ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಆನಂತಕುಮಾರ್ ಹೆಗಡೆಯವರು ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಯಲ್ಲಿ ಜನವರಿ 02ರಂದು ಸೋಮವಾರ ರಾತ್ರಿ ಇಬ್ಬರು ವೈದ್ಯರು ಹಾಗೂ ಓರ್ವ ಸಿಬ್ಬಂದಿಯ ಮೇಲೆ ದೈಹಿಕ ಹಲ್ಲೆ ಮಾಡಿ ಬಾಯಿಗೆ ಬಂದಂತೆ ಬೈದ ಘಟನೆಯು ಅತ್ಯಂತ ಖಂಡನೀಯ.
ಜನತೆಯ ಹಕ್ಕು ರಕ್ಷಿಸಬೇಕಾದ ಪ್ರಜಾಪ್ರಭುತ್ವದ ಉನ್ನತ ಜನಪ್ರತಿನಿಧಿಯಾದ ಬಿಜೆಪಿಯ ಸಂಸದರು ಪದೇಪದೇ ಸಾರ್ವಜನಿಕರು, ಅಧಿಕಾರಿಗಳು ಹಾಗೂ ತಮ್ಮದೇ ಪಕ್ಷದ ಮುಖಂಡರ ಮೇಲೂ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸುವ, ಉದ್ರೇಕಕಾರಿ ವಿವಾದಾತ್ಮಕ ಭಾಷಣ ಮಾಡಿ ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ನೀಚ ಕೃತ್ಯ ಮಾಡುತ್ತಿದ್ದಾರೆ. ಇಂಥ ಸಂಸದರನ್ನು ಈ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ವಹಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್ ವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸುತ್ತದೆ.
ಸದಾ ಕಾನೂನು ಉಲ್ಲಂಘನೆಯಲ್ಲೇ ಇರುವ ಸಂಸದರ ಗೂಂಡಾ ಭೀತಿಯ ಕಾರಣಕ್ಕೆ ಹಲ್ಲೆಯ ಘಟನೆ ಕುರಿತು ಪೋಲಿಸ್ ದೂರು ದಾಖಲಿಸಲು ಹಿಂದೇಟು ಹಾಕುತ್ತಿರುವುದು ಎದ್ದು ಕಾಣುತ್ತಿದೆ. ಹಾಗಾಗಿ ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಅನುವಾಗುವಂತೆ ಜಿಲ್ಲಾಡಳಿತ ವೈದ್ಯರಿಗೆ ಭದ್ರತೆ ನೀಡಬೇಕು. ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವದ ಗೌರವ ಕಾಪಾಡುವ ಸಲುವಾಗಿ ಅನಂತಕುಮಾರ್ ಹೆಗಡೆಯವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮವಹಿಸಲು ಆಗ್ರಹಿಸಿದೆ.
ತಾಯಿಯವರ ಅನಾರೋಗ್ಯವನ್ನೇ ನೆಪವಾಗಿರಿಸಿದ ಸಂಸದರು ತಮ್ಮ ದುಂಡಾವರ್ತನೆಯನ್ನು ಮೆರೆದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು ಇನ್ನೂ ಹೆಚ್ಚಿನ ಸಾಕ್ಷಿಗಳ ಅಗತ್ಯವಿಲ್ಲ. ಸಂಸದರ ತಾಯಿಯವರು ಬೇಗ ಗುಣಮುಖರಾಗಲಿ, ಉತ್ತಮ ಚಿಕಿತ್ಸೆ ದೊರಕಲಿ. ಆದರೆ ಹಲ್ಲೆ ನಡೆಸಿರುವುದು ಅಕ್ಷಮ್ಯ ಮತ್ತು ವೈದ್ಯರು ಮತ್ತು ಸಿಬ್ಬಂದಿಯವರನ್ನು ದೂರು ಸಲ್ಲಿಸದಂತೆ ತಡೆದಿರುವುದೂ ಕೂಡ ಅಪರಾಧವೇ ಆಗಿದೆ.
ಹಾಗಾಗಿ ಈಗಾಗಲೇ ರಾಜ್ಯ ವೈದ್ಯರ ಸಂಘ (ಐಎಂಎ) ಪ್ರತಿಭಟನೆ ನಡೆಸಿದೆ. ಶಾಸನ ಮಾಡುವವರೇ ಗೂಂಡಾಗಿರಿ ಮಾಡಿದ್ದಾರೆ. ಇಂಥವರು ಐದು ಬಾರಿ ಸಂಸದರಾಗಿದ್ದರು ಎನ್ನುವುದು ಖೇದಕರ ಹಾಗೂ ನಾಚಿಕೆಯ ಸಂಗತಿಯಾಗಿದೆ.
ಸಂಘಪರಿವಾರದ ಸಂಸ್ಕøತಿಯ ವಕ್ತಾರರಾದ ಬಿಜೆಪಿಯ ದಕ್ಷಿಣ ಕನ್ನಡದ ಸಂಸದ ನಳಿನಕುಮಾರ ಕಟೀಲರವರು ಬೆಂಕಿ ಹಚ್ಚುವ ಮಾತನಾಡುತ್ತಿದ್ದಾರೆ. ಉತ್ತರ ಕನ್ನಡದ ಸಂಸದರು ಮಾತೆತ್ತಿದರೆ ಕೋಮು ಹಿಂಸೆ ಹುಟ್ಟಿಸಿ ‘ಕಡಿಕೊಚ್ಚು’ ಎಂದು ವಿದ್ವಂಸದ ಕರೆ ಕೊಡುತ್ತಾರೆ.
ನಿತಂತರವಾಗಿ ಇಂಥ ಹಿಂಸಾತ್ಮಕ ಕ್ರಿಯೆ ನಡೆಸುತ್ತಿರುವ ಸಂಸದರ ವರ್ತನೆಗೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸರ್ಕಾರ ಮೌನ ವಹಿಸಿವೆ. ಸ್ವತಃ ಕಾಂಗ್ರೆಸ್ ಮುಖಂಡರೇ ಟಿಎಸ್.ಎಸ್ ಅಧ್ಯಕ್ಷರಾಗಿದ್ದು ಸಂಸ್ಥೆಯ ಹೆಸರು ಉಳಿಸಿಕೊಳ್ಳಲು ಮತ್ತು ಲಾಭದ ಉದ್ದೇಶದಿಂದ ರಾಜಿ ಸಂಧಾನದ ಪರದೆ ಎಳೆಯಲು ಮುಂದಾಗಿರುವುದು ಖೇದಕರ ಎಂದು ಇಡೀ ಘಟನಾವಳಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್ ವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ಖಂಡಿಸುತ್ತದೆ.
ತಕ್ಷಣ ಆಡಳಿತ ಸಮಿತಿಯೂ ಕೂಡ ತಮ್ಮ ಸಿಬ್ಬಂದಿಗಳ ಪರವಾಗಿ ಸಂಸದರ ಗೂಂಡಾದಾಳಿಯ ವಿರುದ್ಧ ದೂರು ಕೊಟ್ಟು ವೈದ್ಯರು, ನರ್ಸಗಳು, ಇತರೇ ಸಿಬ್ಬಂದಿಗಳಿಗೆ ನ್ಯಾಯ ಕೊಡಿಸಲು ಮುಂದಾಗಬೇಕೆಂದು ಸಿಪಿಐ(ಐಂ) ಆಗ್ರಹಿಸುತ್ತದೆ.
ಯಮುನಾ ಗಾಂವ್ಕರ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ
ವಿಡಿಯೋಗಾಗಿ ವೀಕ್ಷಿಸಿ :