ರಾಜ್ಯ ಸರ್ಕಾರಿ ನೌಕರರು ಒಂದು ಚರಿತ್ರಾರ್ಹ ಮುಷ್ಕರಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿತ್ತು. ಮುಷ್ಕರವೇನು ಆರಂಭ ಆಗಿಯೇ ಬಿಟ್ಟಿತ್ತು. ಮುಷ್ಕರಕ್ಕೆ ಕರೆಕೊಟ್ಟ ನೌಕರರು ಮಾತ್ರವಲ್ಲ, ಮುಷ್ಕರಕ್ಕೆ ಪರೋಕ್ಷ ಬೆಂಬಲ ನೀಡಿದವರೆಲ್ಲರೂ ಸಹ ಮುಷ್ಕರ ಯಶಸ್ವಿಯಾಗಲೆಂದು ಒಳಗೊಳಗೆ ಹರಸುತಿದ್ದರು. ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಬೆಳಿಗ್ಗೆಯಿಂದಲೇ ಮುಷ್ಕರದ ಬಿಸಿ ವ್ಯಾಪಿಸಿತ್ತು. ನಾಗರಿಕರು ಸಹಜವಾಗಿ ಅನಾನುಕೂಲದ ಪರಿಸ್ಥಿತಿಯನ್ನು ಅನುಭವಿಸತೊಡಗಿದ್ದರು. ಆದರೆ ಅವರೆಲ್ಲರೂ ಸರ್ಕಾರದ ಹಠಮಾರಿತನವನ್ನು ಶಪಿಸಲಾರಂಭಿಸಿದ್ದರು.
ಆದರೆ ಎಲ್ಲವೂ ನೌಕರರ ನಿರೀಕ್ಷೆಯಂತೆ ನಡೆಯಲಿಲ್ಲ. ಮುಷ್ಕರ ಆರಂಭವಾಗಿ ಕೇವಲ ಮೂರು ಗಂಟೆಗಳಲ್ಲಿ ಮುಷ್ಕರವನ್ನು ಹಿಂಪಡೆದಿರುವುದಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿಯವರು ಏಕಪಕ್ಷೀಯವಾಗಿ ನಿರ್ಣಯವನ್ನು ಪ್ರಕಟಿಸಿದರು. ಹಾಲಿ ಮೂಲವೇತನ ಮತ್ತು ತುಟ್ಟಿ ಭತ್ಯೆಗೆ ಹೆಚ್ಚುವರಿಯಾಗಿ ಶೇಕಡ 17%ರಷ್ಟು ವೇತನವನ್ನು ಮಧ್ಯಂತರ ಪರಿಹಾರವಾಗಿ ಘೋಷಿಸಿದಂತಾಗಿದೆ. 2006ರಲ್ಲಿ ಶೇ. 10%ರಷ್ಟು ಮಧ್ಯಂತರ ಪರಿಹಾರ ನೀಡಲಾಗಿತ್ತು. ಮುಂದೆ ಐದನೇ ವೇತನ ಆಯೋಗದ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವಾಗ ಶೇ. 22ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. 2014 ರಲ್ಲಿ ಒಟ್ಟು ಶೇ. 17.5 ರಷ್ಟು ಪರಿಹಾರ ನೀಡಲಾಗಿತ್ತು. 6ನೇ ವೇತನ ಆಯೋಗ 2018ರಲ್ಲಿ ಜಾರಿಗೆ ತಂದಾಗ ಶೇ. 30ರಷ್ಟು ಹೆಚ್ಚಳ ನೀಡಲಾಗಿತ್ತು.
ಈ ಸಲ ಸರ್ಕಾರಿ ನೌಕರರ ಬೇಡಿಕೆಗೆ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಸೂಕ್ತ ಸ್ಪಂಧನೆ ಸಿಕ್ಕಿಲ್ಲ. ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರು ಮುಷ್ಕರವನ್ನು ಹಿಂಪಡೆಯಲು ಕೈಗೊಂಡ ಅವಸರದ ತೀರ್ಮಾನದಿಂದ ವಿವಿಧ ಸಂಘಟನೆಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿವೆ. ಇದು ಮುಷ್ಕರಕ್ಕೆ ಮುಂದಾದ ಸರ್ಕಾರಿ ನೌಕರರಿಗೆ ಬಗೆದ ಮೋಸವೆಂದು ಬಣ್ಣಿಸಲಾಗುತ್ತಿದೆ. 2022ರ ಜುಲೈ ಒಂದರಿಂದ ಅನ್ವಯವಾಗುವಂತೆ ಶೇ. 40ರಷ್ಟು ವೇತನ ಹೆಚ್ಚಾಗಬೇಕೆಂದು ಮತ್ತು ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಈ ಎರಡೂ ಮುಖ್ಯ ಬೇಡಿಕೆಗಳಿಗೆ ನೌಕರರ ಸಂಪೂರ್ಣ ಬೆಂಬಲ ಇದ್ದರೂ ಸರ್ಕಾರ ನೌಕರರ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ. ಮುಖ್ಯ ಮಂತ್ರಿಗಳ ಮತ್ತು ನೌಕರರ ಸಂಘದ ಅಧ್ಯಕ್ಷರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಳೆಯ ಪಿಂಚಣಿ ಯೋಜನೆ ಜಾರಿಗೆ ಸರ್ಕಾರ ಸಮಿತಿ ರಚಿಸಿರುವುದು ನೌಕರರ ಸಂಘಗಳ ನಡುವೆ ಒಡಕಿಗೆ ಕಾರಣವಾಗಿದೆ. ವೇತನ ಹೆಚ್ಚಳವನ್ನು ನೌಕರರ ಸಂಘ ಸ್ವಾಗತಿಸಿದರೆ, ಸಚಿವಾಲಯ ನೌಕರರ ಸಂಘ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಮುಷ್ಕರಕ್ಕೆ ಕರೆ ನೀಡುವಾಗ ನೌಕಕರೊಂದಿಗೆ ಚರ್ಚಿಸಲಾಗಿತ್ತು ಎನ್ನಲಾಗುತ್ತಿದ್ದು, ಮುಷ್ಕರವನ್ನು ಹಿಂಪಡೆಯುವಾಗ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನೌಕರರು ಆಕ್ಷೇಪ ಎತ್ತಿದ್ದಾರೆ. ಸಂಘದ ನಾಯಕರು ಸರ್ಕಾರವನ್ನು ಮೆಚ್ಚಿಸಿ ಅದರ ಲಾಭ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ನೌಕರರು ಆಕ್ಷೇಪ ಎತ್ತಿದ್ದಾರೆ. ಸಂಘದ ನಾಯಕರು ಕಡಿಮೆ ಮಧ್ಯಂತರ ಪರಿಹಾರ ಕೊಡಿಸಿ ದ್ರೋಹ ಮಾಡಿದ್ದಾರೆ. ನೌಕರರು 8 ತಿಂಗಳ ವೇತನ ಹೆಚ್ಚಳವನ್ನು ಕಳೆದುಕೊಂಡಂತಾಗಿದೆ.