ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಯನ್ನು ಈ ದಿನ ಕರ್ನಾಟಕ ಸರಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಹೊರಟಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)–ಸಿಪಿಐಐ(ಎಂ) ಬಲವಾಗಿ ಖಂಡಿಸಿದೆ.
ಇದೊಂದು ಭಾರತದ ಸಂವಿಧಾನ ವಿರೋಧಿಯಾದ ಹಾಗೂ ಜನತೆಯ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ತೀವ್ರವಾಗಿ ಉಲ್ಲಂಘನೆ ಮಾಡಲು ಕುಮ್ಮಕ್ಕು ನೀಡುವ ಮತ್ತು ರಾಜ್ಯದಲ್ಲಿ ಮತೀಯ ದ್ವೇಷವನ್ನು ಉಲ್ಬಣಗೊಳಿಸಿ ರಾಜ್ಯದ ಶಾಂತಿಯನ್ನು ಕದಡುವ ಜನವಿರೋಧಿ ಹಾಗೂ ರಾಜ್ಯದ ಅಭಿವೃದ್ಧಿ ವಿರೋಧಿಯಾದ, ಲೂಟಿಕೋರ ನೀತಿಗಳಿಗೆ ನೆರವಾಗುವ ಸರ್ವಾಧಿಕಾರಿ ನಡೆಯಾಗಿದೆ. ಆದ್ದರಿಂದ ರಾಜ್ಯ ಸರಕಾರ ಇಂತಹ ಕರಾಳ ಸುಗ್ರೀವಾಜ್ಞೆ ಜಾರಿಗೊಳಿಸುವ ಯೋಜನೆಯನ್ನು ತಕ್ಷಣವೇ ಕೈ ಬಿಡುವಂತೆ ಸಿಪಿಐ(ಎಂ) ಒತ್ತಾಯಿಸಿದೆ.
ಭಾರತದ ಸಂವಿಧಾನವು ಈ ದೇಶದ ಪ್ರಜೆಗಳಿಗೆ ಕೊಡಮಾಡಿದ, ಯಾವುದೇ ಮತ ದರ್ಮವನ್ನು ಅನುಸರಿಸುವ ಮತ್ತು ಬದಲಾಯಿಸುವ ಹಾಗೂ ಮತದರ್ಮಗಳಲ್ಲಿ ನಂಬಿಕೆ ಇಡದಿರುವ ಪ್ರಜಾಸತ್ತಾತ್ಮಕ ಹಕ್ಕನ್ನು ನಿರಾಕರಿಸುತ್ತದೆ. ಆ ರೀತಿಯಲ್ಲಿ ಮತಾಂತರ ಹೊಂದ ಬೇಕಾದರೇ ಸರಕಾರದ ಪರವಾನಗಿ ಪಡೆಯಬೇಕೆಂದು ನಿರ್ಬಂಧಿಸುತ್ತದೆ.
ಮಾತ್ರವಲ್ಲಾ, ಆ ರೀತಿ ಮತಾಂತರ ಹೊಂದಿದ ವ್ಯಕ್ತಿಯ ಕುಟುಂಬದ ಸದಸ್ಯರು, ಬಂಧುಗಳು ಮತ್ತು ಗೆಳೆಯ/ ಗೆಳತಿಯರು ಯಾರು ಬೇಕಾದರೂ ದೂರು ಸಲ್ಲಿಸಲು ಅವಕಾಶ ನೀಡುವ ಮೂಲಕ ಮತಾಂಧ ಸಂಘಗಳು ಮತ್ತು ಶಕ್ತಿಗಳಿಗೆ ಮತೀಯ ಗಲಭೆಗಳನ್ನು ಸೃಷ್ಠಿಸಲು ಕುಮ್ಮಕ್ಕು ನೀಡುತ್ತದೆ.
ಅದು ಮಾತ್ರವಲ್ಲಾ, ಈಗಾಗಲೇ ಮತಾಂತರ ಹೊಂದಿ ಶಾಂತಿ ನೆಮ್ಮದಿಯಿಂದ ಜೀವಿಸುವವರ ಮತ್ತು ವ್ಯಕ್ತಿಗಳ ಕೋರಿಕೆಯ ಮತ್ತು ಒಪ್ಪಿಗೆಯ ಮೇರೆಗೆ ಮತಾಂತರಕ್ಕೆ ಕ್ರಮವಹಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಕ್ರಮವಹಿಸಲು ಅವಕಾಶ ನೀಡುತ್ತದೆ.
ಮಾತ್ರವಲ್ಲಾ, ಧಾರ್ಮಿಕ ಹಕ್ಕುಗಳ ರಕ್ಷಣೆಯ ಹೆಸರಿನಲ್ಲಿ ಅಮಾನವೀಯವಾದ ಜಾತಿ ತಾರತಮ್ಯದ ಪದ್ಧತಿ ಹಾಗೂ ಅಸ್ಪೃಶ್ಯಾಚರಣೆಯನ್ನು ಬಲಗೊಳಿಸುವ ಮತ್ತು ಅಪ್ರತ್ಯಕ್ಷವಾಗಿ ಅಂತರ್ಜಾತೀಯ ವಿವಾಹಗಳನ್ನು ಬೆಧರಿಸುವ ದುರುದ್ದೇಶವನ್ನು ಹೊಂದಿದೆ ಎಂದು ಸಿಪಿಐ(ಎಂ) ವಿವರಿಸಿದೆ.
ದೇಶ ದ್ರೋಹದ ಕಾನೂನಿಗೆ ಸುಪ್ರೀಂ ಕೋರ್ಟ್ ತಡೆ ಸ್ವಾಗತಾರ್ಹ: ಸಿಪಿಐ(ಎಂ)
ಭಾರತೀಯ ದಂಡ ಸಂಹಿತೆಯ ದೇಶ ದ್ರೋಹಕ್ಕೆ ಸಂಬಂದಿಸಿದ ಸೆಕ್ಷನ್ 124 ಎ ಗೆ ನೆನ್ನೆ ದೇಶದ ಅತ್ಯುನ್ನತ ನ್ಯಾಯಾಲಯ ತಡೆ ನೀಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸಿದೆ.
ಒಕ್ಕೂಟ ಹಾಗೂ ಹಲವಾರು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರಕಾರಗಳು ಅಧಿಕಾರಕ್ಕೆ ಬಂದ ಮೇಲೆ ಸರಕಾರಗಳ ಜನ ವಿರೋಧಿ ನೀತಿಗಳು ಮತ್ತು ಶಾಂತಿ ಸೌಹಾರ್ಧತೆಯನ್ನು ಕದಡುವ ಮತಾಂಧತೆಯ ಕ್ರಮಗಳನ್ನು ವಿರೋಧಿಸುವವರ ಮೇಲೆ ಈ ಕಾಯ್ದೆ ದುರ್ಬಳಕೆ ಮಾಡಿ ವಿಚಾರಣೆಯಿಲ್ಲದೆ ಹಲವಾರು ವರ್ಷಗಳ ಕಾಲ ಜೈಲಿಗೆ ತಳ್ಳಿ ಬಾಯಿ ಮುಚ್ಚಿಸುವ ನೀತಿಯನ್ನು ಅನುಸರಿಸುತ್ತಿತ್ತು. ಇದರ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ ನಡೆಸಿತ್ತು ಮತ್ತು ಅಂತಹ ಕಾನೂನು ದುರುಪಯೋಗವನ್ನು ತಡೆಯಲು ಒತ್ತಾಯಿಸಿತು. ಮಾತ್ರವಲ್ಲಾ ಅಕ್ರಮವಾಗಿ ಬಂಧಿಸಿರುವವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿತು.