ಇದುವರೆಗೆ ಜನರಿಂದಾಗಿ, ಜನಪ್ರಿಯ ಹೋರಾಟಗಳು ಮತ್ತು ಪ್ರಜಾಸತ್ತಾತ್ಮಕ ಚಳವಳಿಗಳಿಂದಾಗಿ ಪ್ರಜಾಪ್ರಭುತ್ವದ ಭರವಸೆ ಉಳಿದಿತ್ತು. ಆದರೆ, ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ವೇಳೆಗೆ ಆ ಭರವಸೆ ಮಸುಕಾಗಿದೆ. ಎಲ್ಲ ನಿಯಮಗಳನ್ನು ಮತ್ತು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಸಮತೋಲನ ಮತ್ತು ನಿಯಂತ್ರಣಗಳನ್ನು ವಿಧಿಸುವ ಪ್ರಭುತ್ವದ ಸಂಸ್ಥೆಗಳನ್ನು ಹೊಸಕಿ ಹಾಕುವಂಥ ಪೂರ್ಣ ಪ್ರಮಾಣದ ಸರ್ವಾಧಿಕಾರವನ್ನು ಕಾಣುತ್ತಿದ್ದೇವೆ. ನವ-ಉದಾರವಾದದ ಪ್ರವೇಶ ಹಾಗೂ ಹಿಂದುತ್ವ ಬಹುಸಂಖ್ಯಾಕ ಕೋಮುವಾದದ ಉದಯವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕೆ ಸಾವಿನ ಗಂಟೆಯಾಗುತ್ತದೆ. ಅದರ ಫಲವಾಗಿ ಪ್ರಜಾಪ್ರಭುತ್ವ ಮೊಟಕುಗೊಂಡು ಸರ್ವಾಧಿಕಾರ ತಲೆಯೆತ್ತುತ್ತದೆ. ದೊಡ್ಡ ಬಂಡವಾಳವು ರಾಜಕೀಯ ವ್ಯವಸ್ಥೆಯನ್ನು ಆಕ್ರಮಿಸಿದೆ. ಇದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಹೋರಾಟಗಳನ್ನು ನಡೆಸಬೇಕಾಗಿದೆ. ಪ್ರಜಾಪ್ರಭುತ್ವಕ್ಕಾಗಿನ ಈ ಹೋರಾಟವು ಹಿಂದುತ್ವ ಮತ್ತು ನವ-ಉದಾರೀಕರಣದ ವಿರುದ್ಧದ ಸಂಘರ್ಷದೊಂದಿಗೆ ತಳುಕು ಹಾಕಿಕೊಂಡಿದೆ.
ಇತ್ತೀಚಿನ ವರ್ಷಗಳವರೆಗೆ, ಸ್ವಾತಂತ್ರ್ಯ ದಿನದ ಮಹತ್ವದ ಕಾಲಘಟ್ಟಗಳ ಆಚರಣೆ ಸಂದರ್ಭದಲ್ಲಿ ಸಂಸದೀಯ ಪ್ರಜಾಪ್ರಭುತ್ವವು ಸ್ವತಂತ್ರ ಭಾರತದ ಒಂದು ಪ್ರಮುಖ ಸಾಧನೆಯೆಂದು ನಾವು ಹೇಳಿಕೊಳ್ಳಬಹುದಿತ್ತು. 1950ರಲ್ಲಿ ಅಳವಡಿಸಿಕೊಂಡ ಒಂದು ಗಣತಾಂತ್ರಿಕ ಸಂವಿಧಾನವು ರಾಜಕೀಯದಲ್ಲಿ ಜನರ ಭಾಗವಹಿಸುವಿಕೆ ಮತ್ತು ಜನರ ದನಿಗೆ ಅವಕಾಶ ಒದಗಿಸಿತ್ತು. ಅದು ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತೀಯ ಜನರ ಆಶೋತ್ತರಗಳನ್ನು ಪ್ರತಿಫಲಿಸಿತ್ತು.
ಬೆಳೆಯುತ್ತಿರುವ ಬಂಡವಾಳಶಾಹಿ ಸಮಾಜದಲ್ಲಿ ಜನತಂತ್ರ ವ್ಯವಸ್ಥೆಯ ಆಧಾರ ತೀರಾ ಸಂಕುಚಿತವಾಗಿದ್ದರೂ, ಮತ್ತು ವರ್ಗ ನಿರ್ಬಂಧಗಳಿದ್ದರೂ, ಭಾರತದಲ್ಲಿ ಆರು ದಶಕಕ್ಕೂ ಹೆಚ್ಚು ಸಮಯದಿಂದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯು ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದ್ದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಮುಖ್ಯವಾಗಿ ಜನರಿಂದಾಗಿ ಹಾಗೂ ಜನಪ್ರಿಯ ಹೋರಾಟಗಳು ಮತ್ತು ಪ್ರಜಾಸತ್ತಾತ್ಮಕ ಚಳವಳಿಗಳ ಕಾರಣದಿಂದಾಗಿ ಪ್ರಜಾಪ್ರಭುತ್ವದ ಭರವಸೆ ಉಳಿದಿತ್ತು.
ಪೂರ್ಣ ಪ್ರಮಾಣದ ಸರ್ವಾಧಿಕಾರ
ಆದರೆ, ನಾವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಿರುವಾಗ, ಪ್ರಜಾಪ್ರಭುತ್ವದ ಭರವಸೆ ಮಸುಕಾಗಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ತಳಹದಿಯಾಗಿ ಸಂವಿಧಾನ ನಮಗೆ ನೀಡಿದ್ದೆಲ್ಲವೂ ಅಪಾಯಕ್ಕೆ ಸಿಲುಕಿದೆ ಹಾಗೂ ಗಂಭೀರ ಆಕ್ರಮಣಕ್ಕೆ ತುತ್ತಾಗಿದೆ. ಪ್ರಜಾಪ್ರಭುತ್ವದ ಎಲ್ಲ ನಿಯಮಗಳನ್ನು ಮತ್ತು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಸಮತೋಲನ ಮತ್ತು ನಿಯಂತ್ರಣಗಳನ್ನು ವಿಧಿಸುವ ಪ್ರಭುತ್ವದ ಸಂಸ್ಥೆಗಳನ್ನು ಹೊಸಕಿ ಹಾಕುವಂಥ ಪೂರ್ಣ ಪ್ರಮಾಣದ ಸರ್ವಾಧಿಕಾರವನ್ನು ನಾವಿಂದು ಕಾಣುತ್ತಿದ್ದೇವೆ.
2019ರ ಮೇ ತಿಂಗಳಲ್ಲಿ ಇನ್ನೂ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ನಂತರ ಬಿಜೆಪಿ ಏಕ-ಪಕ್ಷ ಸರ್ವಾಧಿಕಾರ ಸ್ಥಾಪಿಸುವ ಗುರಿ ಇಟ್ಟುಕೊಂಡಿದೆ. ಅದಕ್ಕಾಗಿ ಪ್ರತಿಪಕ್ಷದ ಮೇಲೆ ಸಾರಾಸಗಟು ಆಕ್ರಮಣ ನಡೆಸಬೇಕಾಗುತ್ತದೆ. ಸಂಸತ್ತಿನಲ್ಲಿ ಅವರ ಪಾತ್ರವನ್ನು ಬದಿಗೆ ಸರಿಸಲಾಗುತ್ತಿದೆ. ಪ್ರತಿಪಕ್ಷಗಳ ಚುನಾಯಿತ ರಾಜ್ಯ ಸರಕಾರಗಳನ್ನು ಶಾಸಕರ ಖರೀದಿ ಹಾಗೂ ಕೇಂದ್ರೀಯ ಸಂಸ್ಥೆಗಳನ್ನು ಬಳಸುವ ಮೂಲಕ ಅಸ್ಥಿರಗೊಳಿಸಲಾಗುತ್ತಿದೆ. ಅನುಷ್ಠಾನ ನಿರ್ದೇಶನಾಲಯ(ಇ.ಡಿ.), ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಮತ್ತು ಆದಾಯ ತೆರಿಗೆ ಇಲಾಖೆ(ಐ.ಟಿ.)ಗಳನ್ನು ಪ್ರತಿಪಕ್ಷ ನಾಯಕರು ಮತ್ತು ಪ್ರತಿಪಕ್ಷ ಆಡಳಿತದ ರಾಜ್ಯಗಳ ಸಚಿವರಿಗೆ ಕಿರುಕುಳ ನೀಡಲು ಆಯುಧವಾಗಿ ಬಳಸಲಾಗುತ್ತಿದೆ.
ಸಂಸತ್ತು ಮತ್ತು ಸಂಸದೀಯ ಕಲಾಪಗಳ ಅಪಮೌಲ್ಯ, ವಿಶೇಷವಾಗಿ ಮೋದಿ ಸರಕಾರದ ಎರಡನೇ ಅವಧಿಯಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸಿದೆ. 2021ರಲ್ಲಿ ಸಂಸತ್ತು ಕೇವಲ 50 ದಿನ ಅಧಿವೇಶನ ನಡೆಸಿದೆ. ಶಾಸನಗಳ ಮೇಲೆ ಚರ್ಚೆ ನಡೆಯುತ್ತಿಲ್ಲ ಎನ್ನುವುದರ ಜೊತೆಯಲ್ಲಿ ಶಾಸನಾತ್ಮಕ ಮಸೂದೆಗಳ ಪರಿಶೀಲನೆಯೂ ಆಗುತ್ತಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಲೋಕಸಭೆಯಿಂದ ಶೇಕಡ 60ರಿಂದ 70 ಮಸೂದೆಗಳು ಸ್ಥಾಯಿ ಸಮಿತಿಯ ಪರಿಶೀಲನೆಗೆ ಹೋಗುತ್ತಿದ್ದವು. ಅದು ಮೋದಿ ಸರಕಾರದ ಮೊದಲ ಅವಧಿಯಲ್ಲಿ ಶೇಕಡ 22ಕ್ಕೆ ಹಾಗೂ ಎರಡನೇ ಅವಧಿಯಲ್ಲಿ ಈ ವರೆಗೆ ಕೇವಲ 13 ಪ್ರತಿಶತಕ್ಕೆ ಇಳಿದಿದೆ. ಇದರೊಂದಿಗೆ ವಿಷಯಗಳನ್ನು ಪ್ರಸ್ತಾಪಿಸುವ ಪ್ರತಿಪಕ್ಷಗಳ ಹಕ್ಕು ಮತ್ತು ಶಾಸನಾತ್ಮಕ ಪ್ರಕ್ರಿಯೆ ವೇಳೆ ಮತದಾನಕ್ಕೆ ಒತ್ತಾಯಿಸುವ ಹಕ್ಕನ್ನು ನಿರಾಕರಿಸುವುದರೊಂದಿಗೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ವಿವಿಧ ಶಾಸನಗಳನ್ನು ಮೇಲ್ಮನೆಯ ಪರಿಶೀಲನೆಗೆ ಒಪ್ಪಿಸದೆ ಹಾಗೂ ಅಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸದೆ ಹಣಕಾಸು ಮಸೂದೆಯಾಗಿ ಘೋಷಿಸುವ ಮೂಲಕ ರಾಜ್ಯಸಭೆಯ ಘನತೆಯನ್ನು ಕುಂದಿಸಲಾಗಿದೆ. ಸರಕಾರ ಸರ್ವಾಧಿಕಾರದತ್ತ ಹೆಚ್ಚು ವೇಗವಾಗಿ ಸಾಗುತ್ತಿರುವುದರಿಂದ ಸಂವಿಧಾನದಲ್ಲಿ ಅಡಕವಾಗಿರುವ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರಗಳ ಹರಣವಾಗುತ್ತಿವೆ.
ಭಿನ್ನಮತವನ್ನು ಅಪರಾಧೀಕರಿಸುವುದು ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ದಮನಿಸುವುದು ಯಾವುದೇ ಸರ್ವಾಧಿಕಾರಿ ಆಡಳಿತದ ಪ್ರಮುಖ ಲಕ್ಷಣಗಳಾಗಿರುತ್ತವೆ. ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು (ಯುಎಪಿಎ) ಮತ್ತು ದೇಶದ್ರೋಹದ ಕಲಮು ಮುಂತಾದ ಕರಾಳ ಕಾನೂನುಗಳ ಮುಖೇನ ಅದು ಅಭೂತಪೂರ್ವ ಎತ್ತರಕ್ಕೆ ತಲುಪಿದೆ. 2014ರಿಂದ 2020ರ ನಡುವಿನ ಏಳು ವರ್ಷಗಳ ಅವಧಿಯಲ್ಲಿ ಸುಮಾರು 690 ಯುಎಪಿಎ ಪ್ರಕರಣಗಳು ದಾಖಲಾಗಿದ್ದು ಅದರ ಉಪಬಂಧಗಳ ಅಡಿಯಲ್ಲಿ 10,552 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ರಾಜಕೀಯ ಕಾರ್ಯಕರ್ತರು, ನಾಗರಿಕ ಹಕ್ಕುಗಳ ಹೋರಾಟಗಾರರು, ಪತ್ರಕರ್ತರು ಮತ್ತು ಲೇಖಕರು ಇದ್ದಾರೆ. 16 ಪ್ರಮುಖ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ಯುಎಪಿಎ ಕಾನೂನಿನಡಿ ಮೂರು ವರ್ಷಗಳಿಂದ ಜೈಲಿನಲ್ಲಿರುವ ಭೀಮಾ ಕೋರೆಗಾಂವ್ ಪ್ರಕರಣ ಇದಕ್ಕೊಂದು ಪ್ರಮುಖ ಉದಾಹರಣೆಯಾಗಿದೆ.
ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದನ್ನು ಹಾಗೂ ಕಾರ್ಯಾಂಗದ ಅತಿರೇಕಗಳಿಗೆ ತಡೆ ಹಾಕುವುದನ್ನು ನಿಲ್ಲಿಸುವುದು ಸರ್ವಾಧಿಕಾರಿ ಆಡಳಿತವೊಂದರ ಪ್ರಮುಖ ಲಕ್ಷಣವಾಗಿದೆ. ಸುಪ್ರೀಂ ಕೋರ್ಟ್ ಕಾರ್ಯನಿರ್ವಾಹಕ ನ್ಯಾಯಾಲಯವಾಗಿ ವರ್ತಿಸುವುದು ಹೆಚ್ಚುತ್ತಿದೆ. ಝಾಕಿಯಾ ಜಾಫ್ರಿ ಸಲ್ಲಿಸಿದ ಮೇಲ್ಮನವಿ ಮೇಲೆ ಮತ್ತು ಹಣಕಾಸು ಅಕ್ರಮ ಹಣ ವ್ಯವಹಾರ ತಡೆ(ಪಿಎಂಎಲ್ಎ) ಕಾನೂನಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.) ಹೊಂದಿರುವ ಅಧಿಕಾರ ವ್ಯಾಪಿಗೆ ಸಂಬಂಧಿಸಿದಂತೆ ಈಚೆಗೆ ನೀಡಿದ ತೀರ್ಪುಗಳು ದೇಶದ ಅತ್ಯುನ್ನತ ನ್ಯಾಯಾಲಯವು ಕಾರ್ಯಾಂಗದ ಆಕ್ರಮಣಗಳಿಂದ ನಾಗರಿಕರ ಬದುಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಹೇಗೆ ವಿಫಲವಾಗುತ್ತಿದೆ ಎನ್ನುವುದನ್ನು ತೋರಿಸಿದೆ.
ಕಳೆದ 75 ವರ್ಷಗಳನ್ನು ಅವಲೋಕಿಸಿದಾಗ ಇಂದಿರಾ ಗಾಂಧಿ 1975 ಜೂನ್ನಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದು ದೇಶದಲ್ಲಿ ಪ್ರಜಾಪ್ರಭುತ್ವದ ಮೇಲಿನ ಅತಿ ದೊಡ್ಡ ಆಕ್ರಮಣವಾಗಿ ಕಾಣಿಸುತ್ತದೆ. ಸರ್ವಾಧಿಕಾರದ ಈ ಅವಧಿಯಲ್ಲಿ ಪ್ರತಿಪಕ್ಷಗಳ ನಾಯಕರನ್ನು ಸೆರೆಮನೆಗಳಿಗೆ ತಳ್ಳಲಾಯಿತು, ನಾಗರಿಕ ಹಕ್ಕುಗಳನ್ನು ಅಮಾನತು ಮಾಡಲಾಯಿತು ಹಾಗೂ ಪತ್ರಿಕೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು. ಇವೆಲ್ಲವೂ 20 ತಿಂಗಳ ಸೀಮಿತ ಅವಧಿಗೆ ಅಸ್ತಿತ್ವದಲ್ಲಿದ್ದವು. ಅದರ ನಂತರ ನಡೆದ ಲೋಕಸಭೆ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದರು. ಪ್ರಜಾಪ್ರಭುತ್ವದ ಮೇಲೆ ಈಗ ನಡೆಯುತ್ತಿರುವ ದಾಳಿ ಹೆಚ್ಚು ಗಂಭೀರವಾದುದೂ ವ್ಯಾಪಕವಾದುದೂ ಆಗಿದೆ. ಪ್ರಜಾಫ್ರಭುತ್ವವನ್ನು ಮೊಟಕುಗೊಳಿಸಿ ಹಾಗೂ ಜಾತ್ಯತೀತತೆ ಮತ್ತು ಒಕ್ಕೂಟ ತತ್ವವನ್ನು ಕಡೆಗಣಿಸುವ ಮೂಲಕ ಗಣರಾಜ್ಯದ ಸ್ವರೂಪವನ್ನೇ ಬದಲಾಯಿಸುವುದು ಅದರ ಉದ್ದೇಶವಾಗಿದೆ.
ಪ್ರಜಾಪ್ರಭುತ್ವದ ಕತ್ತು ಹಿಸುಕುವ ಈ ಅಪಾಯಕಾರಿ ಸರ್ವಾಧಿಕಾರ ದೇಶದ ಮೇಲೆ ಬಿಗಿ ಹಿಡಿತ ಸಾಧಿಸಿರುವುದು ಯಾಕೆ? ಇದೊಂದು ಯಾವುದೋ ದಿಕ್ಚುತಿ ಅಥವಾ ಆಕಸ್ಮಿಕ ತಿರುವು ಬಿಂದು ಅಲ್ಲ. ಅಥವಾ ಅದು ಯಾರದೋ ಒಬ್ಬರ ಸರ್ವಾಧಿಕಾರಿ ಧೋರಣೆಯ ಫಲ ಎಂದೂ ಹೇಳಲಾಗದು. ಈ ಸರ್ವಾಧಿಕಾರದ ಕಬಂಧಬಾಹು ಹರಡಿರುವ ಶಕ್ತಿಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ.
ರಾಜಕೀಯ ಪ್ರಜಾಪ್ರಭುತ್ವದ ಬಗ್ಗೆ ಅಂಬೇಡ್ಕರ್
ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಇಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎಂದು ಸಂವಿಧಾನವನ್ನು ಅಳವಡಿಸಿಕೊಳ್ಳುವ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ಎಚ್ಚರಿಸಿದ್ದರು. `ಭಾರತದಲ್ಲಿ ಪ್ರಜಾಪ್ರಭುತ್ವವು ಅಪ್ರಜಾಸತ್ತಾತ್ಮಕವೇ ಆಗಿರುವ ಭಾರತೀಯ ಮಣ್ಣಿನ ಮೇಲ್ಪದರವಷ್ಟೇ’ ಎಂದೂ ಅವರು ಎಚ್ಚರಿಸಿದ್ದರು.
ಹಲವು ದಶಕಗಳಿಂದ `ಚುನಾವಣಾ ಪ್ರಜಾಪ್ರಭುತ್ವ’ ಬೆಳೆದು ನಿಂತಿದ್ದಾಗ, ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಸಾಧನೆಯ ವಿಚಾರ ಹಿನ್ನೆಲೆಗೆ ಸರಿಯಿತು. ಆಳುವ ವರ್ಗಗಳು ಅನುಸರಿಸಿದ ಅಭಿವೃದ್ಧಿಯ ಬಂಡವಾಳಶಾಹಿ ಪಥವು ವರ್ಗ ಮತ್ತು ಪ್ರಾದೇಶಿಕ ಅಸಮಾನತೆಗಳನ್ನು ಇನ್ನಷ್ಟು ಹೆಚ್ಚಿಸಿತು. ಮೂರು ದಶಕಗಳ ಹಿಂದೆ ಕಾಲಿಟ್ಟ ನವ-ಉದಾರವಾದಿ ನೀತಿಗಳು ಆರ್ಥಿಕ ಅಸಮಾನತೆಗಳು ಹೆಚ್ಚಾಗಲು ಹಾಗೂ ಅಸಹ್ಯಪಡುವಷ್ಟು ಸಂಪತ್ತನ್ನು ಹೊಂದಿದ ಧನಿಕರ ಪ್ರಭುತ್ವ ಕ್ರೋಡೀಕರಣಗೊಳ್ಳಲು ಕಾರಣವಾದವು.
ಸಾಮಾಜಿಕ ರಂಗದಲ್ಲಿ ನೋಡುವುದಾದರೆ, ಭೂಮಾಲಿಕತ್ವ ಮತ್ತು ಬಂಡವಾಳಶಾಹಿ-ಪೂರ್ವ ಸಂಬಂಧಗಳೊಂದಿಗೆ ರಾಜಿ ಮಾಡಿಕೊಂಡ ಬೂರ್ಷ್ವಾ ವರ್ಗವು ಜಾತಿ ದೌರ್ಜನ್ಯ ಹಾಗೂ ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಕೊನೆಗಾಣಿಸಲು ಕೇವಲ ಔಪಚಾರಿಕ ಪ್ರಯತ್ನವನ್ನಷ್ಟೇ ನಡೆಸಿತು. ಆದ್ದರಿಂದ ಅಂಬೇಡ್ಕರ್ ಅವರು ಮುಂಗಂಡಂತೆ ರಾಜಕೀಯ ಪ್ರಜಾಪ್ರಭುತ್ವ ಮತ್ತು ಹೆಚ್ಚುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ನಡುವಿನ ವೈರುಧ್ಯವು ಒಂದಲ್ಲ ಒಂದು ಸಮಯದಲ್ಲಿ ಮುನ್ನೆಲೆಗೆ ತಲುಪಲಿದೆ.
ಡಾ. ಅಂಬೇಡ್ಕರ್ ಅವರ ಈ ವಿಶ್ಲೇಷಣೆಯು ಭಾರತದ ಮಾರ್ಕ್ಸ್ವಾದಿಗಳ ವಿಶ್ಲೇಷಣೆಗೆ ಅತಿ ಸಮೀಪವಾಗಿದೆಯೆನ್ನುವುದು ಗಮನಾರ್ಹ ಸಂಗತಿಯಾಗಿದೆ. ಸಾಮಾಜಿಕ ಮತ್ತು ಕೃಷಿ ಸಂಬಂಧಗಳಲ್ಲಿ ಆಮೂಲಾಗ್ರ ಪ್ರಜಾಸತ್ತಾತ್ಮಕ ಪರಿವರ್ತನೆಗೆ ವಿಫಲವಾಗುವುದರಿಂದ ಆಧುನಿಕ ಬೂರ್ಷ್ವಾ-ಪ್ರಜಾಪ್ರಭುತ್ವ ಸಮಾಜದ ಅಭಿವೃದ್ಧಿಗೆ ತೊಡಕಾಗುತ್ತದೆ ಎಂದು ಸಿಪಿಐ(ಎಂ) ಆರಂಭದಿಂದಲೇ ಹೇಳುತ್ತಾ ಬಂದಿದೆ. ನವ-ಉದಾರವಾದದ ಪ್ರವೇಶ ಹಾಗೂ ಹಿಂದುತ್ವ ಬಹುಸಂಖ್ಯಾಕ ಕೋಮುವಾದದ ಉದಯವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕೆ ಸಾವಿನ ಗಂಟೆಯಾಗುತ್ತದೆ. ಅದರ ಫಲವಾಗಿ ಪ್ರಜಾಪ್ರಭುತ್ವ ಮೊಟಕುಗೊಂಡು ಸರ್ವಾಧಿಕಾರ ತಲೆಯೆತ್ತುತ್ತದೆ.
ಪ್ರಜಾಪ್ರಭುತ್ವವನ್ನು ನಿರ್ಬಂಧಿಸುವ ನವ-ಉದಾರವಾದ
ಜನರು ಮತ್ತು ಅವರ ಹಕ್ಕುಗಳಿಗಿಂತ ಮಾರುಕಟ್ಟೆಯೇ ಪ್ರಧಾನವಾದುದು ಎಂದು ಪರಿಗಣಿಸುವ ನವ-ಉದಾರವಾದವು ಪ್ರಜಾಪ್ರಭುತ್ವವನ್ನು ಕಿರಿದುಗೊಳಿಸುತ್ತದೆ ಹಾಗೂ ನಿರ್ಬಂಧಿಸುತ್ತದೆ. ದೊಡ್ಡ ಬಂಡವಾಳವು ರಾಜಕೀಯ ವ್ಯವಸ್ಥೆಯನ್ನು ಆಕ್ರಮಿಸಿದೆ ಹಾಗೂ ಎಲ್ಲ ಬಂಡವಾಳಶಾಹಿ ರಾಜಕೀಯ ಪಕ್ಷಗಳು ದೊಡ್ಡ ಹಣಬಲಕ್ಕೆ ಅಧೀನವಾಗಿವೆ. ಇದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊರೆಯುತ್ತಿದೆ.
ಸಿಪಿಐ(ಎಂ) ಕಾರ್ಯಕ್ರಮ ಏನು ಹೇಳುತ್ತದೆ ಎನ್ನುವುದನ್ನು ನಾವು ಗಮನಿಸಬೇಕು. `ದುಡಿಯುವ ಜನಗಳು ಹಾಗೂ ಅವರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಪಕ್ಷಗಳಿಂದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ ಬರುವುದಿಲ್ಲ. ಅಪಾಯ ಉಂಟಾಗುವುದು ಏನಿದ್ದರೂ ಶೋಷಕ ವರ್ಗಗಳಿಂದಲೇ. ತಮ್ಮ ಸಂಕುಚಿತ ಹಿತಗಳ ರಕ್ಷಣೆಗಾಗಿ ಅದನ್ನು ಸಾಧನ ಮಾಡಿಕೊಳ್ಳುವ ಮೂಲಕ ಒಳಗಿನಿಂದಲೂ ಹೊರಗಿನಿಂದಲೂ ಸಂಸದೀಯ ವ್ಯವಸ್ಥೆಯನ್ನು ಅವು ದುರ್ಬಲಗೊಳಿಸುತ್ತವೆ.’.
ಹಿಂದುತ್ವ ಶಕ್ತಿಗಳ ಉದಯ ಹಾಗೂ 2014ರಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ಭಾರತೀಯ ರಾಜಕಾರಣದಲ್ಲಿ ಒಂದು ಗುಣಾತ್ಮಕ ಬದಲಾವಣೆ ಉಂಟಾಯಿತು. ಪ್ರಭುತ್ವದ ಅಧಿಕಾರವು ಆರ್ಎಸ್ಎಸ್ನ ಫ್ಯಾಸಿಸ್ಟ್ ತೆರನ ಸಿದ್ಧಾಂತ ಹೊಂದಿದ ಒಂದು ಪಕ್ಷದ ಕೈಗೆ ಬಂದಿದೆ. ಅಲ್ಪಸಂಖ್ಯಾತರಿಗೆ ಸಮಾನ ಸ್ಥಾನಮಾನ ಮತ್ತು ಪ್ರಜೆಗಳಾಗಿ ಹಕ್ಕುಗಳನ್ನು ನಿರಾಕರಿಸುವ, ಪ್ರಜಾಪ್ರಭುತ್ವಕ್ಕೆ ಪಥ್ಯವಲ್ಲದ ಹಿಂದೂ ಬಹುಸಂಖ್ಯಾಕ ಆಡಳಿತವನ್ನು ಸ್ಥಾಪಿಸುವುದು ಅವರ ಬಯಕೆಯಾಗಿದೆ.
ನಾವು ಪ್ರಭುತ್ವ ಪ್ರಾಯೋಜಿತ ಕಾನೂನುಗಳನ್ನು ಮತ್ತು ಬುಡಮಟ್ಟದಲ್ಲಿ ಮುಸ್ಲಿಮರನ್ನು ಗುರಿ ಮಾಡುವ, ಅವರನ್ನು ಸಮಯ-ಸಮಯಕ್ಕೆ ಹಿಂಸಾಚಾರದ ಆವೇಶಕ್ಕೆ ತುತ್ತಾಗಿಸುವ ಹಿಂದುತ್ವ ಸಂಘಟನೆಗಳ ಕಾವಲುಕೋರ ಕೃತ್ಯಗಳನ್ನೂ, ಅದರ ಜೊತೆಯಲ್ಲಿ ಸರಕಾರಿ ಯಂತ್ರದ ಕಿರುಕುಳವನ್ನೂ ಕಂಡಿದ್ದೇವೆ… ವಾಸ್ತವವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಕರ್ನಾಟಕದಂಥ ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ವಸ್ತುಶಃ ದ್ವಿತೀಯ ದರ್ಜೆ ನಾಗರಿಕರ ಸ್ಥಾನಕ್ಕೆ ತಳ್ಳಲಾಗಿದೆ.
ಹಿಂದುತ್ವ-ಕಾರ್ಪೊರೇಟ್ ಮೈತ್ರಿ
ಕಾರ್ಪೊರೇಟ್ಗಳು ಮತ್ತು ಹಿಂದುತ್ವ ಶಕ್ತಿಗಳ ನಡುವಿನ ಮೈತ್ರಿಯಿಂದಾಗಿ ಸರ್ವಾಧಿಕಾರಿ ಶಕ್ತಿಗಳು ಮುನ್ನುಗ್ಗುತ್ತಿವೆ. ನವ-ಉದಾರವಾದಿ ನೀತಿಗಳು ಮತ್ತು ಸಮಾಜದ ಮೇಲೆ ಹಿಂದುತ್ವ ಮೌಲ್ಯಗಳ ಹೇರಿಕೆಯನ್ನು ಮುಂದೊತ್ತಲು ಉನ್ನತ ಪ್ರಮಾಣದ ಸರ್ವಾಧಿಕಾರದ ಅಗತ್ಯವಿದೆ. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅಳವಡಿಸುವ ಮೂಲಕ ದುಡಿಯುವ ವರ್ಗದ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ.
ಸಂವಿಧಾನದ ಮರೆಯಲ್ಲಿ ಪ್ರಭುತ್ವದ ಸಂಸ್ಥೆಗಳನ್ನು ಮರುರೂಪಿಸುವ ಕಾರ್ಯ ನಡೆಯುತ್ತಿದೆ. ಸರ್ವಾಧಿಕಾರದ ಬೀಜ ಬಿತ್ತಲು ರಾಜಕೀಯ ರಂಗದಲ್ಲಿ ಮಾತ್ರ ಮಣ್ಣನ್ನು ಹದಗೊಳಿಸಲಾಗುತ್ತಿಲ್ಲ; ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಅದನ್ನು ಮಾಡಲಾಗುತ್ತಿದೆ. ಗೋ ಹತ್ಯೆ ಮತ್ತು ಗೋಮಾಂಸ ಸೇವನೆ ನಿಷೇಧ, ಅನೈತಿಕ ಪೊಲೀಸ್ಗಿರಿ, ಕಲಾವಿದರು ಮತ್ತು ಕಲಾತ್ಮಕ ಕೃತಿಗಳನ್ನು ಹಿಂದೂ-ವಿರೋಧಿ ಎಂದು ಖಂಡಿಸುವುದು, ಶೈಕ್ಷಣಿಕ ಸಂಸ್ಥೆಗಳನ್ನು ನಿಯಂತ್ರಿಸಿ ಅವುಗಳು ಹಿಂದುತ್ವ ಮೌಲ್ಯಗಳಿಗೆ ಒಗ್ಗುವಂತೆ ಮಾಡುವುದು -ಈ ಎಲ್ಲವೂ ಸರ್ವಾಧಿಕಾರಿ ಆಕ್ರಮಣದ ಲಕ್ಷಣಗಳಾಗಿವೆ.
ಪ್ರಜಾಪ್ರಭುತ್ವಕ್ಕಾಗಿ ಹೋರಾಟ
ಹೀಗಾಗಿ, ಸ್ವಾತಂತ್ರ್ಯ ಗಳಿಸಿದ 75 ವರ್ಷಗಳ ನಂತರ ಭಾರತದಲ್ಲಿ ಪ್ರಜಾಪ್ರಭುತ್ವ ಒಂದು ನಿರ್ಣಾಯಕ ತಿರುವು ಬಿಂದುವಿನಲ್ಲಿದೆ. ಮೋದಿ ಸರಕಾರವು ಹಿಂದುತ್ವ ಸರ್ವಾಧಿಕಾರಿ ಆಡಳಿತಕ್ಕೆ ಉದಾಹರಣೆಯಾಗಿದ್ದು ಪ್ರಜಾಪ್ರಭುತ್ವ ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ನಿರಂತರ ಬೆದರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಹೋರಾಟಗಳನ್ನು ನಡೆಸಬೇಕಾಗಿದೆ. ಆದರೆ ಪ್ರಜಾಪ್ರಭುತ್ವಕ್ಕಾಗಿನ ಹೋರಾಟವು ಹಿಂದುತ್ವ ಮತ್ತು ನವ-ಉದಾರೀಕರಣದ ವಿರುದ್ಧದ ಸಂಘರ್ಷದೊಂದಿಗೆ ತಳುಕು ಹಾಕಿಕೊಂಡಿದೆ.
ಕಾರ್ಮಿಕ ವರ್ಗಕ್ಕೆ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವುದು ಒಂದು ಜೀವನ್ಮರಣ ಸಂಗತಿ. ರೋಸಾ ಲಕ್ಸೆಂಬರ್ಗ್ ಅದರ ಮಹತ್ವವನ್ನು ಹೀಗೆ ಪ್ರತಿಪಾದಿಸಿದ್ದಾರೆ: `ಪ್ರಜಾಪ್ರಭುತ್ವವು ಬಂಡವಾಳಶಾಹಿಗಳಿಗೆ ಭಾಗಶಃ ಅನವಶ್ಯಕ ಹಾಗೂ ಭಾಗಶಃ ತೊಂದರೆದಾಯಕ ಎನಿಸಿದರೆ, ದುಡಿಯುವ ವರ್ಗಕ್ಕೆ ಅದು ಅಗತ್ಯ ಹಾಗೂ ಅನಿವಾರ್ಯ ಆಗಿದೆ. ಮೊದಲನೆಯದಾಗಿ ಅದು ಅತ್ಯಗತ್ಯ ಯಾಕೆಂದರೆ ಅದು ಸ್ವಯಮಾಡಳಿತ ಸರಕಾರ, ಮತದಾರರ ಹಕ್ಕುಗಳು ಮುಂತಾದ ರಾಜಕೀಯ ವಿಧಾನಗಳನ್ನು ಸೃಷ್ಟಿಸುತ್ತದೆ. ಅವುಗಳು ದುಡಿಯುವ ವರ್ಗಕ್ಕೆ ಬೂರ್ಷ್ವಾ ಸಮಾಜವನ್ನು ಪರಿವರ್ತಿಸುವಲ್ಲಿ ಚಿಮ್ಮುಹಲಗೆ ಹಾಗೂ ಊರುಗೋಲುಗಳಾಗಿ ಕಾರ್ಯ ನಿರ್ವಹಿಸುತ್ತದೆ. ಎರಡನೆಯದಾಗಿ, ಅದು ಅನಿವಾರ್ಯ ಯಾಕೆಂದರೆ, ಪ್ರಜಾಪ್ರಭುತ್ವಕ್ಕಾಗಿನ ಹೋರಾಟದಲ್ಲಿ ಮಾತ್ರವೇ ದುಡಿಯುವ ವರ್ಗ ತನ್ನ ವರ್ಗ ಹಿತಾಸಕ್ತಿಗಳು ಮತ್ತು ತನ್ನ ಐತಿಹಾಸಿಕ ಕಾರ್ಯಭಾರಗಳ ಬಗ್ಗೆ ಪ್ರಜ್ಞಾಶೀಲವಾಗಬಲ್ಲುದು”.
ನವ-ಉದಾರವಾದಿ ಆಳ್ವಿಕೆ ಮತ್ತು ಹಿಂದುತ್ವ ಕೋಮುವಾದದ ವಿರುದ್ಧ ದೃಢ ಸುಸಂಗತ ಶಕ್ತಿಯಾದ ಎಡ ಪಂಥೀಯರು ಸರ್ವಾಧಿಕಾರದ ಅಪಾಯದ ವಿರುದ್ಧ ವಿಶಾಲ ಜನಪ್ರಿಯ-ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಅಣಿಗೊಳಿಸುವಲ್ಲಿ ಒಂದು ನಿರ್ಣಾಯಕ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ.
ಅನುವಾದ: ವಿಶ್ವ