ಶಾಂತಿಯುತವಾಗಿ ಹೋಳಿ ಆಚರಿಸಲು ಅನುವಾಗುವಂತೆ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು -ಸಿಪಿಐ(ಎಂ) ಪೊಲಿಟ್‌ಬ್ಯುರೊ

ಹೋಳಿ ಹಬ್ಬದ ಆಚರಣೆ ಮತ್ತು ರಂಜಾನ್ ಸಮಯದ ಶುಕ್ರವಾರದ ಪ್ರಾರ್ಥನೆ ಎರಡೂ ಒಟ್ಟಿಗೇ ಬಂದಿವೆ. ಹೋಳಿ ಹಬ್ಬದ ಆಚರಣೆಯ ಕುರಿತು ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದ ಸಚಿವರು ಮತ್ತು ಶಾಸಕರು ಸೇರಿದಂತೆ ವಿವಿಧ ಬಿಜೆಪಿ ನಾಯಕರು ಪ್ರಚೋದನಕಾರಿ ಟಿಪ್ಪಣಿಗಳನ್ನು ನೀಡಿದ್ದಾರೆ. ಇದನ್ನು ಸಿಪಿಐ(ಎಂ) ಪೊಲಿಟ್‌ಬ್ಯೂರೋ ಖಂಡಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು ಎಂದು ಭರವಸೆ ನೀಡುವ ಬದಲು, ಈ ವಿಷಯದ ಬಗ್ಗೆ ಮುಸ್ಲಿಮರನ್ನು ಕೆಣಕಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ.

ಉದ್ವಿಗ್ನತೆಯನ್ನು ಸೃಷ್ಟಿಸುವುದು ಮತ್ತು ಮುಸ್ಲಿಂ ಸಮುದಾಯವನ್ನು ಹೆದರಿಸುವುದು ಇಂತಹ ಟಿಪ್ಪಣಿಗಳ ಆಶಯವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಪೊಲಿಟ್‌ಬ್ಯುರೊ, ಹೋಳಿಯನ್ನು ಶಾಂತಿಯುತವಾಗಿ ಆಚರಿಸುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಯಾವುದೇ ಪ್ರಚೋದನೆಗೆ ಬಲಿಯಾಗಬಾರದು ಎಂದು ಎಲ್ಲಾ ಸಮುದಾಯಗಳ ಜನರಿಗೆ ಮನವಿ ಮಾಡಿದೆ.

ಮಾರ್ಚ್ 11 ಮತ್ತು 12, 2025 ರಂದು ನವದೆಹಲಿಯಲ್ಲಿ ನಡೆದ ಸಿಪಿಐ(ಎಂ) ಪೊಲಿಟ್‌ಬ್ಯುರೊ ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿ ಈ ಮನವಿ ಮಾಡಿದೆ.

ಕ್ಷೇತ್ರ ಮರುವಿಂಗಡಣೆ ಕುರಿತು ಒಮ್ಮತಕ್ಕೆ ಬರಬೇಕು

2026 ರ ನಂತರ ನಡೆಸಲಿರುವ ಜನಗಣತಿಯ ನಂತರ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಯು ನಡೆಯಲಿದೆ. ಇತ್ತೀಚಿನ ಜನಸಂಖ್ಯಾ ಅಂಕಿ-ಅಂಶಗಳ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ನಡೆದರೆ, ಅದು ಸಂಸತ್ತಿನಲ್ಲಿ ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಅಂತಹ ಕಡಿತವು ರಾಜಕೀಯವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಅನ್ಯಾಯವಾಗುತ್ತದೆ ಮತ್ತು ಒಕ್ಕೂಟ ತತ್ವವನ್ನು ಹಾಳು ಮಾಡುತ್ತದೆ.

ಕ್ಷೇತ್ರ ಮರುವಿಂಗಡಣೆ ವಿಷಯದ ಬಗ್ಗೆ ಒಮ್ಮತಕ್ಕೆ ಬರಬೇಕು ಎಂಬುದು ತನ್ನ ಅಭಿಪ್ರಾಯವಾಗಿದ್ದು, ಇದರಿಂದಾಗಿ ಯಾವುದೇ ರಾಜ್ಯಕ್ಕೆ ತನ್ನ ಪಾಲಿನ ಸೀಟುಗಳ ಅನುಪಾತದಲ್ಲಿ ಇಳಿಕೆ ಆಗಬಾರದು ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಅಮೆರಿಕದ ಸುಂಕಗಳ ಬೆದರಿಕೆ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ರಫ್ತು ಮಾಡುವ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಏಪ್ರಿಲ್ 2 ರಿಂದ ಪ್ರತಿಯಾಗಿ ಸುಂಕಗಳನ್ನು ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. ಮೋದಿ ಸರ್ಕಾರ ಈ ವಿಷಯದ ಬಗ್ಗೆ ಮೌನವಾಗಿದೆ ಮತ್ತು ದೇಶದ ಹಿತಾಸಕ್ತಿಗಳನ್ನು ಬಲಿಕೊಟ್ಟು ಟ್ರಂಪ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದೆ.

ಭಾರತೀಯ ಉದ್ಯಮದ ಹಿತದೃಷ್ಟಿಯಿಂದ ಭಾರತ ಸರ್ಕಾರ ಒಂದು ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಸೂಕ್ತ ಪ್ರತೀಕಾರದ ಕ್ರಮ ಕೈಗೊಳ್ಳಬೇಕು ಎಂದು ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಪಕ್ಷದ ಮಹಾಧಿವೇಶನ

ಪಕ್ಷದ 24ನೇ ಮಹಾಧಿವೇಶನಕ್ಕೆ ಸಲ್ಲಿಸಲಿರುವ ಸಂಘಟನೆ ಕುರಿತಾದ ಕರಡು ವರದಿಯನ್ನು ಪೊಲಿಟ್‌ಬ್ಯೂರೋ ಚರ್ಚಿಸಿತು. ಅದನ್ನು ಮಾರ್ಚ್ 22-23 ರಂದು ಕೇಂದ್ರ ಸಮಿತಿ ಸಭೆಯ ಮುಂದೆ ಅನುಮೋದನೆಗೆ ಮತ್ತು ಅಂತಿಮಗೊಳಿಸಲು ಮಂಡಿಸಲಾಗುವುದು ಎಂದು ಪೊಲಿಟ್‌ಬ್ಯುರೊ ಹೇಳಿಕೆ ತಿಳಿಸಿದೆ.

Leave a Reply

Your email address will not be published. Required fields are marked *