ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಯೋಜನೆಯೂ ಒಳಗೊಂಡಂತೆ ಕರ್ನಾಟಕದ ಪಾಲಿಗೆ ದೊರೆಯುವ ಹೆಚ್ಚುವರಿ ನೀರನ್ನು ಬಳಸಲು ಆಣೆಕಟ್ಟು ಕಟ್ಟುವ ಪ್ರಸ್ತಾಪದ ಜಾರಿಗೆ ಡಿ.ಪಿ.ಆರ್. ಮಾಡಲು ಮನವಿ ಮಾಡಿದೆ. ಕರ್ನಾಟಕದ ಈ ಕೋರಿಕೆಯನ್ನು ತಿರಸ್ಕರಿಸುವಂತೆ ತಮಿಳುನಾಡು ಪ್ರಧಾನಿಗೆ ಆಕ್ಷೇಪವನ್ನು ಸಲ್ಲಿಸಿರುವುದು ಉಭಯ ರಾಜ್ಯಗಳ ನಡುವೆ ವಾಗ್ವಾದಕ್ಕೆಡೆ ಕಾರಣವಾಗಿದೆ.
ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ವಿವಾದ ಹೊಸತೇನಲ್ಲ. ನ್ಯಾಯಾಲಯಗಳು, ಪ್ರಾಧಿಕಾರ ನೀರಿನ ಹಂಚಿಕೆ ಮಾಡಿ ನೀಡಿದ ಪ್ರಮುಖ ತೀರ್ಪಿನಲ್ಲಿ ಉಳಿದ 4.75 ಟಿ.ಎಂ.ಸಿ. ನೀರನ್ನು ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ಸದ್ಬಳಕೆ ಮಾಡಲು ತೀರ್ಪಿನಲ್ಲಿ ಅವಕಾಶವಿದೆ. ಅದಕ್ಕಾಗಿ ಮೇಕೆ ದಾಟು ಬಳಿಯ ಬಿಳಿಗುಂಡ್ಯ ಬಳಿ ಆಣೆಕಟ್ಟೆ ಕಟ್ಟಲು ಅಗತ್ಯವಾದ ವಿವರ ಯೋಜನಾ ವರದಿ- ಡಿ.ಪಿ.ಆರ್. ಹೊರಡಿಸುವುದೂ ಒಳಗೊಂಡು ಅಗತ್ಯವಾದ ಕ್ರಮಗಳಿಗೆ ಕರ್ನಾಟಕ ಸರಕಾರ ಮುಂದಾಗಿದೆ.
ಅದರಂತೆ ಅದರ ಅನುಮೋದನೆಗೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿದೆ. ಈ ವಾರದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳದಂತೆ ತಮಿಳುನಾಡು ಮಾಡಿರುವ ಮನವಿ ವಿವಾದದ ಮುಂದುವರಿಕೆ ಅಷ್ಟೇ. ಇದು ಸೂಕ್ಷ್ಮ ಪ್ರಶ್ನೆಯಾಗಿರುವುದರಿಂದ ಉಭಯ ರಾಜ್ಯಗಳ ನಡುವೆ ಸಂಘರ್ಷ ಉಂಟಾಗದಂತೆ ಕೇಂದ್ರ ಸರಕಾರ, ಪ್ರಧಾನಿ ಕ್ರಮ ವಹಿಸಿ ಬಗೆ ಹರಿಸಲು ಮುತುವರ್ಜಿ ವಹಿಸಬೇಕು. ಸಂಕುಚಿತ ರಾಜಕಾರಣ ಕೂಡದು.
ನೀರಿನ ಬಳಕೆಗೆ ಸಂಬಂಧಿಸಿ ನ್ಯಾಯ ಮಂಡಳಿಯ ತೀರ್ಪು ಇದೆ. ಅದೇ ಹೊತ್ತಿನಲ್ಲಿ ಯೋಜನೆ ಜಾರಿಯಿಂದ ಉಂಟಾಗಬಹುದಾದ ಪಾರಿಸಾರಿಕ, ಆಡಳಿತಾತ್ಮಕ ಹಾಗೂ ರಾಜಕೀಯ ಪರಿಣಾಮಗಳ ಗಂಭೀರ ಪ್ರಶ್ನೆಗಳೂ, ಅನುಮಾನ ಆತಂಕಗಳೂ ಇವೆ. ರಾಜ್ಯಗಳು ಎತ್ತುವ ಪ್ರಶ್ನೆಗಳಿಗೆ, ಭಿನ್ನಾಭಿಪ್ರಾಯಗಳಿಗೆ ಸಮನ್ವಯ, ಸಮಂಜಸವಾದ ಸೂತ್ರಗಳ ಮೂಲಕ ಇತ್ಯರ್ಥ ಪಡಿಸುವ ಹೊಣೆ ಕೇಂದ್ರ ಸರಕಾರದ ಮೇಲೆ ಇದೆ. ಈಗಲೂ ಪ್ರಾಧಿಕಾರ ಸಭೆ ಸೇರುತ್ತಿರುವುದರಿಂದ ಉಭಯ ರಾಜ್ಯಗಳು ವಿವಾದವನ್ನು ಹೊರಗೆ ವಿಸ್ತರಿಸದೇ ಪರಿಹಾರ ಕಾಣಲು ಯತ್ನಿಸುವುದೂ ಉಪಯುಕ್ತ. ಇದರಲ್ಲಿ ಕೇಂದ್ರ ಒಕ್ಕೂಟ ತತ್ವ, ರಾಜ್ಯಗಳ ಸಂಬಂಧ ದುರ್ಬಲವಾಗದಂತೆ ಅಗತ್ಯ ಎಚ್ಚರಿಕೆ ಮುತುವರ್ಜಿ ವಹಿಸಬೇಕು. ರಾಜ್ಯಗಳೂ ಸಹಕರಿಸಬೇಕು.