ಅಗ್ನಿಪಥ ಯೋಜನೆ-ಪಠ್ಯಪುಸ್ತಕ ಪರಿಷ್ಕರಣೆ ಕೋಮುವಾದೀಕರಣ ವಿರೋಧಿಸಿ ಪ್ರತಿಭಟನೆ

ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ವತಿಯಿಂದ ರಾಜ್ಯದಲ್ಲಿ ಜೂನ್‌ 1ರಂದು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಅಗ್ನಿಪಥ ಯೋಜನೆ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮಾಡಿರುವ ಪಠ್ಯಪುಸ್ತಕದ ಕೋಮುವಾದೀಕರಣ ಖಂಡಿಸಿ ಪ್ರತಿಭಟನೆಗಳು ನಡೆದಿವೆ.

ಕೋಮುವಾದಿ ದಾಳಿ ವಿರುದ್ಧ ಜನತೆಯ ಪ್ರತಿರೋಧ ಹತ್ತಿಕ್ಕುವ ಪ್ರಯತ್ನ

ಕರ್ನಾಟಕ ಸರಕಾರ ರಾಜ್ಯವನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆಯುವ ರೈತ-ಕಾರ್ಮಿಕ ಮತ್ತು ನಾಗರೀಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಅವುಗಳ ವಿರುದ್ಧ ಎದ್ದು ಬರುತ್ತಿರುವ ಭಾರೀ ಪ್ರತಿರೋಧ ತಡೆಯಲು ಜನತೆಯನ್ನು ಒಡೆದಾಳುವ ಕೋಮುವಾದಿ ಅಜೆಂಡಾವನ್ನು ನಿರಂತರವಾಗಿ ಮುನ್ನೆಲೆಗೆ ತರುತ್ತಿದೆ. ಆ ಮೂಲಕ ಲೂಟಿಕೋರತನದ ವಿರುದ್ದದ ಹೋರಾಟವನ್ನು ನೇಪಥ್ಯಕ್ಕೆ ತಳ್ಳುವ ಸಂಚನ್ನು ಮುಂದುವರೆಸಿದೆ. ಇಂತಹ ಸಂಚುಗಳನ್ನು ರಾಜ್ಯದ ದುಡಿಯುವ ಜನತೆ ವಿಫಲಗೊಳಿಸಲಿದ್ದಾರೆಂದು ಸಿಪಿಐ(ಎಂ) ಪಕ್ಷ ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತದೆ.

cpim protest on Mandya 01 07 2022
ಮಂಡ್ಯ

ರಾಜ್ಯದ ಸಮಗ್ರತೆ ಹಾಗೂ ಐಕ್ಯತೆಗೆ ಭಂಗ ಉಂಟು ಮಾಡುವ ದುಷ್ಕೃತ್ಯಗಳನ್ನು ಕೈಬಿಟ್ಟು, ರೈತ – ಕೃಷಿ ಕೂಲಿಕಾರರ ಆಧಾರಿತ ಕೃಷಿಯನ್ನು ನಾಶ ಮಾಡಿ ಕೃಷಿರಂಗವನ್ನು ಕಾರ್ಪೋರೇಟ್ ಕಂಪನಿಗಳ ಲೂಟಿಗೆ ತೆರೆದಿರುವ ಕೃಷಿಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು. ಅದೇ ರೀತಿ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಮತ್ತು ರಾಜ್ಯದ ಎಲ್ಲ ಬಡವರನ್ನು ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರನ್ನಾಗಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ  ಮತ್ತು ಜಾತಿ ತಾರತಮ್ಯ ಹಾಗೂ ಅಸ್ಪೃಷ್ಯತೆಯನ್ನು ಮುಂದುವರೆಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ‍್ಯ ಸಂರಕ್ಷಣೆಯ ಸುಗ್ರೀವಾಜ್ಞೆಗಳನ್ನು ವಾಪಾಸ್ಸು ಪಡೆಯಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ಪಠ್ಯ ಪುಸ್ತಕ ಪರಿಷ್ಕರಣೆ – ಹೊಣೆಗೇಡಿ ಸಚಿವ ಬಿ.ಸಿ. ನಾಗೇಶ್ ವಜಾಗೊಳಿಸಿ

ಶಾಲಾ ಪಠ್ಯಪುಸ್ತಕಗಳಲ್ಲಿ ಇರಬಹುದಾದ ಸೂಕ್ಷ್ಮ ಸಂಕೀರ್ಣ ವಿಷಯಗಳ ಕುರಿತು ಪರಿಶೀಲಿಸಿ ವರದಿ ನೀಡುವುದಕ್ಕೆ ರಚಿಸಲಾದ ರೋಹಿತ್ ಚಕ್ರವರ್ತಿ ಅಧ್ಯಕ್ಷೀಯ ಸಮಿತಿ ತನಗೆ ವಹಿಸಿದ ಜವಾಬ್ದಾರಿ ಮೀರಿ, ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾದ ದುಷ್ಕೃತ್ಯವನ್ನು ಸಿಪಿಐ(ಎಂ) ಪಕ್ಷವು ಬಲವಾಗಿ ಖಂಡಿಸುತ್ತದೆ.

cpim protest on Bidar 01 07 2022
ಬೀದರ್‌

ರಾಜ್ಯದ ಬಿಜೆಪಿ ಸರಕಾರದಲ್ಲಿ ಯಾರು ಹೇಗೆ ಬೇಕಾದರೂ ವರ್ತಿಸಬಹುದೆಂಬುದನ್ನು ಮತ್ತು ಆಡಳಿತದ ಮೇಲೆ ಸರಕಾರದ ಯಾವುದೇ ನಿಯಂತ್ರಣವಿಲ್ಲವೆಂಬುದು ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಪಠ್ಯಪುಸ್ತಕದ ಅವಾಂತರಗಳೇ ತೋರಿಸುತ್ತದೆ. ಯಾವುದೇ ಸೂಕ್ತ ವೇದಿಕೆಗಳಲ್ಲಿ ಚರ್ಚಿಸದೇ, ಸೂಕ್ತ ಆದೇಶ ಹೊರಡಿಸದೇ ತಮಗೆ ತಿಳಿದಂತೆ ಕಾರ್ಯನಿರ್ವಹಿಸುವುದು, ಸಂವಿಧಾನ ವಿರೋಧಿ ಕೃತ್ಯವಾಗಿದೆ. ಅಧಿಕಾರ ದುರುಪಯೋಗದಿಂದ ಮತ್ತು ತಜ್ಞರಲ್ಲದವರ ದುರ್ನಡೆಯಿಂದ ನಾಡಿನ ಗಣ್ಯ ವ್ಯಕ್ತಿಗಳು ಅಪಮಾನಿತರಾಗುವಂತಾಯಿತು. ರಾಜ್ಯದ ಲಕ್ಷಾಂತರ ಶಾಲಾ ಮಕ್ಕಳು ಪಠ್ಯ ಪುಸ್ತಕ ಲಭ್ಯವಿಲ್ಲದೇ ವರ್ಷವೂ ತೊಂದರೆಗೀಡಾಗಿದ್ದು ಇಂತಹ ಎಡವಟ್ಟುಗಳಿಂದ ಜನರ ತೆರಿಗೆ ಹಣ ಪೋಲಾಗುತ್ತಿದೆ.

ಸಚಿವ ಬಿ.ಸಿ. ನಾಗೇಶ್ ಅವರ ಬೇಜವಾಬ್ದಾರಿತನದಿಂದ ಕರ್ನಾಟಕದ ಭವಿಷ್ಯದ  ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರಲಿದೆ. ನಾಗರೀಕ ಜಗತ್ತಿನ ಮುಂದೆ ರಾಜ್ಯದ ಜನತೆ  ಮತ್ತೊಮ್ಮೆ ತಲೆ ತಗ್ಗಿಸುವಂತಹ ಪ್ರಸಂಗವಾಗಿದೆ.  ಶಿಕ್ಷಣ ಸಚಿವರು ಹಾಗೂ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನು ವಜಾ ಮಾಡುವ ರಾಜ್ಯದ ಮತ್ತು ಸರ್ಕಾರದ ಘನತೆಯನ್ನು ಉಳಿಸಲು ಮುಂದಾಗಬೇಕೆಂದು ಸಿಪಿಐ(ಎಂ) ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತದೆ.

cpim protest on Shivamogga 01 07 2022
ಶಿವಮೊಗ್ಗ

ಕೋವಿಡ್ ಕಾರಣದಿಂದ ಈಗಾಗಲೇ ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ವರ್ಷವು ಮಕ್ಕಳು, ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಹಳೆಯ ಪಠ್ಯಕ್ರಮವನ್ನೇ ಮುಂದುವರೆಸುವಂತೆ ಮತ್ತು ರಾಜ್ಯದ ಬೊಕ್ಕಸಕ್ಕಾದ ನಷ್ಟವನ್ನು ಅಧಿಕಾರ ದುರುಪಯೋಗ ಮಾಡಿಕೊಂಡ ಸಚಿವ ನಾಗೇಶ್ ಮತ್ತು ಪಠ್ಯ ಪುಸ್ತಕ ಪರೀಷ್ಕರಣಾ ಸಮಿತಿಯಿಂದ ವಸೂಲಿ ಮಾಡುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ.

ದೇಶದ್ರೋಹಿ ಅಗ್ನಿಪಥ ಯೋಜನೆ ಕೈಬಿಡಿ

ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯು ಗುತ್ತಿಗೆ ಆಧಾರದಲ್ಲಿ ಸುಮಾರು 46 ಸಾವಿರ ನಿರುದ್ಯೋಗಿ ಯುವಜನರನ್ನು ನಾಲ್ಕು ವರ್ಷಗಳ ಕಾಲ ಸೈನಿಕ ಸೇವೆಗೆ ನೇಮಿಸಿಕೊಂಡು ನಂತರ ಯಾವುದೇ ಪರಿಹಾರ ನೀಡದೇ ಬೀದಿಗೆ ದೂಡುವ ಯೋಜನೆ ಇದಾಗಿದೆ. ಮಾತ್ರವಲ್ಲಾ, ಇಂತಹ ವೃತ್ತಿಪರವಲ್ಲದ ಗುತ್ತಿಗೆ ಆಧಾರದ ಸೈನ್ಯದಿಂದ ದೇಶದ ಭದ್ರತೆಗೆ ಮಾರಕವಾಗಿದೆ.

ಈ ಕೂಡಲೇ ಕುಹಕದ ಯೋಜನೆಯನ್ನು ತಕ್ಷಣವೇ ಕೈ ಬಿಡಬೇಕು ಮತ್ತು ಸೈನ್ಯದಲ್ಲಿ ಖಾಲಿ ಇರುವ 1.46 ಲಕ್ಷ ಹುದ್ದೆಗಳನ್ನು ತುಂಬಿಕೊಳ್ಳಲು ಕ್ರಮವಹಿಸಬೇಕೆಂದು ಪ್ರಧಾನ ಮಂತ್ರಿಗಳನ್ನು ಸಿಪಿಐ(ಎಂ) ಪಕ್ಷದ ಒತ್ತಾಯವಾಗಿದೆ. ದೇಶದಾದ್ಯಂತ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ದೇಶದ ಭದ್ರತೆಗೆ ಧಕ್ಕೆ ತರುವ ಮತ್ತು ನಿರುದ್ಯೋಗಿ ಯುವಜನತೆಯನ್ನು ಅಗ್ನಿಪಥ ಯೋಜನೆಯನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸುತ್ತದೆ.

Leave a Reply

Your email address will not be published. Required fields are marked *