ಕೋಮು ಸಾಮರಸ್ಯದ ರಾಷ್ಟ್ರೀಯ ಹಿತಗಳನ್ನು ಎತ್ತಿಹಿಡಿಯಬೇಕು-ಸಿಪಿಐ(ಎಂ)

“ಪೂಜಾ ಸ್ಥಳಗಳ ಕಾಯಿದೆ 1991 ರ ಕಟ್ಟುನಿಟ್ಟಾದ ಅನುಷ್ಠಾನವಾಗಬೇಕು”

ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿಯ ಜಿಲ್ಲಾ ನ್ಯಾಯಾಲಯದ ನಿರ್ಧಾರ ಪೂಜಾ ಸ್ಥಳಗಳ ಕಾಯಿದೆ, 1991ರ ಹಿಂದಿನ ಗುರಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)- ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅಭಿಪ್ರಾಯ ಪಟ್ಟಿದೆ. ಮಸೀದಿಯೊಳಗೆ ಪೂಜಿಸುವ ಹಕ್ಕನ್ನು ಕೋರುವ ಮೊಕದ್ದಮೆಗಳು ನಡೆಸಬಹುದಾದವುಗಳು, ಅವುಗಳನ್ನು ಈ ಕಾಯಿದೆ ನಿರ್ಬಂಧಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಂಗದ ಕೆಲವು ವಿಭಾಗಗಳು ಮಾಡುವ ಕಾನೂನಿನ ತಪ್ಪು ವ್ಯಾಖ್ಯಾನಗಳು ಯಾವ ಗಂಭೀರ ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಅವನ್ನು ತರಲಾಗಿದೆಯೋ ಅವೇ ಸಂಭವಿಸುವುದಕ್ಕೆ  ಕಾರಣವಾಗುತ್ತವೆ. ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಲು ಆಡಳಿತ ಪಕ್ಷವು ಇತಿಹಾಸದ ಒಂದು ವಿಕೃತ ವ್ಯಾಖ್ಯಾನ ಕೊಡಲೇಬೇಕೆಂದು ನಿರ್ಧರಿಸಿದೆ ಎಂಬುದು ರಹಸ್ಯವೇನಲ್ಲ. ಇಂದಿನ ಮಸೀದಿಗಳನ್ನು ದೇವಾಲಯಗಳನ್ನು ಧ್ವಂಸಗೊಳಿಸಿದ ಸ್ಥಳಗಳಲ್ಲಿ ನಿರ್ಮಿಸಲಾಗಿದೆ ಎಂಬ ದಾವೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಇದನ್ನು ಕೋಮುವಾದಿ ಕಾರ್ಯಸೂಚಿಗೆ ಬಳಸಿಕೊಳ್ಳುವ ಬಹಳ ದೀರ್ಘಕಾಲದ ವಿಧಾನವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ನೆನಪಿಸಿದೆ.

1991ರ ಕಾನೂನನ್ನು ತಂದಿರುವುದು ಕೋಮು ಸೌಹಾರ್ದತೆಯ ಅತ್ಯುನ್ನತ ರಾಷ್ಟ್ರೀಯ ಹಿತಾಸಕ್ತಿಗಳನ್ನು ಎತ್ತಿಹಿಡಿಯುವುದಕ್ಕಾಗಿ ಮತ್ತು ಮಥುರಾ ಮತ್ತು ವಾರಣಾಸಿಯಂತಹ ಹಲವಾರು ದುರುದ್ದೇಶ-ಪ್ರೇರಿತ ಅರ್ಜಿಗಳನ್ನು ತಡೆಯುವುದಕ್ಕಾಗಿ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, 1991ರ ಕಾನೂನಿನ ಹಿಂದಿದ್ದ ಭಾವನೆ ಮತ್ತು ಅದರ ಆಶಯದ ಆಧಾರದಲ್ಲಿ ಅದರ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.

Leave a Reply

Your email address will not be published. Required fields are marked *