನೈತಿಕ ದಂಧೆ ಒಪ್ಪಿತ ನಿಯಮದಂತೆ ನಡೆಯುತ್ತಿರುವುದೇ ಇಂದಿನ ನಮ್ಮ ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಅಧಃಪತನವನ್ನು ಎತ್ತಿ ತೋರಿಸುತ್ತದೆ. ನಾಯಕರನ್ನು ನಂಬಿ ಬದುಕು ಕಟ್ಟಿಕೊಳ್ಳಲು ಯತ್ನಿಸಿದವರು ಹೆಣವಾಗುತ್ತಿರುವ ದುರಂತ ಪ್ರಕರಣಗಳು ರಾಜ್ಯದಲ್ಲಿ ಮರು ಕಳಿಸುತ್ತಿವೆ.

`ನ ಖಾವೂಂಗಾ ಖಾನೇ ದೂಂಗಾ’ ಎಂದು ದೊಡ್ಡ ಗಂಟಲಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರವರ ಆಡಳಿತದ ಅಡಿಯಲ್ಲಿಯೇ ಕೇಂದ್ರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಭ್ರಷ್ಟ ಹಗರಣಗಳು ಪುಂಖಾನುಪುಂಖವಾಗಿ ಹೊರಬರುತ್ತಲೇ ಇವೆ. ಕರ್ನಾಟಕದಲ್ಲಿ ಗುತ್ತಿಗೆ ಕಾಮಗಾರಿಗಳ ಮೊತ್ತ ಪಡೆಯಲು ಅದರ ಶೇ. 40ರಷ್ಟು ಹಣವನ್ನು ಮಂತ್ರಿ, ಮಹೋದಯರಿಗೆ ಲಂಚವಾಗಿ ನೀಡಬೇಕೆಂಬ ಅಲಿಖಿತ ನಿಯಮವನ್ನು ವಿಧಿಸಲಾಗಿದೆ. ಅಷ್ಟು ಹಣವನ್ನು ಕೊಡದೇ ಯಾವುದೇ ಬಿಲ್ಲುಗಳೂ ಪಾಸಾಗುತ್ತಿಲ್ಲ. ಆದ್ದರಿಂದ ಕೂಡಲೇ ಮಧ್ಯಪ್ರವೇಶಿಸಿ ಹಣ ಕೊಡಿಸಿ ಎಂದು ಕೇಳಿ ವಿವರವಾದ ದೂರನ್ನು ಕರ್ನಾಟಕದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ನೇರವಾಗಿ ಪ್ರಧಾನಿಗೆ ಪತ್ರ ಬರೆದು ಕ್ರಮವಹಿಸುವಂತೆ ಈ ಹಿಂದೆಯೇ ಕೋರಿದ್ದರು. ಈ ಬಗ್ಗೆ ಪ್ರಧಾನಿಯವರ ದೀರ್ಘ ಮೌನದ ಅರ್ಥವೇನು? ಹಿಂದಿದ್ದ ಕಾಂಗ್ರೆಸ್, ಜೆಡಿಎಸ್ ಸರ್ಕಾರ ಶೇ. 10ರ ಸರ್ಕಾರ ಎಂದು ಹೇಳಿದ್ದ ಮೋದಿಯವರು ತಮ್ಮ ಆಡಳಿತದಲ್ಲಿ ಅದು ಶೇ. 40ಕ್ಕೆ ಹೆಚ್ಚಿಸಿರುವುದು ಪ್ರಗತಿಯ ಸೂಚ್ಯಂಕವೇ? ಇಲ್ಲಿ ಪ್ರಧಾನಿಯವರ ಮೌನ ಸಮ್ಮತಿ ತಿಳಿಯದ್ದೇನಲ್ಲ.

ಇದೀಗ ಪಂಚಾಯಿತಿ ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಮಾಡಿದ ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಎನ್ನಲಾಗುವ ಕೊಲೆ ಈ ಸರ್ಕಾರದ ಅಮಾನವೀಯ ಮತ್ತು ಭ್ರಷ್ಟತೆಯ ಕರಾಳ ಮುಖವನ್ನು ತೆರೆದು ತೋರಿಸಿದೆ. ಮಾಡಲಾದ ಕಾಮಗಾರಿಯ ಸುಮಾರು 4 ಕೋಟಿ ರೂ.ಗಳ ಬಿಲ್ಲಿನ ಹಣ ಪಾವತಿಸಲು ಶೇ. 40 ಲಂಚವಾಗಿ ಕೊಟ್ಟರೆ ಮಾತ್ರ ಹಣವನ್ನು ಬಿಡುಗಡೆ ಮಾಡುವುದಾಗಿ ಹಾಕಲಾದ ಷರತ್ತಿನ ಉರುಳು ಅವರನ್ನು ಬಲಿ ತೆಗೆದುಕೊಂಡಿದೆ. ಇದನ್ನು ಸ್ವಃತ ಸಚಿವ ಕೆ.ಎಸ್. ಈಶ್ವರಪ್ಪ ನವರೇ ಕೇಳಿರುವುದಾಗಿ ಸಾವಿಗೀಡಾದ ಸಂತೋಷ್ ಪಾಟೀಲ್ ಅವರು ಬರೆದ ಡೆತ್ ನೋಟ್ ನಲ್ಲಿದೆ. ಸಾಲ-ಸೋಲ ಮಾಡಿ ಕಾಮಗಾರಿಗಳನ್ನು ನಡೆಸಿರುವ ಅವರು ಶೇ 40 ಎಂದರೆ ಸುಮಾರು 1.6 ಕೋಟಿ ಯಷ್ಟು ಹಣ ಲಂಚವಾಗಿ ನೀಡಿದರೆ ಉಳಿಯುವುದಾದರೂ ಏನು? ಅದನ್ನು ಹೊಂದಿಸುವುದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಕಾಡಿದೆ. ಸಚಿವ ಈಶ್ವರಪ್ಪನವರು ಎಳ್ಳಷ್ಟು ಕರಗದಿರುವಾಗ ತೀರಾ ಅನಿವಾರ್ಯವಾಗಿ ವಸ್ತುಸ್ಥಿತಿ ವಿವರಿಸಿ ತನ್ನ ನೆಚ್ಚಿನ ಪ್ರಧಾನಮಂತ್ರಿಗಳ ಗಮನಕ್ಕೂ ಪತ್ರಮುಖೇನ ತಂದಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಲಿ, ಪ್ರಧಾನಿಯಾಗಲೀ ಕ್ರಮ ವಹಿಸದೇ ಇರುವಾಗ, ದೂರು ಕೊಟ್ಟ ತನ್ನ ಮೇಲೆಯೇ ಕೇಸು ದಾಖಲಾದ ಹಿನ್ನೆಲೆಯಿಂದಾಗಿ ದಿಕ್ಕುಕಾಣದೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ತೆರೆಯ ಮರೆಯಲ್ಲಿ ನಡೆದು ಹೋಗುವ ಇಂತಹ ಪ್ರಸಂಗಗಳು ಜಗಜ್ಜಾಹೀರಾಗಿ ಹೋಗಿರುವಾಗ ಸಂಭವಿಸಿರುವ ಸಂತೋಷ್ ಅವರ ಸಾವು ಆತ್ಮಹತ್ಯೆಯೋ ಕೊಲೆಯೂ ಎನ್ನುವ ಪ್ರಶ್ನೆ ಹಾಕಿದೆ. ತನ್ನ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ಸಂತೋಷ್ ಪಾಟೀಲನ ಸಂಕಟವನ್ನು ಕಿವಿಗೇ ಹಾಕಿಕೊಳ್ಳದ ಬಿಜೆಪಿಯದ್ದು ಕ್ರಿಮಿನಲ್ ವರ್ತನೆ. ಇವರ ಹಿಂದುತ್ವ, ದೇಶಪ್ರೇಮ ಎನ್ನುವುದು ಧನದಾಹದ ಲೂಟಿಯಲ್ಲಿ ಗಿಲೀಟಿನ ಮಾತುಗಳು, ಮೂರುಕಾಸಿಗೂ ಬೆಲೆ ಇಲ್ಲದ್ದು ಎನ್ನುವುದನ್ನು ನಾಯಕರು ನಿದರ್ಶಿಸಿದ್ದಾರೆ.

ಪ್ರಕರಣ ಇಷ್ಟು ಸ್ಪಷ್ಟವಾಗಿರುವಾಗ ಈಶ್ವರಪ್ಪನವರ ಭಾಗಿತ್ವ ಆತ್ಮಹತ್ಯೆಗೂ ಮೊದಲು ಸಂತೋಷ್ ಬರೆದು ಕಳುಹಿಸಿದ ಸಂದೇಶ ಸಂದರ್ಭಗಳ ಸಾಕ್ಷ್ಯ ಈಶ್ವರಪ್ಪನವರತ್ತಲೇ ಬೆಟ್ಟು ಮಾಡುತ್ತಿವೆ. ಆದರೆ ಆರೋಪ ಬಂದಾಗ ಈಶ್ವರಪ್ಪನವರು ನಿರಾಕರಿಸಿದ್ದು ಮಾತ್ರವಲ್ಲ, ಕಾಮಗಾರಿಯೇ ನಡೆದಿಲ್ಲ ಎನ್ನುವ ಮಟ್ಟಕ್ಕೆ ಹೋಗಿದ್ದು ಭಂಡತನ ಪರಮಾವಧಿ. ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಪ್ರಕರಣದ ಪ್ರತಿ ವಿವರಗಳು ತಮಗೆ ಗೊತ್ತು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಿರುವಾಗ ವಾಟ್ಸಪ್ ಸಂದೇಶಕ್ಕೆ ಸಾಕ್ಷಿ ಕೇಳುವುದು ವಂಚಕತನವಾಗಿದೆ.

ಉಡುಪಿಯಲ್ಲಿ ಸಂತೋಷ್ ಸಾವು ಮತ್ತು ಇದಕ್ಕೆ ಈಶ್ವರಪ್ಪನವರಿಗಿದ್ದ ನಂಟು ಹೊರ ಬರುತ್ತಿರುವಂತೆ ರಾಜೀನಾಮೆ ಕೊಟ್ಟು ವಸ್ತುನಿಷ್ಠ ತನಿಖೆಗೆ ತನ್ನನ್ನು ಒಡ್ಡಿಕೊಳ್ಳಬೇಕಿತ್ತು. ಅಂತಹ ನೈತಿಕ ಸೂಕ್ಷ್ಮತೆಯನ್ನು ತೋರಿಸದಿರುವುದು ರಾಜೀನಾಮೆ ನೀಡಲು ಸಾರ್ವಜನಿಕ ಒತ್ತಡ ಹೆಚ್ಚಾದ ಬಳಿಕವೂ ಅದಕ್ಕೆ ತಲೆಬಾಗದೆ ಇರುವುದು ಖಂಡನೀಯ. ಪ್ರಕರಣದ ವಿವರಗಳು ಇನ್ನಷ್ಟು ಬಯಲಾಗುವ ಮತ್ತು ಸಮರ್ಥಿಸಿಕೊಳ್ಳಲು ಅಸಾಧ್ಯವೆನಿಸುವ ಸ್ಥಿತಿ ಬಂದಾಗ ಅನಿವಾರ್ಯವಾಗಿ ರಾಜೀನಾಮೆ ಕೊಡಲು ಹೈಕಮಾಂಡ್ ಸೂಚಿಸಿ ಕೆಳಗಿಳಿಸಬೇಕಾಗಿ ಬಂತು. ವಿಚಿತ್ರವೆಂದರೆ ಈಶ್ವರಪ್ಪನವರ ಒಳಹೊರಗು ಎಲ್ಲವೂ ಗೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂತಹ ಭ್ರಷ್ಟ ನೈತಿಕ ಅಧಃಪತನದ ಸಮರ್ಥನೆ ಮಾಡಿಕೊಳ್ಳಲು ಮುಂದಾಗಿದ್ದು ಜವಾಬ್ದಾರಿಯುತ ಸ್ಥಾನ ಹೊಂದಿರುವ ಅವರ ವ್ಯಕ್ತಿತ್ವಕ್ಕೆ ಕಳಂಕ ತಂದಿದೆ. ರಾಜೀನಾಮೆ ಕೊಡುವಾಗಲೂ ಎಳ್ಳಷ್ಟೂ ಅಳುಕು ತೋರದ ಈಶ್ವರಪ್ಪ ವಿಚಾರಣೆ ಬಳಿಕ ಆರೋಪದಿಂದ ಮುಕ್ತರಾಗುವುದಾಗಿ ವಿಚಾರಣೆಗೆ ಮೊದಲೇ ಭರವಸೆಯ ತೀರ್ಪು ನೀಡುವ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಈ ಪ್ರಕರಣವನ್ನು ಅಧಿಕಾರ ಬಳಸಿ ಮುಚ್ಚಿಹಾಕುವ ಹವಣಿಕೆ ಇರುವುದನ್ನು ಬಯಲುಗೊಳಿಸಿದೆ. ಹೀಗೆ ಪಡೆಯುವ ಶೇ. 40ರಲ್ಲಿ ಇಂತಹವರ ಪಾಲೆಷ್ಟು ಎನ್ನುವ ಪ್ರಶ್ನೆಯೂ ಎದುರಾಗಿದೆ.

ಅನೈತಿಕ ಮಾರ್ಗದಿಂದ ಅಧಿಕಾರಕ್ಕೇರಿದ ಬಿಜೆಪಿಯ ಒಟ್ಟು ಆಡಳಿತದ ಅವಧಿಯಲ್ಲಿ ನಡೆದಿರುವ ಹಗರಣಗಳು, ಭ್ರಷ್ಟತೆಯ ಪ್ರಕರಣಗಳು ಮತ್ತು ಅನೈತಿಕ ವ್ಯವಹಾರಗಳನ್ನು ನೋಡಿದರೆ ಈ ಸರ್ಕಾರ ಕ್ಷಣಾರ್ಧದಲ್ಲಿ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯನ್ನು ಎಂದೋ ಕಳೆದುಕೊಂಡಿದೆ.

ಇತ್ತೀಚೆಗೆ ನಡೆದ 585 ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ಹುದ್ದೆಗಳ ಆಯ್ಕೆಯಲ್ಲಿ ನಡೆದ ಭಾರಿ ಭ್ರಷ್ಟಾಚಾರದ ಹಗರಣದಲ್ಲಿ ಬಿಜೆಪಿಯ ಪ್ರಮುಖ ದಿವ್ಯಾ ಹಾಗರಗಿ ಎಂಬ ನಾಯಕಿ ಕೇಂದ್ರವಾಗಿರುವುದು ಮತ್ತು ಗೃಹ ಸಚಿವರು ಆ ಕುಟುಂಬದೊಂದಿಗೆ ಅತಿ ನಿಕಟ ಸಂಬಂಧ ಇರಿಸಿಕೊಂಡಿರುವುದು ಬೆಚ್ಚಿ ಬೀಳಿಸುವ ಪ್ರಕರಣ. ಇಂತಹ ಭೀಕರ ಭ್ರಷ್ಟಾಚಾರದ ಪ್ರಕರಣವನ್ನು ಗೃಹಮಂತ್ರಿಗಳ ಸುಪರ್ದಿಯಲ್ಲಿಯೇ ವಿಚಾರಣೆ ನಡೆಯುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಮತ್ತು ನ್ಯಾಯ ಸಿಗುವುದು ಅನುಮಾನಾಸ್ಪದ. ಸುಮಾರು 53 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ಇನ್ನೂ ಇತ್ಯರ್ಥ ಕಾಣದ ಮಧ್ಯಪ್ರದೇಶದ ‘ವ್ಯಾಪಂ’ ಹಗರಣ ನಡೆದದ್ದು ಬಿಜೆಪಿಯ ದುರಾಡಳಿತದಲ್ಲಿ ಎನ್ನುವುದನ್ನು ನೆನಪಿಸಿಕೊಳ್ಳಬೇಕು.

ಜೊತೆಯಲ್ಲಿ ಪಶುಸಂಗೋಪನಾ ಇಲಾಖೆಗೆ ಖರೀದಿಸಿದ ಮೇವಿನ ಬಿಲ್ ಪಾವತಿಗೆ ಶೇ. 40 ಕ್ಕೆ ಬೇಡಿಕೆಯಿಟ್ಟು ಸತಾಯಿಸುತ್ತಿರುವುದು ಬೆಳಕಿಗೆ ಬಂದ ಮತ್ತೊಂದು ಪ್ರಕರಣ. ನೀರಾವರಿ ಇಲಾಖೆಯಲ್ಲಿ ನಡೆದ ಕಾಮಗಾರಿಗಳ ಸುಮಾರು 1280 ಕೋಟಿ ರೂ. ಗಳ ಬಿಲ್ ಪಾವತಿ ಆಗದಿರುವ ಹಗರಣ ಮತ್ತೊಂದು. ಈ ಎಲ್ಲವುಗಳ ಬಗ್ಗೆ ತನ್ನ ಈ ದೇಶಭಕ್ತ ಕಾರ್ಯಕರ್ತರ ಅನೈತಿಕತೆ, ಭ್ರಷ್ಟಾಚಾರಗಳ ಬಗ್ಗೆ ಪ್ರಧಾನಿ ಮೌನವಹಿಸಿರುವುದು ಏನನ್ನು ಸೂಚಿಸುತ್ತದೆ? ಮಾತೃಭೂಮಿಗೆ ಸದಾ ವಂದಿಸುವ ಶಾಖೆಯಲ್ಲಿ ಕಲಿಸಿದ ಸಂಸ್ಕೃತಿಯಾದರೂ ಎಂತಹದು?

ಬಿಜೆಪಿ ಆಡಳಿತದಲ್ಲಿ ಪರಿಸ್ಥಿತಿ ಸುಧಾರಿಸುವ ಮಾತಿರಲಿ ಕಾನೂನು ಸುವ್ಯವಸ್ಥೆ ನಾಗರಿಕ ನೆಮ್ಮದಿ ತೀರ ಹದಗೆಟ್ಟು ಹೋಗಿದೆ. ಭ್ರಷ್ಟಾಚಾರ ಸಾಂಸ್ಥಿಕ ಸ್ವರೂಪ ಪಡೆದು ಆಳಕ್ಕಿಳಿದು ತನ್ನ ಬಿಳಲುಗಳನ್ನು ಭದ್ರವಾಗಿ ವಿಸ್ತರಿಸಿಕೊಂಡಿದೆ. ಇದನ್ನು ಕಾಯ್ದುಕೊಳ್ಳುವ ಮತ್ತು ಮತ್ತಷ್ಟು ಭಂಡತನದಿಂದ ಬಲಿಷ್ಠಗೊಳಿಸುವ ವರೆಗೆ ಅಧಿಕಾರದಲ್ಲಿ ಇರಬೇಕು ಎನ್ನುವುದು ಒಪ್ಪಿತ ಮೌಲ್ಯವಾಗಿದೆ! ಎಲ್ಲ ಪ್ರಕರಣಗಳನ್ನು ಗಮನಿಸಿದರೆ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಕರ್ನಾಟಕ ಅತ್ಯಂತ ಅರಾಜಕತೆ ಸರ್ವಾಧಿಕಾರತ್ವ ದತ್ತ, ದಮನಕಾಂಡ ಮೇಲುಗೈ ಸಾಧಿಸಿರುವ ಮಧ್ಯಪ್ರದೇಶ, ಉತ್ತರ ಪ್ರದೇಶಗಳ ಸಾಲಿಗೆ ಸರಿಯುತ್ತದೆ ಎನ್ನುವುದೇ ದೊಡ್ಡ ದುರಂತ.

ಸಂತೋಷ್ ಪಾಟೀಲರ ಸಾವಿನ ಬಗ್ಗೆ ಆಳವಾದ ತನಿಖೆ ನಡೆಯಲೇಬೇಕು ಈಶ್ವರಪ್ಪನವರ ಕೇವಲ ರಾಜೀನಾಮೆ ಅವರು ಎಸಗಿದ್ದಾರೆ ಎನ್ನಲಾಗುವ ಅಪರಾಧಕ್ಕೆ ಶಿಕ್ಷೆಯೇನಲ್ಲ. ಕೂಡಲೇ ಅವರನ್ನು ಬಂಧಿಸಿ ನಿಷ್ಠುರ, ನ್ಯಾಯಾಂಗ ತನಿಖೆ ನಡೆಸಬೇಕು. ಇಂತಹವರು ಅನಿವಾರ್ಯವಾಗಿ ರಾಜೀನಾಮೆ ಕೊಡುವ ಮೊದಲೇ ಸಂಪುಟದಿಂದ ಹೊರ ದಬ್ಬಿದ್ದರೆ ಮುಖ್ಯಮಂತ್ರಿ ಬೊಮ್ಮಾಯಿ ಯವರ ಕುಸಿದು ಹೋಗಿರುವ ಮಾನ ಸ್ವಲ್ಪವಾದರೂ ಉಳಿಯುತ್ತಿತ್ತು. ಆದರೆ ಅಂತಹ ನೈತಿಕ ಸೂಕ್ಷ್ಮತೆ, ಸಾರ್ವಜನಿಕ ದನಿಗೆ ಮಾನ್ಯತೆ ನೀಡುವುದನ್ನು ಈ ಭಂಡ ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವೇ? ಈ ದುರಾಡಳಿತಕ್ಕೆ ಇನ್ನೆಷ್ಟು ಜನ ಬಲಿಯಾಗಬೇಕು? ಜನತೆಯ ಪಾಲಿಗೆ ಈ ಸರಕಾರವೇ ಒಂದು ಬಲಿಪೀಠ.

Leave a Reply

Your email address will not be published. Required fields are marked *